ತ್ಯಾಜ್ಯ ವಿಲೇವಾರಿ ವಾಹನದ ಚಾಲಕಿಯಾಗಿ ಸುದ್ದಿಯಾಗಿದ್ದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರಿಗೆ ಮುಖ್ಯಮಂತ್ರಿಯಿಂದ ಸನ್ಮಾನ

0

  • ಸ್ವಚ್ಛತೆಯಲ್ಲಿ ಮಾದರಿ ಗ್ರಾ.ಪಂ ಆಗಬೇಕೆನ್ನುವುದು ನನ್ನ ಕನಸು-ನಫೀಸಾ ಪೆರುವಾಯಿ


ಪುತ್ತೂರು: ಗ್ರಾಮದಲ್ಲಿ ತ್ಯಾಜ್ಯ ಸಂಗ್ರಹ ಮಾಡುವ ವಾಹನವನ್ನು ಸ್ವತಃ ಚಲಾಯಿಸಿ ತ್ಯಾಜ್ಯ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿ ಸುದ್ದಿಯಾಗಿದ್ದು ವಿಟ್ಲ ಸಮೀಪದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ ಪೆರುವಾಯಿ ಅವರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸನ್ಮಾನಿಸಿದರು.

 


ಕೌಶಲ್ಯಾಭಿವವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಫೀಸಾ ಪೆರುವಾಯಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಐವರು ಸ್ವಚ್ಛವಾಹಿನಿ ಸಾರಥಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಮ್ಮ ಭಾಷಣದಲ್ಲಿ ಸ್ವಚ್ಛ ವಾಹಿನಿ ವಾಹನದಲ್ಲಿ ಚಾಲಕಿಯಾಗಿ ಸೇವೆ ಸಲ್ಲಿಸಿದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ ಅವರ ಸೇವೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಗ್ರಾ.ಪಂ ಉಪಾಧ್ಯಕ್ಷೆಯಾಗಿ ಸ್ವಚ್ಛ ವಾಹಿನಿ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೌಶಲ್ಯಾಭಿವೃದ್ಧಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯಂತೆ ಸ್ವಚ್ಛ ವಾಹಿನಿ ವಾಹನದಲ್ಲಿ ಚಾಲಕಿಯಾಗಿ ತ್ಯಾಜ್ಯ ಸಂಗ್ರಹಿಸುವ ನಫಿಸಾ ಪೆರುವಾಯಿಯವರ ಬಗ್ಗೆ ಅನೇಕ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿತ್ತು.

ನಫಿಸಾ ಪೆರುವಾಯಿ ಅವರು ತಮ್ಮ ಗ್ರಾ.ಪಂ ವ್ಯಾಪ್ತಿಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ಚಾಲಕಿಯಾಗಿ ಸೇವೆ ಸಲ್ಲಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಘಟಕಕ್ಕೆ ಕೊಂಡೊಯ್ಯುವ ವಾಹನದಲ್ಲಿ ಚಾಲಕಿಯಾಗಿ ಸೇವೆ ಮಾಡಿದ್ದಾರೆ. ಇದಕ್ಕೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗದವರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಜೀವಿನಿ ಒಕ್ಕೂಟದ ಮಹಿಳೆಯರು ವಾಹನ ಚಲಾಯಿಸಬೇಕಿದ್ದರೂ ಸರಿಯಾಗಿ ಅನುಭವ ಹೊಂದಿದ ಚಾಲಕಿ ಸದ್ಯಕ್ಕೆ ಇಲ್ಲದ ಕಾರಣಕ್ಕೆ ನಫೀಸಾ ಅವರೇ ಡ್ರೈವಿಂಗ್ ಮಾಡುತ್ತಿದ್ದಾರೆ.

ಗ್ರಾ.ಪಂ ಉಪಾಧ್ಯಕ್ಷೆಯಾಗಿದ್ದರೂ ಸಾಮಾನ್ಯ ಮಹಿಳೆಯಂತೆ ಸ್ವಚ್ಛ ವಾಹಿನಿ ವಾಹನದಲ್ಲಿ ಚಾಲಕಿಯಾಗಿ ತ್ಯಾಜ್ಯ ಸಂಗ್ರಹಿಸುವ ನಫಿಸಾ ಪೆರುವಾಯಿ ದಿಟ್ಟ ಮತ್ತು ಮಾದರಿ ಮಹಿಳೆಯಾಗಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿ ವಿಜಯಿಯಾಗಿರುವ ನಫೀಸಾ ಅವರು ಮೊದಲ ಅವಧಿಯಲ್ಲೇ ಪೆರುವಾಯಿ ಗ್ರಾ.ಪಂ.ನ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.

ಗ್ರಾಮದ ಅಭಿವೃದ್ಧಿಯಾಗಬೇಕು ಮತ್ತು ನಮ್ಮ ಗ್ರಾ.ಪಂ ಸ್ವಚ್ಛತೆ ಮೂಲಕ ಮಾದರಿ ಪಂಚಾಯತ್ ಆಗಬೇಕೆನ್ನುವುದು ನನ್ನ ಕನಸಾಗಿದ್ದು ಅದಕ್ಕಾಗಿ ನನ್ನಿಂದಾಗುವ ಕೊಡುಗೆ ನೀಡುತ್ತಿದ್ದೇನೆ. ನನಗೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಸಹಕಾರ ನೀಡುತ್ತಿದ್ದಾರೆ. ಕೆಲಸದಲ್ಲಿ ಮೇಲು ಕೀಳು ಎಂಬುವುದಿಲ್ಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇರಬೇಕು. ಗ್ರಾ.ಪಂಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ವೇಳೆ ಜನಸೇವೆ ಮಾಡಬೇಕೆನ್ನುವ ಕನಸಿತ್ತು ಅದನ್ನು ಈಡೇರಿಸಲು ನನ್ನಿಂದಾಗುವ ಎಲ್ಲ ಪ್ರಯತ್ನವನ್ನು ಮಾಡುತ್ತಿರುವುದಾಗಿ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here