ಮನೆಕಳವು ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು: ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ಕಾರ್ಯಾಚರಣೆ, ಕಳವುಗೈದ ಚಿನ್ನಾಭರಣ ಸಹಿತ ಸರ್ವೆಯ ದಂಪತಿ ಸೆರೆ

0

ವಿಟ್ಲ: ಮನೆಯೊಂದರಲ್ಲಿ ಕೆಲಸಕ್ಕಿದ್ದ ದಂಪತಿ ಆ ಮನೆಯಿಂದಲೇ ಚಿನ್ನಾಭರಣವನ್ನು ಕಳವುಗೈದ ಪ್ರಕರಣವನ್ನು ಬೇಧಿಸಿದ ವಿಟ್ಲ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಜು.18ರಂದು ಆರೋಪಿ ದಂಪತಿಯನ್ನು ಬಂಧಿಸಿ ಕಳವುಗೈದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಕರಿಯರವರ ಪುತ್ರ ಪ್ರಮೋದ್ (26 ವ.) ಹಾಗೂ ಪ್ರಮೋದ್ ರವರ ಪತ್ನಿ ಸುಮತಿ ಯಾನೇ ಸುಮ(25 ವ.) ಬಂಧಿತ ಆರೋಪಿಗಳು.

ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ದಂಬೆತ್ತಾರು ದೇವಣ್ಣ ನಾಯಕ್ ರವರ ಪುತ್ರ ವಿನಯಚಂದ್ರ ನಾಯಕ್ ರವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಜೂ.8ರಂದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಮನೆಯವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿ ಜು.18ರಂದು ಪುತ್ತೂರು ಸಮೀಪ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಚಿನ್ನದ ಬ್ರಾಸ್ ಲೈಟ್, ಒಂದು ಚಿನ್ನದ ಲಕ್ಷ್ಮಿ ಚೈನ್, ಒಂದು ಚಿನ್ನದ ಪದಕ ಸಹಿತ ಚೈನ್, ಒಂದು ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್, ಮೂರು ಚಿನ್ನದ ಉಂಗುರಗಳು ಸೇರಿ ಒಟ್ಟು 98ಗ್ರಾಂ ಚಿನ್ನಾಭರಣಗಳನ್ನು ಆರೋಪಿಗಳ ಕೈಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಕೊಂಡಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 1,48,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಕಳವುಗೈದ ಚಿನ್ನಾಭರಣವನ್ನು ಪುತ್ತೂರಿನ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಅಡವಿರಿಸಿರುವುದಾಗಿ ಆರೋಪಿಗಳು ನೀಡಿದ ಮಾಹಿತಿಯಂತೆ ಅ ಬ್ಯಾಂಕ್ ನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ದ.ಕ. ಜಿಲ್ಲಾ ಪೊಲೀಸ್ ಅಽಕ್ಷಕರಾದ ರಿಷಿಕೇಶ್ ಭಗವಾನ್ ಸೋನಾವಣೆರವರ ನಿರ್ದೇಶನದಂತೆ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಬಂಟ್ವಾಳ ಉಪವಿಭಾಗದ ಉಪಾಽಕ್ಷಕರಾದ ಪ್ರತಾಪ್ ಸಿಂಗ್ ತೊರಟ್ ರವರ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ್ ಎಚ್. ಈ. ರವರ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಟಿ., ಸಿಬ್ಬಂದಿಗಳಾದ ಜಯರಾಮ ಕೆ.ಟಿ., ರಕ್ಷಿತ್, ಕರುಣಾಕರ, ಹೇಮರಾಜ್, ಸತೀಶ್, ಮನೋಜ್ ಕುಮಾರ್, ಸವಿತಾ ರವರು ಕಾರ್ಯಾಚೆಣೆಯಲ್ಲಿ ಭಾಗವಹಿಸಿದ್ದಾರೆ.

