ರಸ್ತೆ ದುರಸ್ತಿಗೊಳಿಸದ ವಿಚಾರಕ್ಕೆ ಆಕ್ರೋಶ : ಸಭೆ ಬಹಿಷ್ಕರಿಸಿ ಹೊರನಡೆದ ಹಲವಾರು ಗ್ರಾಮಸ್ಥರು

0

ಉಪಾಧ್ಯಕ್ಷ ಸಹಿತ ನಾಲ್ವರು ಸದಸ್ಯರೂ ಸಭಾತ್ಯಾಗ…! 

ಗದ್ದಲ, ಗೊಂದಲಗಳ ಮಧ್ಯೆ ನಡೆದ ಐತ್ತೂರು ಗ್ರಾಮ ಸಭೆ

ಕಡಬ: ಗ್ರಾ.ಪಂ.ನಿಂದ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಹೇಳಿ ದುರಸ್ತಿ ಮಾಡಿಕೊಟ್ಟಿಲ್ಲ. ಹಾಗಾಗಿ ಗ್ರಾಮ ಸಭೆ ಮಾಡುವುದು ಬೇಡ, ಸಭೆಯನ್ನು ಮುಂದೂಡಬೇಕು ಮತ್ತು ನಮ್ಮ ಬೇಡಿಕೆಗೆ ಪರಿಹಾರ ಸಿಗುವುದಿಲ್ಲ ಎಂದಾದರೆ ನಾವು ಸಭೆಗೆ ಬಂದು ಏನು ಪ್ರಯೋಜನ ಎಂದು ಪ್ರಶ್ನಿಸಿ ಗ್ರಾಮದ ಹಲವಾರು ಮಂದಿ ಗ್ರಾಮ ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರನಡೆದ ಘಟನೆ ಐತ್ತೂರು ಗ್ರಾ.ಪಂ ಗ್ರಾಮ ಸಭೆಯಲ್ಲಿ ನಡೆದಿದೆ.

ಚಿತ್ರ: ಯೂಸುಫ್ ರೆಂಜಲಾಡಿ

ಸಭೆ ಗ್ರಾ.ಪಂ ಅಧ್ಯಕ್ಷೆ ಶ್ಯಾಮಲರವರ ಅಧ್ಯಕ್ಷತೆಯಲ್ಲಿ ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಜು.18ರಂದು ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ಗ್ರಾಮಸ್ಥರಾದ ಸುರೇಶ್, ಗಣೇಶ್ ಮತ್ತಿತರರು ಮಾತನಾಡಿ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ಕಡಿಮೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮಸ್ಥರ ಸಂಖ್ಯೆ ವಿರಳವಾಗಿರುವಾಗ ಸಭೆ ಯಾಕೆ ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಪಿಡಿಓ ಸುಜಾತ ಉತ್ತರಿಸಿ ಗ್ರಾಮ ಸಭೆ ಇರುವ ಬಗ್ಗೆ ಮೊದಲೇ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು.

ನೆಲ್ಲಿಕಟ್ಟೆ-ಓಟೆಕಜೆ ರಸ್ತೆ ದುರಸ್ತಿ ಮಾಡದ್ದಕ್ಕೆ ಆಕ್ರೋಶ:

