ಏಕ ಬಳಕೆ ಪ್ಲಾಸ್ಟಿಕ್ ನಿಷೇಧ-ಸಾರ್ವಜನಿಕರಲ್ಲಿ ಜಾಗೃತಿ, ಅಂಗಡಿಗಳಿಗೆ ನೋಟೀಸ್

0

  • ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಕೆಯ್ಯೂರು ಗ್ರಾಮ ಪಂಚಾಯತ್ ಖಡಕ್ ನಿರ್ಣಯ ಕೈಗೊಂಡಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ವ್ಯಾಪಾರ ಮಳಿಗೆಗಳಿಗೆ, ಅಂಗಡಿಮುಂಗಟ್ಟುಗಳಿಗೆ ನೋಟೀಸ್ ನೀಡುವುದು ಎಂದು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಜು.21ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಈಗಾಗಲೇ ಸರಕಾರ ಸುತ್ತೋಲೆ ಕಳುಹಿಸಿದ್ದು ಅದರಂತೆ ಕೆಯ್ಯೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಉಪಯೋಗಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಮಾಲಕರಿಗೆ ನೋಟೀಸ್ ನೀಡುವುದು ಎಂದು ತೀರ್ಮಾನಿಸಲಾಯಿತು.

ಸ್ವಚ್ಛತೆಗೆ ಪ್ರಥಮ ಆದ್ಯತೆ
ಮುಖ್ಯರಸ್ತೆಯನ್ನು ಬಿಟ್ಟು ಗ್ರಾಮದ ಒಳರಸ್ತೆಗಳ ಬದಿಗಳಲ್ಲಿ ಕಸ,ತ್ಯಾಜ್ಯ ಹಾಕಲಾಗುತ್ತಿದ್ದು ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಗ್ರಾಮಸ್ಥರು ಗ್ರಾಪಂನೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಕಾರ್ಯದರ್ಶಿ ಸುರೇಂದ್ರ ರೈಯವರು ತಿಳಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ಹಿಂದಿನಂತೆ ಮಾಡಾವುನಿಂದ ಶಾಲಾ ಬಳಿ ತನಕ ವಿಖಾಯ ತಂಡದವರು, ದೇವಿನಗರ ತನಕ ವಿಶ್ವಹಿಂದೂ ಪರಿಷತ್ತು,ಬಜರಂಗ ದಳದವರು ಹಾಗೂ ಕಟ್ಟತ್ತಾರು ತನಕ ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ವರ್ತಕರ ಸಂಘದವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದು ಈ ಬಗ್ಗೆ ಸಂಘಟನೆಯವರಿಗೆ ವಿಷಯ ತಿಳಿಸುವುದು ಎಂದು ನಿರ್ಣಯಿಸಲಾಯಿತು.

ಶವ ಸಂಸ್ಕಾರಕ್ಕೆ ಸಹಾಯಧನ ಬರುವುದೇ ಇಲ್ಲ
ಶವ ಸಂಸ್ಕಾರಕ್ಕೆ ಸರಕಾರದಿಂದ ಬರುವ ಸಹಾಯಧನ ಬರುತ್ತಾ ಇಲ್ಲ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಪಿಡಿಒರವರು ನಾವು ಪಂಚಾಯತ್‌ನಿಂದ ತುರ್ತು 2 ಸಾವಿರ ನೀಡುತ್ತಿದ್ದೇವೆ ಎಂದರು.

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ
ನೀರಿನ ಬಿಲ್ ಪಾವತಿ ಮಾಡದೇ ಇರುವವರಿಗೆ ಈಗಾಗಲೇ ನೋಟೀಸ್ ನೀಡಿದ್ದರೂ ಕೆಲವು ಮಂದಿ ಬಿಲ್ ಪಾವತಿ ಮಾಡುತ್ತಿಲ್ಲ ಈ ಬಗ್ಗೆ ಗ್ರಾಪಂನಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಬಿಲ್ ಪಾವತಿ ಮಾಡದವರ ನಳ್ಳಿ ಸಂಪರ್ಕ ಕಡಿತಗೊಳಿಸುವುದು ಎಂದು ನಿರ್ಣಯಿಸಲಾಯಿತು. ಜೆ.ಜೆ.ಎಂ ಪೈಪು ಲೈನ್ ಕಾಮಗಾರಿ ಸರಿಯಾಗಿಲ್ಲ ಒಂದೇ ಮನೆಗೆ ೧ಕ್ಕಿಂತ ಹೆಚ್ಚು ನೀರಿನ ಸಂಪರ್ಕಗಳಿವೆ ಎಂಬ ವಿಷಯವು ಸಭೆಯಲ್ಲಿ ವ್ಯಕ್ತವಾಯಿತು.

