ಬೆಳ್ಳಾರೆ:ಅಂಗಡಿ ಬಳಿ ತಾಗಿದ ವಿಚಾರ-ತಂಡದಿಂದ ಹಲ್ಲೆಗೊಳಗಾಗಿದ್ದ ಕಾಸರಗೋಡು ಮೂಲದ ಯುವಕ ಮೃತ್ಯು- ಕೊಲೆ ಪ್ರಕರಣ: 8 ಮಂದಿ ಬಂಧನ

0

 

 


ಪುತ್ತೂರು: ಬೆಳ್ಳಾರೆ ಸಮೀಪ ಕಳೆಂಜ ಗ್ರಾಮದ ವಿಷ್ಣುನಗರದಲ್ಲಿ ತಂಡದಿಂದ ಹಲ್ಲೆಗೊಳಗಾಗಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಜು.೨೧ರಂದು ಮೃತಪಟ್ಟಿದ್ದಾರೆ.ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ೮ ಮಂದಿ ಆರೋಪಿಗಳನ್ನೂ ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್ ಬಿ.(೧೮ವ.)ಮೃತಪಟ್ಟ ಯುವಕ.ಸುನಿಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್‌ರಂಜಿತ್, ಭಾಸ್ಕರ ಬಂಧಿತ ಆರೋಪಿಗಳು.
ಘಟನೆ ಕುರಿತು ಪೆರುವಾಜೆ ಗ್ರಾಮದ ಪೆಲತ್ತಡ್ಕ ಹನೀಫ್ ಕಳಂಜ ಎಂಬವರ ಮಗ ಇಬ್ರಾಹಿಂ ಶಾನಿಫ್ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ಕಾಸರಗೋಡು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ತಿಂಗಳ ಹಿಂದೆ ಬೆಳ್ಳಾರೆ ಸಮೀಪದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ರಿ ಎಂಬವರ ಮನೆಗೆ ಬಂದು, ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದ.ಜು.೧೯ರಂದು ನಾನು ಅಜ್ಜಿ ಮನೆಯಾದ ಕಳಂಜದಲ್ಲಿರುವ ಸಮಯ ವಿಷ್ಣು ನಗರ ಬಸ್ಸು ನಿಲ್ದಾಣದ ಬಳಿ ಜನ ಗುಂಪು ಸೇರಿರುವುದನ್ನು ಕಂಡು ರಸ್ತೆಗೆ ಬಂದಾಗ ಅಲ್ಲಿ ಪರಿಚಯದ ಅಭಿಲಾಶ್,ಸುನೀಲ್,ಸುಧೀರ್,ಶಿವ,ರಂಜಿತ್,ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರರವರು ಇದ್ದರು.ಅವರು ನನ್ನನ್ನು ಕರೆದು, ಸಂಜೆಯ ವೇಳೆ ಸುಧೀರನಿಗೆ ಮಸೂದನು ಅಂಗಡಿಯ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡು ಬಳಿಕ ಮಸೂದನು ಸುಧೀರನಿಗೆ ಬಾಟಲ್ ತೋರಿಸಿ ಬೆದರಿಕೆ ಹಾಕಿರುವುದಾಗಿ ಹೇಳಿ, ನೀನು ಮಸೂದನನ್ನು ಕರೆದುಕೊಂಡು ಬಾ, ನಾವು ಮಾತನಾಡಿ ಮುಗಿಸುವ ಎಂದು ಹೇಳಿದ್ದರು.ಅದರಂತೆ ನಾನು ಮಸೂದ್‌ನ ಅಜ್ಜಿ ಮನೆಗೆ ಹೋಗಿ ಆತನನ್ನು ವಿಷ್ಣು ನಗರಕ್ಕೆ ಕರೆದುಕೊಂಡು ಬಂದಾಗ ಸಮಯ ಸುಮಾರು ರಾತ್ರಿ ೧೧ ಗಂಟೆಗೆ ಆರೋಪಿತರು ಒಟ್ಟು ಸೇರಿ ಏಕಾಎಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದರು.ಆಗ ನಾನು, ಹೊಡೆಯಬೇಡಿ ಎಂದು ಹೇಳಿ ಮಸೂದನನ್ನು ಗಟ್ಟಿಯಾಗಿ ತಬ್ಬಿಕೊಂಡಾಗ ದೂಡಾಟವಾಗಿ ನಾನು ಮತ್ತು ಮಸೂದನು ನೆಲಕ್ಕೆ ಬಿದ್ದಿದ್ದು ಬಿದ್ದಲ್ಲಿಗೆ ಅವರೆಲ್ಲರೂ ಕಾಲಿನಿಂದ ತುಳಿದು ಅವರ ಪೈಕಿ ಅಭಿಲಾಶ ಅಲ್ಲಿ ಬಿದ್ದುಕೊಂಡಿದ್ದ ಖಾಲಿ ಜ್ಯೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದರು.ಆಗ ನಾನು ಮಸೂದನಲ್ಲಿ ಓಡಿ ತಪ್ಪಿಸಿಕೊಳ್ಳಲು ಹೇಳಿದ್ದು ಆತ ಅಲ್ಲಿಂದ ಓಡಿ ಹೋಗಿದ್ದ.ಬಳಿಕ ನಾನು ಮತ್ತು ಅವರ ಕಡೆಯವರು ಮಸೂದನನ್ನು ಹುಡುಕುತ್ತಿರುವ ಸಮಯ ಜು.೨೦ರಂದು ರಾತ್ರಿ ೧.