ಫಿಲೋಮಿನಾ ಕಾಲೇಜಿನಲ್ಲಿ ರ್‍ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ

0

  • ರ್‍ಯಾಂಕ್ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗೆ ಪರಿವರ್ತನೆ ಹೊಂದಲಿ-ಮಧು ಮನೋಹರ್

ಚಿತ್ರ: ಆಡ್‌ಲ್ಯಾಬ್ ಪುತ್ತೂರು

 

 

ಪುತ್ತೂರು: ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವಿದೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬದುಕುವ ಪ್ರಯತ್ನ ಮಾಡಬೇಕು. ಜೀವನದಲ್ಲಿ ಎದುರಾಗುವ ರಿಸ್ಕ್ ಅನ್ನು ಸವಾಲಾಗಿ ತೆಗೆದುಕೊಂಡು ಅದನ್ನು ಧೈರ್ಯದಿಂದ ಎದುರಿಸಿ ಬಾಳುವಂತಾಗಬೇಕು. ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳು ತಾವು ಗಳಿಸಿದ ರ್‍ಯಾಂಕ್ ಅನ್ನು ಅಲ್ಲಿಗೆ ವ್ಯರ್ಥಗೊಳಿಸದೆ ಅದು ದೇಶದಲ್ಲಿನ ಉನ್ನತ ಹುದ್ದೆಗಳಲ್ಲಿ ಪರಿವರ್ತನೆಯನ್ನು ಹೊಂದುವಂತಾಗಲಿ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ನಗರಸಭೆಯ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರು ಹೇಳಿದರು.

 

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ವತಿಯಿಂದ 2020-21ಹಾಗೂ 2021-22ನೇ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ 26ರ್‍ಯಾಂಕ್ ಗಳಿಸಿದ ವಿಜೇತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಜು.೧19 ರಂದು ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಜರಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿದರು. ತಾನು ಈ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ 26 ವರ್ಷಗಳಾದವು. ಪ್ರತಿ ವರ್ಷದಲ್ಲಿ ವಿದ್ಯಾರ್ಥಿಗಳು ರ್‍ಯಾಂಕ್ ಗಳಿಸುತ್ತಾರೆ, ಆದರೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಬಹಳ ಕಡಿಮೆ. ವಿದ್ಯಾರ್ಥಿಗಳು ಮುಂದಿನ ಜನಾಂಗದವರು ನೆನಪಿನಲ್ಲಿಡುವಂತಹ ಸಾಧನೆಯನ್ನು ಮಾಡುವವರಾಗಬೇಕು ಎಂದ ಅವರು ಜೀವನದಲ್ಲಿ ಕಾಲೆಳೆಯುವಂಥವರು ಇರುವುದು ಸರ್ವೇ ಸಾಮಾನ್ಯ. ಆದರೆ ಅವನ್ನು ಸಮರ್ಪಕವಾಗಿ ಎದುರಿಸಿ ಮುಂದೆ ಹೆಜ್ಜೆ ಇಟ್ಟಾಗ ಮುಂದೆ ಜೀವನದ ದಾರಿ ಸುಗಮವಾಗಬಲ್ಲುದು. ಶಿಕ್ಷಕರು, ಪೋಷಕರು, ಹಿರಿಯರು ಹಾಕಿ ಕೊಟ್ಟ ಭದ್ರ ಬುನಾದಿಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯವನ್ನು ಕಾಣುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಉನ್ನತ ಹುದ್ದೆ ಸಂಪಾದಿಸಿ ಭ್ರಷ್ಟಾಚಾರರಹಿತವಾಗಿ ಸೇವೆ ನಿರ್ವಹಿಸಿ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಶಿಕ್ಷಣ ಪಡೆಯುವುದು, ಜ್ಞಾನ ಸಂಪಾದಿಸುವಿಕೆ, ಪ್ರತಿಭೆ ಬೆಳಗಿಸುವಿಕೆ, ಸಂಸ್ಕಾರ ಕೊಡುವ, ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಅರಿವು ವಿದ್ಯಾರ್ಥಿಗಳು ಪಡೆದುಕೊಂಡಾಗ ವಿದ್ಯಾರ್ಥಿಗಳಲ್ಲಿ ಸಮಗ್ರವಾದ ಬೆಳವಣಿಗೆ ಆಗುತ್ತದೆ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಉನ್ನತ ಹುದ್ದೆ ಸಂಪಾದಿಸಿ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಭೃಷ್ಟಾಚಾರರಹಿತರಾಗಿ ಸೇವೆ ನಿರ್ವಹಿಸಿ ದೇಶವನ್ನು ದೀಪದಂತೆ ಬೆಳಗಿಸುವವರಾಗಿ. ವಿದ್ಯಾರ್ಥಿಗಳು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಂದ ಪ್ರೇರಿತರಾಗಿ ತಾವೂ ಸಾಧನೆಯನ್ನು ಮಾಡುವವರಾಗಿ ಎಂದರು.