ಗ್ರಾಪಂ ಉಪಾಧ್ಯಕ್ಷೆ ಗಿರಿಜ ಕಣಿಯಾರು, ಸದಸ್ಯರುಗಳಾದ ಜಯಂತ ಪೂಜಾರಿ ಕೆಂಗುಡೇಲು, ವಿಜಯ ಕುಮಾರ್ ಸಣಂಗಳ, ಶರತ್ ಕುಮಾರ್ ಮಾಡಾವು, ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಅಮಿತಾ ಎಚ್.ರೈ, ಮಮತಾ ರೈ, ಮೀನಾಕ್ಷಿ ವಿ.ರೈ, ಸುಮಿತ್ರಾ ಪಲ್ಲತ್ತಡ್ಕ, ನೆಬಿಸಾರವರುಗಳು ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ನಮಿತಾ ಸರಕಾರದ ಸುತ್ತೋಲೆಗಳು, ಸಾರ್ವಜನಿಕ ಅರ್ಜಿಗಳ ಬಗ್ಗೆ ನಿರ್ಣಯ ದಾಖಲಿಸಿಕೊಂಡರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆಯವರು ಸುತ್ತೋಲೆ, ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಧರ್ಮಣ್ಣ, ಮಾಲತಿ, ಜ್ಯೋತಿ ಸಹಕರಿಸಿದ್ದರು.

ಸ್ವಾತಂತ್ರೋತ್ಸವ ಸಂಭ್ರಮ-ಜು.30 ಕ್ಕೆ ಸಭೆ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಂಭ್ರಮಿಸುವ ಬಗ್ಗೆ ಸಂಘ ಸಂಸ್ಥೆಗಳ ಅಭಿಪ್ರಾಯ ದಾಖಲಿಸಲು ಜು.೩೦ ಕ್ಕೆ ವಿಶೇಷ ಸಭೆಯನ್ನು ಕರೆಯುವುದು ಎಂದು ನಿರ್ಣಯಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಸೇರಿದಂತೆ ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಬಗ್ಗೆ, ಸಾಧಕರನ್ನು ಗುರುತಿಸಿ ಗೌರವಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವುದು ಎಂದು ತೀರ್ಮಾನಿಸಲಾಯಿತು.

ರಾಷ್ಟ್ರಧ್ವಜಕ್ಕೆ ಧಕ್ಕೆ ಬಾರದಿರಲಿ…!
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆ.11 ರಿಂದ 15ರ ತನಕ ಪ್ರತಿ ಮನೆ ಸೇರಿದಂತೆ ದೇವಸ್ಥಾನ, ಚರ್ಚ್,ಮಸೀದಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಹಾಗೂ ರಾಷ್ಟ್ರಧ್ವಜವನ್ನು ಸ್ಥಳೀಯವಾಗಿಯೂ ಹೊಲಿಯಬಹುದು ಅಥವಾ ಸಂಘ ಸಂಸ್ಥೆಯವರು ಕೊಡುಗೆಯಾಗಿಯೂ ಕೊಡಬಹುದು ಎಂಬ ಸರಕಾರದ ಆದೇಶದ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಬ್ದುಲ್ ಖಾದರ್ ಮೇರ್ಲರವರು, ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ, ಘನತೆ, ಬಟ್ಟೆ, ರೂಪುರೇಶೆಗಳಿವೆ, ಇದನ್ನು ಹೊಲಿಯುವುದಕ್ಕೂ ಒಂದು ಕ್ರಮ ಇದೆ. ಇದನ್ನು ಸ್ಥಳೀಯವಾಗಿ ತಯಾರು ಮಾಡುವಾಗ ಧ್ವಜದ ಆಕಾರಕ್ಕೆ ಧಕ್ಕೆ ಬರುವ ಅಪಾಯ ಇದೆ. ಆದ್ದರಿಂದ ಗ್ರಾಪಂನಿಂದಲೇ ಸೂಕ್ತವಾದ ರಾಷ್ಟ್ರಧ್ವಜವನ್ನು ಖರೀದಿಸಿ ಜನರಿಗೆ ಕೊಡುವುದು ಒಳ್ಳೆಯದು ಇಲ್ಲದಿದ್ದರೆ ಧ್ವಜದ ರೂಪಕ್ಕೆ ಧಕ್ಕೆ ಬರುವ ಛಾನ್ಸ್ ಇದೆ. ಧ್ವಜದ ಗೌರವಕ್ಕೆ ಧಕ್ಕೆ ಬರದ ರೀತಿಯಲ್ಲಿ ಧ್ವಜ ಕೊಡುವುದು ಒಳ್ಳೆಯದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here