ಬಜತ್ತೂರು ಗ್ರಾ.ಪಂ. ಸಾಮಾನ್ಯ ಸಭೆ

0

ಹೊಸಗದ್ದೆ ನೆಡುತೋಪಿನಲ್ಲಿದ್ದ ಬೆಲೆ ಬಾಳುವ ಮರಗಳ ಕಟಾವು ಮಾಡಿ ಮಾರಾಟ ಪ್ರಕರಣ; ತನಿಖೆಗೆ ಡಿಸಿ., ಡಿಎಫ್‌ಒಗೆ ಮನವಿಗೆ ನಿರ್ಣಯ

ನೆಲ್ಯಾಡಿ: ಹೊಸಗದ್ದೆ ನೆಡುತೋಪಿನಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಟಾವು ಮಾಡಿ ಮಾರಾಟ ಮಾಡಿರುವ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಮಾಡಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.,ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಬಜತ್ತೂರು ಗ್ರಾಮದ ಪೆರಿಯಡ್ಕ ಹೊಸಗದ್ದೆ ಸಾಮಾಜಿಕ ಅರಣ್ಯದ ನೆಡುತೋಪಿನಲ್ಲಿ ಗಾಳಿ ಮತ್ತು ಅಕೇಶಿಯಾ ಮರಗಳ ಕಟಾವು ಸಮಯದಲ್ಲಿ ನೆಡುತೋಪಿನಲ್ಲಿದ್ದ ಬೆಲೆ ಬಾಳುವ ಇನ್ನಿತರ ಮರಗಳನ್ನು ಕಟಾವು ಮಾಡಿ ಮಾರಾಟ ಮಾಡಿರುವ ವಿಚಾರದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬೆಲೆಬಾಳುವ ಮರಗಳ ಕಟಾವು ಮಾಡಿ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ., ನಷ್ಟ ಮಾಡಿರುವ ಆರೋಪಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಹಾಗೂ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಚರ್ಚಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರುಗಳಾದ ಗಂಗಾಧರ ಕೆ., ಸಂತೋಷ್ ಕುಮಾರ್ ಪಿ., ಗಂಗಾಧರ ಪಿ.ಎನ್., ನಝೀರ್ ಬೆದ್ರೋಡಿ, ಮೋನಪ್ಪ ಗೌಡ, ಉಮೇಶ್ ಓಡ್ರಪಾಲು, ಪ್ರೆಸಿಲ್ಲಾ ಡಿ.ಸೋಜ, ವಿಮಲ, ಯಶೋಧಾ, ಭಾಗೀರಥಿ ಉಪಸ್ಥಿತರಿದ್ದು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಸ್ವಾಗತಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳ ಬಗ್ಗೆ ಸಭೆಗೆ ತಿಳಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here