ಡಿಸೆಂಬರ್ 25 ರಿಂದ 30: ಕಳೆಂಜ-ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪುನರ್ ಬ್ರಹ್ಮಕಲಶೋತ್ಸವ

0
  • 1.50ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಯೋಜನೆ

ಉಪ್ಪಿನಂಗಡಿ: 15ನೇ ಶತಮಾನದಲ್ಲಿ ಶ್ರೀ ಸೋದೆ ಮಠಾಧೀಶರಾಗಿದ್ದ ಶ್ರೀ ವಾದಿರಾಜರಿಂದ ಪ್ರತಿಷ್ಟಾಪನೆಗೊಂಡಿದ್ದ ಸಂತಾನ ಸೌಭಾಗ್ಯ ಕ್ಷೇತ್ರವೆಂದೇ ಹೆಗ್ಗಳಿಕೆ ಪಡೆದಿರುವ ಬಿಳಿಯೂರು ಗ್ರಾಮದ ಕಳೆಂಜ-ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಡಿಸೆಂಬರ್ 25 ರಿಂದ30ರ ವರೆಗೆ ಬ್ರಹ್ಮಕಲಶೋತ್ಸವನ್ನು ನಡೆಸಲು ದಿನ ನಿಗದಿಗೊಳಿಸಲಾಗಿದೆ. ಇದರ ಸಲುವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧನ್ಯ ಕುಮಾರ್ ರೈ ಬಿಳಿಯೂರು ಗುತ್ತು ತಿಳಿಸಿದರು.


ಅವರು ದೇವಳದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿ ದೇವಳ ಜೈನರಸರ ಆಳ್ವಿಕೆಯ ಕಾಲದಲ್ಲಿ ಜೈನ ಅರಸರ ಇಷ್ಠಾರ್ಥ ಸಿದ್ದಿಗಾಗಿ ಅವರ ಕೋರಿಕೆಯ ಅನುಸಾರ ಸೋದೆ ಶ್ರೀ ವಾದಿರಾಜರಿಂದ ಶ್ರೀ ವಿಷ್ಣುಮೂರ್ತಿ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರು. ಕಾಲಾಂತರದಲ್ಲಿ ಉಂಟಾದ ನಾನಾ ಘಟನಾವಳಿಗಳಿಂದ ಏಳುಬೀಳುಗಳನ್ನು ಕಂಡಿತ್ತು. 2010ರಲ್ಲಿ ಪುನರ್ ನಿರ್ಮಾಣಗೊಂಡು ವೈಭವದ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಂಡ ದೇಗುಲದಲ್ಲಿ ಗತಕಾಲದ ಕಾರಣೀಕ ಮರಳಿದೆ. ದೇಗುಲದ ವ್ಯಾಪ್ತಿಯಲ್ಲಿ ಸುಭೀಕ್ಷೆ ಮೂಡಿದೆ. ಇದೀಗ ಹನ್ನೆರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳೊಂದಿಗೆ ಬ್ರಹ್ಮಕಲಶೋತ್ಸವವನ್ನು ನಡೆಸುವುದೆಂದುಭಕ್ತಾದಿಗಳು ತೀರ್ಮಾನಿಸಿದ್ದಾರೆ ಎಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ ದೇವಾಲಯದ ನಾಲ್ಕು ಸುತ್ತಿಗೆ ಶಾಶ್ವತ ಚಪ್ಪರ, ವಸಂತ ಕಟ್ಟೆಯ ನವೀಕರಣ, ಶಾಶ್ವತ ಚಪ್ಪರದ ಒಳಭಾಗದಲ್ಲಿ ಇಂಟರ್ ಲಾಕ್ ಅಳವಡಿಕೆ, ದೇವಾಲಯದ ಸುತ್ತು ಪೌಳಿಯ ನೆಲಕ್ಕೆ ಗ್ರಾನೈಟ್ ಅಳವಡಿಕೆ, ಬ್ರಹ್ಮಕಲಶ, ವಾರ್ಷಿಕ ಜಾತ್ರೋತ್ಸವವನ್ನು ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವನ್ನು ನಡೆಸಲಾಗುವುದು. ಈ ಎಲ್ಲಾ ಕಾರ್ಯಗಳಿಗೆ ಸುಮಾರು 1.50 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಈ ದೇವಾಲಯದ ಅಭಿವೃದ್ಧಿಯಲ್ಲಿ ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.