೩೦ ಗಂಟೆಗೆ ಅಲ್ಲಿಯೇ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಮಸೂದನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಅವನನ್ನು ಉಪಚರಿಸಿ ಕಾರಿನಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಹೋಗುವಂತೆ ಸೂಚಿಸಿದ್ದರು.ಅದರಂತೆ ಮಂಗಳೂರಿನ ಫಸ್ಟ್ ನ್ಯೊರೋ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಸೂದನಿಗೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಇಬ್ರಾಹಿಂ ಶಾನಿಫ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.ಈ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಗಾಯಾಳು ಮಸೂದ್ ಸಾವು ಕೊಲೆ ಪ್ರಕರಣ ದಾಖಲು: ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್‌ರವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದರಿಂದ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬೆಳ್ಳಾರೆ ಠಾಣಾ ಎಸ್.ಐ.ರುಕ್ಮ ನಾಯ್ಕ್ ಮತ್ತು ಸಿಬ್ಬಂದಿಗಳು ಎಲ್ಲ ೮ ಮಂದಿ ಆರೋಪಿಗಳನ್ನೂ ಬಂಧಿಸಿದ್ದಾರೆ.
ಬೆಳ್ಳಾರೆ ಮಸೀದಿಯಲ್ಲಿ ಮೃತದೇಹದ ದಫನ ಕಾರ್ಯ: ತಂಡದಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕ ಮಸೂದ್ ಅವರ ಮೃತದೇಹದ ದಫನ ಕಾರ್ಯ ಬೆಳ್ಳಾರೆ ಝಕಾರಿಯ ಮಸೀದಿಯಲ್ಲಿ ನಡೆಯಿತು.
ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನು ಕೆಲ ಕಾಲ ಹೊರತೆಗೆಯಲು ಅವಕಾಶ ನೀಡಿಲ್ಲ.ಮೃತ ಯುವಕನ ಕುಟುಂಬಕ್ಕೆ ಪರಿಹಾರ ದೊರಕಿಸಬೇಕು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿತ್ತು.ಬಳಿಕ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದ ನಂತರ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಯಿತು.ಆಸ್ಪತ್ರೆ ಬಳಿ ಇನ್ನೂರಕ್ಕಿಂತಲೂ ಅಧಿಕ ಮಂದಿ ಜಮಾಯಿಸಿದ್ದರು.
ಆರೋಪಿಗಳಿಗೆ ನ್ಯಾಯಾಂಗ ಬಂಧನ: ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಹೆಚ್ಚುವರಿ ಪೊಲೀಸ್: ಘಟನೆ ಬಳಿಕದ ಬೆಳವಣಿಗೆಯಲ್ಲಿ ತುಸು ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಬೆಳ್ಳಾರೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಬೆಳ್ಳಾರೆ ಸುತ್ತ ಮುತ್ತ ಹಾಗೂ ಸವಣೂರಿನಲ್ಲಿ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.
2 ತಿಂಗಳಲ್ಲಿ 2 ಕೊಲೆ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಕಳೆದ ತಿಂಗಳು ಮೊದಲ ವಾರದಲ್ಲಿ ಚರಣ್‌ರಾಜ್ ರೈ ಎಂಬಾತನ ಹತ್ಯೆ ನಡೆದಿತ್ತು.
ಇದೀಗ ಹಲ್ಲೆಗೊಳಗಾದ ಗಾಯಾಳು ಮಸೂದ್ ಮೃತಪಟ್ಟಿದ್ದು,ಠಾಣಾ ವ್ಯಾಪ್ತಿಯಲ್ಲಿ ಎರಡು ತಿಂಗಳಲ್ಲಿ ಎರಡನೇ ಕೊಲೆ ಪ್ರಕರಣ ಇದಾಗಿದೆ.

LEAVE A REPLY

Please enter your comment!
Please enter your name here