ಹೆಸರಿನ ಹಿಂದೆ, ಮುಂದೆ ಪದವಿಗಳ ಸೇರ್ಪಡೆಯಾಗಲಿ-ವಂ|ಸ್ಟ್ಯಾನಿ ಪಿಂಟೋ:
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ಮಾಡಿದ ಸಾಧನೆ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಹೆತ್ತವರ ಮೊಗದಲ್ಲಿ ಹರ್ಷ ಕಾಣುತ್ತಿದೆ. ಹೆತ್ತವರು ಮಕ್ಕಳಿಗೆ ಶಿಕ್ಷಣ ಕೊಡಬಹುದು, ಆದರೆ ಸಾಧನೆ ಮಾಡಬೇಕಾಗಿರುವುದು ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ತಮ್ಮ ಹೆಸರಿನ ಹಿಂದೆ ಹಾಗೂ ಮುಂದೆ ಇನ್ನಷ್ಟು ಪದವಿಗಳು ಸೇರ್ಪಡೆಯಾಗಬೇಕು ಮತ್ತು ತಮ್ಮ ತಕ್ಕುದಾದ ಪದವಿಗೆ ಕೀರ್ತಿಯನ್ನು ಪಡೆಯುವಂತರಾಗಿ ಎಂದರು.

ಉಪನ್ಯಾಸಕರು ಪುಸ್ತಕಗಳನ್ನು ಬರೆಯುವ ಅಭಿರುಚಿ ಹೊಂದಿ-ವಂ|ಡಾ|ಆಂಟನಿ ಪ್ರಕಾಶ್:
ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಮಂಗಳೂರು ವಿ.ವಿಯಲ್ಲಿನ ಮಾನ್ಯತೆ ಹೊಂದಿದ ೧೮೯ ಕಾಲೇಜುಗಳಲ್ಲಿ ೨೬ ರ್‍ಯಾಂಕ್‌ಗಳು ಫಿಲೋಮಿನಾ ಕಾಲೇಜಿಗೆ ಲಭಿಸಿರುವುದು ಅಭಿಮಾನದ ವಿಷಯವಾಗಿದೆ. ಕಾಲೇಜು ಅಂದಿನಿಂದ ಇಂದಿನವರೆಗೂ ಅನೇಕ ಏಳು-ಬೀಳುಗಳ ನಡುವೆ ಮಹತ್ತರ ಸಾಧನೆಯನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು, ಏಕಾಗ್ರತೆ, ಬದ್ಧತೆಯನ್ನು ಮೈಗೂಡಿಸಿಕೊಂಡು, ಸಿಕ್ಕಿದಂತಹ ಅವಕಾಶಗಳನ್ನು ಸದ್ಭಳಕೆ ಮಾಡಿದಾಗ ಯಶಸ್ಸು ದಕ್ಕುವುದು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎಲ್ಯಾಸ್ ಪಿಂಟೋರವರು ಯೋಗದ ಕುರಿತಂತೆ ಪುಸ್ತಕ ಬರೆದಂತೆ ಇತರ ಉಪನ್ಯಾಸಕರು ಪುಸ್ತಕಗಳನ್ನು ಬರೆಯುವ ಅಭಿರುಚಿಯನ್ನು ಬೆಳೆಸಿಕೊಳ್ಳಿ ಎಂದರು.

