ಫಿಲೋಮಿನಾ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

0

  • ಧನಾತ್ಮಕ ಚಿಂತನೆಯ ಬದುಕಿನ ಶಿಕ್ಷಣ ಇಂದಿನ ಅತ್ಯಗತ್ಯ-ಡಾ|ಮಾಧವ ಭಟ್

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ನಾಯಕತ್ವ ಗುಣವನ್ನು ಸಮಾಜದಲ್ಲಿ ಯಾವ ರೀತಿ ಪ್ರಸ್ತುತಪಡಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದೊಂದಿಗೆ ಧನಾತ್ಮಕ ಚಿಂತನೆಯುಳ್ಳ ಬದುಕಿನ ಶಿಕ್ಷಣ ಇಂದಿನ ಅತ್ಯಗತ್ಯವಾಗಿದೆ ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ|ಮಾಧವ ಭಟ್‌ರವರು ಹೇಳಿದರು.


ಜು.೧೬ ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ೨೦೨೨-೨೩ನೇ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಕ್ಲಬ್ಸ್ ಮತ್ತು ಅಸೋಸಿಯೇಶನ್‌ನ ಉದ್ಘಾಟನಾ ಸಮಾರಂಭವು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಜರಗಿದ್ದು, ಇದರ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗಾಳಿಪಟವು ಹೇಗೆ ದಾರದ ಮೂಲಕ ಆಗಸದಲ್ಲಿ ಹಾರುತ್ತದೆ, ದಾರ ಕಡಿದರೆ ಆ ಗಾಳಿಪಟ ಹಿಡಿತ ಕಳಕೊಂಡು ಭೂಮಿಗೆ ಬೀಳುತ್ತದೆ. ಆದರೆ ಅದೇ ದಾರವು ಗಾಳಪಟವನ್ನು ಎತ್ತರಕ್ಕೇರಿಸುತ್ತದೆ ಎಂಬ ವಾಸ್ತವತೆಯ ಅರಿವು ವಿದ್ಯಾರ್ಥಿಗಳು ಅರಿಯಬೇಕಾಗಿದೆ. ಜೀವನವು ಕೂಡ ಕೇವಲ ಅಂಕಗಳ ಮಾನದಂಡದ ಆಧಾರದಲ್ಲಿ ನಿಂತಿಲ್ಲ. ಅದು ಸಮಾಜದಲ್ಲಿನ ಬದುಕಿನ ವಾಸ್ತವತೆಯ ಮೇಲೆ ನಿಂತಿದೆ. ಯಾರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾರೋ ಅವರು ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದ ಅವರು ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವಂತಹ ಗೀಳು ಸೆಲ್ಪಿಗೆ ಮಾರು ಹೋಗಬೇಡಿ. ವಿದ್ಯಾರ್ಥಿಗಳು ನಾಯಕತ್ವದ ಜೊತೆಗೆ ಉತ್ತಮ ಸಂವಹನ ಗುಣವನ್ನೂ ಮೈಗೂಡಿಸಿಕೊಳ್ಳಿ. ಕಳೆದುಹೋದ ದಿನಗಳ ಬಗ್ಗೆ ಚಿಂತಿಸದೆ ಮುಂದಿನ ಉಜ್ವಲ ಭವಿಷ್ಯದ ಚಿಂತನೆಯೊಂದಿಗೆ ಬೆಳೆಯಿರಿ, ಸಮಾಜದಲ್ಲಿ ಪ್ರಜ್ವಲಿಸಿ, ಉತ್ತಮ ಬದುಕಿನೊಂದಿಗೆ ಮುಂದುವರೆಯಿರಿ ಎಂದು ಅವರು ಹೇಳಿದರು.

