ಶಿರಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ, ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಕೆ

0

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟ್‌ನಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರ ತನಕ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಆದರೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.

 


ಸಕಲೇಶಪುರ ತಾಲೂಕಿನ ದೊಣಿಗಲ್‌ನಲ್ಲಿ ಹೆದ್ದಾರಿ ಕುಸಿತಗೊಂಡ ಹಿನ್ನೆಲೆಯಲ್ಲಿ ಜು.೧೫ರಿಂದ ಶಿರಾಡಿ ಘಾಟ್‌ನ ದೊಣಿಗಲ್-ಹೆಗ್ಗದ್ದೆ ಮಧ್ಯೆ ವಾಹನ ಸಂಚಾರ ನಿರ್ಬಂಧಿಸಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರವರು ಈ ಹಿಂದೆ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಗುಂಡ್ಯ ಗೇಟ್‌ನಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು. ಇದೀಗ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರವರು ಜು.೨೧ರಂದು ಹೊಸದಾಗಿ ಆದೇಶ ಹೊರಡಿಸಿದ್ದಾರೆ. ಪರಿಷ್ಕೃತ ಆದೇಶದಂತೆ ಕಾರು, ಜೀಪು, ಟೆಂಪೋ, ಮಿನಿವ್ಯಾನ್, ದ್ವಿಚಕ್ರ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ಬಸ್ಸುಗಳು, ರಾಜಹಂಸ, ಐರಾವತ, 6 ಚಕ್ರದ ವಾಹನಗಳು ಹಾಗೂ 20 ಟನ್ ಸಾಮರ್ಥ್ಯದ ಸರಕು ವಾಹನಗಳಿಗೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆಂಬುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳಿಗೆ ದಿನದ 24 ಗಂಟೆಯೂ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೋ, ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಏಕ್ಸೆಲ್ ಟ್ರಕ್, ಟ್ರೈಲರ್ ಮತ್ತು ಎಲ್ಲಾ ಬಗೆಯ 20 ಟನ್‌ಗಿಂತ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here