ಕೊಡಿಪ್ಪಾಡಿ: ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಸಮತಟ್ಟು – ಸಂಭಾವ್ಯ ಅಪಾಯ ತಡೆಗಟ್ಟಲು ಸಹಾಯಕ ಆಯುಕ್ತರಿಗೆ ದೂರು

0

ವಿಟ್ಲ: ಅವೈಜ್ಞಾನಿಕ ರೀತಿಯಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸುತ್ತಿರುವ ವ್ಯಕ್ತಿಯೋರ್ವರ ವಿರುದ್ಧ ಕೊಡಿಪಾಡಿ ನಿವಾಸಿಯೋರ್ವರು ಸಹಾಯಕ ಆಯುಕ್ತರು, ತಹಶೀಲ್ದಾರ್ ರವರಿಗೆ ದೂರು ನೀಡಿದ್ದಾರೆ.

ಕೊಡಿಪಾಡಿ ಗ್ರಾಮದ ಆನಾಜೆ ನಿವಾಸಿ ಅಬ್ದುಲ್ ಖಾದರ್‌ರವರು ದೂರು ನೀಡಿದವರಾಗಿದ್ದು, ‘ನನ್ನ ಜಮೀನಿನ ಪಕ್ಕದಲ್ಲಿ ವ್ಯಕ್ತಿಯೋರ್ವರ ಜಮೀನು ಇದ್ದು ಅವರು ಅದನ್ನು ಐವತ್ತು ಅಡಿ ಆಳದಷ್ಟು ಮಣ್ಣನ್ನು ತೆಗೆದು ಸಮತಟ್ಟುಗೊಳಿಸಿರುವ ಹಿನ್ನೆಲೆಯಲ್ಲಿ ಎತ್ತರದಲ್ಲಿರುವ ನನ್ನ ಗುಡ್ಡವು ಕುಸಿಯಲಾರಂಭಿಸಿದೆ. ಗುಡ್ಡ ಕುಸಿಯುತ್ತಿರುವ ವೇಳೆ ದೊಡ್ಡ ದೊಡ್ಡ ಬಂಡೆಕಲ್ಲುಗಳು ನೆಲಕ್ಕುರುಳುತ್ತಿದೆ. ಆ ವ್ಯಕ್ತಿಯ ಜಮೀನಿನ ಪಕ್ಕದಲ್ಲಿ ಸಾರ್ವಜನಿಕ ರಸ್ತೆ ಇದ್ದು, ಗುಡ್ಡ ಕುಸಿತದ ವೇಳೆ ಅದರಿಂದ ಬೀಳುವ ಕಲ್ಲುಗಳು ಸಾರ್ವಜನಿಕ ರಸ್ತೆಗೆ ಬೀಳುವ ಸಾಧ್ಯತೆಗಳು ಹೆಚ್ಚಿವೆ. ಮಾತ್ರವಲ್ಲದೆ ಪಕ್ಕದಲ್ಲಿ ಮನೆಯೊಂದಿದ್ದು ಅವರಿಗೂ ಇದರಿಂದ ಅಪಾಯವಿದೆ. ಆದ್ದರಿಂದ ಕುಸಿದಿರುವ ಗುಡ್ಡದ ಮಣ್ಣನ್ನು ಮುಂದಿನ ದಿನಗಳಲ್ಲಿ ತೆರವು ಮಾಡದೆ ಹಾಗೇ ಬಿಟ್ಟು ಮುಂದೆ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟಬೇಕೆಂದು’ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಬಾರಿಯೂ ಮಳೆಗಾಲದಲ್ಲಿ ಇದೇ ರೀತಿ ಗುಡ್ಡ ಕುಸಿತಗೊಂಡಿದ್ದು ಆಗಲೂ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ ಎಂದು ಅಬ್ದುಲ್ ಖಾದರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here