ಬೆಟ್ಟಂಪಾಡಿ: ಸರಗಳ್ಳರ ಹೆಡೆಮುರಿ ಕಟ್ಟಿದ ಸಾರ್ವಜನಿಕರು-ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರ ತಂಡ

0

 

ಬೆಟ್ಟಂಪಾಡಿ: ತಿಂಗಳ ಹಿಂದೆ ಬೆಟ್ಟಂಪಾಡಿ ಪರಿಸರದಲ್ಲಿ ಹಾಡಹಗಲೇ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಒಯ್ದ ಸರಗಳ್ಳರನ್ನು ಬೆಟ್ಟಂಪಾಡಿಯ ಯುವಕರೇ ಹೆಡೆಮುರಿ ಕಟ್ಟಿ ಸಾರ್ವಜನಿಕವಾಗಿ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಜು. 18 ರಂದು ಮಧ್ಯಾಹ್ನ ನಡೆದಿದೆ. ಯುವಕರ ಧೈರ್ಯ ಮತ್ತು ಸಾಹಸ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಗಿದೆ.

ಇಂದು ಬೆಳಗ್ಗಿನಿಂದಲೇ ಮತ್ತೊಮ್ಮೆ ಕಳ್ಳತನಕ್ಕಾಗಿ ಹೊಂಚುಹಾಕುತ್ತಿದ್ದ ಕಳ್ಳರನ್ನು ಅನುಮಾನ ಬಂದ ಸ್ಥಳೀಯ ಯುವಕರು ಅಟ್ಟಾಡಿಸಿ ಹಿಡಿದಿದ್ದಾರೆ. ಬಳಿಕ ರೆಂಜ ಸರ್ಕಲ್ ಬಳಿ ಕಟ್ಟಿಹಾಕಿ ಸಾರ್ವಜನಿಕವಾಗಿ ಗೂಸಾ ನೀಡಿ ಇದೀಗ ಪೊಲೀಸರಿಗೊಪ್ಪಿಸಿದ್ದಾರೆ.

