`ಸಾಧನಾ’ದಿಂದ ಬುದ್ಧಿವಂತಿಕೆಯ ಶಿಕ್ಷಣ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ `ಸಾಧನ’ ಉದ್ಘಾಟಿಸಿ ಡಾ. ಪ್ರಭಾಕರ ಭಟ್ ಕಲ್ಲಡ್ಕ

0

ಪುತ್ತೂರು: ಕೌಶಲ್ಯಯುಕ್ತ ಶಿಕ್ಷಣವನ್ನು ಪಡೆದುಕೊಳ್ಳಲು ತುಂಬಾ ಬುದ್ಧಿವಂತ ಆಗಿರಬೇಕು ಎಂದೇನಿಲ್ಲ. ಆದರೆ ಸ್ವಲ್ಪ ಬುದ್ಧಿವಂತಿಕೆ ಬೇಕು. ಇದಕ್ಕೆ ಬೇಕಾದ ತರಬೇತಿಯನ್ನು `ಸಾಧನಾ’ ನೀಡುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ನೆಹರುನಗರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 17ರಂದು ನಡೆದ ಸಾಧನಾ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಳೆ ಪ್ರಾಯದಲ್ಲಿ ಮಗುವಿನ ಬುದ್ಧಿಶಕ್ತಿ ವೇಗವಾಗಿರುತ್ತದೆ. ಆಗ ಮೆದುಳಿನ ನ್ಯೂರಾನ್‌ಗಳು ವೇಗವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಹೊತ್ತಿನಲ್ಲೇ ಮಕ್ಕಳಿಗೆ ಸಮರ್ಪಕ ಶಿಕ್ಷಣವನ್ನು ನೀಡಿದರೆ, ಶೀಘ್ರ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಾಧನೆಯ ಪಥದಲ್ಲಿ ತಂದೆ – ತಾಯಿ ಮಕ್ಕಳ ಕೈ ಹಿಡಿದು ನಡೆಸುತ್ತಾರೆ. ಒಂದು ಹಂತದ ಬಳಿಕ ಆ ಕೆಲಸವನ್ನು ವಿದ್ಯಾಸಂಸ್ಥೆಗಳು ಮಾಡಬೇಕಾಗಿರುತ್ತದೆ. ಇಂತಹ ಕೆಲಸವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮಾಡಲು ಮುಂದಾಗಿದೆ ಎಂದರು.
ಎನ್‌ಇಪಿಗಿಂತಲೂ ಒಂದು ಹೆಜ್ಜೆ ಮುಂದೆ:
ಇದು ವಿಜ್ಞಾನ ಬಹಳ ವೇಗವಾಗಿ ಮುಂದುವರಿಯುತ್ತಿದೆ. ಇಂದು ಎನ್ನುವುದು ನಾಳೆಗೆ ಹಳೆಯದಾಗಿರುತ್ತದೆ. ಈ ವೇಗಕ್ಕೆ ಅನುಗುಣವಾಗಿ ಜಗತ್ತು ವೇಗವಾಗಿ ಒಗ್ಗಿಕೊಳ್ಳುತ್ತಿದೆ. 2020ರಲ್ಲಿ ಎನ್‌ಇಪಿಯನ್ನು ಜಾರಿ ಮಾಡಲಾಗಿದೆ. 9, 10, 11, 12ನೇ ತರಗತಿಯನ್ನು ಇಲ್ಲಿ ಸೆಕೆಂಡರಿ ಲೆವೆಲ್ ಎಂದು ಹೇಳಲಾಗುತ್ತದೆ. ಅಂದರೆ ಪಿಯುಸಿ ಇರುವುದಿಲ್ಲ. ಒಂದು ವೇಳೆ ಬಿಎಸ್‌ಸಿ ಕಷ್ಟವಾಯಿತು ಎಂದರೆ, ಆತನಿಗೆ ಇಷ್ಟದ ವಿಷಯವನ್ನು ಆಯ್ದುಕೊಳ್ಳಬಹುದು. ಅಂದರೆ ವಿದ್ಯಾರ್ಥಿಯನ್ನು ಆತನ ಆಸಕ್ತಿಯ ಕಡೆಗೆ ಕೊಂಡೊಯ್ಯುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಎನ್‌ಇಪಿ ಅಷ್ಟು ಮುಂದುವರಿದಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ ವಿವೇಕಾನಂದದ ಸಾಧನಾ ತರಬೇತಿ ಎಂದು ವಿವರಿಸಿದರು.
