ಫಿಲೋಮಿನಾ ಪ್ರೌಢಶಾಲೆಯಲ್ಲಿ ತಾ|ಮಟ್ಟದ ಟೇಬಲ್ ಟೆನ್ನಿಸ್ ಉದ್ಘಾಟನೆ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ ಆತಿಥ್ಯದಲ್ಲಿ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ಜು.18ರಂದು ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟವು ಜರಗಿತು.

ಮುಖ್ಯ ಅತಿಥಿ, ದೈಹಿಕ ಶಿಕ್ಷಣ ಕ್ರೀಡಾ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಮಾತನಾಡಿ, ಒಳಾಂಗಣ ಆಟ ಉತ್ತಮ ಸಮಾಜವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಟಗಾರರು ದೈಹಿಕವಾಗಿ ಸದೃಢವಾಗಿದ್ದಲ್ಲಿ ಉತ್ತಮ ಸಮಾಜ ಕಟ್ಟುವಲ್ಲಿ ಸಹಕಾರಿ ಎನಿಸಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಶಿಕ್ಷಣ ಎಂದರೆ ಮಕ್ಕಳ ಪ್ರತಿಭೆಯನ್ನು ಬೆಳಗಿಸುವುದು ಎಂದರ್ಥ. ಮಕ್ಕಳ ಸಮಗ್ರ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಆಟೋಟ ಸ್ಪರ್ಧೆಗಳೂ ಮುಖ್ಯವಾಗಿದೆ. ಪಾಠದಲ್ಲಿ ಜ್ಞಾನ ದೊರೆತರೆ, ಆಟೋಟ ಸ್ಪರ್ಧೆಯಲ್ಲಿ ಇತರರ ಜೊತೆಗೆ ಹೇಗೆ ಬೆರೆಯಬೇಕು ಜೊತೆಗೆ ಪರಸ್ಪರ ಗೌರವ, ಪ್ರೀತಿ, ಹೊಂದಾಣಿಕೆ, ಸ್ನೇಹ, ಬಾಂಧವ್ಯ, ನಾಯಕತ್ವ ಗುಣ ಅಭಿವೃದ್ಧಿ ಹೊಂದುತ್ತದೆ ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಟೆನ್ನಿಸ್ ಆಟವನ್ನು ಬಹಳ ಚತುರತೆಯಿಂದ ಆಡಬೇಕು ಮತ್ತು ದೃಷ್ಟಿಯ ಚಲನೆ ಬಹಳ ಮುಖ್ಯವೆನಿಸುತ್ತದೆ. ಟೇಬಲ್ ಟೆನ್ನಿಸ್‌ಗೆ ಚೈನಾ ಮತ್ತು ರಷ್ಯ ದೇಶದಲ್ಲಿ ಸಿಕ್ಕಿದಷ್ಟು ಪ್ರೋತ್ಸಾಹ ಭಾರತ ದೇಶದಲ್ಲಿ ದೊರೆಯುತ್ತಿಲ್ಲ ಎಂದರು.

ಫಿಲೋಮಿನಾ ಪ್ರೌಢಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹಾ ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಎಷ್ಟು ಮುಖ್ಯವೋ ಸೋಲು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸೋತವರು ವಿಚಲಿತರಾಗದೆ ಮುಂದೆ ಜಯಗಳಿಸಲು ಪ್ರಯತ್ನ ಪಡಬೇಕು ಎಂದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟ ಪಾಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರು, ಆಡಳಿತ ಸಿಬ್ಬಂದಿ ಸಹಕರಿಸಿದರು.

ಪಂದ್ಯಾಟದ ವಿಜೇತರು..

  • 17ರ ವಯೋಮಿತಿ ಬಾಲಕರ ವಿಭಾಗ:
    ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜು(ಪ್ರ)
    ಸುದಾನ ವಸತಿಯುತ ಶಾಲೆ(ದ್ವಿ)
  • 17ರ ವಯೋಮಿತಿ ಬಾಲಕಿಯರ ವಿಭಾಗ:
    ಫಿಲೋಮಿನಾ ಪ್ರೌಢಶಾಲೆ(ಪ್ರ)
    ಸುಭೋದ ಪ್ರೌಢಶಾಲೆ ಪಾಣಾಜೆ(ದ್ವಿ)
  • 14ರ ವಯೋಮಿತಿ ಬಾಲಕರ ವಿಭಾಗ:
    ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾ.ಶಾಲೆ(ಪ್ರ)
    ಸುದಾನ ವಸತಿಯುತ ಶಾಲೆ(ದ್ವಿ)
  • 14ರ ವಯೋಮಿತಿ ಬಾಲಕಿಯರ ವಿಭಾಗ:
    ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾ.ಶಾಲೆ(ಪ್ರ)
    ಸುದಾನ ವಸತಿಯುತ ಶಾಲೆ(ದ್ವಿ)

LEAVE A REPLY

Please enter your comment!
Please enter your name here