`ಜಾರು ಜಾಗೃತೆ…!?’ ತಿಂಗಳಾಡಿ ಎಟಿಎಂಗೆ ಹೀಗೊಂದು ಮೆಟ್ಟಿಲು…?!

0

ಪುತ್ತೂರು: ಪ್ರತಿದಿನ ನೂರಾರು ಮಂದಿ ಬಂದು ಹಣ ಡ್ರಾ ಮಾಡಿಕೊಂಡು ಹೋಗುವ ಎ.ಟಿ.ಎಂ.ಗೆ ಅವೈಜ್ಞಾನಿಕ ರೀತಿಯ ಮೆಟ್ಟಿಲು ನಿರ್ಮಿಸಿ ಜನರು ಬಿದ್ದು ಎದ್ದುಕೊಂಡು ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಕೆನರಾ ಬ್ಯಾಂಕ್‌ನ ತಿಂಗಳಾಡಿ ಶಾಖೆಯ ಎ.ಟಿ.ಎಂ ತಿಂಗಳಾಡಿ ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದು ಈ ಎ.ಟಿ.ಎಂಗೆ ಅವೈಜ್ಞಾನಿಕ ರೀತಿಯ ಮೆಟ್ಟಿಲು ನಿರ್ಮಿಸಿದ್ದಾರೆ.

ವಿಶೇಷ ಚೇತನರು ಅಥವಾ ವೀಲ್ ಚೆಯರ್‌ನಲ್ಲಿ ಓಡಾಡುವವರು ಕೂಡ ಎ.ಟಿ.ಎಂಗೆ ಬಂದು ಹಣ ಡ್ರಾ ಮಾಡಿಕೊಂಡು ಹೋಗಲು ಸಹಾಯಕವಾಗುವ ರೀತಿಯಲ್ಲಿ ಇಳಿಜಾರು ಮೆಟ್ಟಿಲು ನಿರ್ಮಿಸಬೇಕು ಎಂದು ಬ್ಯಾಂಕ್‌ನವರಿಗೆ ಮೇಲಾಧಿಕಾರಿಗಳ ಆದೇಶದ ಮೇರೆಗೆ ಈ ಮೆಟ್ಟಿಲು ನಿರ್ಮಿಸಲಾಗಿದೆ. ಇಳಿಜಾರು ಮೆಟ್ಟಿಲನ್ನು ಅಲ್ಲಿಂದ ಅಲ್ಲಿಗೆ ಎತ್ತರವಾಗಿ ಮಾಡಿದ್ದರಿಂದ ಇದರ ಮೇಲೆ ವೀಲ್ ಚೆಯರ್ ಕೂಡ ಚಲಿಸಲು ಕಷ್ಟವಿದೆ. ಇದಲ್ಲದೆ ಎ.ಟಿ.ಎಂಗೆ ಬೇರೆ ಯಾವುದೇ ಮೆಟ್ಟಿಲು ಇಲ್ಲದೆ ಇರುವುದರಿಂದ ವೃದ್ದರಿಗೆ, ಮಹಿಳೆಯರಿಗೆ ಈ ಇಳಿಜಾರು ಮೆಟ್ಟಿಲುಗಳಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಮಳೆಗಾಲವಾಗಿರುವುದರಿಂದ ಜಾರಿ ಬೀಳುವ ಅಪಾಯವೂ ಇದೆ. ಪ್ರಾಯಸ್ಥರಿಗೆ ಎ.ಟಿ.ಎಂಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮೆಟ್ಟಿಲು ನಿರ್ಮಾಣದ ಸಮಯದಲ್ಲೂ ಇದರಿಂದ ಜನರಿಗೆ ತೊಂದರೆಯಾಗಬಹುದು ಎಂದು ಕಂಟ್ರಾಕ್ಟ್‌ದಾರರು ಬ್ಯಾಂಕ್‌ನವರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಈ ಬಗ್ಗೆ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಬ್ಯಾಂಕ್‌ನವರ ಗಮಕ್ಕೆ ತಂದಿದ್ದು ಈ ರೀತಿ ಮೆಟ್ಟಿಲು ಮಾಡಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ, ಇದನ್ನು ಸರಿಪಡಿಸಿ ಎಂದಿದ್ದಾರೆ. ಆದರೂ ಸರಿಪಡಿಸುವ ಕೆಲಸ ಆಗಿಲ್ಲ. ಈ ಅವೈಜ್ಞಾನಿಕ ಮೆಟ್ಟಿಲುಗಳನ್ನು ಹತ್ತಿ ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ?.

LEAVE A REPLY

Please enter your comment!
Please enter your name here