ಕುತೂಹಲವೇ ಅಧ್ಯಯನಕ್ಕೆ ದಾರಿ:
ಇಂಜಿನಿಯರಿಂಗ್‌ನಲ್ಲಿ ಸಂಶೋಧನಾ ವಿಷಯಕ್ಕೆ ಇಂದು ಹೆಚ್ಚು ಒತ್ತು ನೀಡಲಾಗುತ್ತಿದೆ. ದೇಶಕ್ಕೆ ಇದು ಬಹಳ ಅಗತ್ಯವಾದ ವಿಷಯ ಕೂಡ. ಹೊಸ ಹೊಸ ವಿಷಯಗಳನ್ನು ಕಲಿಯಬೇಕು ಎನ್ನುವ ತವಕ ಹೆಚ್ಚುತ್ತಿದೆ. ಇಂತಹ ಕುತೂಹಲವನ್ನು ಮಗುವಿನಲ್ಲಿ ಹುಟ್ಟಿಸುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಈ ಕುತೂಹಲವೇ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಪೂರಕವಾಗಿ ಭಾರತೀಯ ವಿದ್ಯಾರ್ಥಿಗಳು ಪಡೆಯುವ ಶಿಕ್ಷಣದಲ್ಲಿ ಆಧ್ಯಾತ್ಮಿಕ ಲೇಪ ಇದೆ. ಇದನ್ನು ಮಾಟೆಸ್ಸರಿಯ ಕಥೆಯೊಂದು ಪುಷ್ಟಿ ನೀಡುತ್ತದೆ ಎಂದರು.
ಬದುಕು ಕಲಿಸುವ ಶಿಕ್ಷಣ:
ಹಿರೋಶಿಮಾ, ನಾಗಸಾಕಿಯಲ್ಲಿ ಅಣುಬಾಂಬ್ ಸ್ಫೋಟಿಸಿದ ಬಳಿಕ, ಆ ಅಣುಬಾಂಬಿನ ಜನಕ ಬಹಳ ಪಶ್ಚಾತ್ತಾಪಪಟ್ಟುಕೊಂಡನಂತೆ. ತಾನು ಮಾಡಿದ ಅನ್ವೇಷಣೆಯನ್ನು ತಪ್ಪಾದ ವ್ಯಕ್ತಿಗಳ ಕೈಯಲ್ಲಿ ನೀಡಿದೆ ಎಂದು ಆತ ತಿಳಿಸಿದನಂತೆ. ಭಾರತದಲ್ಲಿ ಹೀಗೆ ನಡೆಯಲು ಸಾಧ್ಯವೇ ಇಲ್ಲ. ಕಾರಣ, ಇಲ್ಲಿ ನೀಡುವ ಶಿಕ್ಷಣ. ಮುಂದೆಯೂ ಮಕ್ಕಳಿಗೆ ಬದುಕುವುದು ಹೇಗೆ ಎನ್ನುವುದನ್ನು ಕಲಿಸುವ ಶಿಕ್ಷಣ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಾಧನಾ ಉದ್ಘಾಟನೆಗೊಂಡಿದ್ದು, ಸಿಂಚನಾಲಕ್ಷಿ ಅವರ ಕೈಯಿಂದಲೇ ದೀಪ ಬೆಳಗಿಸಿದ್ದು ಬಹಳ ಔಚಿತ್ಯಪೂರ್ಣ ಎಂದರು.

