ನಮಗೆ ನ್ಯಾಯ ಸಿಗದಿದ್ದಲ್ಲಿ ಆ.1ರಂದು ಪಾದಯಾತ್ರೆ, ಧರಣಿ ಸತ್ಯಾಗ್ರಹ-ನರಿಮೊಗರು ಸಾಲಮನ್ನಾ ವಂಚಿತರ ಸಭೆಯಲ್ಲಿ ರೈತರ ಎಚ್ಚರಿಕೆ

0

  • ಹೋರಾಟ ಅನಿವಾರ್ಯ-ನಾರಾಯಣ ಸ್ವಾಮಿ
  • ರೈತರು ಸಂಘಟಿತರಾಗಬೇಕು-ಶಾಂತಿಪ್ರಸಾದ್ ಹೆಗ್ಡೆ
  • ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ-ಸುರೇಶ್ ಪ್ರಭು
  • ಆಡಳಿತ ಮಂಡಳಿಯವರ ನಿರ್ಲಕ್ಷ್ಯವೇ ಕಾರಣ-ಸುಬ್ರಾಯ
  • ನಮ್ಮ ಪ್ರಯತ್ನ ಮಾಡಿದ್ದೇವೆ-ಬಾಬು ಶೆಟ್ಟಿ

ಚಿತ್ರ: ಯೂಸುಫ್ ರೆಂಜಲಾಡಿ

 

ಪುತ್ತೂರು: ಸಾಲ ಮನ್ನಾದಿಂದ ವಂಚಿತವಾಗಿರುವ ರೈತರ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಮುಂದಿನ 15ದಿನಗಳ ಕಾಲಾವಕಾಶವನ್ನು ನೀಡುತ್ತಿದ್ದು ಆ ಕಾಲಾವಧಿಯೊಳಗೆ ನ್ಯಾಯ ಸಿಗದೇ ಹೋದಲ್ಲಿ ಆ.೧ರಂದು ಪುತ್ತೂರು ದರ್ಬೆಯಿಂದ ಮಿನಿ ವಿಧಾನ ಸೌಧದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಮತ್ತು ಸಂಘದ ನೇತೃತ್ವದಲ್ಲಿ ಸಾಲ ಮನ್ನಾ ವಂಚಿತರ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಜು.16ರಂದು ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಸಭಾಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ನರಿಮೊಗರು ಮತ್ತು ಶಾಂತಿಗೋಡು ಗ್ರಾಮದ ರೈತರ ಸಾಲಮನ್ನಾ ವಂಚಿತ ರೈತರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ರೈತರು ಸಂಘಟಿತರಾಗಬೇಕು-ಶಾಂತಿಪ್ರಸಾದ್ ಹೆಗ್ಡೆ
ಭಾರತೀಯ ಕಿಸಾನ್ ಸಂಘದ ದ.ಕ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ರೈತರು ಹಸಿರು ಶಾಲು ಹಾಕಿ ರೈತ ಹೋರಾಟ ಹಾಗೂ ರೈತ ಸಭೆಗಳಲ್ಲಿ ಭಾಗವಹಿಸಬೇಕು. ಕೃಷಿಕರು ಸಂಘಟಿತರಾಗುವ ಮೂಲಕ ಗ್ರಾಮ ಮಟ್ಟದಲ್ಲಿ ರೈತ ಸಂಘಗಳನ್ನು ಬಲಪಡಿಸಬೇಕು ಮತ್ತು ರೈತ ಪರವಾದ ಹಕ್ಕುಗಳನ್ನು ಹೋರಾಟದ ಮೂಲಕವಾದರೂ ಪಡೆದುಕೊಳ್ಳಬೇಕೆಂದು ಹೇಳಿದರು.

ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ-ಸುರೇಶ್ ಪ್ರಭು
ಭಾರತೀಯ ಕಿಸಾನ್ ಸಂಘದ ನರಿಮೊಗರು ಘಟಕದ ಅಧ್ಯಕ್ಷ ಸುರೇಶ್ ಪ್ರಭು ಶೆಟ್ಟಿಮಜಲು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಸಾಲ ಮನ್ನಾ ವಿಚಾರವಾಗಿ ನಾವು ಹೋರಾಡುತ್ತಿದ್ದು ನಮ್ಮ ಸಮಸ್ಯೆ ಸರಕಾರಕ್ಕೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ನಾವು ಇಷ್ಟೆಲ್ಲಾ ಪ್ರಯತ್ನಿಸುತ್ತಿದ್ದರೂ ಕೂಡಾ ಸರಕಾರ ಹಾಗೂ ಸಂಬಂಧಪಟ್ಟವರು ರೈತರ ಬಗ್ಗೆ ಕಾಳಜಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮುಂದಕ್ಕೂ ನಮಗೆ ನ್ಯಾಯ ಸಿಗದೇ ಹೋದಲ್ಲಿ ಆಡಳಿತ ಮಂಡಳಿ ಜೊತೆಗೂಡಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ಹೇಳಿದರು.

