ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕುಂತೂರಿನ ರಾಜೇಶ್ ನಿಯುಕ್ತಿ

0

ನೆಲ್ಯಾಡಿ: ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕಡಬ ತಾಲೂಕಿನ ಕುಂತೂರು ಗ್ರಾಮದ ರಾಜೇಶ್‌ರವರು ನಿಯುಕ್ತಿಗೊಂಡಿದ್ದಾರೆ ಎಂದು ವರದಿಯಾಗಿದೆ.
ಈಗ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿರುವ ಅರುಣ್ ಕುಮಾರ್‌ರವರ ಸ್ಥಾನಕ್ಕೆ ಕುಂತೂರಿನ 33ರ ಹರೆಯದ ರಾಜೇಶ್‌ರನ್ನು ನಿಯುಕ್ತಿಗೊಳಿಸಲಾಗಿದೆ. ಅರುಣ್ ಕುಮಾರ್‌ರವರ ಬದಲಾವಣೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿಲ್ಲ. ಆದರೆ ಬಿಜೆಪಿ ಮೂಲಗಳು ಈ ಬದಲಾವಣೆ ಖಚಿತಪಡಿಸಿವೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿ ಇದ್ದು ಈ ಸಮಯದಲ್ಲಿ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಬದಲಾವಣೆ ಮಾಡಲಾಗಿದೆ. ಚುನಾವಣಾ ವರ್ಷದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಪಾತ್ರ ಮಹತ್ತರದ್ದಾಗಿದೆ. ಈಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್‌ರವರು 8 ವರ್ಷಗಳ ಹಿಂದೆ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ಪ್ರಚಾರಕರಾಗಿದ್ದ ರಾಜೇಶ್ ಬಿಜೆಪಿಗೆ: ಜು.19ರಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಆರ್‌ಎಸ್‌ಎಸ್ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್‌ನಲ್ಲಿ ಒಟ್ಟು ಐವರು ಪ್ರಚಾರಕರ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಆರ್‌ಎಸ್‌ಎಸ್ ಪ್ರಚಾರಕರಾದ ರಾಜೇಶ್‌ರವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದ್ದು ಅವರನ್ನು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಈಗ ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರುಣ್‌ಕುಮಾರ್‌ರವರು ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕುಂತೂರಿನ ಯುವಕ: ಕುಂತೂರು ಗ್ರಾಮದ ಗಾಣಜಾಲು ವೀರಪ್ಪ ಹಾಗೂ ದಿ.ಚೆನ್ನಮ್ಮ ದಂಪತಿಯ ದ್ವಿತೀಯ ಪುತ್ರರಾದ ರಾಜೇಶ್‌ರವರು ತಮ್ಮ ವಿದ್ಯಾಭ್ಯಾಸದ ನಂತರ ಆರ್‌ಎಸ್‌ಎಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂತೂರು ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ, ಉಪ್ಪಿನಂಗಡಿ ಸರಕಾರಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಬಳಿಕ ಪುತ್ತೂರು ಇಂಡಸ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದಾರೆ. ರಾಜೇಶ್‌ರವರ ತಂದೆ ವೀರಪ್ಪ ಮೂಲ್ಯರವರು ಕೂಲಿಕಾರ್ಮಿಕರಾಗಿದ್ದು ಪ್ರಸ್ತುತ ಮನೆಯಲ್ಲಿಯೇ ತಮ್ಮ ಎರಡು ಎಕ್ರೆ ಜಾಗದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತಾಯಿ ಚೆನ್ನಮ್ಮರವರು ೨೦೨೧ರ ಡಿಸೆಂಬರ್‌ನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರ ಅಣ್ಣ ಸತೀಶ್‌ರವರು ಆಲಂಕಾರು ೧೦೮ ವಾಹನದಲ್ಲಿ ಚಾಲಕರಾಗಿದ್ದು ತಮ್ಮ ಹರೀಶ್ ಲೈನ್‌ಸೇಲ್ ಉದ್ಯೋಗ ಮಾಡುತ್ತಿದ್ದಾರೆ.

2010ರಿಂದ ಪ್ರಚಾರಕ: ರಾಜೇಶ್‌ರವರು ತಮ್ಮ ವಿದ್ಯಾಭ್ಯಾಸದ ಬಳಿಕ ೨೦೧೦ರಲ್ಲಿ ಮೂಡಬಿದ್ರೆ ತಾಲೂಕು ಪ್ರಚಾರಕರಾಗಿ ನೇಮಕಗೊಂಡಿದ್ದರು. ಬಳಿಕ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ, ಮೈಸೂರು ವಿಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ೨೦೨೧ರಿಂದ ತುಮಕೂರು ವಿಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೯ನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆ ಕುಂತೂರು ಶಾಖೆಯ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಕೌಡಿಚ್ಚಾರ್‌ನಲ್ಲಿರುವ ದೊಡ್ಡಮ್ಮನ ಮನೆಯಿಂದ ಪುತ್ತೂರಿನ ಇಂಡಸ್ ಕಾಲೇಜಿಗೆ ಬರುತ್ತಿದ್ದವರು ಈ ವೇಳೆ ಕಾವು ಅರಿಯಡ್ಕ ಮಂಡಲದ ಕಾರ್ಯವಾಹಕರಾಗಿ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here