ಜು.24: ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

0

ಪುತ್ತೂರು: ಕೇವಲ ಸಂಘಟನೆ ಮತ್ತು ಸಂಘದ ಅಭಿವೃದ್ಧಿ ಮಾತ್ರ ಸೀಮಿತವಾಗದೆ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಒಕ್ಕಲಿಗ ಗೌಡ ಸೇವಾ ಸಂಘವು ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜು.24ರಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಾಗು ಆರೋಗ್ಯ ಕಾಪಾಡುವ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ.

ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯ ಸುಳ್ಯ, ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ ಮತ್ತು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ಶಿಬಿರವು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ಮಧ್ಯಾಹ್ನ ಗಂಟೆ 2ರ ತನಕ ನಡೆಯಲಿದೆ. ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಐಡಿಎ ಪುತ್ತೂರು ಸಮುದಾಯ ದಂತ ಆರೋಗ್ಯ ವಿಭಾಗದ ನಿರ್ದೇಶಕ ಡಾ.ಶ್ರೀಪ್ರಕಾಶ್, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಶಿಬಿರದಲ್ಲಿ ದೊರಕುವ ಸೌಲಭ್ಯ:

ಶಿಬಿರದಲ್ಲಿ ಜನರಲ್ ಮೆಡಿಸಿನ್ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ರೋಗ ವಿಭಾಗ, ಕಿವಿ, ಮೂಗು, ಗಂಟಲು ರೋಗ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಸ್ತ್ರೀ-ರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ದಂತ ಚಿಕಿತ್ಸಾ ವಿಭಾಗಗಳಿದ್ದು, ಆಯುರ್ವೇದ ಮಹಾವಿದ್ಯಾಲಯದ ಸೌಲಭ್ಯಗಳಿಗೆ ಸಂಬಂಧಿಸಿ ಪಂಚಕರ್ಮ, ಕಾಯಚಿಕಿತ್ಸಾ, ಪ್ರಸೂತಿತಂತ್ರ, ಶಲ್ಯತಂತ್ರ, ಕೌಮಾರಭೃತ್ಯ, ಶಾಲಾಕ್ಯತಂತ್ರ ಇತ್ಯಾದಿ ಚಿಕಿತ್ಸಾ ಸೌಲಭ್ಯಗಳು ಶಿಬಿರದಲ್ಲಿ ಲಭ್ಯವಿದೆ. ಚಿಕಿತ್ಸೆಗೆ ಸಂಬಂಧಿಸಿ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಚಿಕಿತ್ಸೆಗೆ ಕೆ.ವಿ.ಜಿ ಆಸ್ಪತ್ರೆಯ ಮುಂದುವರಿಕಾ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here