ಅಂಬಿಕಾ ಮಹಾವಿದ್ಯಾಲಯದಲ್ಲಿ ಹಣದುಬ್ಬರದ ಬಗೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ದೇಶವು ಉತ್ಪಾದನೆಯೆಡೆಗೆ ಹೆಚ್ಚಿನ ಗಮನ ಹರಿಸಬೇಕು : ಡಾ.ವಿಘ್ನೇಶ್ವರ ವರ್ಮುಡಿ

ಪುತ್ತೂರು: ಬಯಕೆಗಳು ಜಾಸ್ತಿಯಾದಂತೆ ಸಂಪನ್ಮೂಲದ ಕೊರತೆಯುಂಟಾಗುತ್ತದೆ. ಸಂಪನ್ಮೂಲವಿಲ್ಲದೆ, ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಹಣದ ಮೌಲ್ಯ ಕುಸಿಯುತ್ತದೆ. ಹಾಗೆಯೇ ವಸ್ತುವಿನ ಬೆಲೆಯಲ್ಲಿ ಗಣನೀಯ ಏರಿಕೆಯಾದಾಗ ಹಣದುಬ್ಬರವುಂಟಾಗುತ್ತದೆ. ಈ ಹಣದುಬ್ಬರವು ದಿವಾಳಿತನಕ್ಕೆ ಎಡೆಮಾಡಿಕೊಡುತ್ತದೆ ಎಂದು ವಿಶ್ರಾಂತ ಪ್ರಾಚಾರ್ಯ, ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು.

ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಜು.19ರಂದು ’ಹಣದುಬ್ಬರ- ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಅತಿವೃಷ್ಟಿ, ಅನಾವೃಷ್ಠಿ, ಯುದ್ಧ ಮುಂತಾದ ಹಲವಾರು ಕಾರಣಗಳಿಂದ ಹಣದುಬ್ಬರ ಉಂಟಾಗುತ್ತದೆ. ಇದರಿಂದ ದೇಶದ ಆರ್ಥಿಕತೆ ಕುಸಿಯುತ್ತದೆ. ಇಂತಹ ಸಂದರ್ಭದಲ್ಲಿ ನಿರುದ್ಯೋಗ, ಬಡತನ ಗಾಢವಾಗಿ ಕಾಡಲಾರಂಭಿಸುತ್ತವೆ ಹಾಗೂ ಇದರಿಂದಾಗಿ ಹೂಡಿಕೆ ಕಡಿಮೆಯಾಗಿ, ಸಾಲ ಹಾಗೂ ಬಡ್ಡಿದರಗಳು ಏರಿಕೆಯಾಗುತ್ತವೆ. ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು ದೇಶವು ಉತ್ಪಾದನೆಯ ಬಗೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ ಯಶಸ್ವಿ ವ್ಯಕ್ತಿಗಳಾಗುವುದಕ್ಕೆ ಪ್ರತಿಯೊಬ್ಬರಿಂದಲೂ ಸಾಧ್ಯ. ಸರಿಯಾದ ಸಮಯಕ್ಕೆ ಸರಿಯಾದ ಪ್ರೇರಣೆ ಸಿಕ್ಕಿದರೆ ಸಾಮಾನ್ಯ ವ್ಯಕ್ತಿಯೂ ಅಸಾಧಾರಣ ಸಾಧನೆ ಮಾಡಬಹುದು. ಕೆಲವರಿಗೆ ಮಾತಿನಿಂದ ಮತ್ತೆ ಕೆಲವರಿಗೆ ಹಲವರ ಸಾಧನೆ ಹಾಗೂ ವ್ಯಕ್ತಿತ್ವದಿಂದ ಪ್ರೇರಣೆ ದೊರಕಬಹುದು. ಡಾ.ವರ್ಮುಡಿಯಂತಹವರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯವನ್ನು ನೀಡುವುದಕ್ಕೆ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ಆರ್ಥಿಕತೆಯು ಲೆಕ್ಕಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದಕ್ಕೆ ಲೆಕ್ಕಾಚಾರಗಳು ಅತೀ ಅಗತ್ಯವಾಗಿದೆ. ದೇಶ ಮಾತ್ರವಲ್ಲ ನಮ್ಮ ಮನೆಯ ಆರ್ಥಿಕತೆಯನ್ನೂ ಕುಶಲತೆಯಿಂದ ನಿಭಾಯಿಸಬೇಕು ಅಂಕಪಟ್ಟಿಯಲ್ಲಿರುವ ಅಂಕ ಒಂದು ಹಂತದವರೆಗೆ ಮಾತ್ರ ಉಪಯೋಗಕ್ಕೆ ಬರುತ್ತದೆ. ಆದರೆ ಪಠ್ಯೇತರ ವಿಚಾರಗಳನ್ನು ಹೆಚ್ಚು ಹೆಚ್ಚು ತಿಳಿದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ವಿ ವ್ಯಕ್ತಿಗಳಾಗುವುದಕ್ಕೆ ಸಾಧ್ಯ ಎಂದರು.

ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ್ ಗೋರೆ, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ಮಹಿಮಾ ಪ್ರಾರ್ಥಿಸಿ, ವಿದ್ಯಾರ್ಥಿ ಶಶಾಂಕ್ ಸ್ವಾಗತಿಸಿದರು. ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ಪ್ರಸ್ತಾವನೆಗೈದರು. ವಿದ್ಯಾರ್ಥಿ ರಾಹುಲ್ ವಂದಿಸಿ, ವಿದ್ಯಾರ್ಥಿನಿ ಚೈತನ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here