ಸಂಪೂರ್ಣ ಹದಗೆಟ್ಟಿರುವ ಹೊಸಮಠ-ಉಳಿಪ್ಪು ಕೂಡಿಗೆ ರಸ್ತೆ ; ನಾಗರಿಕರಿಂದ ದುರಸ್ತಿ ಕಾರ್ಯ

0

ರಸ್ತೆ ಅಭಿವೃದ್ದಿ ಮಾಡದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ, ಉಗ್ರ ಹೋರಾಟದ ಎಚ್ಚರಿಕೆ

ಕಡಬ: ಕುಟ್ರುಪಾಡಿ ಗ್ರಾಮದ ವಾಳ್ಯ-ಉಳಿಪ್ಪು-ಕೂಡಿಗೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ವಾಳ್ಯದಿಂದ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯನ್ನು ಈ ಬಾರಿ ಅಭಿವೃದ್ದಿ ಪಡಿಸದಿದ್ದರೆ, ಚುನಾವಣೆ ಬಹಿಷ್ಕಾರ ಸೇರಿದಂತೆ ವಿವಿಧ ರೀತಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಅಲ್ಲಿನ ನಾಗರಿಕರು ತಿಳಿಸಿದ್ದಾರೆ.

ಹದಗೆಟ್ಟ ರಸ್ತೆಯನ್ನು ನಾಗರಿಕರು ಒಟ್ಟು ಸೇರಿ ಜು.21ರಂದು ದುರಸ್ತಿ ಮಾಡಿದರು. ರಸ್ತೆಯು ಅಲ್ಲಲ್ಲಿ ಕೆಟ್ಟು ಹೋಗಿರುವುದರಿಂದ ವಾಹನ ಸಂಚರಿಸಲು ತೊಂದರೆಯಾಗಿದೆ. ಹೊಸಮಠದಿಂದ ಉಳಿಪ್ಪು- ಕೂಡಿಗೆಯವರೆಗೆ ಸುಮಾರು 6 ಕಿ.ಮೀ. ಇದ್ದು, ಇದರಲ್ಲಿ ಈಗಾಗಲೇ ವಾಳ್ಯದವರೆಗೆ ರಸ್ತೆ ಡಾಮರೀಕರಣ, ಕಾಂಕ್ರೀಟ್ ಮಾಡಲಾಗಿದೆ. ಆದರೆ ಇನ್ನೂ 4 ಕೀ.ಮೀ ಅಂದಾಜು ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಉಳಿಪ್ಪು ಭಾಗದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಮನೆಗಳು ಇದ್ದು ಈ ಭಾಗದವರಿಗೆ ಈ ಏಕೈಕ ರಸ್ತೆ ಮಾತ್ರ ಇದ್ದು ಎಲ್ಲ ಜನರು ಈ ರಸ್ತೆಯನ್ನು ಅವಲಂಬಿಸುವಂತಾಗಿದೆ.

12 ವರ್ಷದಿಂದ ನಿರಂತರ ಹೋರಾಟ

ಈ ರಸ್ತೆಯ ಅಭಿವೃದ್ದಿಗೆ ಸುಮಾರು 40 ವರ್ಷಗಳಿಂದ ಬೇಡಿಕೆ ಇಡಲಾಗಿದೆ, ಕಳೆದ 12 ವರ್ಷಗಳಿಂದ ಶಾಸಕರಿಗೆ, ಸಂಸದರಿಗೆ, ಅಧಿಕಾರಿಗಳಿಗೆ ಮನವಿ, ಪ್ರತಿಭಟನೆ, ಒತ್ತಡಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಯಾರು ಕೂಡ ಈ ರಸ್ತೆ ಅಭಿವೃದ್ದಿ ಬಗ್ಗೆ ತಲೆಗೆಡಿಸಿಕೊಂಡಿಲ್ಲ. ಪಂಚಾಯತ್ ನಿಂದ 5-10 ಸಾವಿರ ದುರಸ್ತಿಗೆ ಇಟ್ಟರೆ ಅದರಿಂದ ಏನು ಪ್ರಯೋಜನ ಎಂದು ಆ ಭಾಗದ ಜನರು ಆರೋಪಿಸುತ್ತಿದ್ದಾರೆ.

ಮಳೆಗಾಲದಲ್ಲಿ ಹರ ಸಾಹಸಪಡುತ್ತಿರುವ ಶಾಲಾ ವಿದ್ಯಾರ್ಥಿಗಳು

ಮಳೆಗಾಳದಲ್ಲಿ ಈ ರಸ್ತೆಯ ಪರಿಸ್ಥಿತಿಯನ್ನು ಹೇಳತೀರದು, ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳು ಕೆಸರಿನ ಸಿಂಚನದೊಂದಿಗೆ ಶಾಲೆ ಸೇರಬೇಕಾಗುತ್ತದೆ. ಅಲ್ಲಲ್ಲಿ ನೀರು ನಿಂತು ರಸ್ತೆಯೇ ಸಂಪೂರ್ಣ ಕೆಸರುಮಯವಾಗಿದೆ.

