ಶ್ರೀ ಧಾಮ ಮಾಣಿಲದಲ್ಲಿ 1556ನೇ ಮದ್ಯವರ್ಜನ ಶಿಬಿರ

0

ವಿಟ್ಲ: ಮನುಷ್ಯನ ದೇಹವೆಂಬುದು ವಾಹನದ ಭಾಗ ಇದ್ದ ಹಾಗೆ. ಅದಕ್ಕೆ ಬೇಕಾಗುವ ವಸ್ತುಗಳನ್ನು ಮಾತ್ರ ನೀಡಬೇಕು. ಬೇಡದ ವಸ್ತುಗಳನ್ನು ನೀಡಿದರೆ ಕೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ, ಆದುದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರುವುದು ಅತೀ ಅವಶ್ಯಕ ಎಂದು ಬೋಳಂತೂರು ನಾರ್ಶ ಸರಕಾರಿ ಪ್ರೌಢ ಶಾಲೆಯ ಪ್ರಾಧ್ಯಾಪಕ ಗೋಪಾಲಕೃಷ್ಣ ನೇರಳಕಟ್ಟೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಮತ್ತು ಇತರ ಸಹ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶ್ರೀ ಧಾಮ ಮಾಣಿಲದಲ್ಲಿ ಜರಗುತ್ತಿರುವ 1556ನೇ ಮದ್ಯವರ್ಜನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕುಡಿತದ ಚಟಕ್ಕೆ ಒಳಗಾಗಿರುವವರನ್ನು ಅದರಿಂದ ಹೊರತರುವ ಅತೀ ಅವಶ್ಯಕ ಪ್ರಯತ್ನ ಆಗುತ್ತಿದೆ. ಇದು ತಮಗೆ ಸಿಕ್ಕ ಅಮೂಲ್ಯವಾದ ಅವಕಾಶ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೆ ಮತ್ತೊಮ್ಮೆ ತಪ್ಪು ಹಾದಿಯನ್ನು ಹಿಡಿಯಬೇಡಿ ಎಂದು ವಿನಂತಿಸಿಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮಾತನಾಡಿ, ಈ ಭೂಮಿಯಲ್ಲಿ ಹುಟ್ಟಿ ಜೀವನ ಮಾಡುವ ಅವಕಾಶವನ್ನು ಭಗವಂತ ನಮಗೆಲ್ಲರಿಗೂ ಒದಗಿಸಿದ್ದಾನೆ. ಒಳ್ಳೆಯ ರೀತಿಯಲ್ಲಿ ಜೀವಿಸುವುದು ಎಲ್ಲರ ಜವಾಬ್ದಾರಿ. ಸಹವಾಸ ದೋಷದಿಂದ ಮನುಷ್ಯ ಹಾಳಾಗುತ್ತಾನೆ ಎನ್ನುವುದು ಶುದ್ಧ ಸುಳ್ಳು. ನಮ್ಮ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಂಡರೆ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಗುರುತಿಸಿಕೊಳ್ಳಿ ಎಂದು ಹೇಳಿದರು.
ವಿಟ್ಲ ಜೇಸೀಸ್ ಶಾಲೆಯ ಆಡಳಿತಾಧಿಕಾರಿ ರಾಧಾಕೃಷ್ಣ.ಎ, ಬರಹಗಾರ್ತಿ ಸವಿತಾ ಭಟ್, ಸಾಲೆತ್ತೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರವಿಂದ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿಬಿರಾಧಿಕಾರಿ ದೇವಿಪ್ರಸಾದ್, ಮೇಲ್ವಿಚಾರಕಿ ವಿನೋದಾ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here