ಬಲ್ಯ: ರಸ್ತೆಗೆ ಮಣ್ಣು ಹಾಕಿದ ಪರಿಣಾಮ, ಸಂಪೂರ್ಣ ಹದಗೆಟ್ಟ ನೆರೋಲ್ತಡ್ಕ-ಕೇರ್ಪುಡೆ ರಸ್ತೆ-ದುರಸ್ತಿಗೊಳಿಸಲು ನಿವಾಸಿಗಳ ಆಗ್ರಹ

0

 

ಕಡಬ: ಬಲ್ಯ ಗ್ರಾಮದ ನೆರೋಲ್ತಡ್ಕ, ಕೆರೆನಡ್ಕ ,ಕೇರ್ಪುಡೆ ಪಂಚಾಯತ್ ರಸ್ತೆಗೆ ಸ್ಥಳೀಯ ಇಬ್ಬರು ವ್ಯಕ್ತಿಗಳು ಮಣ್ಣು ಹಾಕಿದ ಪರಿಣಾಮ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು ಈ ಬಗ್ಗೆ ಕಡಬ ತಹಸೀಲ್ದಾರ್ ಸ್ಥಳಕ್ಕೆ ತೆರಳಿ ಮಣ್ಣು ತೆರವುಗೊಳಿಸಲು ಸೂಚನೆ ನೀಡಿದ್ದರೂ ಈ ವರೆಗೆ ರಸ್ತೆಗೆ ಹಾಕಲಾದ ಮಣ್ಣನ್ನು ತೆರವುಗೊಳಿಸಲಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.


ಬಲ್ಯದಿಂದ ನೆರೋಳ್ತಡ್ಕ, ಕೆರ್ನಡ್ಕ, ಕೇರ್ಪುಡೆ ಸಂಪರ್ಕ ರಸ್ತೆಯು ಕಳೆದ ಸುಮಾರು 30 ವರ್ಷಗಳಿಂದ ಇದ್ದು ಈ ಭಾಗದ ಸುಮಾರು 40 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ, ಈ ರಸ್ತೆಯಲ್ಲಿ ದಿನಂಪ್ರತಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ, ಕೆಲವೊಂದು ಮನೆಯಲ್ಲಿ ಅಂಗವಿಕಲರು, ವೃದ್ದರು ಇದ್ದು ಇವರ ಆರೋಗ್ಯ ಸಂಬಂಧಿ ಸೇವೆಗಳಿಗೆ ಬರುವ ವಾಹನ ಸಂಚಾರಕ್ಕೂ ಈ ರಸ್ತೆಯ ಅವ್ಯವಸ್ಥೆಯಿಂದಾಗಿ ತೊಂದರೆಯಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಇಲ್ಲಿನ ನಾಗರಿಕರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಅವರ ಸೂಚನೆಯಂತೆ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ, ರಸ್ತೆಗೆ ಹಾಕಿದ ಮಣ್ಣನ್ನು ತೆರವುಗೊಳಿಸಿ ಸಂಚಾರಯೋಗ್ಯ ಮಾಡುವಂತೆ ಸೂಚನೆ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಈ ಇಬ್ಬರು ವ್ಯಕ್ತಿಗಳು ಮಣ್ಣನ್ನು ತೆರವುಗೊಳಿಸಿದ್ದರೂ ರಸ್ತೆಯ ಸ್ಥಿತಿ ಇನ್ನೂ ಹಾಗೆಯೇ ಇದ್ದು ಸಂಚರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

LEAVE A REPLY

Please enter your comment!
Please enter your name here