ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯನ್ನೇ ಸರಕಾರ ಬ್ಯಾನ್ ಮಾಡಲಿ-ಕೆದಿಲ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

ಪುತ್ತೂರು:ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ವಿಧಿಸುತ್ತಿರುವ ಸರಕಾರ, ಮೊದಲು ಅವುಗಳ ಉತ್ಪಾದನೆಯನ್ನು ನಿಷೇಧಿಸಲು  ಕ್ರಮಕೈಗೊಳ್ಳಬೇಕು. ಅಲ್ಲದೆ ಏಕ ಬಳಕೆಯ ಪ್ಲಾಸ್ಟಿಕ್‌ಗೆ ಬದಲಿ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದು ಕೆದಿಲ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.

 

 

ಸಭೆಯು ಜು.20ರಂದು ಅಧ್ಯಕ್ಷೆ ಜಯಂತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಏಕ ಬಳಕೆಯ ಪ್ಲಾಸ್ಟಿಕ್ ಬಗ್ಗೆ ಸರಕಾದ ಸುತ್ತೋಲೆಯಲ್ಲಿ ಮಂಡಿಸುತ್ತಿರುವ ಸಂದರ್ಭದಲ್ಲಿ ಸದಸ್ಯ ಸುಲೈಮಾನ್ ಸರೋಳಿ ಮಾತನಾಡಿ, ಸರಕಾರ ಮೊದಲು ಪ್ಲಾಸ್ಟಿಕ್ ಉತ್ಪಾದಿಸುತ್ತಿರುವುದನ್ನು ನಿಷೇಧಿಸಬೇಕು. ಕಂಪನಿಯಲ್ಲಿ ಅಂತಹ ಪ್ಲಾಸ್ಟಿಕ್ ಉತ್ಪಾದಿಸದಂತೆ ಕ್ರಮಕೈಗೊಳ್ಳಬೇಕು. ಆಗ ಜನರು ಪ್ಲಾಸ್ಟಿಕ್ ಬಳಸುವುದು ಸ್ಥಗಿತಗೊಳ್ಳುತ್ತದೆ ಎಂದರು. ಧ್ವನಿಗೂಡಿಸಿದ ಸದಸ್ಯ ಮಹಮ್ಮದ್ ಉನೈಸ್‌ರವರು ಮಾತನಾಡಿ, ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳಿಗೆ ಸರಕಾರ ಉತ್ಪಾದನೆಗೆ ಪೂರಕವಾದ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ, ಅಂಗಡಿಯವರು, ಸಾರ್ವಜನಿಕರು ಬಳಸಬಾರದು ಅಂದರೆ ಅದಕ್ಕೆ ಅರ್ಥವಿದೆಯಾ?, ನಿಷೇಧಿಸಲಾದ ಪ್ಲಾಸ್ಟಿಕ್‌ಗಳೆಂದರೆ ಯಾವುದು?, ಇಂದಿನ ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಆಹಾರ ಉತ್ಪನ್ನಗಳು ಪ್ಲಾಸ್ಟಿಕ್‌ನಲ್ಲಿ ದೊರೆಯುತ್ತಿದ್ದು ಈ ಕಾನೂನು ಧೂಮಪಾನ ನಿಷೇಧದ ಕುರಿತ ಕಾನೂನಿಂತಾಗಿದೆ ಎಂದರು. ಈ ನಿಷೇಧದಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯುಂಟಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಕಂಪನಿಗಳು ಉತ್ಪಾದಿಸುವುದನ್ನು ಸರಕಾರ ನಿಷೇಧಿಸಬೇಕು. ಅಲ್ಲದೆ ಇದಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಬೀದಿ ದೀಪ ದುರಸ್ಥಿಗೊಳಿಸಿ:
ಪಂಚಾಯತ್ ವ್ಯಾಪ್ತಿಯಲ್ಲಿರುವ ಬಹುತೇಕ ಬೀದಿ ದೀಪಗಳು ಕೆಟ್ಟುಹೋಗಿದ್ದು ಉರಿಯುತ್ತಿಲ್ಲ. ಹೀಗಾಗಿ ಕೆಟ್ಟಹೋಗಿರುವ ಎಲ್ಲಾ ಬೀದಿ ದೀಪಗಳನ್ನು ಶೀಘ್ರವೇ ದುರಸ್ಥಿಗೊಳಿಸಬೇಕು. ಅಥವಾ ಹೊಸ ಬೀದಿ ದೀಪಗಳನ್ನು ಅಳವಡಿಸುವಂತೆ ಸದಸ್ಯ ಅಬ್ದುಲ್ ಅಝೀಝ್ ಆಗ್ರಹಿಸಿದರು. ಹೊಸ ದೀಪಗಳನ್ನು ಅಳವಡಿಸುವಾಗ ಅಗ್ರಿಮೆಂಟ್ ಮಾಡಿಕೊಂಡು ಒಂದು ವರ್ಷದ ಅವಧಿಗೆ ಯಾವುದೇ ತೊಂದರೆ ಬಂದರೂ ಗುತ್ತಿಗೆದಾರೇ ನಿರ್ವಹಣೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಮಳೆಯಿಂದ ಹಾನಿಯಾದ ರಸ್ತೆಗಳ ಮಾಹಿತಿ ನೀಡಿ:
ಈ ವರ್ಷದ ಅಧಿಕ ಮಳೆಯಿಂದ ಬಹುತೇಕ ರಸ್ತೆಗಳಿಗೆ ಹಾನಿಯಾಗಿದೆ. ಮಳೆಯಿಂದ ಹಾನಿಯುಂಟಾದ ರಸ್ತೆಗಳ ಕುರಿತು ಸದಸ್ಯರು ಮಾಹಿತಿ ನೀಡುವಂತೆ ಉಪಾಧ್ಯಕ್ಷ ಉಮೇಶ್ ಪೂಜಾರಿ ತಿಳಿಸಿದರು. ಮಳೆಯಿಂದ ಹಾನಿಯುಂಟಾದ ಬಾವಿಗಳ ದುರಸ್ಥಿಗೆ ಸರಕಾರ ಪರಿಹಾರ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಕಂದಾಯ ಇಲಾಖೆಗೆ ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು.

