ಏಕದಿನ ಹಲವು ಗ್ರಾ.ಪಂಗಳಲ್ಲಿ ಗ್ರಾಮ ಸಭೆ ಆಯೋಜಿಸಿಕೊಳ್ಳಬಾರದು- ಬಲ್ನಾಡು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಪುತ್ತೂರು:ಗ್ರಾಮೀಣ ಜನತೆ ಇಲಾಖೆಯಿಂದ ದೊರೆಯವ ಸವಲತ್ತಗಳ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆಯಬೇಕು. ಆಯಾ ಇಲಾಖೆಯ ತಾಲೂಕು ಮಟ್ಟದ ಮುಖ್ಯಸ್ಥರೇ ಗ್ರಾಮ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. ಇದಕ್ಕಾಗಿ ಒಂದೇ ದಿನ ತಾಲೂಕಿನ ಒಂದಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಸಭೆ ಆಯೋಜಿಸಿಕೊಳ್ಳಬಾರದು ಎಂದು ಬಲ್ನಾಡು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಸಭೆಯು ಜು.18ರಂದು ಗ್ರಾ.ಪಂ ಸಭಾಭವನದಲ್ಲಿ ಅಧ್ಯಕ್ಷ ಇಂದಿರಾ ಎಸ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್‌ರವರು ಚರ್ಚಾನಿಯಂತ್ರಣಾಧಿಕಾರಿಯಾಗಿದ್ದರು. ಇಲಾಖಾ ಮಾಹಿತಿಯ ವೇಳೆ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಪ್ರಶ್ನೆಗೆ ಇಲಾಖೆಯಿಂದ ಭಾಗವಹಿಸಿದ್ದ ಸಿಬ್ಬಂದಿಗಳಿಂದ ಸಮಪರ್ಕವಾದ ಉತ್ತರ ದೊರೆಯಲಿಲ್ಲ. ಇಲಾಖೆಯ ಮೇಲಾಧಿಕಾರಿಗಳು ಮಂಗಳೂರಿನಲ್ಲಿ ಸಭೆಗೆ ಹಾಜರಾಗಿದ್ದಾರೆ. ಅವರ ಪರವಾಗಿ ನಾನು ಸಭೆಗೆ ಹಾಜರಾಗಿದ್ದೇನೆ ಎಂದು ತಿಳಿಸಿದರು. ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಏಕ ಕಾಲದಲ್ಲಿ 4 ಗ್ರಾ.ಪಂಗಳಲ್ಲಿ ಗ್ರಾಮ ಸಭೆ ನಡೆಯುತ್ತಿದೆ. ಅಧಿಕಾರಿಗಳು ಎಲ್ಲಾ ಕಡೆ ಭಾಗವಹಿಸಬೇಕಾಗಿದ್ದು ಮೇಲಾಧಿಕಾರಿಗಳೇ ಪ್ರತಿ ಸಭೆಗೂ ಹಾಜರಾಗುವುದು ಅಸಾಧ್ಯ. ಅವರ ಪರವಾಗಿ ಇತರ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡುತ್ತಾರೆ ಎಂದು ಚರ್ಚಾನಿಯಂತ್ರಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದರು. ನಮಗೂ ಬೇರೆ ಕೆಲಸಗಳಿವೆ. ಹಾಗಿದ್ದರೂ ನಾವು ಗ್ರಾಮ ಸಭೆಗೆ ಹಾಜರಾಗಿದ್ದೇವೆ. ಅಧಿಕಾರಿಗಳಿಗೆ ಇತರ ಸಭೆಗಳಿಗೆ ಹೋಗಲಿದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಗ್ರಾಮ ಸಭೆ ನಿಗಧಿ ಮಾಡುವಾಗ ಇದನ್ನೆಲ್ಲಾ ಗಮನಿಸಿಕೊಂಡು ನಿಗಧಿಪಡಿಸಬೇಕು. ಒಂದೇ ದಿನ ತಾಲೂಕಿನ ಇತರ ಗ್ರಾ.ಪಂಗಳಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸಿಕೊಳ್ಳಬಾರದು. ಇಲಾಖೆಯ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವ ಅಧಿಕಾರಿಗಳೇ ಸಭೆಗೆ ಹಾಜರಾಗಬೇಕು. ಅಲ್ಪಸ್ವಲ್ಪ ಮಾಹಿತಿಯಿರುವ ಸಿಬಂದಿಗಳು ಸಭೆಗೆ ಬರುವುದೇ ಬೇಡ ಎಂದು ಗ್ರಾಮಸ್ಥರು ಆಗ್ರಹಿಸಿದರು.

