ಸವಣೂರು ಗ್ರಾ.ಪಂ.ಸಾಮಾನ್ಯ ಸಭೆ-ಕೆರೆಯ ಜಾಗ ಒತ್ತುವರಿ ತೆರವು ಮಾಡುವವರೆಗೂ ಒಗ್ಗಟ್ಟಿನ ಹೋರಾಟಕ್ಕೆ ನಿರ್ಧಾರ

0

ಸವಣೂರು : ಸವಣೂರು ಗ್ರಾಮದ ಕಂಚಿಕೆರೆಯ ಸುತ್ತಲಿನ ಸರಕಾರಿ ಜಾಗವನ್ನು ಒತ್ತುವರಿ ತೆರವು ಮಾಡುವವರೆಗೂ ಒಗ್ಗಟ್ಟಿನ ಹಾಗೂ ಒಮ್ಮತದ ಹೋರಾಟಕ್ಕೆ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ನಿರ್ಧರಿಸಿದೆ.

 

ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕುಮಾರದಾರ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಸದಸ್ಯ ಭರತ್‌ ರೈ ಅವರು ಯಾವುದೇ ಮಸ್ಯೆ ಬಂದರೂ ಒಗ್ಗಟ್ಟಿನಿಂದ ನಾವು ಅದರ ಪರಿಹಾರಕ್ಕೆ ಮುಂದಾಗಬೇಕು. ಕಂಚಿಕೆರೆ ಹಾಗೂ ಪಾಲ್ತಾಡಿ ಶಾಲಾ ಮಕ್ಕಳು ಎದುರಿಸುತ್ತಿರುವ ರಸ್ತೆ ಸಮಸ್ಯೆಯ ಬಗ್ಗೆ ನಾವೆಲ್ಲರೂ ಒಗ್ಗಟ್ಟಿನಿಂದ ಲೋಕಾಯುಕ್ತದವರೆಗೆ ಹೋಗಿದ್ದೇವೆ.ಇಂತಹ ಬೆಳವಣಿಗೆ ಅಭಿವೃದ್ದಿಗೆ ಪೂರಕ ಎಂದರು.

ಸದಸ್ಯ ಬಾಬು ಎನ್‌ ಮಾತನಾಡಿ,ಸವಣೂರು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಕೆರೆಗಳ ಗಡಿಗುರುತು ಮಾಡುವಂತೆ ಕಂದಾಯ ಇಲಾಖೆ ಹಾಗೂ ಸರವೆ ಇಲಾಖೆಗೆ ಬರೆದುಕೊಳ್ಳಬೇಕು ಎಂದರು.ಬೆಳಕು ಯೋಜನೆಯಲ್ಲಿ ವಿದ್ಯುತ್‌ ಕಂಬಗಳು ಸರಬರಾಜಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಈ ಕುರಿತು ಇಂಧನ ಇಲಾಖೆಗೆ ಬರೆದುಕೊಳ್ಳಬೇಕು.ಪುಣ್ಚಪ್ಪಾಡಿ ಶಾಲಾ 7 ವಿದ್ಯಾರ್ಥಿಗಳು ಶಾಲೆಗೆ ಹೋಗಲು ದಾರಿಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ.ಇದಕ್ಕೆ ಪರಿಹಾರ ಸಿಗಬೇಕು.ಇಲ್ಲದಿದ್ದಲ್ಲಿ ಆ ಮಕ್ಕಳು ಮುಂದಿನ ಗ್ರಾಮ ಸಭೆಯಲ್ಲಿ ದರಣಿ ಕೂರುವ ಬಗ್ಗೆ ಮಾಹಿತಿ ಬಂದಿದೆ ಎಂದರು. ಮುಂದಿನ ದಿನಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ರೂಪಿಸಿಕೊಳ್ಳುವಂತೆ ಕೇಳಿಕೊಂಡರು.

ಹಳೆ ಟ್ಯಾಂಕ್‌ ತೆರವು ಮಾಡಿ

ಮಾಂತೂರಿನಲ್ಲಿರುವ ನೀರಿನ ಹಳೆಯ ಟ್ಯಾಂಕ್‌ ನ್ನು ತೆರವು ಮಾಡಬೇಕು.ಈಗಾಗಲೇ ಅದರಿಂದ ಸಿಮೆಂಟಿನ ತುಂಡುಗಳು ಕೆಳಕ್ಕೆ ಬೀಳುತ್ತಿದೆ.ಅಪಾಯ ಸಂಭವಿಸುವ ಮುನ್ನ ಸೂಕ್ತ ಕ್ರಮಕೈಗೊಳ್ಳಬೇಕು.ಅಲ್ಲದೆ ಆ ಹಳೆಯ ಟ್ಯಾಂಕಿಗೆ ನೀರು ತುಂಬಿಸದಂತೆ ನೀರು ನಿರ್ವಾಹಕರಿಗೆ ಸೂಚನೆ ನೀಡಬೇಕು ಎಂದರು.

ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಜಾಗ ಗುರುತಿಸಿಕೊಡುವಂತೆ ಕಂದಾಯ ಇಲಾಖೆಗೆ ಬರೆದುಕೊಳ್ಳಬೇಕು.ನಿವೇಶನ ರಹಿತರು ಅರ್ಜಿ ಕೊಟ್ಟು ಹಲವು ವರ್ಷಗಳಾದರೂ ಅವರಿಗೆ ನ್ಯಾಯ ಕೊಡಿಸಲು ನಮ್ಮಿಂದ ಆಗುತ್ತಿಲ್ಲ ಎಂದು ರಫೀಕ್‌ ಹೇಳಿದರು.

