ಸದಸ್ಯತ್ವ ಅಭಿಯಾನಕ್ಕೆ ಹೆಚ್ಚು ಒತ್ತು – ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ವಿಶ್ವನಾಥ ಗೌಡ ಕೆಯ್ಯೂರು

0

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಮೂಲಕ ಸಮಾಜ ಬಾಂಧವರ ಸದಸ್ಯತನಕ್ಕೆ ಈ ಬಾರಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗಾಗಿ ಪ್ರತಿ ಮನೆಯಿಂದ ಒಬ್ಬರಾದರೂ ಸಂಘದ ಸದಸ್ಯತ್ವ ಪಡೆಯಬೇಕು. ಈ ನಿಟ್ಟಿನಲ್ಲಿ ಸದಸ್ಯತ್ವ ಶುಲ್ಕವನ್ನು ಕಡಿಮೆ ಮಾಡಲಾಗಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಹೇಳಿದರು.

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜು. 17ರಂದು ನಡೆದ ಒಕ್ಕಲಿಗ ಗೌಡ ಸೇವಾ ಸಂಘದ ಮಾತೃ ಸಂಘ, ಯುವ, ಮಹಿಳಾ, ಸ್ವಸಹಾಯ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಬಂದಿರುವುದು ಸಂಘಕ್ಕೆ ಹೆಮ್ಮೆಯ ವಿಚಾರ. ಸಮಾಜ ಬಾಂಧವರ ಮಕ್ಕಳು ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮನೆ ಮಂದಿ ಸಂಘದ ಸದಸ್ಯರಾಗಬೇಕು. ಸಂಘದ ಸದಸ್ಯರಾದಲ್ಲಿ ಸಂಘದ ಸಮುದಾಯ ಭವನದ ಕಾರ್ಯಕ್ರಮದ ಬಾಡಿಗೆಯಲ್ಲೂ ರಿಯಾಯಿತಿ ದೊರೆಯುತ್ತದೆ ಎಂದ ಅವರು ಮುಂದಿನ ದಿನ ಸಂಘದ ಮೂಲಕ ನಡೆಯುವ ಅನೇಕ ಚಟುವಟಿಕೆಗಳಿಗೆ ಸಮಾಜ ಬಾಂಧವರ ಸಹಕಾರ ಸದಾ ಸಿಗಬೇಕೆಂದರು.

ಸದಸ್ಯತನ ನೋಂದಾಣಿ ಶುಲ್ಕದಲ್ಲಿ ರಿಯಾಯಿತಿ:

ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಅವರು ಮಾತನಾಡಿ ಸಂಘದ ಸದಸ್ಯತನ ಅಭಿಯಾನವನ್ನು ಆರಂಭಿಸಲಾಗಿದ್ದು, ಸದಸ್ಯತನದ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಸಂಘದ ಮೂಲಕ ಆರ್ಥಿಕ ಹಿನ್ನಡೆಯವರಿಗೆ ನೀಡುವ ಸಹಾಯಧನಕ್ಕೆ ಗ್ರಾಮ ಸಮಿತಿಯ ಶಿಫಾರಸ್ಸು ಇರಬೇಕು ಎಂದರು. ಸದಸ್ಯತನ ವಿಚಾರಕ್ಕೆ ಸಂಬಂಧಿಸಿ ಸಭೆಯಲ್ಲಿ ಸದಸ್ಯರು ಸಲಹೆ ಸೂಚನೆ ನೀಡಿದರು.

ಒಕ್ಕೊರಲು ಮರು ಮುದ್ರಣ:

ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಸಂಘದ ಮೂಲಕ ಸಮಾಜದ ಬಾಂಧವರ ಸಂಪ್ರದಾಯ ಕುರಿತ ಪುಸ್ತಕ ಒಕ್ಕೊರಲುಗೆ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಮರು ಮುದ್ರಣ ಮಾಡುವ ಚಿಂತನೆ ಇದೆ ಎಂದು ಅವರು ಮಾಹಿತಿ ನೀಡಿದರು.

ಸನ್ಮಾನ:

ಒಕ್ಕಲಿಗ ಸಮಾಜಕ್ಕೆ ಸಂಬಂಧಿಸಿದ ಗೌಡ ವಿದ್ಯಾವರ್ಧಕದ ನೇತೃತ್ವದಲ್ಲಿರುವ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಗೆ ಹೊಸತನ ಬಂದಿದೆ. ಸಂಸ್ಥೆಯ ಅಭಿವೃದ್ಧಿಗೆ ಪೂರ್ಣ ರೀತಿಯಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಸಂಚಾಲಕ ಯು.ಪಿ.ರಾಮಕೃಷ್ಣ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಾಜ ಬಾಂಧವರು ಶ್ರೀ ಮಹಾಲಿಂಗೇಶ್ವರ ಐಟಿಐಗೂ ಒಮ್ಮೆ ಭೇಟಿ ನೀಡಬೇಕೆಂದು ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ವಿನಂತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ವಾರ್ಷಿಕ ವರದಿ ಮಂಡಿಸಿದರು. ಯುವ ಸಂಘದ ವಾರ್ಷಿಕ ವರದಿಯನ್ನು ಅಧ್ಯಕ್ಷ ನಾಗೇಶ್ ಕೆಡೆಂಜಿ ವಾಚಿಸಿದರು. ಮಹಿಳಾ ಗೌಡ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಾರಿಜಾ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ ಅವರು ವಾಚಿಸಿದರು. ಮಾತೃ ಸಂಘದ ಖಜಾಂಚಿ ಲಿಂಗಪ್ಪ ಗೌಡ ಲೆಕ್ಕಪತ್ರ ಮಂಡಿಸಿದರು. ಒಕ್ಕಲಿಗ ಗೌಡ ಸಮುದಯ ಭವನದ ಉಸ್ತುವಾರಿ ದಯಾನಂದ ಕೆ.ಎಸ್ ಸಮುದಾಯ ಭವನದ ಖರ್ಚಿನ ಲೆಕ್ಕಪತ್ರ ಮಂಡಿಸಿದರು. ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬ್ರಾಯ ಗೌಡ ವಂದಿಸಿದರು.


ಆರೋಗ್ಯ ತಪಾಸಣೆ, ಆಟಿ ಹಬ್ಬ, ವರಮಹಾಲಕ್ಷ್ಮೀ ಪೂಜೆ ಆಮಂತ್ರಣ ಪತ್ರ ಬಿಡುಗಡೆ

ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ, ಭಾರತೀಯ ದಂತ ವೈದ್ಯಕೀಯ ಸಂಘ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಜು. 24ರಂದು ನಡೆಯಲಿರುವ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಮಾಹಿತಿ ಕಾರ್ಯಕ್ರಮ. ಆ.5ರಂದು ಮಹಿಳಾ ಗೌಡ ಸಂಘದ ಮೂಲಕ ಪ್ರಥಮವಾಗಿ ನಡೆಯುವ ಶ್ರೀ ವರಮಹಾಲಕ್ಷ್ಮೀ ಪೂಜೆ, ಆ.14ರಂದು ನಡೆಯುವ ಆಟಿ ಹಬ್ಬದ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here