ಹೊರ ರಾಜ್ಯಗಳಿಂದ ಕುಚ್ಚಲು ಅಕ್ಕಿ ಖರೀದಿಸಿ ವಿತರಣೆಗೆ ಕ್ರಮ: ಸಚಿವ ಕೋಟ

0

ಮಂಗಳೂರು:ಮುಂದಿನ ಅಕ್ಟೋಬರ್ ತಿಂಗಳ ಬಳಿಕ ಹೊರ ರಾಜ್ಯಗಳಿಂದ ಕುಚ್ಚಲು ಅಕ್ಕಿ ಖರೀದಿಸಿ ಪ್ರಥಮ ಹಂತದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲು ಅಕ್ಕಿ ವಿತರಣೆ ಸಾಧ್ಯತೆ ಇದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದ್ದಾರೆ.ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಪಡಿತರದ ಮೂಲಕ ಕುಚ್ಚಲು ಅಕ್ಕಿ ವಿತರಿಸಬೇಕಾದರೆ 18ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಇತರ ರಾಜ್ಯಗಳಿಂದ ಖರೀದಿಸಬೇಕಾಗಿದೆ. ವಿವಿಧ ಕಡೆಗಳಿಂದ ಖರೀದಿಸಿ ಸಂಸ್ಕರಿಸಲು ಕೇಂದ್ರ ಸರಕಾರದ ಅನುಮತಿ ದೊರೆತಿದೆ.ಕೇರಳಕ್ಕೆ ಒಂದು ತಂಡ ತೆರಳಿ ಅಲ್ಲಿನ ಬೆಂಬಲ ಬೆಲೆಯ ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ.ಮುಂದೆ ತೆಲಂಗಾಣಕ್ಕೆ ತೆರಳಿ ಅಲ್ಲಿಂದ ಅಕ್ಕಿ ಖರೀದಿಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಿದೆ.ಛತ್ತೀಸ್‌ಗಡದಿಂದಲೂ ಅಕ್ಕಿ ಖರೀದಿಯ ಬಗ್ಗೆ ಚಿಂತನೆ ಇದೆ. ಈ ಯೋಜನೆಗೆ ಸುಮಾರು ೧೨೫ ಕೋಟಿ ರೂಪಾಯಿ ರಾಜ್ಯ ಸರಕಾರ ಸಬ್ಸಿಡಿ ನೀಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಶಾಸಕರ ಮತ್ತು ಸಂಸದರ ಸಭೆಯನ್ನು ಆಗಸ್ಟ್ ೨ನೆ ವಾರ ನಡೆಸಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here