ಗಾಯದ ಮೇಲೆ ಬರೆ ಎಳೆಯುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ-ಪತ್ರಿಕಾಗೋಷ್ಠಿಯಲ್ಲಿ ಡಾ.ರಾಜಾರಾಮ್ ಕೆ.ಬಿ. ಆರೋಪ

0

ವಿಟ್ಲ: ಪದೇ ಪದೇ ಗಾಯದ ಮೇಲೆ ಬರೆ ಎಳೆಯುವ ಕೆಲಸಕಾರ್ಯ ಈ ಬಿಜೆಪಿ ಸರಕಾರದಿಂದ ಆಗುತ್ತಿದೆ. ಬೆಲೆ ಏರಿಕೆ, ಅವೈಜ್ಞಾನಿಕ ಕೆಲ ಮಸೂದೆಗಳಿಂದ ಜನಸಾಮಾನ್ಯರಿಗೆ ನಿತ್ಯ ನಿರಂತರ  ತೊಂದರೆ ನೀಡಲಾಗುತ್ತಿತ್ತು. ಇದೀಗ ಜನಸಾಮಾನ್ಯರು ಬಳಸುವ ದಿನಬಳಕೆ ವಸ್ತುಗಳಿಗೆ ಜಿಎಸ್ ಟಿಯ ಹೊರೆ ಹೊರಿಸಿ ಜನರನ್ನು ತೀರ ಸಂಕಷ್ಟಕರ ಸ್ಥಿತಿಗೆ ತಂದ ಬಿಜೆಪಿ ಸರಕಾರದ ಈ ದೋರಣೆ ನಿಜವಾಗಿಯೂ ಖಂಡನೀಯ ಅದನ್ನು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಭಲವಾಗಿ ಖಂಡಿಸುತ್ತದೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು  ಜನಸಾಮಾನ್ಯರ ಮೇಲಿನ ಖಾಳಜಿಯಿಂದ ಹೇರಿರುವ ಜಿ.ಎಸ್.ಟಿ ಎನ್ನುವ ಹೊರೆಯನ್ನು ಕೂಡಲೇ ಹಿಂಒಡೆಯಬೇಕು ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ.ರವರು ಆಗ್ರಹಿಸಿದರು.

ಅವರು ಜು.20ರಂದು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಹಾಲು, ಮೊಸರು ಮಜ್ಜಿಗೆಗೂ ಸಾಲದೆಂಬಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ‌ ಮೇಲೂ ಜಿಎಸ್.ಟಿ ವಕ್ರದೃಷ್ಟಿ‌ ಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಹಗಲು ದರೋಡೆ ಮಾಡಲು ಜಿಎಸ್.ಟಿ ಒಂದು ಅಸ್ತ್ರವಷ್ಟೆ. ಇದೇನಾ ಮೋದಿಯವರ ಅಚ್ಛೆದಿನ್, ಬಡವರು‌ ತಿನ್ನುವ ಅನ್ನಕ್ಕೂ ತೆರಿಗೆ ಹಾಕುವ ನಿಮ್ಮ ಸರ್ಕಾರ ಅದ್ಯಾವ ಸೀಮೆಯ ಬಡವರ ಪರ ಸರ್ಕಾರ ಎಂದವರು ಪ್ರಶ್ನಿಸಿದರು.

ಎಲ್ಲಾ ರಾಜ್ಯಗಳ ಸಮ್ಮತಿಯ ಮೇರೆಗೆ ದಿನಬಳಕೆ ವಸ್ತುಗಳ ಮೇಲೆ ಜಿಎಸ್.ಟಿ ವಿಧಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಇದು ಜಿಎಸ್.ಟಿ ಹೇರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ತೋರಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೆ. ಜಿಎಸ್.ಟಿ ಮಂಡಳಿಯಲ್ಲಿ ಬಿಜೆಪಿಯೇತರ ರಾಜ್ಯಗಳು ಎಷ್ಟಿವೆ.ಬಿಜೆಪಿ ಯ 25 ಸಂಸದರನ್ನು ಆಯ್ಕೆ ಮಾಡಿದ ರಾಜ್ಯದ ಜನರಿಗೆ ಇದೇನಾ ಪ್ರತಿಫಲ. ಬಿಜೆಪಿಯವರೆ ಡಬಲ್ ಇಂಜೀನ್ ಸರ್ಕಾರದ ಸ್ವರ್ಗಸೃಷ್ಟಿಯೆಂದರೆ ರಾಜ್ಯಕ್ಕೆ ಅನ್ಯಾಯವೆಸಗುವುದೆ ಎಂದು ಪ್ರಶ್ನಿಸಿದರು.

ಇಡೀ ದೇಶದಲ್ಲೇ ಕರ್ನಾಟಕ ಜಿಎಸ್.ಟಿ ಪಾವತಿಯಲ್ಲಿ 2ನೇ ಸ್ಥಾನದಲ್ಲಿದೆ. ಆದರೂ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್.ಟಿ ಪರಿಹಾರ ಸಿಕ್ಕಿದ್ದು ಕೇವಲ 62,896 ಕೋಟಿ ರೂಪಾಯಿ ಮಾತ್ರ. ಎಲ್ಲಕ್ಕಿಂತ ಹೆಚ್ಚಾಗಿ 2 ವರ್ಷ ನಿರಂತರವಾಗಿ ಕಾಡಿದ ಕೋವಿಡ್‌ ನಿಂದಾಗಿ ಕುಸಿದಿರುವ ರಾಜ್ಯದ ಆರ್ಥಿಕ ಸ್ಥಿತಿ ಇನ್ನೂ ಸುಧಾರಿಸಿಲ್ಲ.

ಈ ಮಧ್ಯೆ ಅತಿಯಾದ ತೆರಿಗೆ ಹಾಗೂ ಬೆಲೆ ಏರಿಕೆಯಿಂದ ರಾಜ್ಯದ ಜನ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇನ್ನು 5 ವರ್ಷ ಜಿಎಸ್.ಟಿ ಪರಿಹಾರ ನೀಡುವುದನ್ನು ಮುಂದುವರಿಸಬೇಕು ಎಂಬ ರಾಜ್ಯಗಳ ಮನವಿಗೆ ಕೇಂದ್ರ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕೇಂದ್ರ ಸರ್ಕಾರದ್ದು ಇದೆಂಥ ಸರ್ವಾಧಿಕಾರಿ ಧೋರಣೆ ಎಂದು ಪ್ರಶ್ನಿಸಿದ ಅವರು ಭಾವನಾತ್ಮಕವಾಗಿ ಜನರನ್ನು ವಿಗಡಿಸುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ.

ಅವರು ಮಾಡುವ ಕುತಂತ್ರಗಳನ್ನು ರಾಜ್ಯದ ಜನತೆ ಇದೀಗಾಗಲೇ ಅರ್ಥೈಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಶ್ರಫ್ ಬಸ್ತಿಕಾರ್, ವಕ್ತಾರ ರಮಾನಾಥ ವಿಟ್ಲ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here