ಪವಾಡ ರೀತಿಯಲ್ಲಿ ಉರುಳಿದ ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಳದ ಅಶ್ವತ್ಥ ವೃಕ್ಷ

0

 

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬೃಹದಾಕಾರದ ಅತ್ಯಂತ ಹಳೆಯದಾದ ಅಶ್ವಥ ವೃಕ್ಷವೊಂದು ಯಾವ ಹಾನಿಯೂ ಇಲ್ಲದೇ, ಭಕ್ತರಿಗೆ ದೋಷ ಬಾರದಂತೆ ಪವಾಡ ರೀತಿಯಲ್ಲಿ ಉರುಳಿ ಬಿದ್ದಿರುವುದು ಭಕ್ತರ ಮನ ಪುಳಕಿತಗೊಳಿಸಿದೆ.

ಹೌದು.. ದೇವರ ಮೇಲಿನ ಶ್ರದ್ದೆ, ನಂಬಿಕೆಗಳು ಎಂತಹ ಘನ ಕಾರ್ಯವನ್ನಾದರೂ ಅತ್ಯಂತ ಲಘುವಾಗಿ ಮಾಡಿಸಬಲ್ಲುದು ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯಗಳಾಗಿ 2013 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಆಗ ದೇವಳದ ಮುಂಭಾಗದಲ್ಲಿದ್ದ ಅಶ್ವತ್ಥ ವೃಕ್ಷ ಅಭಿವೃದ್ಧಿ ಕಾಮಗಾರಿಗೆ ತೊಡಕಾಗುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವ ಚಿಂತನೆ ನಡೆಸಲಾಗಿತ್ತು. “ಅಶ್ವತ್ಥ ಮರವನ್ನು ಕಡಿಯಬೇಕಾದರೆ ಇನ್ನೊಂದು ಅಶ್ವತ್ಥ ಗಿಡ ನೆಟ್ಟು ಅದರಲ್ಲಿ ಒಂದು ಸಾವಿರಕ್ಕೂ ಅಧಿಕ ಎಲೆಗಳಾದಾಗ ಹಳೆಯ ಅಶ್ವತ್ಥ ಮರವನ್ನು ಕಡಿಯಬಹುದು” ಎಂಬ ಶಾಸ್ತ್ರನಿಯಮದಂತೆ ಈ ಮರದ ಪಕ್ಕದಲ್ಲಿ ಅಶ್ವತ್ಥ ಗಿಡ ನೆಡಲಾಯಿತು. ಗಿಡದಲ್ಲಿ ಒಂದು ಸಾವಿರಕ್ಕಿಂತ ಎಲೆಗಳಾಗಿ ಸಮೃದ್ಧವಾಗಿ ಬೆಳೆದಾಗ ಹಳೆಯ ಮರವನ್ನು ಕಡಿಯಲು ಕಾರ್ಯೋನ್ಮುಖರಾದ ವೇಳೆ ದೇವರ ಮೇಲಿನ ನಂಬಿಕೆ, ಭಯ, ಭಕ್ತಿ ಮರ ಕಡಿಯಲು ಯಾವೊಬ್ಬನೂ ಮುಂದೆ ಬರಲಿಲ್ಲ. ಈ ಯೋಚನೆಯಲ್ಲಿಯೇ ದಿನಗಳುರುಳಿದ್ದವು.

ಹೀಗಿರಬೇಕಾದರೆ, ಎರಡು ದಿನಗಳ ಹಿಂದೆ ಜುಲೈ 15 ರಂದು ಕ್ಷೇತ್ರದ ಶಿಲ್ಪಿಗಳಾದ ಮಹೇಶ್ ಮುನಿಯಂಗಳರವರು ಕ್ಷೇತ್ರಕ್ಕೆ ಭೇಟಿ ನೀಡಿ ಅನ್ನಛತ್ರ ಸಭಾಂಗಣದ ಕಾಮಗಾರಿಗಳನ್ನು ವೀಕ್ಷಿಸಿ ಬಳಿಕ ಅಶ್ವತ್ಥ ಗಿಡಕ್ಕೆ ಹೊಸ ಕಟ್ಟೆ ನಿರ್ಮಿಸಲು ವಾಸ್ತು ಲೆಕ್ಕಾಚಾರಗಳನ್ನು ಕೊಟ್ಟು ಹೋಗಿದ್ದರು.