 


ವಿದ್ಯಾರ್ಥಿ ಸಂಘದ ಪ್ರಮಾಣವಚನ:
ಕಾಲೇಜಿನ 2021-22ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈ, ತರಗತಿವಾರು ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಪ್ರಮಾಣವಚನ ಬೋಧಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.

ಅಭಿನಂದನೆ:
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಅಧ್ಯಕ್ಷ ಎ.ಜೆ ರೈ ಹಾಗೂ ರಕ್ಷಕ-ಶಿಕ್ಷಕ ಸಂಘದ ಪರವಾಗಿ ಅಧ್ಯಕ್ಷ ಡಿ.ಅಮ್ಮಣ್ಣ ರೈಯವರು ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈಯವರಿಗೆ ಹೂಹಾರ ಹಾಕಿ ಅಭಿನಂದಿಸಿದರು. ಅಲ್ಲದೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜರಗಿದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಎಂ.ಎ ಎಜ್ಯುಕೇಶನ್‌ನಲ್ಲಿ ಪ್ರಥಮ ರ್‍ಯಾಂಕ್ ಪಡೆದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರಿಗೆ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂಗುಚ್ಛ ನೀಡಿ ಅಭಿನಂದಿಸಿದರು.

 


ಯೋಗ ಕುರಿತು ಪುಸ್ತಕ ಬಿಡುಗಡೆ:
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಯೋಗ ಕುರಿತಾಗಿ ಬರೆದ `ಡೈಮೆನ್ಶನ್ಸ್ ಆಫ್ ಯೋಗ ಆಂಡ್ ಹೆಲ್ತಿ ಲಿವಿಂಗ್’ ಎಂಬ ಪುಸ್ತಕವನ್ನು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್‌ರವರು ಬಿಡುಗಡೆಗೊಳಿಸಿದರು. ಪುಸ್ತಕ ಲೇಖಕ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಉಪಸ್ಥಿತರಿದ್ದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಕೆ.ಚಂದ್ರಶೇಖರ್, ಶ್ರೀಮತಿ ಭಾರತಿ ಎಸ್.ರೈವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಾಯಕ ಅಮಿತ್ ಎಸ್.ಆರಾನ್ಹಾ ಸ್ವಾಗತಿಸಿ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ ವಂದಿಸಿದರು. ಉಪ ಪ್ರಾಂಶುಪಾಲ ಉದಯ ಕೆ, ಸಹಾಯಕ ಪ್ರಾಧ್ಯಾಪಕರಾದ ಪ್ರೊ|ಝುಬೈರ್, ಡಾ|ರಾಧಾಕೃಷ್ಣ ಗೌಡ, ಪ್ರೊ|ಪ್ರೇಮಲತಾ, ಡಾ|ದೀಪಕ್ ಇ ಡಿ’ಸಿಲ್ವ, ಗೋವಿಂದ ಪ್ರಕಾಶ್, ಶ್ರೀಮಣಿ, ಪ್ರವೀಣ್‌ರವರು ರ್‍ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜೊತೆ ಕಾರ್ಯದರ್ಶಿ ಮಹಾಲಸಾ ಪೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಪೂಜಾಶ್ರೀ ವಿ.ರೈ ಕಾರ್ಯಕ್ರಮ ನಿರೂಪಿಸಿದರು.