ನೆಲ್ಲಿಕಟ್ಟೆ-ಓಟೆಕಜೆ ರಸ್ತೆಯನ್ನು ದುರಸ್ತಿ ಮಾಡುವುದಾಗಿ ಹೇಳಿ ದುರಸ್ತಿ ಮಾಡಿಲ್ಲ. ವಾರ್ಡ್ ಸಭೆಯಲ್ಲಿ ನಿರ್ಣಯ ಮಾಡಿದ್ದರೂ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರಾದ ಸುರೇಶ್ ಹೇಳಿದರು. ಗ್ರಾಮಸ್ಥ ಗಣೇಶ್ ಮಾತನಾಡಿ ನಮ್ಮ ಬೇಡಿಕೆ ಈಡೇರಿಸದೇ ಸಭಾ ವೇದಿಕೆಯ ಮೇಲೆ ಕುಳಿತಿರುವ ಗ್ರಾ.ಪಂ ಸದಸ್ಯರಿಗೆ ನಾಚಿಕೆಯಾಗಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದರು. ಪಿಡಿಓ ಸುಜಾತ ಮಾತನಾಡಿ ವಾರ್ಡ್ ಸಭೆ ಬಳಿಕ ಮೂರು ದಿನ ಮಳೆ ಇದ್ದ ಕಾರಣ ರಸ್ತೆ ದುರಸ್ತಿ ಮಾಡಲು ಆಗಿಲ್ಲ, ಮಳೆ ಕಡಿಮೆ ಆದ ಮೇಲೆ ದುರಸ್ತಿ ಮಾಡಬೇಕಷ್ಟೇ ಎಂದು ಹೇಳಿದರು.

ಗ್ರಾ.ಪಂ ಸದಸ್ಯ ಮನಮೋಹನ್ ಗೋಳಿಯಡಿಯವರು ಗ್ರಾ.ಪಂ.ಗೆ ಇರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೂ ಗ್ರಾಮಸ್ಥರು ಅಕ್ಷೇಪ ಸೂಚಿಸಿದರು. ಗ್ರಾಮಸ್ಥ ಗಣೇಶ್ ಮಾತನಾಡಿ ರಸ್ತೆಯ ಪರಿಸ್ಥಿತಿಯನ್ನು ನೀವೊಮ್ಮೆ ಬಂದು ನೋಡಿ ಆಮೇಲೆ ಗ್ರಾಮ ಸಭೆ ಮಾಡೋಣ ಎಂದು ಹೇಳಿದರು.

ಗ್ರಾಮಸ್ಥ ಬಾಲಕೃಷ್ಣ ಭಟ್ ಮಾತನಾಡಿ ನಿಮ್ಮಲ್ಲಿ ಅವಕಾಶವಿಲ್ಲದಿದ್ದರೆ ಡಿ.ಸಿಗೆ ಬರೆಯಿರಿ. ನಿಮಗೆ ಆ ಗಟ್ಸ್ ಇಲ್ವಾ ಎಂದು ಕೇಳಿದರು. ತಹಶೀಲ್ದಾರ್ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಅವರಿಗೆ ಮನವಿ ನೀಡಿದ್ದೇವೆ. ಅದು ಏನಾಗಿದೆ ಎಂದು ಅವರು ಪ್ರಶ್ನಿಸಿದರು.

ಅಧ್ಯಕ್ಷೆ ಶ್ಯಾಮಲ ಮತನಾಡಿ ಮಳೆಗಾಲದಲ್ಲಿ ರಸ್ತೆ ಕೆಲಸ ಮಾಡುವುದು ಕಷ್ಟ. ಸಮಸ್ಯೆ ಬಗ್ಗೆ ನಮಗೂ ತಿಳಿದಿದೆ. ಉದ್ದೇಶಪೂರ್ವಕವಾಗಿ ನಾವು ನಿರ್ಲಕ್ಷಿಸಿಲ್ಲ ಎಂದು ಹೇಳಿದರು.

ಗ್ರಾ.ಪಂ ಸದಸ್ಯರು ದುಡ್ಡು ನುಂಗ್ತಾರೆ-ಗ್ರಾಮಸ್ಥ ಆರೋಪ

ಸುರೇಶ್ ಮಾತನಾಡಿ ನಾವು ರಸ್ತೆ ರಿಪೇರಿ ಮಾಡುವುದಾದರೆ ಪಂಚಾಯತ್‌ನಿಂದ 5 ಸಾವಿರ ರೂ ಕೊಡ್ತಾರೆ, ಅದೇ 80-90 ಸಾವಿರ ರೂ. ಹಣ ಬಿಡುಗಡೆಯಾದರೆ ಪಂಚಾಯತ್‌ನವರೇ ಕಾಮಗಾರಿ ಮಾಡುತ್ತಾರೆ, ಸದಸ್ಯರೂ ಸ್ಥಳದಲ್ಲಿರುತ್ತಾರೆ. ಯಾಕೆಂದರೆ ಅದರಲ್ಲಿ ಸದಸ್ಯರಿಗೂ ದುಡ್ಡು ನುಂಗಲು ಆಗುತ್ತದೆಯಲ್ಲಾ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥ ಫಿಲಿಪ್ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಿಂದ ಹೊರನಡೆದ ಗ್ರಾಮಸ್ಥರು:

