ಸಕಾಲಕ್ಕೆ ಬಾರದ ನಗರಸಭೆ ಸಕಾಲ ಸಿಬ್ಬಂದಿ; ಅರ್ಜಿಯ ಕುರಿತು ತಪ್ಪು ಮಾಹಿತಿ -ದೂರು

0

ಪುತ್ತೂರು:ನಗರಸಭೆಯ ಸಕಾಲ ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಬಾರದಿರುವುದು ಮತ್ತು ಸಕಾಲದ ಅರ್ಜಿಯ ಕುರಿತು ತಪ್ಪು ಮಾಹಿತಿ ನೀಡುತ್ತಿರುವುದಾಗಿ ಆರೋಪಿಸಿ ಹಾರಾಡಿಯ ಆರ್.ಕೆ.ಪಾಂಗಣ್ಣಾಯ ಅವರು ಪುತ್ತೂರು ನಗರಸಭೆ ಪೌರಾಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಸ್ನೇಹಿತರೊಬ್ಬರ ಮಗುವಿನ ಜನನ ರಿಜಿಸ್ತ್ರಿಯ ನಕಲು ಪಡೆಯಲು ಅರ್ಜಿ ಸಲ್ಲಿಸಲೆಂದು ಮಧ್ಯಾಹ್ನ 2.37ಕ್ಕೆ ಬಂದಾಗ ಕಚೇರಿಯ ಸಕಾಲದ ಸಿಬ್ಬಂದಿ ಆ ಸಮಯಕ್ಕೆ ಸ್ಥಳದಲ್ಲಿ ಇರಲಿಲ್ಲ. ಸದ್ರಿ ಸಿಬ್ಬಂದಿ 3.04ಕ್ಕೆ ಬಂದು ಅರ್ಜಿ ಸ್ವೀಕರಿಸಿ ರೂ.10 ಪಡೆದು 10 ದಿನಗಳ ಬಳಿಕ ಅರ್ಜಿಯ ಪ್ರತಿಯೊಂದಿಗೆ ಬರುವಂತೆ ಸೂಚಿಸಿರುತ್ತಾರೆ.ಅವರಲ್ಲಿ ಸ್ವೀಕೃತಿ ಕೇಳಿದಾಗ ಸ್ವೀಕೃತಿ ಪತ್ರವನ್ನು ಅರ್ಧ ಕತ್ತರಿಸಿ ನೀಡಿದ್ದಾರೆ. ಅವರು ನೀಡಿದ ಸ್ವೀಕೃತಿಯಲ್ಲಿ ‘ಜನನ ರಿಜಿಸ್ತ್ರಿಯ ನಕಲನ್ನು ಯಾವಾಗ ನೀಡಲಾಗುವುದು’ ಎಂಬ ಗೆರೆಯನ್ನು ತುಂಡು ಮಾಡಿ ನೀಡಿದ್ದಾರೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಸಕಾಲದ ಸಿಬ್ಬಂದಿಗಳು ಸಕಾಲದಲ್ಲಿ ಕಚೇರಿಗೆ ಹಾಜರಾಗದೇ ಜನಗಳನ್ನು ಮೋಸ ಪಡಿಸುವ ರೀತಿಯಲ್ಲಿ ವರ್ತಿಸುವುದು ಕಾನೂನು ಬಾಹಿರವಾಗಿರುತ್ತದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಮತ್ತು ಕೈಗೊಂಡ ಕ್ರಮದ ಕುರಿತು ತನಗೆ ತಿಳಿಸುವಂತೆ ಆರ್.ಕೆ.ಪಾಂಗಣ್ಣಾಯ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here