ಕೊಕ್ಕೋಕೋ…….

0

 ಡಾ| ಈಶ್ವರ ದೈತೋಟ

 

 

ಕೋಳಿಯೆಂದರೆ ನನಗಿಷ್ಟವೇ.. ಆದರೆ ತಿನ್ನಲು ಅಲ್ಲ, ಈ ಕಿರಿಕೆಟ್ಟು ಆಟದ ಬೆಟ್ಟಿಂಗ್, ಟೈಮ್ ವೇಸ್ಟಿಂಗ್ ಇತ್ಯಾದಿ ಅನಾಹುತಗಳನ್ನು ಗಮನಿಸಿ ನಮ್ಮೂರಿನ ಗ್ರಾಮೀಣ ಕ್ರೀಡೆ ಕೋಳಿಯಂಕವನ್ನು ನಿಷೇಧಿಸಿದ್ದನ್ನು ಕೆಲವೊಮ್ಮೆ ಪ್ರಶ್ನಿಸಿದುದೂ ಉಂಟು. ಕೊ ಕ್ಕೋಕೋ ಎನ್ನತೊಡಗಿದರೆ ಸಾಕು, ಅಲಾರಾಂ ನೆನಪಾಗುತ್ತದೆ. ಇಷ್ಟ ಪಡುವವರಿಗೆ ಹಸಿವಾಗುತ್ತದೆ.
ಕೋಳಿ ಸಮಾಚಾರದಲ್ಲಿ ಬ್ರಹ್ಮಾಂಡದ ಸೃಷ್ಟಿ-ಲಯಗಳ ನಿಗೂಢತೆಯೇ ಅಡಗಿದೆಯಲ್ಲಾ! “ಕೋಳಿ ಮೊದಲೋ, ಮೊಟ್ಟೆ ಮೊದಲೋ” ಎಂಬ ಪ್ರಶ್ನೆ! ಆಧ್ಯಾತ್ಮ ಮುನಿಗಳೂ ಅದಕ್ಕೆ ಉತ್ತರಿಸಿಲ್ಲ. ವಿಜ್ಞಾನವೂ ಯಾವುದು ಮೊದಲೆಂದು ಹೇಳಿಲ್ಲ. ಭಾರತೀಯರು ಹೆಮ್ಮೆ ಪಡುವ ವಿಚಾರವೊಂದು ಜಗತ್ತಿನೆಲ್ಲೆಡೆಯಲ್ಲೂ ರುಚಿಕರ ಆಹಾರ ಪದಾರ್ಥವಾಗಿ ಗೌರವಿಸಲ್ಪಟ್ಟಿರುವ `ಕೋಳಿ ಸಂತಾನದ’ ಚರಿತ್ರೆಯಲ್ಲಿದೆ. ಅದೇನೆಂದರೆ, ಉಪಟಳ ಕೊಡುವುದರಲ್ಲಿ ಹೆಸರಾಗಿ ಜಗತ್ಪ್ರಸಿದ್ಧ ಜೀವಿಗಳಾದ ಜಿರಳೆ ಮತ್ತು ಇಲಿಯ ಹಾಗೆ ಮೋರ್ನಿಂಗ್ ಅಲಾರಾಂ ಎಂದು ಪ್ರಸಿದ್ಧವಾದ ಕೋಳಿಯದೂ ಮೂಲ ನಮ್ಮ ಮಹಾನ್ ಭಾರತವೇ.

 

ಭಾರತೀಯ ಮೂಲದ ಕೆಂಪು ಕಾಡುಕೋಳಿ – ರೆಡ್ ಜಂಗಲ್ ಫೌಲ್ ಮತ್ತು ಬೂದು ಕಾಡುಕೋಳಿ- ಗ್ರೇ ಜಂಗಲ್ ಫೌಲ್ ಸಂಕಿರಣದಿಂದ ಸಾವಿರಾರು ವರ್ಷಗಳ ಹಿಂದೆ ಭಾರತೀಯ ಉಪಖಂಡದಲ್ಲಿ ಸೃಷ್ಟಿಯಾದ ಹೈಬ್ರಿಡ್ಡೇ ಮೋಡರ್ನ್ ಚಿಕನ್ ಎಂದರೆ ಖುಶಿಯಾಗುವುದಿಲ್ಲವೇನು?.

