ಅಮಾನತುಗೊಂಡ ಶಿರಾಡಿ ಪಿಡಿಒ ಪರ ತಾ.ಪಂ.ಸದಸ್ಯೆ ಕೈಜೋಡಿಸಿರುವುದು ಗ್ರಾಮಸ್ಥರು ತಲೆ ತಗ್ಗಿಸುವಂತೆ ಆಗಿದೆ; ಸಾಬು ಉರುಂಬಿಲ್

0

ನೆಲ್ಯಾಡಿ: ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಅಮಾನತುಗೊಂಡಿದ್ದ ಶಿರಾಡಿ ಗ್ರಾ.ಪಂ.ಪಿಡಿಒ ಪರ ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್‌ರವರು ಕೈಜೋಡಿಸಿರುವುದು ಶಿರಾಡಿ ಗ್ರಾಮಸ್ಥರು ತಲೆ ತಗ್ಗಿಸುವಂತೆ ಆಗಿದೆ ಎಂದು ಗಡಿನಾಡ ರಕ್ಷಣಾ ಸೇನೆ ಶಿರಾಡಿ ಇದರ ಸ್ಥಾಪಕಾಧ್ಯಕ್ಷ ಸಾಬು ಉರುಂಬಿಲ್ ಪ್ರತಿಕ್ರಿಯಿಸಿದ್ದಾರೆ.

ಶಿರಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರದ ಅನುದಾನಗಳ ದುರ್ಬಳಕೆ, ದುರುಪಯೋಗ ಮತ್ತು ಕಳಪೆ ಕಾಮಗಾರಿ ನಿರಂತರವಾಗಿ ನಡೆದಿದೆ. ಚುನಾಯಿತ ಪ್ರತಿನಿಧಿ ತನ್ನ ಪತ್ನಿಯ ಹೆಸರಲ್ಲಿ ಪಂಚಾಯತ್ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿ ನಡೆಸುತ್ತಿದ್ದು ಈ ಬಗ್ಗೆ ಪಿಡಿಓ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೇ ಇದ್ದಾಗ ವಾರ್ಡ್ ಸಭೆ ಮತ್ತು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಹಿನ್ನೆಲೆಯಲ್ಲಿ ಜಿ.ಪಂ.ಸಿಇಓ ಡಾ.ಕುಮಾರ್‌ರವರಿಗೆ ದೂರು ಸಲ್ಲಿಸಲಾಗಿತ್ತು. ಜಿಲ್ಲಾ ಪಂಚಾಯತ್‌ನ ಅಧಿಕಾರಿ ವರ್ಗದವರು ಈ ದೂರಿನ ತನಿಖೆ ನಡೆಸಿದ ವೇಳೆ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ಬೃಹತ್ ಮಟ್ಟದಲ್ಲಿ ನಡೆದಿರುವುದು ಸಾಬೀತುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಿಡಿಓ ವೆಂಕಟೇಶ್‌ರವರನ್ನು ಜಿ.ಪಂ.ಸಿಇಒರವರು ಕರ್ತವ್ಯದಿಂದ ಅಮಾನತುಗೊಳಿಸಿದ್ದರು. ಈ ಭ್ರಷ್ಟಾಚಾರಕ್ಕೆ ಸಾಥ್ ನೀಡುವ ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್‌ರವರು ಗ್ರಾಮಸ್ಥರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಭ್ರಷ್ಟಾಚಾರದ ಪರವಾಗಿ ಹೋರಾಟ ನಡೆಸಿರುವುದು, ಅವರೊಂದಿಗೆ ಕೈಜೋಡಿಸಿರುವುದು ಶಿರಾಡಿ ಗ್ರಾಮಸ್ಥರು ಸಮಾಜದ ಮುಂದೆ ತಲೆ ತಗ್ಗಿಸುವಂತೆ ಆಗಿದೆ. ಪಿಡಿಓ ವೆಂಕಟೇಶ್‌ರವರನ್ನು ಶಿರಾಡಿ ಗ್ರಾ.ಪಂ.ನಲ್ಲಿ ಮುಂದುವರಿಸಲು ಗಡಿನಾಡ ರಕ್ಷಣಾ ಸೇನೆ ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಕಾನೂನು ಹೋರಾಟ ನಡಸಲಾಗುವುದು ಎಂದು ಸಾಬು ಉರುಂಬಿಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here