ಚಾಪಲ್ಲ ಅವೈಜ್ಞಾನಿಕ ರಸ್ತೆ

ಸವಣೂರು-ಕಾಣಿಯೂರು ಹೆದ್ದಾರಿಯಲ್ಲಿ ಚಾಪಲ್ಲ ಎಂಬಲ್ಲಿ ಮುಂದಿನ ಬರುತ್ತಿರುವ ವಾಹನಗಳು ಕಾಣಿಸುತ್ತಿಲ್ಲ.ಇದರಿಂದ ಅಪಘಾತಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು,ಲೋಕೋಪಯೋಗಿ ಇಲಾಖೆಗೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬರೆದುಕೊಳ್ಳುವಂತೆ ಸದಸ್ಯ ತೀರ್ಥರಾಮ ಕೆಡೆಂಜಿ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ,ವಿವಿಧ ಕಾರ್ಯಕ್ರಮ

ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ,ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ನಾವು ಕಳೆದ ವರ್ಷದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.ಈ ಬಾರಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಬೇಕು.ಅಮೃತ ಸರೋವರ ಯೋಜನೆಗೆ ಅಯ್ಕೆಯಾಗಿರುವ ಸವಣೂರಿನ ಕೊಂಬಕೆರೆಯಲ್ಲಿ ಧ್ವಜಾರೋಹಣ ಸೇರಿದಂತೆ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಯೋಜಿಸಿದ್ದೇವೆ.ಅದಕ್ಕಿಂತ ವಿಶಿಷ್ಠವಾಗಿ ಆಚರಿಸುವ ನಿಟ್ಟಿನಲ್ಲಿ ೭೫ ಜನರಿಗೆ ಪಿಂಚಣಿ ಮಾಡಿಸುವ ಬಗ್ಗೆ, ಗ್ರಾ.ಪಂ.ನಲ್ಲಿ ಕೆಲಸ ಮಾಡಿರುವ ಮಾಜಿ ಗ್ರಾ.ಪಂ.ಸದಸ್ಯರನ್ನು ಗುರುತಿಸುವ ಕಾರ್ಯ,ಗ್ರಾಮದ ಎಲ್ಲಾ ಜನರಿಗೂ ವಿಮೆ ಮಾಡಿಸುವ ಕುರಿತೂ ನಾವು ಪ್ರಯತ್ನಶೀಲರಾಗಬೇಕು ಎಂದರು.

ಈ ನಿಟ್ಟಿನಲ್ಲಿ ಆ.1ರಂದು ಸಂಘ ಸಂಸ್ಥೆಗಳ,ಸಾರ್ವಜನಿಕರ,ವರ್ತಕರ ,ಶಾಲಾ ಮುಖ್ಯಸ್ಥರ ಸಭೆ ನಡೆಸುವ ಕುರಿತು ಸಭೆ ನಿರ್ಣಯಿಸಿತು. ಕಿರಣ್‌ ಶೆಟ್ಟಿ ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಬೊಳುವಾರು ಸೋಲಾರ್‌ ಮ್ಯಾಟ್ರಿಕ್ಸ್‌ ಮಾಲಕ ಕಿರಣ್‌ ಶೆಟ್ಟಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಅಬ್ದುಲ್‌ ರಝಾಕ್‌,ಗಿರಿಶಂಕರ ಸುಲಾಯ,ಚೆನ್ನು ಮಾಂತೂರು,ಸತೀಶ್‌ ಅಂಗಡಿಮೂಲೆ,ರಫೀಕ್‌ ಎಂ.ಎ.,ಸುಂದರಿ,ವಿನೋದಾ ರೈ,ತೀರ್ಥರಾಮ ಕೆಡೆಂಜಿ,ಚಂದ್ರಾವತಿ ಸುಣ್ಣಾಜೆ,ಇಂದಿರಾ ಬೇರಿಕೆ,ಯಶೋಧಾ ,ಅಯೀಶತ್‌ ಸಬೀನಾ,ಬಾಬು ಎನ್.‌,ಭರತ್‌ ರೈ,ತಾರಾನಾಥ ಸುವರ್ಣ,ಹರೀಶ್ ಕೆ.ಜಿ.,ಜಯಶ್ರೀ,ಚೇತನಾ ಪಾಲ್ತಾಡಿ ಪಾಲ್ಗೊಂಡಿದ್ದರು.

ಸವಣೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿ,ಸಿಬಂದಿ ದಯಾನಂದ ಮಾಲೆತ್ತಾರು ವಂದಿಸಿದರು.ಪ್ರಮೋದ್‌ ಕುಮಾರ್‌ ರೈ ಅವರು ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಓದಿದರು.ಸಿಬಂದಿಗಳಾದ ಜಯಶ್ರೀ,ಜಯಾ ಕೆ.,ಶಾರದಾ,ಯತೀಶ್‌ ಕುಮಾರ್‌ ಸಹಕರಿಸಿದರು.

LEAVE A REPLY

Please enter your comment!
Please enter your name here