 


ಹೆತ್ತವರ ತ್ಯಾಗದ ಮನೋಭಾವನೆಯನ್ನು ಅರ್ಥೈಸಿ ಸಾಕಾರಗೊಳಿಸಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ವಿಧೇಯತೆ, ಪರಸ್ಪರ ಗೌರವ, ಸರಳತೆ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಕಾಲೇಜು ಜೀವನ ಗೋಲ್ಡನ್ ಲೈಫ್ ಆಗಬೇಕಾದರೆ ವಿದ್ಯಾರ್ಥಿಗಳು ತಮ್ಮಲ್ಲಿನ `ಅಹಂ’ ಬಿಟ್ಟು ತಮ್ಮ ಹೆತ್ತವರ ತ್ಯಾಗದ ಮನೋಭಾವನೆಯನ್ನು ಅರ್ಥೈಸಿ ಅದನ್ನು ಸಾಕಾರಗೊಳಿಸಬೇಕಾಗಿದೆ. ಸಮಾಜದಲ್ಲಿನ ಒಳ್ಳೆಯತನವನ್ನು ತೆಗೆದುಕೊಂಡು, ಯಾರಲ್ಲೂ ತಾರತಾಮ್ಯ ಮಾಡದೆ `ತನ್ನತನ’ವನ್ನು ಮೈಗೂಡಿಸಿಕೊಂಡು ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಚಾಕಚಾಕ್ಯತೆ ಹೊಂದುವವರಾಗಬೇಕು ಎಂದರು.


ವಾಸ್ತವತೆಯ ಬದುಕೇ ಬೇರೆ, ಕಾಲೇಜು ಬದುಕೇ ಬೇರೆ-ವಂ|ಸ್ಟ್ಯಾನಿ ಪಿಂಟೋ:
ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯುಸಿ ವಿದ್ಯಾಭ್ಯಾಸವು ವಿದ್ಯಾರ್ಥಿಗಳ ಬಾಳಿನ ಪ್ರಮುಖ ಘಟ್ಟವಾಗಿದೆ. ಆದರೆ ಕಾಲೇಜಿನ ರಂಗುರಂಗಿನ ಜೀವನ ಹಾಗೂ ಮುಂದಿನ ಸಮಾಜದಲ್ಲಿನ ವಾಸ್ತವತೆಯ ಬದುಕು ಬಹಳ ಭಿನ್ನವಾಗಿರುತ್ತದೆ. ಕಾಲೇಜು ಜೀವನವೇ ಬೇರೆ, ಬದುಕಿನ ವಾಸ್ತವತೆಯ ಜೀವನವೇ ಬೇರೆ. ಫಿಲೋಮಿನಾ ಪಿಯು ಕಾಲೇಜಿಗೆ ಸೇರ್ಪಡೆಗೊಂಡು ಫಿಲೋ ಕ್ಯಾಂಪಸ್ಸಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮೊದಲಾಗಿ ಸ್ವಾಗತ ಕೋರಲು ಬಯಸುತ್ತೇನೆ ಮತ್ತು ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದರು.

ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಂತಾಗಲಿ-ಎ.ಜೆ ರೈ:
ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎ.ಜೆ ರೈಯವರು ಮಾತನಾಡಿ, ಫಿಲೋಮಿನಾ ಕಾಲೇಜಿನಲ್ಲಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಕಾಲೇಜು ಸಂಸ್ಥಾಪಕ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋ, ಪ್ರಥಮ ಪ್ರಾಂಶುಪಾಲ ವಂ|ಸೆರಾವೋ, ದೈಹಿಕ ಶಿಕ್ಷಣ ನಿರ್ದೇಶಕ ಮೇಜರ್ ವೆಂಕಟ್ರಾಮಯ್ಯರವರ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ. ಕಳೆದ ಹಲವಾರು ದಶಕಗಳಿಂದ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆ ಅನೇಕ ಮಹನೀಯರನ್ನು ಸಮಾಜಕ್ಕೆ ಪರಿಚಯಿಸಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಂತಾಗಲಿ ಎಂಬ ಗುರಿಯನ್ನು ಹೊಂದುವಂತಾಗಬೇಕು ಎಂದರು.

