ಪುತ್ತೂರು ಜಿಲ್ಲಾ ನ್ಯಾಯಾಲಯದ ಪ್ರಥಮ ನ್ಯಾಯಾಧೀಶ ಟಿ.ಜಿ.ಶಿವಶಂಕರೇ ಗೌಡ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಪುತ್ತೂರಿನ ಇತಿಹಾಸದಲ್ಲಿಯೇ ಅಪರಾಧಿಯೋರ್ವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಸುದ್ದಿಯಾಗಿದ್ದರು

0

 

ಪುತ್ತೂರು: ಪುತ್ತೂರಿನಲ್ಲಿ ಈ ಹಿಂದೆ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾಗಿ ಬಳಿಕ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದು ಪುತ್ತೂರಿನ
ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ ಅಪರಾಧಿಯೋರ್ವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಸುದ್ದಿಯಾಗಿದ್ದ ನ್ಯಾಯಾಧೀಶ ಟಿ.ಜಿ.ಶಿವಶಂಕರೇ ಗೌಡರವರನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಟಿ.ಜಿ.ಶಿವಶಂಕರೇ ಗೌಡ ಸಹಿತ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಜು.19ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.ಟಿ.ಜಿ.ಶಿವಶಂಕರೇಗೌಡ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ, ಬೆಂಗಳೂರಿನ ಪ್ರಧಾನ ನಗರ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅನಿಲ್ ಭೀಮಸೇನ ಕಟ್ಟಿ,ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಗುರುಸಿದ್ದಯ್ಯ ಬಸವರಾಜ ಹಾಗೂ ಉಮೇಶ್ ಮಂಜುನಾಥ್ ಭಟ್ ಅಡಿಗ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.ಕರ್ನಾಟಕ ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ಮಂಜೂರಾಗಿರುವ 62 ನ್ಯಾಯಮೂರ್ತಿಗಳ ಹುದ್ದೆಯಲ್ಲಿ ಸದ್ಯ 45 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಟಿ.ಜಿ.ಶಿವಶಂಕರೇ ಗೌಡ: ಈ ಹಿಂದೆ ಪುತ್ತೂರಿನಲ್ಲಿ ಫಾಸ್ಟ್ ಟ್ರ‍್ಯಾಕ್ ಕೋರ್ಟ್, ಆ ಬಳಿಕ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದ ಟಿ.ಜಿ.ಶಿವಶಂಕರೇ ಗೌಡರು ಪ್ರಸ್ತುತ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೋವಿಡ್ ಲಾಕ್‌ಡೌನ್ ಜಾರಿಯಾದ ಬಳಿಕ ನ್ಯಾಯಾಲಯ ಕಲಾಪಗಳು ಆನ್‌ಲೈನ್ ಮೂಲಕ ನಡೆಯುವಂತಾಗಲು, ಆ ಸಂದರ್ಭ ಹೈಕೋರ್ಟ್ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಆಗಿದ್ದ ಶಿವಶಂಕರೇ ಗೌಡರವರು ಪ್ರಮುಖ ಕಾರಣಕರ್ತರಾಗಿದ್ದರು.ಈ ವರ್ಚುವಲ್ ವ್ಯವಸ್ಥೆಗೆ ಸುಪ್ರೀಂಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ಕೊನೇಯ ನ್ಯಾಯಾಧೀಶರಾಗಿದ್ದ ಟಿ.ಜಿ.ಶಿವಶಂಕರೇ ಗೌಡರವರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಥಮ ನ್ಯಾಯಾಧೀಶರಾಗಿದ್ದರು.2012-14ರ ಅವಧಿಯಲ್ಲಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಶಿವಶಂಕರೇ ಗೌಡರವರು, ತುಮಕೂರಿನ ಮನೆಯಲ್ಲಿ ಅತ್ತೆ ಮತ್ತು ನಾದಿನಿಯನ್ನು ಕೊಲೆಗೈದು ಬಳಿಕ ಪಾಣಾಜೆಯಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೆರೆಗೆ ದೂಡಿ ಹಾಕಿ ಕೊಲೆಗೈದಿದ್ದ ಬ್ಯಾಂಕ್ ಮೆನೇಜರ್ ರಮೇಶ್ ನಾಯ್ಕನಿಗೆ ಮರಣ ದಂಡನೆಯ ಶಿಕ್ಷೆ ವಿಧಿಸಿ ಆದೇಶಿಸಿದ್ದರು.ಈ ಮೂಲಕ ಪುತ್ತೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿ ಅಪರಾಧಿಯೋರ್ವನಿಗೆ ಗಲ್ಲು ಶಿಕ್ಷೆ ಆದೇಶಿಸಿ ಇವರು ರಾಜ್ಯಾದ್ಯಂತ ಸುದ್ದಿಯಾಗಿದ್ದರು.ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಅಂದು ಪುತ್ತೂರು ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ,ಪ್ರಸ್ತುತ ಹಿರಿಯ ಕಾನೂನು ಅಧಿಕಾರಿಯಾಗಿರುವ ಶಿವಪ್ರಸಾದ್ ಆಳ್ವರವರು ಸಮರ್ಥ ವಾದ ಮಂಡನೆ ಮಾಡಿದ್ದರು.

LEAVE A REPLY

Please enter your comment!
Please enter your name here