ರೈತರ ಜೈವಿಕ ಉತ್ಪಾದನಾ ಕಂಪನಿ ತೆರೆಯಲು ಅಂಗೀಕಾರ;
ಮಾಜಿ ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಹುಲ್ಲು ಮೊದಲಾದ ಕಚ್ಚ ವಸ್ತುಗಳನ್ನು ಬಳಸಿ ಜೈವಿಕ ಇಂಧನ ತಯಾರಿಸುವ ಎಂಸಿಎಲ್ ಇದರ ರೈತರ ಜೈವಿಕ ಉತ್ಪದನಾ ಕಂಪನಿಯು ಪ್ರತಿ ಗ್ರಾಮದಲ್ಲಿ ಘಟಕಗಳನ್ನು ತೆರೆಯಲಿದೆ. ಇದರಲ್ಲಿ 15,000 ಸದಸ್ಯತ್ವ ನೋಂದಣಿಯ ಗುರಿಯಿದೆ. ರೂ.100 ಪಾವತಿಸಿ ಸದಸ್ಯತ್ವ ಹಾಗೂ ರೂ.10ಪಾವತಿಸಿ ಶೇರ್‌ನ್ನು ಪಡೆದುಕೊಳ್ಳಬಹುದು. ಬಹುದೊಡ್ಡ ಕಂಪನಿಯೊಂದು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪ್ರಾರಂಭಗೊಳ್ಳುತ್ತಿದೆ. ಇದರ ಮುಖಾಂತರ ಸುಮಾರು 1500ಮಂದಿಗೆ ಉದ್ಯೋಗವೂ ದೊರೆಯಲಿದೆ. ರೈತರ ಮುಖಾಂತರ ಇಂಧನವೂ ಉತ್ಪಾದನೆಯಾಗಲಿದ್ದು ಸಂಘ-ಸಂಸ್ಥೆಗಳ ಸಹಕರಿಸಬೇಕು. ಕೃಷಿಕರಿಗೆ ಉಪಯೋಗವಾಗುವ ಈ ಕಂಪನಿಯ ಘಟಕವನ್ನು ಬಲ್ನಾಡು ಗ್ರಾಮದಲ್ಲಿ ತೆರೆಯಲು ಸಭೆಯಲ್ಲಿ ಅಂಗೀಕಾರ ಮಾಡಬೇಕು ಎಂದು ತಿಳಿಸಿದಾಗ ಸಭೆಯು ಚಪ್ಪಾಳೆ ತಟ್ಟಿ ಅಂಗೀಕಾರ ನೀಡಿದೆ.

ಅಂಬೇಡ್ಕರ್ ಭವನದಲ್ಲಿ ಅನೈತಿಕ ಚಟುವಟಿಕೆ:
ಪಂಚಾಯತ್ ವ್ಯಾಪ್ತಿಯಲ್ಲಿ ರೂ.೩೦ಲಕ್ಷ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡಿದೆ. ಆದರೆ ಅದು ಈ ತನಕ ಉಪಯೋಗವಾಗಿಲ್ಲ. ಕಟ್ಟಡ ಈಗ ಪಾಳು ಬಿದ್ದಿದೆ. ಕಿಟಕಿಯ ಗಾಜುಗಳು ಹುಡಿಯಾಗಿದೆ. ಗುಡ್ಡದ ತುದಿಯಲ್ಲಿರುವ ಈ ಕಟ್ಟಡದಲ್ಲಿ ಅನೈತಿಕ ಚಟುವಟಕೆಗಳು ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಸಿದರು.

ಬೆಳಿಯೂರುಕಟ್ಟೆ ಶಾಲೆಯಲ್ಲಿ ಶಿಕ್ಷಕರ ಕೊರತೆ:
ಬೆಳಿಯೂರುಕಟ್ಟೆ ಅನುದಾನಿ ಹಿ.ಪ್ರಾ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ಖಾಯಂ ನೆಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಅವರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಆಗ ಶಾಲೆಯಲ್ಲಿ ಶಿಕ್ಷಕರ ಕೊರೆತೆ ಉಂಟಾಗುತ್ತದೆ. ಹೀಗಾಗಿ ಈಗಲೇ ಶಿಕ್ಷಕರ ನೇಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಇಂದಿರಾ ಎಸ್. ರೈ ಮಾತನಾಡಿ, ಬಲ್ನಾಡು ಗ್ರಾಮವನ್ನು ಅಮೃತ ಯೋಜನೆಯಲ್ಲಿ ಸೇರ್ಪಡೆಗೊಳಿಸಿರುವ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಅನುದಾನಗಳನ್ನು ನೀಡುತ್ತಿದ್ದು ಗ್ರಾಮಸ್ಥರು ಅದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನ ನಡೆಸುವಂತೆ ತಿಳಿಸಿದರು.

ಉಪಾಧ್ಯಕ್ಷೆ ಪರಮೇಶ್ವರಿ ಭಟ್ ಬಬ್ಬಿಲಿ, ಸದಸ್ಯರಾದ ಕೃಷ್ಣಪ್ಪ ನಾಯ್ಕ, ಬಾಲಸುಬ್ರಹ್ಮಣ್ಯ, ವಸಂತಿ, ಶೋಭಾ, ಅಂಬ್ರೋಸ್ ಡಿ’ಸೋಜ, ರವಿಚಂದ್ರ, ಗಣೇಶ್, ವಿನಯ, ಚಂದ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಶರೀಪ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಲಕ್ಷ್ಮೀ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here