ಅರಣ್ಯಾಧಿಕಾರಿಗಳ ಕಾರ್ಯಾಚರಣೆ- ನಾಲ್ವರು ಮರಗಳ್ಳರ ಬಂಧನ

0

ಉಪ್ಪಿನಂಗಡಿ: ಸರಕಾರಿ ರಕ್ಷಿತಾರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ಅದನ್ನು ಅಲ್ಲಿಯೇ ತುಂಡರಿಸಿ ಸೈಜ್ ತುಂಡುಗಳನ್ನಾಗಿ ಮಾಡುವ ಮರಗಳ್ಳರ ತಂಡವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯ ಕಜೆ ಎಂಬಲ್ಲಿ ಜು. 17ರಂದು ಸಂಜೆ ನಡೆದಿದೆ.


ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್, ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ, ಶಿಬಾಜೆ ನಿವಾಸಿ ಉಮೇಶ ಹಾಗೂ ವಿಜಯ ಬಂಧಿತ ಆರೋಪಿಗಳು. ಇವರು ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿಂದ ಬೆಲೆಬಾಳುವ ಮತ್ತಿ ಹಾಗೂ ಹೆಬ್ಬಲಸು ಮರಗಳನ್ನು ಅಕ್ರಮವಾಗಿ ಕಡಿದು ಅದನ್ನು ಅಲ್ಲೇ ಸೈಜ್ ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ, ಮರದ ದಿಮ್ಮಿ ಹಾಗೂ ಸೈಜ್ ತುಂಡುಗಳನ್ನು ವಶಪಡಿಸಿಕೊಂಡಿದೆ.

ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತಡ್ಲಗಿ, ಅರಣ್ಯ ರಕ್ಷಕರಾದ ನಿಂಗಪ್ಪ ಅವಾರಿ, ಪ್ರಶಾಂತ್ ಮಾಳಗಿ, ರಸೂಲ್, ಸುನೀಲ್ ನಾಯಕ್, ಅರಣ್ಯ ವೀಕ್ಷಕ ದಾಮೋದರವರ ತಂಡ ಕಾರ್ಯಾಚರಣೆ ನಡೆಸಿ, ಮುಂದಿನ ತನಿಖೆಗಾಗಿ ಈ ಪ್ರಕರಣವನ್ನು ವಲಯ ಅರಣ್ಯಾಧಿಕಾರಿ ಮಧುಸೂಧನ್ ಅವರಿಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here