ಪುತ್ತೂರು ಉಪನೋಂದಣಾಧಿಕಾರಿ ಲಕ್ಷ್ಮೀನಾರಾಯಣ ಪಿ. ಬಳ್ಳಾರಿಗೆ ವರ್ಗ

0

ಪುತ್ತೂರು: ಉಪನೋಂದಣಿ ಇಲಾಖೆಯ ಉಪನೋಂದಣಾಧಿಕಾರಿಯಾಗಿದ್ದ ಲಕ್ಷ್ಮೀನಾರಾಯಣ ಪಿ. ಅವರು ಬಳ್ಳಾರಿಗೆ ವರ್ಗಾವಣೆಗೊಂಡಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ತೆರವಾದ ಹುದ್ದೆಗೆ ಪ್ರಥಮ ದರ್ಜೆ ಸಹಾಯಕರಾಗಿರುವ ಸತ್ಯೇಶ್ ಅವರು ಪ್ರಭಾರ ಉಪನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಪಿ. ಅವರು 2021ರ ಜನವರಿ 21ರಂದು ಪುತ್ತೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. 2013ರಲ್ಲಿ ಅವರಿಗೆ ಮುಂಬಡ್ತಿ ಸಿಕ್ಕಿದ್ದರೂ, ಪಾಲನೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಲಕ್ಷ್ಮೀನಾರಾಯಣ ಪಿ. ಅವರಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದ್ದು, ಮೊದಲ ಬಾರಿಗೆ ಪುತ್ತೂರಿನಲ್ಲಿ ಉಪನೋಂದಣಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಬಳ್ಳಾರಿಯ ಜಿಲ್ಲಾ ಉಪನೋಂದಣಿ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, 2022ರ ಡಿಸೆಂಬರ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ.
ಮೊದಲಿಗೆ ಹೈಕೋರ್ಟ್ನಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಇವರಿಗೆ, 10 ವರ್ಷದ ಬಳಿಕ ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ ಖಾಯಮಾತಿಗೊಂಡಿದ್ದರು. ಕೆಲಸ ಖಾಯಮಾತಿಗೊಂಡ ಬಳಿಕದ ಮೊದಲ ನೇಮಕಾತಿ ರಾಜ್ಯದ ಅತೀ ಚಿಕ್ಕ ತಾಲೂಕಾದ ಮೈಸೂರು ಜಿಲ್ಲೆಯ ಯಳಂದೂರಿನ ಉಪನೋಂದಣಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇರ್ಪಡೆಗೊಂಡಿದ್ದರು. ನಂತರ ರಾಜಾಜಿನಗರ ಉಪನೋಂದಣಿ ಕಚೇರಿಯಲ್ಲಿ, ನೋಂದಣಿ ಮಹಾಪರೀವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯಲ್ಲಿ, ಕೆಂಗೇರಿ ಉಪನೋಂದಣಿ ಕಚೇರಿಯಲ್ಲಿ, ನಾಗರಬಾವಿ ಉಪನೋಂದಣಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡರು.
ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿ ಪಡೆದುಕೊಂಡ ಲಕ್ಷ್ಮೀನಾರಾಯಣ ಪಿ. ಅವರು ದಾವಣಗೆರೆ ಜಿಲ್ಲೆಯ ಹರಿಹರ ಉಪನೋಂದಣಿ ಕಚೇರಿಗೆ ವರ್ಗಾವಣೆಗೊಂಡರು. ನಂತರ ಬೆಂಗಳೂರು ಶಿವಾಜಿನಗರ ಉಪನೋಂದಣಿ ಕಚೇರಿಯಲ್ಲಿ, ಬೆಂಗಳೂರು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯಲ್ಲಿ, ಬಿಟಿಎಂ ಲೇಔಟ್ ಉಪನೋಂದಣಿ ಕಚೇರಿಯಲ್ಲಿ, ಬೆಂಗಳೂರು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯಲ್ಲಿ, ಕೋರಮಂಗಲದಲ್ಲಿರುವ ಬೊಮ್ಮನಹಳ್ಳಿ ಉಪನೋಂದಣಿ ಕಚೇರಿಯಲ್ಲಿ, ಲಗ್ಗೆರೆ ಉಪನೋಂದಣಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದರು.
2021 ಜನವರಿ 21ರಲ್ಲಿ ಪುತ್ತೂರು ಉಪನೋಂದಣಿ ಕಚೆರಿಯಲ್ಲಿ ಉಪನೋಂದಣಾಧಿಕಾರಿಯಾಗಿ ಪದೋನ್ನತಿ ಪಡೆದಿದ್ದು, ಇದೀಗ ಬಳ್ಳಾರಿಗೆ ವರ್ಗಾವಣೆಗೊಂಡಿದ್ದಾರೆ. ಇವರ ಪತ್ನಿ ಟಿ. ವಿಮಲ, ಮಗಳು ಕಲ್ಪಜಾ ಎಂಬಿಎ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here