ಬೆಂಗಳೂರಿನ ಐ.ಎಎಸ್ ಅಧಿಕಾರಿ ಕಾರಣ:
ಬೆಂಗಳೂರಿನ ಐಎಎಸ್ ಅಧಿಕಾರಿಯೋರ್ವರ ಉದ್ದಟತನವೇ ಇದಕ್ಕೆ ಕಾರಣ ಎನ್ನುವ ಅಂಶ ನಮ್ಮ ಗಮನಕ್ಕೆ ಬಂದಿದೆ. ಅಂತಹ ಐಎಎಸ್ ಅಧಿಕಾರಿಯನ್ನು ಕೂಡಲೇ ವಜಾ ಮಾಡಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸುರೇಶ್ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯವರ ನಿರ್ಲಕ್ಷ್ಯವೇ ಕಾರಣ-ಸುಬ್ರಾಯ
ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ ಶೆಟ್ಟಿಮಜಲು ಮಾತನಾಡಿ ೨೦೧೮ರಲ್ಲಿ ಆಗಿರುವ ಸಾಲ ಮನ್ನಾ ಯೋಜನೆಯ ಫಲ ಇನ್ನೂ ಸಿಗದ ಕಾರಣಕ್ಕೆ ನಾವು ಹೋರಾಟ ನಡೆಸುತ್ತಿದ್ದು ನರಿಮೊಗರು ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯವರ ಪ್ರಾರಂಭಿಕ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು. ನಮ್ಮ ಸೊಸೈಟಿಯಲ್ಲಿ ಮಾತ್ರ ಇಷ್ಟೊಂದು ಸಂಖ್ಯೆಯಲ್ಲಿ ರೈತರು ಸಾಲ ಮನ್ನಾದಿಂದ ವಂಚಿತವಾಗಿರುವ ಶಾಸಕರು ಕೂಡಾ ನಮ್ಮನ್ನು ಪ್ರಶ್ನಿಸಿದ್ದರು. ಈ ಬಗ್ಗೆ ನಾವು ಪರಿಶೀಲಿಸಿದಾಗ ಇಲ್ಲಿನ ಸೊಸೈಟಿಯವರು ಪತ್ರ ವ್ಯವಹಾರ ಮಾಡಿದ್ದು ಬಿಟ್ಟರೆ ಆರಂಭದಲ್ಲೇ ಬೆಂಗಳೂರಿಗೆ ಹೋಗಿ ಸರಿಪಡಿಸುವ ಕಾರ್ಯ ಮಾಡಿಲ್ಲ ಎಂದು ದೂರಿದರು.

ನಮ್ಮ ಪ್ರಯತ್ನ ಮಾಡಿದ್ದೇವೆ-ಬಾಬು ಶೆಟ್ಟಿ
ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ ೨೦೧೮ರಲ್ಲಿ ಸಾಲ ಮನ್ನಾ ಆಗಿದ್ದು ಆ ಬಳಿಕ ವಿವಿಧ ಹಂತಗಳಲ್ಲಿ ನಮ್ಮ ಸೊಸೈಟಿಯ ರೈತರ ಸಾಲ ಮನ್ನಾದ ಬಗ್ಗೆ ನಾವು ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ ಎಂದು ಹೇಳಿದರು. ಇತ್ತೀಚೆಗೆ ಪ್ರತಿಭಟನಾ ಸಭೆ ಬಳಿಕ ಶಾಸಕರಲ್ಲಿ ಮನವಿ ಮಾಡಿದ ಬಳಿಕ ಅವರೂ ಪ್ರಯತ್ನ ಮಾಡಿದ್ದರು. ನಾನು ಬೆಂಗಳೂರಿಗೆ ಹೋಗಬೇಕಾಗಿಲ್ಲ, ಕಾರ್ಯನಿರ್ವಹಣಾಧಿಕಾರಿ ಹೋದರೆ ಸಾಕು ಎಂದು ಶಾಸಕರೇ ಹೇಳಿದ್ದರಿಂದ ಕಾರ್ಯನಿರ್ವಹಣಾಧಿಕಾರಿಯವರು, ಸುರೇಶ್ ಪ್ರಭು ಮೊದಲಾದವರು ಹೋಗಿದ್ದಾರೆ. ೧೬೬ ಮಂದಿ ರೈತರ ಹೆಸರು ಗ್ರೀನ್ ಲಿಸ್ಟ್‌ಗೆ ಸೇರಿದ್ದು ನಾವು ರಾಜಕೀಯವಾಗಿಯೂ, ಅದರ ಹೊರತಾಗಿಯೂ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ನಾವು ಮುಂದಕ್ಕೂ ರೈತರ ಪರವಾಗಿದ್ದು ಕೋರ್ಟ್‌ಗೆ ಹೋಗಲೂ ಸಿದ್ದರಿದ್ದೇವೆ ಎಂದು ಬಾಬು ಶೆಟ್ಟಿ ಹೇಳಿದರು.