ಪವಾಡವೆಂಬಂತೆ ಅವರು ಭೇಟಿ ನೀಡಿದ ಮರುದಿನ ಜುಲೈ 16 ರಂದು ಸಂಜೆ 4.30 ಕ್ಕೆ ಹಳೆಯ ಅಶ್ವತ್ಥ ಮರ ಧರಶಾಹಿಯಾಗಿದೆ. ಮರವನ್ನು ಹೇಗೆ ಕಡಿಯುವುದೆಂಬ ಯೋಚನೆಯಲ್ಲಿದ್ದ ದೇವಳದ ಆಡಳಿತ ಮಂಡಳಿಯವರಿಗೆ ಮತ್ತು ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ. ಮಹಾಲಿಂಗೇಶ್ವರನೇ ಅಶ್ವತ್ಥ ಮರ ತೆರವುಗೊಳಿಸುವಲ್ಲಿ ತನಗೆ ಸಂತೃಪ್ತಿ ಇದೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ತನಗೆ ಆಗಬೇಕಾದ ಕಾರ್ಯವೊಂದನ್ನು ಭಕ್ತರಿಗೆ ದೋಷ ಬಾರದ ರೀತಿಯಲ್ಲಿ ತಾನೇ ಮಾಡಿಕೊಂಡಿರುವ ಮಹಾಲಿಂಗೇಶ್ವರನ ಮಹಿಮೆಯನ್ನು ಕಂಡು ಈಗ ಪುಳಕಿತಗೊಳ್ಳುವ ಸರದಿ ಭಕ್ತರದ್ದಾಗಿದೆ.

ಮರ ತೆರವುಗೊಳಿಸಿದ ಭಕ್ತರು
ಧರಶಾಹಿಯಾದ ಮರವನ್ನು ತಕ್ಷಣ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ರವರ ನೇತೃತ್ವದಲ್ಲಿ ಭಕ್ತವೃಂದದವರು ಸೇರಿ ತೆರವುಗೊಳಿಸಿದ್ದಾರೆ.

ಹಾನಿಯಾಗದೆ ಧರಶಾಹಿಯಾದ ವೃಕ್ಷ
ಅಶ್ವತ್ಥವೃಕ್ಷ ಧರಶಾಹಿಯಾದುದರಲ್ಲಿಯೂ ಅನೇಕ ದೇವರ ಲೀಲೆ ಕಂಡುಬಂದಿದೆ. ದೇವಸ್ಥಾನದ ವಠಾರದಲ್ಲಿ ಭಕ್ತರಿಲ್ಲದ ಸಮಯ (ಸಂಜೆ 4.30) ನೋಡಿಕೊಂಡು ಮರ ಉರುಳಿದೆ. ಪೂಜಾ ಅವಧಿಯಲ್ಲಿ ಈ ಮರದ ಕೆಳಭಾಗದಲ್ಲಿ ಜನಸಂಚಾರ, ವಾಹನಗಳ ಪಾರ್ಕಿಂಗ್ ಇರುತ್ತಿತ್ತು. ಮರದ ಮುಂಭಾಗದಲ್ಲಿ ದೇವಳ, ಹಿಂಭಾಗದಲ್ಲಿ ಕೆರೆ, ಎಡಭಾಗದಲ್ಲಿ ಅಡಿಕೆ ತೋಟ ಇವೆಲ್ಲವನ್ನೂ ತಪ್ಪಿಸಿಕೊಂಡು ಕಿಂಚಿತ್ತು ಹಾನಿ ಉಂಟಾಗದ ರೀತಿಯಲ್ಲಿ ವೃಕ್ಷ ಧರಶಾಹಿಯಾಗಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here