8, 9ನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿ:
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಚಾಲಕ ಭರತ್ ಪೈ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಕೆಯೊಂದೇ ಸಾಧನೆಯಲ್ಲ. ಅದರ ಜೊತೆಗೆ ಎನ್‌ಟಿಎಸ್‌ಟಿ, ನೀಟ್, ಐಐಟಿ – ಜೆಇಇ, ಎನ್‌ಡಿಎ, ಕೆವಿಪಿವೈ ಮೊದಲಾದ ಪರೀಕ್ಷೆಗಳನ್ನು ಸುಲಭವಾಗಿ ವಿದ್ಯಾರ್ಥಿಗಳು ಜಯಿಸುವ ದೃಷ್ಟಿಯಿಂದ ಸಾಧನಾ ಕಾರ್ಯಪ್ರವೃತ್ತವಾಗಲಿದೆ. ಪ್ರತಿವರ್ಷ 15-20 ಲಕ್ಷದಷ್ಟು ವಿದ್ಯಾರ್ಥಿಗಳು ಜೆಇಇ – ನೀಟ್ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ ಎಂದರೆ ಆಶ್ಚರ್ಯಪಡುತ್ತೀರಿ. ಕಾರಣ, ಜೆಇಇ – ನೀಟ್ ಮೊದಲಾದ ಪರೀಕ್ಷೆಗಳು ಭವಿಷ್ಯದ ಮುಂದಿಡುವ ಅವಕಾಶಗಳೇ ಹಾಗಿವೆ. ಇವುಗಳಿಗೆ ತಯಾರಿ ನಡೆಸಲು ಪುತ್ತೂರು ಆಸುಪಾಸಿನ ವಿದ್ಯಾರ್ಥಿಗಳು ಮಂಗಳೂರು, ಉಡುಪಿ, ಮೂಡುಬಿದರೆ ಮೊದಲಾದ ಪ್ರದೇಶಗಳಿಗೆ ಅನಿವಾರ್ಯವಾಗಿ ತೆರಳಬೇಕಾಗಿತ್ತು. ಇದನ್ನು ತಪ್ಪಿಸಲು ಪುತ್ತೂರಿನಲ್ಲಿಯೇ ಪ್ರತಿ ಶನಿವಾರ 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಸಾಧನಾ ತರಬೇತಿ ನೀಡಲಿದೆ. ಕಡಿಮೆ ಶುಲ್ಕದಲ್ಲಿ ಆಸುಪಾಸಿನ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನೆಹರೂನಗರ ವಿವೇಕಾನಂದ ಆವರಣದ ವಿವೇಕಾನಂದ ಆಂಗ್ಲ ಮಾಧ್ಯಮ (ಸಿಬಿಎಸ್‌ಇ) ಶಾಲೆಯಲ್ಲಿ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರ ಪ್ರಮುಖವಾಗಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಗವೈಕಲ್ಯವನ್ನು ಮೆಟ್ಟಿನಿಂತು ಪಿಯುಸಿ ಪರೀಕ್ಷೆಯಲ್ಲಿ ಹಾಗೂ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಸಿಂಚನಾಲಕ್ಷಿ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ರಾವ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯಿನಿ ಸಿಂಧು ವಿ.ಜಿ. ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಕೆ.