ರಾಮಕುಂಜ ಗ್ರಾ.ಪಂ. ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

* 15ನೇ ಹಣಕಾಸು ಆಯೋಗ ಅನುದಾನದ ಶೇ.5ರಲ್ಲಿ ವಿಶೇಷ ಚೇತನರಿಗೆ ವೈಯಕ್ತಿಕ ಸವಲತ್ತು ನೀಡಲು ಅವಕಾಶ ನೀಡಬೇಕೆಂದು ಆಗ್ರಹ

ರಾಮಕುಂಜ: ಕಡಬ ತಾಲೂಕು ರಾಮಕುಂಜ ಗ್ರಾಮ ಪಂಚಾಯತ್‌ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ಮತ್ತು 15ನೇ ಹಣಕಾಸು ಅನುದಾನದ 2021-22ನೇ ಸಾಲಿನ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಜು.19ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ತಾಲೂಕು ಸಂಯೋಜಕ ಪ್ರವೀಣ್‌ರವರು ಮಾತನಾಡಿ, ಸರಕಾರದ ಹೊಸ ಸುತ್ತೋಲೆಯಂತೆ 15ನೇ ಹಣಕಾಸು ಆಯೋಗ ಅನುದಾನದಲ್ಲಿ ಶೇ.5ರಷ್ಟು ಅನುದಾನದಲ್ಲಿ ವಿಶೇಷ ಚೇತನರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತೆಗೆದುಕೊಳ್ಳಲು ಮೀಸಲಿರಿಸತಕ್ಕದ್ದು, ವೈಯಕ್ತಿಕ ಸವಲತ್ತುಗಳನ್ನು ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು, ಶೇ.5ರ ಅನುದಾನದಲ್ಲಿ ವಿಶೇಷ ಚೇತನರಿಗೆ ಸಂಬಂಧಿಸಿದ ಕಾಮಗಾರಿ ಮಾಡುವುದು ಕಷ್ಟ. ಆದ್ದರಿಂದ ಈ ಹಿಂದಿನಂತೆ ಶೇ.5ರ ಅನುದಾನದಲ್ಲಿ ವಿಶೇಷ ಚೇತನರಿಗೆ ವೈಯಕ್ತಿಕ ಸವಲತ್ತು ನೀಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಯೋಜನೆಯ ಕುರಿತು ಮಾಹಿತಿ ನೀಡಿದ ತಾಲೂಕು ಸಂಯೋಜಕ ಪ್ರವೀಣ್‌ರವರು, ಉದ್ಯೋಗ ಖಾತರಿ ಯೋಜನೆಯಡಿ ಮಾಡಿದ ಕಾಮಗಾರಿಗಳಿಗೆ ನಾಮಫಲಕ ಅಳವಡಿಕೆ, ಛಾಯಚಿತ್ರ ಕಡ್ಡಾಯವಾಗಿದೆ. ಯೋಜನೆಯ ಅನುದಾನದಲ್ಲಿ ಮಾಡಿದ ಹಟ್ಟಿ ರಚನೆ, ಕೋಳಿ ಶೆಡ್‌ಗಳು ಮೂಲ ಉದ್ದೇಶಕ್ಕೆ ಬಳಕೆಯಾಗಬೇಕು. ಮಾರ್ಗಸೂಚಿ ಉಲ್ಲಂಘನೆ ಆಗಬಾರದು. ಎಪಿಎಲ್ ಕಾರ್ಡ್ ದಾರರು ಸಣ್ಣ ರೈತ ಸರ್ಟಿಫಿಕೇಟ್ ನೀಡಬೇಕು ಎಂದರು. ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿ, ಸಮುದಾಯ ಅಭಿವೃದ್ಧಿ ಕಾಮಗಾರಿ ಮಾಡಲು ಅವಕಾಶವಿದೆ. ಗ್ರಾಮಸ್ಥರು ಈ ಯೋಜನೆಯ ಬಗ್ಗೆ ಗ್ರಾಮ ಪಂಚಾಯತ್‌ಗೆ ಬಂದು ಮಾಹಿತಿ ಪಡೆದುಕೊಂಡು ಮೊದಲು ಅರ್ಜಿ ನೀಡಬೇಕು. ಪಂಚಾಯತ್‌ನಿಂದ ಗ್ರಾಮಸ್ಥರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಗ್ರಾಮಸ್ಥರೂ ಸಹಕರಿಸಬೇಕೆಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್‌ರವರು ಮಾತನಾಡಿ, ಸರಕಾರ ಸಾಮಾಜಿಕವಾಗಿ ಜನರ ಜೀವನಮಟ್ಟ ಸುಧಾರಿಸುವ ಯೋಜನೆಗಳನ್ನೇ ಜಾರಿಗೆ ತರುತ್ತದೆ. ಗ್ರಾಮಸ್ಥರು ಸರಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಹಳೆನೇರೆಂಕಿ ಶಾಂತಿಮೂಲೆಯಲ್ಲಿ ಸೋಲಾರ್ ಲೈಟ್ ಅಳವಡಿಸಬೇಕೆಂದು ಗ್ರಾಮಸ್ಥೆ ವಸಂತಿ ಕನೆಮಾರ್ ಆಗ್ರಹಿಸಿದರು.
ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಇಂಜಿನಿಯರ್ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಕೇಶವ ಗಾಂಧಿಪೇಟೆ, ಯತೀಶ್‌ಕುಮಾರ್ ಬಾನಡ್ಕ, ವಸಂತ ಪಿ., ರೋಹಿಣಿ, ಸುಜಾತ, ಸುಚೇತಾ ಬರೆಂಬೆಟ್ಟು, ಸೂರಪ್ಪ ಕುಲಾಲ್, ಕುಶಾಲಪ್ಪ, ಉದ್ಯೋಗ ಖಾತರಿ ಯೋಜನೆ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ನಿರೂಪಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಪೂಜಾರಿ, ದೀಪಿಕಾ, ಚಂಚಲಕುಮಾರಿ, ರೋಹಿಣಿ, ಪೂರ್ಣಿಮಾ, ಕಾರ್ತಿಕ್‌ರವರು ಸಹಕರಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

[box type=”tip” bg=”#” color=”#” border=”#” radius=”20″]34.74 ಲಕ್ಷ ರೂ.,ಖರ್ಚು:

 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1-10-2021ರಿಂದ 31-3-2022ರ ಅವಧಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ವೈಯಕ್ತಿಕ ಹಾಗೂ ಸಮುದಾಯ ಸೇರಿ ಒಟ್ಟು 86 ಕಾಮಗಾರಿ ನಡೆದಿದೆ. ಇದಕ್ಕೆ ಒಟ್ಟು 34,74,915 ರೂ.,ಪಾವತಿಯಾಗಿದೆ. ಇದರಲ್ಲಿ 17,94,607 ರೂ., ಕೂಲಿ ಹಾಗೂ 16,80,308 ರೂ.,ಸಾಮಾಗ್ರಿ ಮೊತ್ತ ಆಗಿದೆ. 2021-22ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ 19 ಕಾಮಗಾರಿಗಳು ಅನುಷ್ಠಾನಗೊಂಡಿದ್ದು 6,28,366 ರೂ.,ಖರ್ಚು ಆಗಿದೆ. 15ನೇ ಹಣಕಾಸು ಯೋಜನೆಯಡಿ 41 ಕಾಮಗಾರಿಗಳು ಅನುಷ್ಠಾನಗೊಂಡಿದ್ದು 40,93,268 ರೂ.,ಖರ್ಚು ಆಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.[/box]

LEAVE A REPLY

Please enter your comment!
Please enter your name here