ಜೂನ್ 7 ರಂದು ಬೆಟ್ಟಂಪಾಡಿ ಕೋನಡ್ಕದ ಮಹಿಳೆಯೋರ್ವರು ನಡೆದುಕೊಂಡು ಹೋಗುತ್ತಿದ್ದಾಗ ಬುಲೆಟ್ ಬೈಕ್ ನಲ್ಲಿ ಬಂದಿದ್ದ ಅಪರಿಚಿತರೀರ್ವರು ಮಹಿಳೆಯ ಕತ್ತಿಗೆ ಕೈ ಹಾಕಿ ಕರಿಮಣಿ ಸರ ಒಯ್ದಿದ್ದರು. ಕದಿಯುವ‌ ಮೊದಲು ಈ ಪರಿಸರದಲ್ಲಿ ಸುತ್ತಾಡಿದ್ದರಿಂದ ಸ್ಥಳೀಯ ಯುವಕರಿಗೆ ಅನುಮಾನ ಬಂದು ಪೊಲೀಸರಿಗೂ ತಿಳಿಸಿದ್ದರು. ಆದರೆ ಸರ ಕದ್ದೊಯ್ದ ಕಳ್ಳರು ಪರಾರಿಯಾಗಿದ್ದರು. ಪೊಲೀಸರು ಈ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುತ್ತಾ ಕಳ್ಳರ ಹಿಂದೆ ಬಿದ್ದಿದ್ದರೂ ಅವರ ಪತ್ತೆಯಾಗಿರಲಿಲ್ಲ. ಜು. 18 ರಂದು ಮತ್ತೆ ಇದೇ ಕಳ್ಳರು ಎಫ್‌ಝಡ್ ಬೈಕ್‌ನಲ್ಲಿ ಬಂದಿದ್ದರೆನ್ನಲಾಗಿದೆ. ಸ್ಥಳೀಯ ಯುವಕರೂ ತಿಂಗಳ ಹಿಂದೆ ನಡೆದ ಸರಗಳ್ಳತನವನ್ನು ಮರೆತಿರಲಿಲ್ಲ. ಒಂದಲ್ಲ ಒಂದು ದಿನ ಕಳ್ಳರು ಸಿಕ್ಕೇ ಸಿಗುತ್ತಾರೆ ಎಂದು ಹದ್ದಿನ ಕಣ್ಣಿಟ್ಟಿದ್ದರು. ಆ ದಿನ ಬಂದೇ ಬಿಟ್ಟಿತು. ಬೈಕ್ ಬದಲಾಯಿಸಿದರೂ ಕಳ್ಳರ ಮುಖ ಪರಿಚಯ ಇಟ್ಟುಕೊಂಡಿದ್ದ ಸ್ಥಳೀಯರಿಗೆ ಅದೇ ಕಳ್ಳರು ಇವರೆಂದು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ
ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಿಸಿದಂತೆ ಇಲ್ಲಿ ಸಾರ್ವಜನಿಕರೇ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ಕಾರ್ಯಾಚರಣೆ ಮಾಡಿದ್ದಾರೆ. ಎಫ್‌ಝಡ್ ಬೈಕ್ ನಲ್ಲಿ ಅಪರಿಚಿತ ಮತ್ತು ಅನುಮಾನಾಸ್ಪದ ಈರ್ವರು ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿ ಆರ್ಲಪದವು ಎಂಬಲ್ಲಿಂದ ರೆಂಜ ಬೆಟ್ಟಂಪಾಡಿ ಪರಿಸರದವರಿಗೆ ಸುಳಿವು ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಬೆಟ್ಟಂಪಾಡಿಯ ಯುವಕರು ಮಿತ್ತಡ್ಕ ಕೇಸರಿನಗರದಲ್ಲಿ ರಿಕ್ಷಾ ಅಡ್ಡ ಹಾಕಿ ನಿಲ್ಲಿಸಲು ಪ್ರಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಅವರು ಪುತ್ತೂರು ಕಡೆಗೆ ಹೋಗಿದ್ದರು. ಯುವಕರ ನೆಟ್‌ವರ್ಕ್ ಇಲ್ಲಿ ಕ್ಷಣಾರ್ಧದಲ್ಲಿ ಮಿಂಚಿನ ರೀತಿಯಲ್ಲಿ ಕಾರ್ಯಾಚರಿಸಿತು. ಸಂಟ್ಯಾರ್ ನಲ್ಲಿ ಬೈಕ್ ನ್ನು ಅಡ್ಡಹಾಕಲು ಪ್ರಯತ್ನಿಸಲಾಯಿತು. ಆದರೆ ಅಲ್ಲಿಂದ ತಿರುಗಿ ಹೋದ ಕಳ್ಳರು ಚೆಲ್ಯಡ್ಕದಿಂದ ಗುಮ್ಮಟೆಗದ್ದೆ ದೇವಸ್ಯ ಮಾರ್ಗವಾಗಿ ಮತ್ತೆ ಪುತ್ತೂರಿಗೆ ಬಂದು ಸಂಟ್ಯಾರ್ ಮೂಲಕ ವಾಪಾಸಾಗಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಉದಯರವಿಯವರ ನೇತೃತ್ವದಲ್ಲಿ ಪೊಲೀಸರೂ ಕಳ್ಳರ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ಪುತ್ತೂರಿನಿಂದ ಸಂಟ್ಯಾರ್ ಮಾರ್ಗವಾಗಿ ವಾಪಸಾಗುತ್ತಿದ್ದಂತೆ ಕಳ್ಳರ ಪ್ಲ್ಯಾನ್ ಕಂಪ್ಲೀಟ್ ಕೈ ಕೊಟ್ಟಿತ್ತು. ಸಂಟ್ಯಾರ್ ನಲ್ಲಿ ಪಾಸಾದ ಬಗ್ಗೆ ಮತ್ತೆ ಬೆಟ್ಟಂಪಾಡಿಯ ಯುವಕರಿಗೆ ಮಾಹಿತಿ ನೀಡಲಾಯಿತು. ರೆಂಜ ಜಂಕ್ಷನ್ ನಲ್ಲಿ ಯುವಕರು ಪೊಲೀಸ್ ಬ್ಯಾರಿಕೇಡ್ ಎಳೆದು ಅಡ್ಡಹಾಕಿದರು. ಬ್ಯಾರಿಕೇಡ್ ಗೆ ಗುದ್ದಿ ಮಗುಚಿಬಿದ್ದ ಬೈಕ್ ನಿಂದ ಎಗರಿದ ಕಳ್ಳರು ಸ್ಥಳೀಯ ತೋಟದಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದರು. ಬೆಂಬಿಡದ ಯುವಕರು ಅಟ್ಟಾಡಿಸಿ ಈರ್ವರನ್ನೂ ಹಿಡಿದು ಕಟ್ಟಿಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಮಾಯಿಸಿದ ನೂರಾರು ಮಂದಿ ಕಳ್ಳರನ್ನು ಹಿಡಿದ ಸುದ್ದಿ ಹರಡಿದಾಕ್ಷಣ ರೆಂಜ ಜಂಕ್ಷನ್ ನಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ. ಸರಗಳ್ಳರ ಬಗ್ಗೆ ಕುಪಿತರಾಗಿದ್ದ ಕೆಲ ಮಂದಿ ತಮ್ಮ ಕೋಪವನ್ನು ಕೈಚಳಕದಲ್ಲಿಯೂ ತೋರಿಸಿದ್ದಾರೆ ಎನ್ನಲಾಗಿದೆ.

ಅಂತೂ ತಿಂಗಳ ಬಳಿಕ ಮತ್ತೆ ತಮ್ಮ ಚಾಳಿಗೆ ಬಂದ ಕಳ್ಳರಿಗೆ ಈ ರೀತಿಯ ಗ್ರಹಸ್ಥಿತಿ ಬರುತ್ತದೆಂದೂ ಕನಸಿನಲ್ಲಿಯೂ ಎಣಿಸದ ಕಳ್ಳರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಒಂದಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೆ ಒಳಗಾದರೆ ಈ ಪರಿಸರದ ಅನೇಕ ಕಳ್ಳತನದ ಪ್ರಕರಣಕ್ಕೆ ಒಂದು ಅಂತ್ಯ ಸಿಗಬಹುದೇನೋ ಎಂಬ ಕುತೂಹಲದಲ್ಲಿದ್ದಾರೆ ಸಾರ್ವಜನಿಕರು.

ಯುವಕರ ಕಾರ್ಯಕ್ಕೆ ಶ್ಲಾಘನೆ
ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಕಳ್ಳರನ್ನು ಹಿಡಿಯುವಲ್ಲಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಯುವಕರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಗಿದೆ. ಘಟನೆಯಲ್ಲಿ ಸ್ಥಳೀಯ ಯುವಕನೋರ್ವನ ಕಾಲಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here