ರಸ್ತೆಗೆ ಕಲ್ಲು ಹಾಕಿ ಗ್ರಾಮಸ್ಥರಿಂದಲೇ ದುರಸ್ತಿ

ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ರಸ್ತೆಯೆಲ್ಲ ಕೆಸರುಮಯವಾಗಿದ್ದು ಸಂಚಾರವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು, ಈ ಹಿನ್ನಲೆಯಲ್ಲಿ ಜು.21ರಂದು ನಾಗರಿಕರು ಒಟ್ಟು ಸೇರಿ ಸ್ಥಳೀಯ ಪರಿಸರದಿಂದ ಕಲ್ಲುಗಳನ್ನು ಸಂಗ್ರಹಿಸಿ ರಸ್ತೆಗೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಚುನಾವಣೆ ಬಹಿಷ್ಕಾರ, ಉಗ್ರ ಹೋರಾಟ-ಎಲ್ಸಿ ತೋಮಸ್

ಈ ಬಗ್ಗೆ ಮಾಜಿ ಗ್ರಾ.ಪಂ. ಸದಸ್ಯೆ, ಸಾಮಾಜಿಕ ಹೋರಾಟಗಾರ್ತಿ ಎಲ್ಸಿ ತೋಮಸ್ ಅವರು ಮಾತನಾಡಿ, ಕಳೆದ 40 ವರ್ಷಗಳಿಂದ ಈ ರಸ್ತೆ ದುರಸ್ತಿಯ ಬಗ್ಗೆ ಬೇಡಿಕೆಯನ್ನು ಇಡಲಾಗಿದೆ, ಕಳೆದ 12 ವರ್ಷಗಳಿಂದ ಅಂತೂ ನಿರಂತರವಾಗಿ ಒಂದಿಲ್ಲವೊಂದು ಹೋರಾಟ ಮಾಡುತ್ತಲೆ ಬಂದಿದ್ದೇವೆ, ಸತತ ಮನವಿಯನ್ನೂ ನೀಡಿದ್ದೇವೆ. ಆದರೆ ನಮ್ಮ ಕೂಗನ್ನು ಯಾರು ಕೇಳುತ್ತಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿದೆ, ಯಾವುದೇ ಪ್ರಯೋಜನವಾಗಿಲ್ಲ ಎಂದ ಎಲ್ಸಿಯವರು, ಅಭಿವೃದ್ದಿ ಕಾಣದ ವಾಳ್ಯ-ಉಳಿಪ್ಪು-ಕೂಡಿಗೆ ರಸ್ತೆಯನ್ನು ಈ ಬಾರಿ ಅಭಿವೃದ್ದಿಪಡಿಸಲು ಅನುದಾನ ಮಂಜೂರು ಮಾಡದಿದ್ದರೆ, ಮುಂದಿನ 2024ರ ಚುನಾವಣೆಯನ್ನು ಬಹಿಷ್ಕರಿಸಿ, ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ಸಲ್ಲಿಸಲಿದ್ದೇವೆ. ಯಾವುದೇ ಕಾರಣಕ್ಕೆ ನಾವು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ನಮಗೆ ರಸ್ತೆಯೇ ಮುಖ್ಯವಾಗಿದೆ. ದಿನಂಪ್ರತಿ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಲಾಗಿ ಹೋಗಿದೆ, ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ನಾವು ಒಟ್ಟು ಸೇರಿ ಹೋರಾಟದ ಬಗ್ಗೆ ರೂಪುರೇಷೆ ಸಿದ್ದಪಡಿಸುತ್ತೇವೆ ಎಂದು ಎಲ್ಸಿ ತೋಮಸ್ ಹೇಳಿದ್ದಾರೆ.

 

ಅನುದಾನ ತರಲು ಸರ್ವ ಪ್ರಯತ್ನ-ಕಿರಣ್ ಗೋಗಟೆ

ಈ ಬಗ್ಗೆ ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಕಿರಣ್ ಗೋಗಟೆಯವರು ಪ್ರತಿಕ್ರಿಯೆ ನೀಡಿ, ಈಗಾಗಲೇ ಹೊಸಮಠದಿಂದ ವಾಳ್ಯ ತನಕ ರಸ್ತೆ ಅಭಿವೃದ್ದಿ ಆಗಿದೆ, ಕಳೆದ ಬಾರಿಯು ವಾಳ್ಯದಲ್ಲಿ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ. ಮುಂದೆಯೂ ರಸ್ತೆ ಅಭಿವೃದ್ದಿ ಆಗಬೇಕಿದೆ. ಈ ಬಗ್ಗೆ ಸಚಿವ ಎಸ್.ಅಂಗಾರ ಅವರಿಗೆ ಮನವರಿಕೆ ಮಾಡಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ದಿ ಆಗಬಹುದು ಎನ್ನುವ ಭರವಸೆ ಇದೆ. ನಾವು ಗ್ರಾ.ಪಂ.ನಿಂದಲೂ ತುರ್ತು ಕಾಮಗಾರಿ ನಡೆಸಿದ್ದೇವೆ. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಚಿವ ಅಂಗಾರ ಅವರಿಗೆ ಮಳೆ ಹಾನಿಯಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಭಾಗದ ಜನರಿಗೆ ಏಕೈಕ ರಸ್ತೆಯಾಗಿರುವುದರಿಂದ ಈ ರಸ್ತೆ ಬಹಳ ಅಗತ್ಯವಾಗಿ ಅಭಿವೃದ್ದಿ ಆಗಬೇಕಿದೆ. ಈ ರಸ್ತೆ ಅಭಿವೃದ್ದಿ ಬಗ್ಗೆ ಊರವರ ಜತೆ ಸೇರಿಕೊಂಡು ನಾನು ಕೂಡ ಪ್ರಯತ್ನಪಡುತ್ತೇನೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here