ನಂತರ ಸುಮಾರು 15ರಿಂದ20 ರಷ್ಟು ಮಂದಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರ ನಡೆದರು. ನಮ್ಮ ಬೇಡಿಕೆಗೆ ಬೆಲೆ ಇಲ್ಲ ಎಂದಾದರೆ ಸಭೆಯಲ್ಲಿ ಕುಳಿತುಕೊಳ್ಳುವುದು ಯಾಕೆ ಎಂದು ಆಕ್ರೊಶ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರ ಹೋಗುವ ದೃಶ್ಯ ಕಂಡ ಬಂತು. ಮೊದಲೇ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ಅದರಲ್ಲಿ ಹಲವರು ಸಭಾ ತ್ಯಾಗ ಮಾಡಿದ್ದರಿಂದ ಸಭೆಯಲ್ಲಿದ್ದವರ ಸಂಖ್ಯೆ ಇನ್ನಷ್ಟು ವಿರಳವಾಗಿತ್ತು.

ಉಪಾಧ್ಯಕ್ಷರು, ಸದಸ್ಯರಿಂದಲೂ ಸಭಾತ್ಯಾಗ…!

ಗ್ರಾಮಸ್ಥರು ಸಭಾ ತ್ಯಾಗ ಮಾಡಿದ ಬೆನ್ನಲ್ಲೇ ವೇದಿಕೆಯಲ್ಲಿದ್ದ ಗ್ರಾ.ಪಂ ಉಪಾಧ್ಯಕ್ಷ ರೋಹಿತ್ ಎಸ್ ಮಾತನಾಡಿ ಗ್ರಾಮಸ್ಥರಿಗೆ ಸಮಯ ಕೊಡಿ, ಮಾತನಾಡುವ, ಅವರ ಸಮಸ್ಯೆ ಸರಿಪಡಿಸದೆ ನಾವು ಸಭೆ ಮಾಡಿ ಏನು ಪ್ರಯೋಜನ ಎಂದು ಹೇಳಿದರು.

ಚರ್ಚಾ ನಿಯಂತ್ರಣಾಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಕೃಷ್ಣ ಬಿ ಮಾತನಾಡಿ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಭಾಂಗಣದಿಂದ ಹೊರಗಿರುವ ಎಲ್ಲ ಗ್ರಾಮಸ್ಥರು ಸಭೆಗೆ ಬರುವಂತೆ ವಿನಂತಿಸಿದರು. ಆದರೂ ಗ್ರಾಮಸ್ಥರು ಸಭೆಗೆ ಬರಲು ನಿರಾಕರಿಸಿದರು. ಗ್ರಾ.ಪಂ ಉಪಾಧ್ಯಕ್ಷ ರೋಹಿತ್ ಎಸ್ ಅವರೂ ಸಭೆ ತ್ಯಜಿಸಿದರು. ಉಪಾಧ್ಯಕ್ಷರ ಜೊತೆ ನಾಲ್ಕು ಮಂದಿ ಗ್ರಾ.ಪಂ ಸದಸ್ಯರೂ ಸಭೆಯಿಂದ ಹೊರ ನಡೆದರು.

ಸಭಾಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಆ ರೀತಿ ನಾವು ಮುಂದುವರಿಯೋಣ ಎಂದು ಚರ್ಚಾ ನಿಯಂತ್ರಣಾಧಿಕಾರಿ ಹೇಳಿದರು. ಈ ಸಂದರ್ಭ ವೇದಿಕೆಯ ಕೆಳಗಡೆ ನಿಂತು ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ರೋಹಿತ್ ಎಸ್ ಅವರು ಕೋರಂ ಇಲ್ಲದೇ ಸಭೆ ಮಾಡುವುದು ಹೇಗೆ, ಸಭೆ ಮುಂದೂಡಲೇಬೇಕು ಎಂದು ಹೇಳಿದರು. ಸಭೆ ಮುಂದುವರಿಸುವುದಾದರೆ ನೀವು ಮುಂದುವರಿಸಿ, ನಮ್ಮ ಅಭ್ಯಂತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತರರು ಧ್ವನಿಗೂಡಿಸಿದರು.

ಮಳೆ ಇದ್ದುದರಿಂದ ರಸ್ತೆ ದುರಸ್ತಿ ಸಾಧ್ಯವಾಗಿಲ್ಲ-ಪಿಡಿಓ ಸುಜಾತ

ಪಿಡಿಓ ಸುಜಾತ ಮಾತನಾಡಿ ಮಳೆ ಜೋರು ಇರುವಾಗ ರಸ್ತೆ ದುರಸ್ತಿ ಕಾರ್ಯ ಮಾಡಲು ಆಗುವುದಿಲ್ಲ. ಇಂದಿನ ಸಭೆಯಲ್ಲಿ ಯಾವ ನಿರ್ಣಯವೂ ನಾವು ಮಾಡುವುದಿಲ್ಲ. ನಮ್ಮ ಗ್ರಾ.ಪಂ ವಿಚಾರದಲ್ಲಿ ಮಾಹಿತಿಯೂ ನೀಡುವುದಿಲ್ಲ. ಇಲಾಖಾಧಿಕಾರಿಗಳು ಅವರ ಮಾಹಿತಿ ನೀಡಲು ಅವಕಾಶ ಮಾಡಿಕೊಡಬೇಕು. ಗ್ರಾಮ ಸಭೆಯಲ್ಲಿ ಇದ್ದವರಿಗೆ ಮಾಹಿತಿ ಕೊಡಬೇಕಾಗುತ್ತದೆ ಎಂದು ಹೇಳಿದರು. ನಂತರ ಸಭೆ ಮುಂದುವರಿಯಿತು. ಗ್ರಾ.ಪಂ ಉಪಾಧ್ಯಕ್ಷ ರೋಹಿತ್ ಎಸ್ ಹಾಗೂ ಕೆಲ ಸದಸ್ಯರು ಮತ್ತು ಅವರ ಜೊತೆಗಿದ್ದ ಗ್ರಾಮಸ್ಥರು ಮತ್ತೆ ಸಭೆಯಿಂದ ಹೊರ ಹೋದರು.

