ಕೊಯಿಲ: ಮುಸ್ಲಿಂ ಸ್ನೇಹಿತೆ ಮನೆಗೆ ಹೋಗಿದ್ದ ಹಿಂದೂ ಯುವತಿ-ಪೊಲೀಸರ ಮಧ್ಯಪ್ರವೇಶದಿಂದ ಗೊಂದಲಕ್ಕೆ ತೆರೆ

0

ರಾಮಕುಂಜ: ಹಿಂದೂ ಯುವತಿ ಮುಸ್ಲಿಂ ಸ್ನೇಹಿತೆಯ ಮನೆಗೆ ಹೋಗಿರುವ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಗೊಂದಲ ಉಂಟಾದ ಹಾಗೂ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿರುವ ಪ್ರಕರಣವೊಂದು ಕಡಬ ತಾಲೂಕಿನ ಕೊಲ ಗ್ರಾಮದ ಕುದ್ಲೂರು ಎಂಬಲ್ಲಿ ವಾರದ ಹಿಂದೆ ನಡೆದಿರುವುದು ತಡವಾಗಿ ವರದಿಯಾಗಿದೆ.

ಉಪ್ಪಿನಂಗಡಿಯ ಬಟ್ಟೆ ಮಾರಾಟ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿರುವ ಕೊಯಿಲ ಗ್ರಾಮದ ಕುದ್ಲೂರಿನ ಮುಸ್ಲಿಂ ಯುವತಿಯ ಮನೆಗೆ ಅದೇ ಮಳಿಗೆಯಲ್ಲಿ ಉದ್ಯೋಗಿಯಾಗಿರುವ ಉಪ್ಪಿನಂಗಡಿಯ ಯುವತಿ ಜು.12ರಂದು ಬೆಳಿಗ್ಗೆ ಬಂದಿದ್ದರು. ಹಿಂದೂ ಯುವತಿ ಉಪ್ಪಿನಂಗಡಿಯಿಂದ ಆತೂರು ಗೋಳಿತ್ತಡಿಗೆ ಜೀಪಿನಲ್ಲಿ ಬಂದಿದ್ದು ಅಲ್ಲಿಂದ ರಿಕ್ಷಾದಲ್ಲಿ ಕುದ್ಲೂರಿನ ಮುಸ್ಲಿಂ ಗೆಳತಿಯ ಮನೆಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಆ ಮನೆಯಿಂದ ತುಸು ದೂರ, ರಸ್ತೆಯಲ್ಲಿ ಜಮಾಯಿಸಿದ್ದರಿಂದ ಗೊಂದಲ ನಿರ್ಮಾಣವಾಗಿತ್ತು. ಘಟನೆ ಕುರಿತಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಕಡಬ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿಂದೂ ಯುವತಿಯನ್ನು ಠಾಣೆಗೆ ಕರೆದೊಯ್ದು ಆ ಬಳಿಕ ಆಕೆಯ ಅಣ್ಣನ ಜೊತೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಆರೋಪಗಳು ಸುಳ್ಳು: ಮುಸ್ಲಿಂ ಯುವತಿ ಮನೆಯಲ್ಲಿ ಹಿಂದೂ ಹುಡುಗಿ ಇರುವ ಬಗ್ಗೆ ಮಾಹಿತಿ ಬಂದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಹಿಂದೂ ಹುಡುಗಿಯನ್ನು ಆಕೆಯ ಅಣ್ಣನ ಜೊತೆಗೆ ಕಳುಹಿಸಿಕೊಡಲಾಗಿದ್ದು ಆಕೆಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ಯುವತಿಯ ಮನೆಗೆ ಹೋಗದೇ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ಬಗ್ಗೆ ಮುಸ್ಲಿಂ ಯುವತಿಯ ಮನೆಯವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮತ್ತು ಆರೋಪ-ಪ್ರತ್ಯಾರೋಪ ಆಗಬಾರದು ಎಂಬ ಕಾರಣಕ್ಕಾಗಿ ಮುಸ್ಲಿಂ ಯುವತಿಯ ಕುಟುಂಬ ದೂರು ನೀಡದೆ ಹಿಂತಿರುಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಕಡಬ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here