2020-21, 9 ರ್‍ಯಾಂಕ್..
2020-21ರ ಸ್ನಾತಕ ಪದವಿಯ ಬಿಬಿಎಯಲ್ಲಿ ಮೈತ್ರಿ ಕೆ.ಬಿ(2ನೇ ರ್‍ಯಾಂಕ್), ಬಿಎಸ್‌ಡಬ್ಲ್ಯೂನಲ್ಲಿ ಅಕ್ಷತಾ ಎಸ್(2ನೇ ರ್‍ಯಾಂಕ್), ಬಿಕಾಂನ ದೀಪಾ ಸಿ.ಭಟ್(4ನೇ ರ್‍ಯಾಂಕ್), ಸ್ನಾತಕೋತ್ತರ ಪದವಿಯ ಎಂಕಾಂನಲ್ಲಿ ಜೊಶಿಲಾ ಮೆರಿಟ ಮಿನೇಜಸ್(1ನೇ ರ್‍ಯಾಂಕ್), ನವ್ಯಶ್ರೀ ರೈ.ಕೆ(4ನೇ ರ್‍ಯಾಂಕ್), ಹರ್ಷಿತಾ ಎಸ್.ಕೆ(9ನೇ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ಪ್ರಮಿತ ಎ(1ನೇ ರ್‍ಯಾಂಕ್), ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ನಮಿಶಾ ಎಸ್.ರಾವ್(1ನೇ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ತುಷಾರಾ ಆರ್.ಬಿ(2ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಯಿತು.

2021-22, 17 ರ್‍ಯಾಂಕ್..
2021-22ರಲ್ಲಿ ಸ್ನಾತಕ ವಿಭಾಗದಲ್ಲಿ ಬಿಎಸ್ಸಿಯ ಅನು ಡಿ(4ನೇ ರ್‍ಯಾಂಕ್), ಬಿಬಿಎಯ ರಾಶಿಯಾ ರೈ ಎಂ(5ನೇ ರ್‍ಯಾಂಕ್), ಬಿಎಯ ಚೇತನಾ ಎನ್(6ನೇ ರ್‍ಯಾಂಕ್), ಬಿಬಿಎಯ ಶ್ರೇಯಾ ಕೆ.ಎಸ್(7ನೇ ರ್‍ಯಾಂಕ್), ಬಿಎಸ್ಸಿಯಲ್ಲಿ ರೆನಿಲ್ಡಾ ಜೋಯ್ಸ್ ಮಾರ್ಟಿಸ್(9ನೇ ರ್‍ಯಾಂಕ್), ರಮ್ಯಶ್ರೀ ರೈ(10ನೇ ರ್‍ಯಾಂಕ್), ಸ್ನಾತಕೋತ್ತರ ಪದವಿಯಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ಜೈನಾಬತ್ ರಮ್ಸೀನಾ ಎನ್(1ನೇ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ಸುಶ್ಮಿತಾ ಕೆ(1ನೇ ರ್‍ಯಾಂಕ್), ಎಂಎಸ್‌ಡಬ್ಲ್ಯೂನ ಸಾರಮ್ಮ ಟಿ.ಜೆ(2ನೇ ರ್‍ಯಾಂಕ್), ಎಂಕಾಂನ ನಿರೀಶ್ಮಾ ಎನ್.ಸುವರ್ಣ(4ನೇ ರ್‍ಯಾಂಕ್), ಯಶಸ್ವಿನಿ ಬಿ(5ನೇ ರ್‍ಯಾಂಕ್), ರಕ್ಷಾ ಎಸ್.ವಿ(5ನೇ ರ್‍ಯಾಂಕ್), ನಿವಿನ್ ಕೊರೆಯಾ(6ನೇ ರ್‍ಯಾಂಕ್), ಶ್ರಾವ್ಯ ಎನ್.ಎಸ್(7ನೇ ರ್‍ಯಾಂಕ್), ಭವ್ಯಶ್ರೀ ವೈ(7ನೇ ರ್‍ಯಾಂಕ್), ರಮ್ಯ ಎಂ(9ನೇ ರ್‍ಯಾಂಕ್), ಸ್ವಾತಿ ಎಂ(10ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here