ನ್ಯಾಯ ಸಿಗುವವರೆಗೆ ಹೋರಾಟ-ನಾರಾಯಣ ಗೌಡ
ಭಾ.ಕಿ.ಸಂಘ ಶಾಂತಿಗೋಡು ಗ್ರಾಮ ಸಮಿತಿ ಅಧ್ಯಕ್ಷ ಎಸ್.ಪಿ ನಾರಾಯಣ ಗೌಡ ಮಾತನಾಡಿ ಸಾಲ ಮನ್ನಾ ವಂಚಿತ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಆಡಳಿತ ಮಂಡಳಿಯವರು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು-ದೇವರಾಜ್ ಗೌಡ
ಭಾ.ಕಿ.ಸಂಘ ಶಾಂತಿಗೋಡು ಗ್ರಾಮ ಸಮಿತಿ ಸದಸ್ಯ ದೇವರಾಜ್ ಗೌಡ ಕಲ್ಕಾರು ಮಾತನಾಡಿ ಆಡಳಿತ ಕಮಿಟಿಯವರು ಬೇಜವಾಬ್ದಾರಿಯಿಂದಾಗಿ ಈ ಗೊಂದಲ ಉಂಟಾಗಿದೆ. ಮೊದಲೇ ಎಚ್ಚೆತ್ತುಕೊಂಡು ಸರಿಪಡಿಸಿದ್ದಲ್ಲಿ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ಹೇಳಿದರು.

ಚುನಾವಣೆ ಬಹಿಷ್ಕರಿಸುವ-ರಾಜಾರಾಮ್
ರೈತ ರಾಜಾರಾಮ್ ನೆಲ್ಲಿತ್ತಡಿ ಮಾತನಾಡಿ ನ್ಯಾಯ ಸಿಗದೇ ಹೋದಲ್ಲಿ ರೈತರಾದ ನಾವೆಲ್ಲ ಪಕ್ಷಬೇಧ ಮರೆತು ಚುನಾವಣೆಗೆ ಅಸಹಕಾರ ಮಾಡುವ ಮೂಲಕ ಚುನಾವಣೆ ಬಹಿಷ್ಕರಿಸುವ ಎಂದು ಹೇಳಿದರು.

ಸರಕಾರಕ್ಕೆ ರೈತರ ಸಮಸ್ಯೆ ಕಾಣುವುದಿಲ್ವಾ-ವಿಶಾಲಾಕ್ಷಿ
ಸಾಲ ಮನ್ನಾ ವಂಚಿತರ ಪರವಾಗಿ ವಿಶಾಲಾಕ್ಷಿ ಮಾತನಾಡಿ ರೈತರ ಸಾಲ ಮನ್ನಾದಿಂದ ವಂಚಿತವಾಗಿರುವಾಗ ಸರಕಾರಕ್ಕೆ ಕಣ್ಣು ಕಾಣುವುದಿಲ್ವಾ, ಕಿವಿ ಕೇಳಿಸುವುದಿಲ್ವಾ, ಇಷ್ಟೆಲ್ಲಾ ಹೋರಾಟ ಆಗಿಯೂ ನ್ಯಾಯ ಸಿಗುವುದಿಲ್ಲವಾದರೆ ಸಭೆ ಮಾಡುವುದು ಯಾಕೆ. ನಾವು ಹೋರಾಟ ಮಾಡೋಣ ಎಂದು ಹೇಳಿದರು.

ಸಾಲ ಮನ್ನಾ ವಂಚಿತ ಕೃಷಿಕರಾದ ವಿಠಲ್ ಮುಕ್ವೆ, ರಘುನಾಥ ಶೆಟ್ಟಿಮಜಲು, ದೇವರಾಜ್ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಮುಖಂಡ ಜಯರಾಮ ಪೂಜಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ, ಹಾಗೂ ಸಾಲ ಮನ್ನಾ ವಂಚಿತ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು. ಭಾ.ಕಿ.ಸಂಘ ಶಾಂತಿಗೋಡು ಗ್ರಾಮ ಸಮಿತಿ ಕಾರ್ಯದರ್ಶಿ ವಿಶ್ವನಾಥ ಬಲ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

ಶಾಸಕರ ಪ್ರತಿನಿಧಿಯಾಗಿ ಸಾಜ ಆಗಮನ:

ಸಾಲ ಮನ್ನಾ ವಂಚಿತರ ಸಭೆಗೆ ಮಧ್ಯ ಭಾಗದಲ್ಲಿ ಶಾಸಕರ ಪ್ರತಿನಿಧಿಯಾಗಿ ತಾ.ಪಂ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರೂ ಆಗಿರುವ ಸಾಜ ರಾಧಾಕೃಷ್ಣ ಆಳ್ವ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು ಶಾಸಕರು ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು ಅವರಿಗೆ ಇಲ್ಲಿಗೆ ಬರಲು ಅಸಾಧ್ಯವಾಗಿರುವ ಕಾರಣ ಅವರ ಪರವಾಗಿ ಅವರ ಹೇಳಿರುವುದರಿಂದ ನಾನು ನಿಮ್ಮ ಸಭೆಗೆ ಬಂದಿದ್ದೇನೆ ಎಂದು ಹೇಳಿದರು. ಶಾಸಕರು ಸಾಲ ಮನ್ನಾ ಹಣ ಬಿಡುಗಡೆಯಾಗದ ಬಗ್ಗೆ ಮುತುವರ್ಜಿ ವಹಿಸಿ ಪ್ರಯತ್ನ ಮಾಡಿದ್ದು ಮುಂದಕ್ಕೆ ಸಹಕಾರ ಸಚಿವರ ಜೊತೆ ಮಾತನಾಡಿ ಖಂಡಿತ ರೈತರಿಗೆ ನ್ಯಾಯ ದೊರಕಿಸಿ ಕೊಡಲಿದ್ದಾರೆ. ನಾನು ಕೂಡಾ ಶಾಸಕರ ಜೊತೆ ಸೇರಿ ಇಲ್ಲಿನ ರೈತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಇಂದು ಇಲ್ಲಿ ನಡೆದಿರುವ ವಿಚಾರ, ನಿರ್ಣಯಗಳ ಬಗ್ಗೆ ಶಾಸಕರಿಗೆ ತಿಳಿಸುತ್ತೇನೆ ಎಂದು ಸಾಜ ರಾಧಾಕೃಷ್ಣ ಆಳ್ವ ಹೇಳಿದರು.

ನ್ಯಾಯ ಸಿಗದಿದ್ದಲ್ಲಿ ಹೋರಾಟ ಅನಿವಾರ್ಯ-ನಾರಾಯಣ ಸ್ವಾಮಿ


ಭಾರತೀಯ ಕಿಸಾನ್ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತನಾಡಿ ರೈತರು ಯಾರ ಗುಲಾಮರಲ್ಲ. ರೈತ ಈ ದೇಶದ ಆಸ್ತಿ. ರೈತರ ಪ್ರಾಮಾಣಿಕ ಬೇಡಿಕೆಯನ್ನು ಸಂಬಂಧಪಟ್ಟವರು ಕೂಡಲೇ ಸ್ಪಂಧಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಹೇಳಿದರು. ರೈತರು ಒಗ್ಗಟ್ಟಿನಲ್ಲಿರಬೇಕು. ಅನಿವಾರ್ಯವಾದಾಗ ಹೋರಾಟಕ್ಕೂ ಇಳಿಯಬೇಕು. ಪ್ರಸ್ತುತ ಇಲ್ಲಿ ಸಾಲ ಮನ್ನಾ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗದೇ ಹೋದಲ್ಲಿ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ಅವರು ಹೇಳಿದರು.

116 ಮಂದಿಯದ್ದು ಗ್ರೀನ್ ಲಿಸ್ಟ್‌ನಲ್ಲಿದೆ-ಮಧುಕರ ಎಚ್


ರೈತರ ವಿವಿಧ ಪ್ರಶ್ನೆಗಳಿಗೆ ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಅವರು ಉತ್ತರಿಸಿದರು246 ಮಂದಿ ರೈತರ ಸಾಲ ಮನ್ನಾದ ಹಣ ಬರಲು ಬಾಕಿಯಿದ್ದು ಅದರಲ್ಲಿ 166 ಮಂದಿ ರೈತರ ಹೆಸರು(ಎಲಿಜಿಬಲ್) ಗ್ರೀನ್ ಲಿಸ್ಟ್‌ಲ್ಲಿದೆ. 80 ಮಂದಿ ರೈತರದ್ದು ಪೆಂಡಿಂಗ್ ಆಗಿದೆ. ರೇಷನ್ ಕಾರ್ಡ್ ಮತ್ತಿತರ ಸಮಸ್ಯೆಯೂ ಇದೆ ಎಂದ ಅವರು ನಮ್ಮ ಸಂಘದ ಸದಸ್ಯ ರೈತರ ಸಾಲ ಮನ್ನಾ ವಿಚಾರದಲ್ಲಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದೇವೆ ಎಂದು ಹೇಳಿದರು.

LEAVE A REPLY

Please enter your comment!
Please enter your name here