ಅಪಾಯಕಾರಿ ಮರ ತೆರವುಗೊಳಿಸಿ:
ರಾಷ್ಟ್ರೀಯ ಹೆದ್ದಾರಿಯ ಸತ್ತಿಕಲ್‌ನಲ್ಲಿ ಎರಡು ಮರಗಳು ಹೆದ್ದಾರಿಗೆ ವಾಲಿ ನಿಂತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಸಂಭಾವ್ಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಆ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸದಸ್ಯರ ಅಬ್ದುಲ್ ಅಝೀಝ್ ಒತ್ತಾಯಿಸಿದರು. ಗಾಂಧಿನಗರದಲ್ಲಿಯೂ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಅವುಗಳನ್ನೂ ತೆರವುಗೊಳಿಸುವಂತೆ ಸದಸ್ಯ ಸುಲೈಮಾನ್ ತಿಳಿಸಿದರು. ಈ ಕುರಿತು ಅರಣ್ಯ ಇಲಾಖೆಗೆ ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು.

ಪ್ರತಿಮನೆಗಳಿಗೂ ದಿನದ 24 ಗಂಟೆಯೂ ಕುಡಿಯುವ ನೀರಿನ ಯೋಜನೆ ಕಲ್ಪಿಸುವ ಜಲಜೀವನ್ ಮಿಷನ್ ಉತ್ತಮ ಯೋಜನೆಯಾಗಿದ್ದು ಇದು ಭವಿಷ್ಯದಲ್ಲಿ ಜನತೆಗೆ ಬಹಳಷ್ಟು ಪ್ರಯೋಜನವಾಗಲಿದೆ. ಈ ಯೋಜನೆಗೆ ಫಲಾನುಭವಿಗಳು ರೂ.2000ಪಾವತಿಸಬೇಕಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ಸದಸ್ಯರು ಪ್ರಮುಖ ಪಾತ್ರ ವಹಿಸಬೇಕಾಗಿದ್ದು ಆಯಾ ವಾರ್ಡ್‌ಗಳಲ್ಲಿ ಜನರನ್ನು ಮನವೊಳಿಸಬೇಕು ಎಂದು ಉಪಾಧ್ಯಕ್ಷ ಉಮೇಶ್ ಪೂಜಾರಿ ತಿಳಿಸಿದರು. ಬಡವರು ಇಷ್ಟು ಮೊತ್ತವನ್ನು ಪಾವತಿಸುವುದು ಅಸಾಧ್ಯ ಎಂದು ಸದಸ್ಯರು ತಿಳಿಸಿದರು. ಆರ್ಥಿಕವಾಗಿ ತೀರಾ ಬಡವರಿಗೆ ಸ್ವಲ್ಪ ರಿಯಾಯಿತಿ ನೀಡುವ ಎಂದು ಉಪಾಧ್ಯಕ್ಷರು ತಿಳಿಸಿದರು.

ಭ್ರಷ್ಟಾಚಾರ ರಹಿತ ಸೇವೆ;
ಕೆದಿಲ ಗ್ರಾ.ಪಂನಲ್ಲಿ ಜನತೆಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ. ನಮ್ಮ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಆಡಳಿತ ಮಂಡಲಿ, ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾರದರ್ಶಕತೆ ಹಾಗೂ ಪ್ರಾಮಾಣಿಕವಾಗಿ ಜನತೆಗೆ ಸೇವೆ ನೀಡಲಾಗುತ್ತಿದೆ. ಪಂಚಾಯತ್‌ನಲ್ಲಿ ಭ್ರಷ್ಟಚಾರ ರಹಿತವಾಗಿ ಸೇವೆ ನೀಡುವ ಮೂಲಕ ಸುದ್ದಿ ಆಂದೋಲಕ್ಕೆ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಪಿಡಿಓ ಭುವನೇಂದ್ರ ಕುಮಾರ್ ತಿಳಿಸಿದರು.

ಸದಸ್ಯರಾದ ಹರೀಶ್ ಹಾಗೂ ಶ್ಯಾಮ್‌ಪ್ರಸಾದ್ ವಿವಿಧ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಸದಸ್ಯರಾದ ಬೀಫಾತುಮ್ಮಾ, ಹರಿಣಾಕ್ಷಿ, ಶ್ಯಾಮಲ, ಬೇಬಿ ಹಾಗೂ ವನಿತಾ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಭುವನೇಂದ್ರ ಕುಮಾರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.