ಗದ್ದಲ…ಗೊಂದಲ…

ರಸ್ತೆಯ ವಿಚಾರದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಗ್ರಾ.ಪಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅನೇಕ ಮಂದಿ ಗ್ರಾಮಸ್ಥರು ಸಭಾ ತ್ಯಾಗಕ್ಕೆ ಮುಂದಾದರು. ಸಭೆ ಮುಂದೂಡಿ ಎಂದೂ ಹೇಳಿದರು. ಪಿಡಿಓ ಸುಜಾತ ಮಾತನಾಡಿ ಈಗಾಗಲೇ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿರುವ ಕಾರಣ ಸಭೆ ಮುಂದೂಡಲು ಆಗುವುದಿಲ್ಲ. ಸಭೆಯಲ್ಲಿರುವವರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಹೇಳಿದರು. ಕಡಬ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ ಮಧ್ಯಪ್ರವೇಶಿಸಿ ಮಾತನಾಡಿ ಒಬ್ಬೊಬ್ಬರೇ ಮಾತನಾಡಿ, ಸಭೆ ಗ್ರಾಮದ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವುದಾಗಿದೆ ಹಾಗಾಗಿ ಗೊಂದಲ, ಗದ್ದಲ ಇಲ್ಲದೇ ಸಭೆ ಮುಂದುವರಿಯಲಿ ಎಂದು ಹೇಳಿದರು. ರಸ್ತೆಯ ಬೇಡಿಕೆ ಈಡೇರುತ್ತಿದ್ದರೆ ಈ ರೀತಿ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ರಸ್ತೆ ದುರಸ್ತಿ ಮಾಡದ ವಿಚಾರವನ್ನೇ ಗ್ರಾಮಸ್ಥರು ಪದೇ-ಪದೇ ಎತ್ತುತ್ತಿದ್ದರು. ಮಕ್ಕಳು, ವೃದ್ಧರು ಆ ರಸ್ತೆಯಲ್ಲಿ ಹೇಗೆ ಹೋಗುವುದೆಂದು ನೀವು ಬಂದು ನೋಡಿ ಎಂದು ಪಂಚಾಯತ್‌ನವರಲ್ಲಿ ಹಾಗೂ ಅಧಿಕಾರಿಗಳಲ್ಲಿ ಹೇಳುತ್ತಿದ್ದರು. ಕಾಟಾಚಾರಕ್ಕೆ ಗ್ರಾಮ ಸಭೆ ಆಗಬಾರದು, ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪಂಚಾಯತ್‌ನವರಿಗೆ ಗೊತ್ತಿರಬೇಕು ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟಾರೆಯಾಗಿ ಗ್ರಾಮ ಸಭೆ ಗದ್ದಲ, ಗೊಂದಲದ ಗೂಡಾಗಿ ಮಾರ್ಪಾಡಾಗಿತ್ತು.

ಎಸ್ಸೈ ಆಂಜನೇಯ ರೆಡ್ಡಿಯಿಂದ ಮಾಹಿತಿ:

ಕಡಬ ಠಾಣಾ ಎಸ್ಸೈ ಆಂಜನೇಯ ರೆಡ್ಡಿ ಪೊಲೀಸ್ ಇಲಾಖೆ ಪರವಾಗಿ ಮಾಹಿತಿ ನೀಡಿದರು. ಮಕ್ಕಳ ಮೊಬೈಲ್ ಬಳಕೆ ಬಗ್ಗೆ, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವ ಬಗ್ಗೆ, ಕಳ್ಳತನದ ಬಗ್ಗೆ ಹಾಗೂ ಸಾಮಾಜಿಕ ತಾಣಗಳ ಅಪರಾಧಗಳ ಬಗ್ಗೆ ವಿವರವಾಗಿ ಮಾತನಾಡಿದರು. ದ.ಕ ಜಿಲ್ಲೆಯವರು ಪೊಲೀಸ್ ಇಲಾಖೆಗೆ ಸೇರುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು ಮುಂದಿನ ಕೆಲವು ವರ್ಷಗಳ ಬಳಿಕ ಪೊಲೀಸ್ ಇಲಾಖೆಯಲ್ಲಿ ದ.ಕ ಜಿಲ್ಲೆಯವರು ಇದ್ದಾರಾ ಎಂದು ಟಾರ್ಚ್ ಲೈಟ್ ಹಿಡಿದು ನೋಡುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ನಂತರ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶಿಬು, ದೇವಿಕಾ ಸಹಕರಿಸಿದರು.

ಕಾರ್ಯದರ್ಶಿಗೆ ಬೀಳ್ಕೊಡುಗೆ:

ಗ್ರಾಮ ಸಭೆಯ ಮೊದಲಿಗೆ ಐತ್ತೂರು ಗ್ರಾ.ಪಂ.ನಿಂದ ವರ್ಗಾವಣೆಗೊಂಡಿರುವ ಗ್ರಾ.ಪಂ ಕಾರ್ಯದರ್ಶಿ ರಮೇಶ್ ಆಚಾರ್ಯ ಅವರನ್ನು ಗ್ರಾ.ಪಂ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

LEAVE A REPLY

Please enter your comment!
Please enter your name here