ದೇವಾಲಯದ ಬ್ರಹ್ಮಕಲಶೋತ್ಸವನ್ನು ದೇವಾಲಯ ವ್ಯಾಪ್ತಿಯ ಭಕ್ತಾದಿಗಳೇ ನಡೆಸಲು ಸಂಕಲ್ಪಿಸಿದ್ದಾರೆ. ಈ ದಿಶೆಯಲ್ಲಿ ದೇವಾಲಯದ ವ್ಯಾಪ್ತಿಯ ಸುಮಾರು 800 ಮನೆಗಳನ್ನು ಸಂಪರ್ಕಿಸಲಾಗಿದ್ದು, ಅವರವರ ಆರ್ಥಿಕ ಸಾಮರ್ಥ್ಯದ ನೆಲೆಗಟ್ಟಿನಲ್ಲಿ ಶಕ್ತ್ಯಾನುಸಾರ ದೇಣಿಗೆಯನ್ನು ಸಮರ್ಪಿಸಲು ಯೋಜನೆ ರೂಪಿಸಲಾಗಿದೆ. ಪರಿಸರ ಸ್ನೇಹಿಯಾಗಿ ಇಡೀ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಬ್ರಹ್ಮಕಲಶೋತ್ಸವ ನಿಮಿತ್ತ ದೇವಾಲಯದಲ್ಲಿ ನಡೆಸಲು ಉದ್ದೇಶಿಸಿರುವ ಅಭಿವೃದ್ಧಿ ಕಾರ್ಯಗಳಿಗೆ ಊರ ಪರಊರ ದಾನಿಗಳ ಸಹಾಯ ಯಾಚಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ:
ಈಗಾಗಲೇ ಕ್ಷೇತ್ರದ ಶಾಸಕರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ದೇವಾಲಯದ ಪಾರ್ಶ್ವದಲ್ಲಿ ಹರಿಯುತ್ತಿರುವ ತೋಡಿಗೆ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವಾಲಯದ ಯಶಸ್ಸಿನಲ್ಲಿ ಬೈಲುವಾರು ಸಮಿತಿಗಳ ಪಾತ್ರ ಮಹತ್ತರವಾಗಿದ್ದು, ಪ್ರತಿ ಮನೆಯನ್ನೂ ದೇವಾಲಯದೊಂದಿಗೆ ಬೆಸೆಯುವಂತಾಗಲು ಬೈಲುವಾರು ಸಮಿತಿಗಳ ಪಾತ್ರ ದೊಡ್ಡದಾಗಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಗೋಪಾಲ ಶೆಟ್ಟಿ ಕಳೆಂಜ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರುಗಳಾದ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಶ್ರೀಮತಿ ಪದ್ಮಾಸಿನಿ ಎನ್. ಜೈನ್ ಕಳೆಂಜಗುತ್ತು, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಆಡಳಿತ ಸಮಿತಿ ಗೌರವಾಧ್ಯಕ್ಷ ಅವಿನಾಶ್ ಕೆ. ಜೈನ್ ಪಟ್ಟೆಗುತ್ತು, ಅಭಿವೃದ್ಧಿ ಸಮಿತಿ ಕಾರ್‍ಯದರ್ಶಿ ರಮೇಶ್ ನಾಯ್ಕ್, ಅಶೋಕ್ ಕುಮಾರ್ ಮುಳಿಪಡ್ಪು, ಶಂಭು ಭಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here