ಮಧ್ಯಯುಗದಲ್ಲಿ ಕೋಳಿ ಒಂದು ಸರ್ವೇ ಸಾಮಾನ್ಯ ಆಹಾರವಾಗಿ ಬಿಟ್ಟಿತ್ತು. ಸುಲಭವಾಗಿ ಪಚನವಾಗುವ, ಒಳ್ಳೆಯ ಆಹಾರವೆಂದು ಪರಿಗಣಿತವಾಗಿತ್ತು. ಹಲವಾರು ತರಹದ ಕೋಳಿಯಡುಗೆಗಳು ಪೌರ್ವಾತ್ಯ ದೇಶಗಳಲ್ಲಿ ಆಗ ಜನಪ್ರಿಯವಾಗಿತ್ತು. ಹುರಿದ ಈರುಳ್ಳಿ, ಪದಾರ್ಥಕ್ಕೆ ಬಳಸುವ ಹಾಲು ಹಾಗು ಸಿದ್ಧಪಡಿಸಿದ ಸಾಂಬಾರ ಪದಾರ್ಥಗಳು ಮತ್ತು ಸಲ್ಷ ಸಕ್ಕರೆಯೊಂದಿಗೆ ಮೇಳೈಸಿ ಸಿದ್ಧ ಪಡಿಸಿದ ಕೋಳಿಗೆ ಆಗಲೇ ಹೊಟ್ಟೆಬಾಕರು ಮುಗಿಬೀಳುತ್ತಲಿದ್ದರಂತೆ. ಇವತ್ತಂತೂ ಅಮೇರಿಕಾ, ಯುರೋಪುಗಳಲ್ಲಿಯೂ ಮಟನ್, ಬೀಫ್ ಗಿಂತಲೂ ಬೇಡಿಕೆಯಲ್ಲಿ ಕೋಳಿ ಮೊದಲಿಗ. ಕೃಷಿ ಚಟುವಟಿಕೆಯಲ್ಲಿ ಕೋಳಿ ಸಾಕಾಣಿಕೆಗೆ ಭಾರೀ ಮಹತ್ವವಿದೆ.

ಎತ್ತರಕ್ಕೆ ಹಾರಲಾರದ ಹಕ್ಕಿಯ ಕಾಲುಗಳು, ಎದೆಭಾಗ, ರೆಕ್ಕೆಗಳೆಂದೂ ನಾನಾ ತರಹದ ಅಡುಗೆಗೆ ಕೊಯ್ಯಲ್ಪಡುತ್ತದೆ. ಕಾಲಿನ ಕೆಳಭಾಗವಂತು ಡ್ರಮ್ ಸ್ಟಿಕ್ ಎಂದೂ, ಮೇಲ್ಭಾಗ ಥೈ ಎಂದೂ ಬಳಕೆಯಾಗುತ್ತದೆ. ಕೋಳಿಯ ರೆಕ್ಕೆಯ ಭಾಗವಂತೂ ಬಾರ್ ಫುಡ್ ಎಂದು ಕುಡುಕರು ಸವಿಯಲು ಇಷ್ಟಪಡುವ ರುಚಿಯಾಗಿದೆ. ಪಾದಗಳು, ಹೃದಯ, ತಲೆ, ಕಿಡ್ನಿ ರಕ್ತ,ಲಿವರ್ ಇತ್ಯಾದಿ ಭಾಗಗಳಿಗೂ ಬೇಡಿಕೆ ಜೋರಾಗಿದೆ. ಎಗ್ ಅಂತೂ ವ್ಹೋಲ್ಸಮ್ ಫುಡ್ ಎಂದು ಮನ್ನಣೆ ಪಡೆದಿದೆ ಹಾಲಿಗೆ ಸಮನಾಗಿದೆ, ಮಕ್ಕಳಿಗಂತೂ ಅತಿಯೋಗ್ಯ ಆಹಾರವೆಂದು ಪರಿಗಣಿತವಾಗಿದೆ.

ಕೋಳಿಗಳು ಫ್ರೈಯರ್ಸ್, ಬ್ರಾಲರ್ಸ್, ರೋಸ್ಟರ್ಸ್ ಎಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತವೆ. ಜಗತ್ತಿನಾದ್ಯಂತ ಫಾಸ್ಟ್ ಫುಡ್ ರೆಸ್ಟಾರೆಂಟುಗಳಾದ ಕೆಎಫ್ಸಿ, ರೆಡ್ ರೂಸ್ಟರ್, ಹೆಕ್ಟರ್ ಚಿಕನ್, ಸಿಎಫ್ಸಿ ಗಳು ಕೋಳಿತಿನಿಸುಗಳಿಗಾಗಿ ಹೆಸರಾಗಿವೆ. ಕೋಳಿತಿನಿಸಿಗೆ ಜೊತೆಯಾಗಿ ಬಟಾಟೆ ಚಿಪ್ಸ್ (ಫ್ರೆಂಚ್ ಫ್ರೈಸ್) ಲಭ್ಯ.