ಠಾಣೆಗೆ ನೀಡಿದ ದೂರಿನಲ್ಲೇನಿದೆ: ಮಾ.1 ರಂದು ತಮ್ಮ ಕುಟುಂಬದ ಮನೆಯಾದ ಪೋಳ್ಯ ಎಂಬಲ್ಲಿ ಶಿವ ಪೂಜೆ ಇದ್ದುದರಿಂದ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ದಂಬೆತ್ತಾರು ಎಂಬಲ್ಲಿರುವ ತಮ್ಮ ಮನೆಯಿಂದ ಹೊರಟು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಮನೆಗೆ ತಲುಪಿದ ಬಳಿಕ ನನ್ನ ಪತ್ನಿ ವಿದ್ಯಾಳು ಧರಿಸಿದ್ದ ಚಿನ್ನದ ಬ್ರಾಸ್ ಲೈಟ್ ನ್ನು ಮನೆಯ ಕಪಾಟಿನಲ್ಲಿ ಇನ್ನುಳಿದ ಚಿನ್ನಾಭರಣಗಳ ಜೊತೆ ಇಟ್ಟಿರುತ್ತಾರೆ. ಆ ಬಳಿಕ ಎ.5ರಂದು ನಮ್ಮ ಮನೆಯಲ್ಲಿ ದೇವಿ ಪೂಜೆಯ ಕಾರ್ಯಕ್ರಮ ಇದ್ದ ಕಾರಣ ದೇವಿಗೆ ಅಲಂಕಾರ ಮಾಡುವ ಸಂಧರ್ಭದಲ್ಲಿ ಚಿನ್ನದ ಸರವನ್ನು ಹಾಕುವ ಸಲುವಾಗಿ ಚಿನ್ನಾಭರಣಗಳಿಡುವ ಕಪಾಟನ್ನು ತೆರೆದು ನೋಡಿದಾಗ ಕಪಾಟಿನ ಒಳಗಡೆ ಚಿನ್ನಾಭರಣಗಳಿದ್ದ ಬಾಕ್ಸ್ ನಾಪತ್ತೆಯಾಗಿರುವುದು ಕಂಡು ಬಂದಿತ್ತು. ಕಪಾಟಿನಲ್ಲಿದ್ದ ಬಾಕ್ಸ್ ನಲ್ಲಿ ಇಪ್ಪತ್ತನಾಲ್ಕು ಗ್ರಾಂ ತೂಕದ ಒಂದು ಚಿನ್ನದ ಬ್ರಾಸ್ ಲೈಟ್ , ಇಪ್ಪತ್ತೆರಡು ಗ್ರಾಂ ತೂಕದ ಒಂದು ಚಿನ್ನದ ಲಕ್ಷ್ಮಿ ಚೈನ್, ಇಪ್ಪತ್ತನಾಲ್ಕು ಗ್ರಾಂ ತೂಕದ ಒಂದು ಚಿನ್ನದ ಪದಕ ಸಹಿತ ಚೈನು, ಇಪ್ಪತ್ತು ಗ್ರಾಂ ತೂಕದ ಒಂದು ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್, ಎಂಟು ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳು ಕಳವಾಗಿದೆ ಎಂದು ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ದಂಬೆತ್ತಾರು ದೇವಣ್ಣ ನಾಯಕ್ ರವರ ಪುತ್ರ ವಿನಯಚಂದ್ರ ನಾಯಕ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದರು.

ಮನೆಯವರು ಇಲ್ಲದ ಸಂದರ್ಭವನ್ನು ಬಳಸಿಕೊಂಡ ದಂಪತಿ: ಪುತ್ತೂರು ತಾಲೂಕು ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿಯಾಗಿರುವ ದಂಪತಿ ಕೆಲ ಸಮಯಗಳ ಹಿಂದೆ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ದಂಬೆತ್ತಾರು ದೇವಣ್ಣ ನಾಯಕ್ ರವರ ಪುತ್ರ ವಿನಯಚಂದ್ರ ನಾಯಕ್ ರವರ ಮನೆಗೆ ಕೆಲಸಕ್ಕಾಗಿ ಬಂದಿದ್ದರು. ಆ ಮನೆಯಲ್ಲಿರುವ ಕೊಠಡಿಯೊಂದರಲ್ಲಿ ಉಳಿದುಕೊಳ್ಳುತ್ತಿದ್ದ ದಂಪತಿ ಆ ಮನೆಯವರ ಚಲನವಲನಗಳನ್ನು ಅರಿತಿದ್ದರು. ಮಾತ್ರವಲ್ಲದೆ ಮನೆಯವರು ಚಿನ್ನಾಭರಣಗಳನ್ನು ಇಡುವ ಸ್ಥಳಗಳ ಬಗ್ಗೆ ತಿಳಿದುಕೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ದಂಪತಿ ಮನೆಯ ಕಪಾಟಿನಲ್ಲಿರಿಸಿದ್ದ ಚಿನ್ನಭರಣವನ್ನು ಲಪಟಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವುಗೈದ ಚಿನ್ನವನ್ನು ಅಡವಿರಿಸಿದ್ದರು: ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದ ದಂಪತಿ ಕಳವುಗೈದ ಚಿನ್ನಾಭರಣವನ್ನು ಬಚ್ಚಿಟ್ಟು ಎಂದಿನಂತೆಯೇ ಕೆಲಸ ಮಾಡಿಕೊಂಡಿದ್ದರು. ಮಾತ್ರವಲ್ಲದೆ ತಮ್ಮ ಮೇಲೆ ಅನುಮಾನ ಬಾರದಂತೆ ಭಾರೀ ಎಚ್ಚರಿಕೆ ವಹಿಸಿದ್ದರು. ಬಳಿಕದ ದಿನಗಳಲ್ಲಿ ಅಲ್ಲಿಂದ ಕೆಲಸ ತೊರೆದು ಹೊರಬಂದಿದ್ದ ದಂಪತಿ ಬೇರೆಕಡೆ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಮಧ್ಯೆ ತಾವುಗಳು ಕಳವುಗೈದಿದ್ದ ಚಿನ್ನಾಭರಣವನ್ನು ಪುತ್ತೂರಿನ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಅಡವಿರಿಸಿ ಹಣ ಪಡೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here