ವಿ. ವಂದಿಸಿದರು. ಶಿಕ್ಷಕಿಯರಾದ ವಿಶಾಲಾಕ್ಷಿ ಹಾಗೂ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಭಾರತದ ಉನ್ನತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಾಗೂ ಶಿಕ್ಷಣ ಮುಂದುವರಿಸಲು ಯೋಚಿಸುತ್ತಿದ್ದರೆ, ಅತ್ಯಾಕರ್ಷಕ ವೃತ್ತಿ ಆಯ್ಕೆಗಳು ತೆರೆದುಕೊಳ್ಳುತ್ತವೆ. ಇದಕ್ಕೆ ಅತ್ಯುತ್ತಮ ಅಡಿಪಾಯವನ್ನು `ಸಾಧನಾ’ ತರಬೇತಿ ಹಾಕಿಕೊಡುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ (ಜೆಇಇ – ಇಂಜಿನಿಯರಿಂಗ್), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ನವದೆಹಲಿ (ನೀಟ್- ಮೆಡಿಸಿನ್), ರಾಷ್ಟಿಯ ರಕ್ಷಣಾ ಅಕಾಡೆಮಿ (ಎನ್‌ಡಿಎ – ಡಿಫೆನ್ಸ್), ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು (ಕೆವಿಪಿವೈ – ರೀಸರ್ಚ್) ಮೊದಲಾದೆಡೆಗಳಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಇದರಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅಗತ್ಯವಾದ ಅತ್ಯುತ್ತಮವಾದ ಭೋಧನಾ ಅನುಭವವನ್ನು ಪುತ್ತೂರಿನಲ್ಲಿಯೇ ಗಳಿಸುವ ಅವಕಾಶವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಮುಂದಿಡುತ್ತಿದೆ. ಇಲ್ಲಿ ಕಲಿಯುವ ಮೂಲಕ ಜೀವನದಲ್ಲಿ ಗೆಲುವನ್ನು ಪಡೆದುಕೊಳ್ಳಬಹುದು.
ಶಾರ್ಟ್ಕಟ್ ತಂತ್ರಗಳು, ಸ್ಮಾರ್ಟ್ ಅಧ್ಯಯನ ಸಲಹೆಗಳು, ವೇಗದ ಜ್ಞಾಪಕ ತಂತ್ರಗಳು, ಸಮಯ ನಿರ್ವಹಣಾ ಕೌಶಲ್ಯಗಳು ಹಾಗೂ ಇನ್ನಷ್ಟು ಸಲಹೆಗಳನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಿರಿಯ ಕಾಲೇಜು ಉಪನ್ಯಾಸಕರು, ಶಿಕ್ಷಣ ತಜ್ಞರು ಹಾಗೂ ಹೆಸರಾಂತ ವಿಷಯ ತಜ್ಞರಿಂದ ಕಲಿತುಕೊಳ್ಳಲು ಇಲ್ಲಿ ಅವಕಾಶವಿದೆ. ಇದರ ಜೊತೆಗೆ ವಿಜ್ಞಾನ ಮತ್ತು ಗಣಿತದಲ್ಲಿ ಅಪ್ಲಿಕೇಶನ್, ಸಮಸ್ಯೆ ಪರಿಹಾರ ಹಾಗೂ ಇನ್ನಿತರ ಮೂಲಭೂತ ಅಂಶಗಳನ್ನು ಬಲಪಡಿಸಿಕೊಳ್ಳಬಹುದು. ವೀಕ್ಷಣೆ, ಗೃಹಿಕೆ, ಗಣಿತದ ತಾರ್ಕಿಕತೆ, ವಿಶ್ಲೇಷಣಾತ್ಮಕ ಮತ್ತು ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಸುಧಾರಿತ ತರಬೇತಿಯನ್ನು ಪಡೆದುಕೊಳ್ಳಲಿರುವಿರಿ.
ಯಾವುದೇ ಶಾಲೆಯ ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಪಡೆದುಕೊಳ್ಳಬಹುದು. ನಿಯಮಿತ ಬ್ಯಾಚ್ ಜುಲೈ 23ರಂದು ಆರಂಭಗೊಳ್ಳಲಿದ್ದು, ಪ್ರತಿ ಶನಿವಾರ ಮಧ್ಯಾಹ್ನ 2ರಿಂದ 6ರವರೆಗೆ 2 ಬ್ಯಾಚ್‌ನಲ್ಲಿ ತರಗತಿ ನಡೆಯಲಿದೆ.

LEAVE A REPLY

Please enter your comment!
Please enter your name here