ನಾನಾ ನಮೂನೆಯ, ರುಚಿರುಚಿಯಾದ ಕೋಳಿಯಡುಗೆ ಮಾಡುವ ಶೈಲಿ ನಮ್ಮಲ್ಲಿದ್ದರೂ ಕೆಂಟುಕಿ ಫ್ರೈಡ್ ಚಿಕನ್ ೩ ದಶಕಗಳ ಹಿಂದೆಯೇ ಬೆಂಗಳೂರು ಸಂತೆಯಲ್ಲೊಂದು ಚಪ್ಪರ ಹಾಕಿತ್ತು. ಆ ಪರ್ದೇಶಿ ಕೋಳಿ ರುಚಿಗೆ ನಮ್ಮೂರಿನ ಹೈದರೆಲ್ಲಾ ಮನ ಸೋಲುತ್ತಿದ್ದರು. ವಿದೇಶಗಳಿಂದ ಇಂತದ್ದೆಲ್ಲಾ ಬರುವ ಮುನ್ನ, ಹಲವು ವರ್ಷಗಳಿಂದ ನಮ್ಮಲ್ಲಿ ಯಾವ ತೊಂದರೆಗಳೂ ಇಲ್ಲದೆ ಬಳಕೆಯಲ್ಲಿರುವಂತಹ ವಸ್ತುಗಳ ಬಗ್ಗೆ ಅದು ಆರೋಗ್ಯಕ್ಕೊಳ್ಳೆಯದಲ್ಲ. ತಿಂದರೆ ಯಾ ಮುಟ್ಟಿದರೆ ಕ್ಯಾನ್ಸರ್ ಬರುತ್ತದೆ ಎಂದೆಲ್ಲಾ ಸಂಶೋಧನಾ ವರದಿಗಳು ಹೇಳಿಕೇಳಿ ಗೊತ್ತಿಲ್ಲದ ವಿಜ್ಞಾನಿಗಳಿಂದ ಬರುತ್ತಲಿರುತ್ತವೆ. ಅದರಿಂದ ನಮ್ಮದಕ್ಕೆ ಬೇಡಿಕೆ ಇಳಿದು ಹೊಸ ಮಾಲಿಗೆ ಮಾರುಕಟ್ಟೆ ಬೆಳೆಯುತ್ತದೆ- ನಮ್ಮೂರಿನ ಕೋಳಿ ರೈತರ ಸಂಘಕ್ಕೆ ಆಗ ಭಲೇ ಸಿಟ್ಟು ಬಂದು ಚಳವಳಿ ಕೂಡಾ ಹೂಡಿತ್ತು.

“ನಮ್ಮ ಕೆಂಟುಕಿ ಕೋಳಿ ನಿಮ್ಮ ನಾಟಿ ಕೋಳಿಗಿಂತ ವಿಶೇಷ ಪೌಷ್ಟಿಕಾಂಶಗಳನ್ನೇನೂ ಹೊಂದಿಲ್ಲ” ಎಂದು ಕರ್ನಾಟಕ ಪ್ರವಾಸದಲ್ಲಿದ್ದ ಅಮೆರಿಕ ಯುವ ನಾಯಕರ ನಿಯೋಗ ಹೇಳಿತ್ತು. ಕೋಳಿ ತಿನ್ನೋದರಿಂದ ಹೃದಯಾಘಾತ, ಕ್ಯಾನ್ಸರ್, ಬೊಜ್ಜು ಬರುತ್ತದೆಂಬ ಆಪಾದನೆ ನಿರಾಕರಿಸಿ. ಉಳಿದ ಮಾಂಸಕ್ಕಿಂತ ಕೋಳಿಯದೊಳ್ಳೆಯದು. ಕೋಳಿ ಕೈಗಾರಿಕೆ ವೈಜ್ಞಾನಿಕವಾಗಿ ಬೆಳೆದಿದೆ. ಆತಂಕಕಾರಿ ಕ್ರಮಗಳಾವುವೂ ಆಚರಣೆಯಲ್ಲಿಲ್ಲ ಎಂದು ಭರವಸೆ ಹಂಚಿಕೊಂಡಿದ್ದರು.ಆದರೆ, ನಮ್ಮ ದೇಶವೇ ಎಲ್ಲಾ ರಂಗಗಳಲ್ಲಿಯೂ ಫಾರೈನ್ ಡೈರೆಕ್ಟ್ ಇನ್ವೆಸ್ಟಮೆಂಟಿಗೆ ತೆರೆದುಕೊಂಡ ಮೇಲೆ ಫಾರೈನ್ದೇ ಎಡ್ಡೆ ಎನ್ನುವವರೂ ಬಾಯಿ ಚಪ್ಪೆಯಾದಾಗ “ಎಡ್ಡೆ ನಾಟಿಕೋರಿ ಓಳು ತಿಕ್ಕುಂಡೂ ಮಾರಾಯ್ರೆ” ಎಂದು ಬಾಯಿ ಚಪ್ಪರಿಸುತ್ತಾ ಹುಡುಕದೆ ಬಿಡುವುದಿಲ್ಲ.

ಪುತ್ತೂರು ತಾಲೂಕಿನ ಪಾಣಾಜೆಯ ದೈತೋಟ ಮನೆಯ ಈಶ್ವರ ದೈತೋಟರವರು ಅಭಿವೃದ್ಧಿ ಪತ್ರಿಕೋಧ್ಯಮದ ಬಗ್ಗೆ ಹಾಗೂ ಪ್ರಸಕ್ತ ಆಸಕ್ತಿಯ ವಿಷಯಗಳ ಬಗ್ಗೆ ಸುದ್ದಿ ಪತ್ರಿಕೆಗೆ ಲೇಖನ ಬರೆಯಲಿದ್ದಾರೆ. ಅವರ ಪರಿಚಯ ಮತ್ತು ಸಾಧನೆಯನ್ನು ಮುಂದಿನ ವಾರ ನೀಡಲಾಗುವುದು.

LEAVE A REPLY

Please enter your comment!
Please enter your name here