ಕಾಲೇಜು ಅನೇಕ ಮಹನೀಯರನ್ನು ಸಮಾಜಕ್ಕೆ ಪರಿಚಯಿಸಿದೆ-ಶಶಿಕುಮಾರ್ ರೈ:
ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ಶಶಿಕುಮಾರ್ ರೈ ಬಾಲ್ಯೋಟ್ಟುರವರು ಮಾತನಾಡಿ, ಪಿಯುಸಿ ವ್ಯಾಸಂಗವು ವಿದ್ಯಾರ್ಥಿಗಳಿಗೆ ಭವಿಷ್ಯದ ವೇದಿಕೆಯಾಗಿದೆ. ಫಿಲೋಮಿನಾ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೆನಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಅನೇಕ ವಿಜ್ಞಾನಿಗಳು, ಇಂಜಿನಿಯರ್, ವೈದ್ಯರುಗಳು ಸಂಸ್ಥೆಯ ಹೆಮ್ಮೆಯೆನಿಸಿದೆ. ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಜೀವನ ನಡೆಸಿ, ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಿ ಬದುಕಬೇಕು ಮಾತ್ರವಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಾಗಬೇಕು ಎಂದು ಹೇಳಿದರು.


ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಶ್ಮಿ ಎಂ.ಡಿ ವಂದಿಸಿದರು. ಕಾರ್ಯದರ್ಶಿ ಪ್ರಫುಲ್ಲ ಜ್ಯೋತ್ಸ್ನಾ ನೊರೋನ್ಹಾ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕರಾದ ಸುಮ ಪಿ.ಆರ್, ಅಶ್ವಿನಿ ಕೆ, ರವಿಪ್ರಸಾದ್, ಸುಮನಾ ಪ್ರಶಾಂತ್, ಅನಿಲ್ ಕುಮಾರ್, ಭರತ್ ಕುಮಾರ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿನಿ ಪಿ.ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಪ್ರಶಾಂತ್ ಭಟ್ ಹಾಗೂ ಫಿಲೋಮಿನಾ ಮೊಂತೇರೋರವರ ನಿರ್ದೇಶನದಲ್ಲಿ ಕಾರ್ಯಕ್ರಮ ಜರಗಿತು.

ಅಭಿನಂದನೆ..
೨೦೨೨-೨೩ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಶ್ರೀನಿವಾಸ್ ಹೆಗ್ಡೆ, ಕಾರ್ಯದರ್ಶಿ ಪ್ರಫುಲ್ಲ ಜ್ಯೋಸ್ನಾ ನೊರೋನ್ಹಾ ಹಾಗೂ ಜೊತೆ ಕಾರ್ಯದರ್ಶಿ ರಶ್ಮಿ ಎಂ.ಡಿರವರಿಗೆ ಕಾಲೇಜು ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂಗುಚ್ಛ ನೀಡಿ ಅಭಿನಂದಿಸಿದರು.

ಪ್ರಮಾಣವಚನ..
ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಕಾಲೇಜಿನ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಪ್ರತಿನಿಧಿಗಳು, ಕ್ಲಬ್ಸ್ ಮತ್ತು ಅಸೋಸಿಯೇಶನ್‌ನ ಪದಾಧಿಕಾರಿಗಳು ಬೆಳಗುವ ಹಣತೆಯೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿ ವ್ಯಾರನ್ ಲೂವಿಸ್‌ರವರು ಪದಾದಿಕಾರಿಗಳ ಪಟ್ಟಿ ವಾಚಿಸಿದರು.

ಮೆರವಣಿಗೆ..
ಕಾರ್ಯಕ್ರಮದ ಆರಂಭಕ್ಕೆ ಮುನ್ನ ಮುಖ್ಯ ಅತಿಥಿಗಳನ್ನು ಕಾಲೇಜಿನ ಸಂಚಾಲಕರು, ಪ್ರಾಂಶುಪಾಲರು, ಕ್ಯಾಂಪಸ್ ನಿರ್ದೇಶಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಾಲೇಜಿನ ಬ್ಯಾಂಡ್ ವಾದ್ಯದೊಂದಿಗೆ ಕಾಲೇಜಿನ ಕಛೇರಿಯಿಂದ ಸಿಲ್ವರ್ ಜ್ಯುಬಿಲಿ ಸಭಾಂಗಣದವರೆಗೆ ಶಿಸ್ತುಬದ್ಧವಾದ ಮೆರವಣಿಗೆಯೊಂದಿಗೆ ಕರೆ ತರಲಾಯಿತು.

LEAVE A REPLY

Please enter your comment!
Please enter your name here