ಮಲೆನಾಡಿನ ಜನರ ನಿದ್ದೆಗೆಡಿಸುತ್ತಿರುವ ‘ಕಸ್ತೂರಿ ರಂಗನ್ ವರದಿ’ ಜಾರಿ ವಿಚಾರ

0

ಕೇಂದ್ರ ಪರಿಸರ ಇಲಾಖೆಯಿಂದ ಐದನೆ ಅಧಿಸೂಚನೆ ಪ್ರಕಟ

  • ಮಲೆನಾಡಿನ ಜನರಲ್ಲಿ ಮತ್ತೆ ಆತಂಕ
  • ಕಡಬ ತಾಲೂಕಿನ 13 ಗ್ರಾಮಗಳೂ ಸೂಕ್ಷ್ಮ ವಲಯ ಪಟ್ಟಿಯಲ್ಲಿ
  • ಸುಳ್ಯದ 12, ಬೆಳ್ತಂಗಡಿಯ 17 ಗ್ರಾಮಗಳಲ್ಲೂ ಆತಂಕ
  • ಸರಕಾರ ಎಂದಿಗೂ ಜನರ ಪರವಾಗಿದೆ ಜನರು ಆತಂಕ ಪಡುವ ಅಗತ್ಯ ಇಲ್ಲ -ಎಸ್.ಅಂಗಾರ
  • ರಾಜ್ಯ ಸರಕಾರದಿಂದ ವರದಿ ತಿರಸ್ಕಾರ ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲು ಸಂಪುಟ ನಿರ್ಧಾರ
  • ವರದಿ ಜಾರಿಯಾಗದಂತೆ ತಡೆಯಲು ಪಕ್ಷಾತೀತ ಹೋರಾಟ ಅಗತ್ಯ -ಕಿಶೋರ್ ಶಿರಾಡಿ

ವಿಶೇಷ ವರದಿ: ವಿಜಯ ಕುಮಾರ್ ಕಡಬ

ಕಡಬ:ಕಳೆದ ಕೆಲವು ವರ್ಷಗಳಿಂದ ‘ಕಸ್ತೂರಿ ರಂಗನ್ ವರದಿ’ ಜಾರಿ ವಿಚಾರದದಲ್ಲಿ ಪದೇಪದೇ ಹೇಳಿಕೆಗಳು, ಆದೇಶಗಳು ಬರುತ್ತಿದ್ದು ಕಳೆದೆರಡು ವರ್ಷಗಳಿಂದ ಏನೂ ಸುದ್ದಿಯಿಲ್ಲದೆ ಈ ವಿಚಾರ ಇನ್ನೇನು ತಣ್ಣಗಾಗುತ್ತಿದೆ ಎಂದು ಮಲೆನಾಡಿನ ಜನತೆ ನೆಮ್ಮದಿಯ ನಿಟ್ಟುಸಿರು ಬಿಡಲಾರಂಭಿಸುತ್ತಿದ್ದಂತೆ ಇದೀಗ ಮತ್ತೆ ‘ಕಸ್ತೂರಿರಂಗನ್ ವರದಿ’ ಜಾರಿ ಬಗ್ಗೆ ಗುಮಾನಿ ಎದ್ದಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯಗಳಾಗಿ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆ ಈಗಾಗಲೇ ಹೊರಬಿದ್ದಿರುವುದರಿಂದ ಸಹಜವಾಗಿ ಮಲೆನಾಡಿನ ಜನರಲ್ಲಿ ಮತ್ತೆ ಆತಂಕ ಎದುರಾಗಿದೆ. ಆದರೆ ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದು ಜನರು ಆತಂಕ ಪಡಬಾರದು ಎಂದು ಸಚಿವ ಎಸ್.ಅಂಗಾರ ಮನವಿ ಮಾಡಿದ್ದಾರೆ.ಜೊತೆಗೆ ಕಸ್ತೂರಿರಂಗನ್ ವರದಿಯನ್ನು ಮತ್ತೊಮ್ಮೆ ತಿರಸ್ಕರಿಸಿರುವ ರಾಜ್ಯ ಸರಕಾರ ಈ ಕುರಿತು ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಪರಿಸರ ಇಲಾಖೆ ಇದೇ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿದ್ದು ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಆದರೆ ಗಾಡ್ಗಿಳ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಸೇರಿಸಿತ್ತು. ಅದರಂತೆ ಕರ್ನಾಟಕದ 20668 ಚದರ ಕಿ.ಮೀ.ಪ್ರದೇಶ ‘ಪರಿಸರ ಸೂಕ್ಷ್ಮ ವಲಯ’ ವ್ಯಾಪ್ತಿಗೆ ಒಳಪಡುತ್ತದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳಲಿದೆ.

ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಬಲ್ಯ, ಕೊಂಬಾರು, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಮಣ್ಯ, ಐನೆಕಿದು ಗ್ರಾಮಗಳೂ ಕಸ್ತೂರಿ ರಂಗನ್ ವರದಿಯಲ್ಲಿವೆ.ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ದೇವಚಳ್ಳ, ಹರಿಹರ-ಪಲ್ಲತಡ್ಕ, ಬಾಳುಗೋಡು, ಮಡಪ್ಪಾಡಿ, ಉಬರಡ್ಕ ಮಿತ್ತೂರು, ಕಲ್ಮಕಾರು, ಅರಂತೋಡು, ಅಲೆಟ್ಟಿ, ಸಂಪಾಜೆ, ತೊಡಿಕಾನ ಗ್ರಾಮಗಳನ್ನು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರಾ, ಸವಣಾಲು, ಚಾರ್ಮಾಡಿ, ಸುಲ್ಕೇರಿ, ನಾವೂರು, ನೆರಿಯ, ನಾಡ, ಪುದುವೆಟ್ಟು, ಶಿಶಿಲ, ಕಳೆಂಜ, ಶಿಬಾಜೆ, ರೆಖ್ಯಾ ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ. ಒಂದು ವೇಳೆ ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಗೊಳಿಸಿದರೆ ಈ ಗ್ರಾಮಗಳ ಜನತೆಯ ಅಭಿವೃದ್ಧಿಗೆ ಹಿನ್ನಡೆ ಆಗುವ ಅಪಾಯವಿದೆ. ವರದಿಯಲ್ಲಿ ಹೇಳಿರುವಂತೆ, ಕನಿಷ್ಠ ಮೂಲಭೂತ ಸೌಕರ್ಯಗಳಿಂದಲೂ ಜನತೆ ವಂಚಿತವಾಗುವ ಅಪಾಯವಿದ್ದು, ಇದೇ ಕಾರಣಕ್ಕೆ ಜನರು ಈ ವರದಿಯನ್ನು ವಿರೋಽಸುತ್ತಿದ್ದಾರೆ.

ವರದಿ ತಿರಸ್ಕರಿಸಿದ ರಾಜ್ಯ ಸರಕಾರ

ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲು ಸಚಿವ ಸಂಪುಟ ಒಪ್ಪಿಗೆ

ವಿವಾದಾತ್ಮಕ ‘ಕಸ್ತೂರಿ ರಂಗನ್ ವರದಿ’ಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಈ ಕುರಿತು ಕೇಂದ್ರ ಸರಕಾರಕ್ಕೆ ಅಭಿಪ್ರಾಯ ತಿಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಶುಕ್ರವಾರ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ‘ಆರಂಭದಿಂದಲೂ ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರಕಾರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈಗಲೂ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ವರದಿ ತಿರಸ್ಕಾರ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಇದೀಗ ಕಸ್ತೂರಿ ರಂಗನ್ ವರದಿ ಅನ್ವಯ ಪರಿಸರ ಇಲಾಖೆಯಿಂದ ಅಧಿಸೂಚನೆಯಾಗಿದ್ದು, ಈ ಸಂಬಂಧ ತಮ್ಮ ಆಕ್ಷೇಪವನ್ನು ಕೇಂದ್ರ ಸರಕಾರಕ್ಕೂ ಮನವರಿಕೆ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಪಶ್ಚಿಮಘಟ್ಟದ ಜನತೆಗೆ ಇದರಿಂದ ಅನ್ಯಾಯವಾಗಲಿದೆ.ಈಗಾಗಲೇ ಎರಡು ಬಾರಿ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಿದೆ. ಅರಣ್ಯ ಪ್ರದೇಶದಲ್ಲಿರುವ ಜನರು ಮತ್ತು ಜನವಸತಿ ಪ್ರದೇಶಗಳ ಎತ್ತಂಗಡಿ ಸರಿಯಲ್ಲ.ಈ ಕುರಿತು ಸಮಗ್ರ ವಿವರವನ್ನು ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಸಚಿವ ಮಾಧು ಸ್ವಾಮಿ ಹೇಳಿದರು.

ಜನತೆ ಆತಂಕ ಪಡಬೇಕಾಗಿಲ್ಲ-ಅಂಗಾರ

ಜು.26ರಂದು ಸಿಎಂ ನೇತೃತ್ವದಲ್ಲಿ ಕೇಂದ್ರ ಪರಿಸರ ಇಲಾಖೆಯ ಸಚಿವರ ಭೇಟಿ

ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಜನತೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವ, ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರು ಈ ಭಾಗದ ಜನರಿಗೆ ಮನವಿ ಮಾಡಿದ್ದಾರೆ.

‘ಸುದ್ದಿ’ಯೊಂದಿಗೆ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ‘ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಈಗಾಗಲೇ ಕೇಂದ್ರ ಪರಿಸರ ಇಲಾಖೆ ಅಽಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಂಬಂಧಪಟ್ಟ ಕೇಂದ್ರ ಸರಕಾರದ ಸಚಿವರು, ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ವರದಿ ಜಾರಿಗೊಳಿಸದಂತೆ ಚರ್ಚಿಸಲಿದ್ದೇವೆ.ನಾವು ಜನತೆಯ ಪರವಾಗಿ ಎಂದಿಗೂ ಇದ್ದೇವೆ, ಅಗತ್ಯ ಬಿದ್ದರೆ ವರದಿ ಜಾರಿಯ ವಿರುದ್ದ ಕಾನೂನು ಹೋರಾಟಕ್ಕೂ ಸಿದ್ದ’ ಎಂದು ಹೇಳಿದ್ದಾರೆ.

 

 

ಕಸ್ತೂರಿ ರಂಗನ್ ವರದಿ ಜಾರಿಗೊಳ್ಳದಿರಲು ಪಕ್ಷಾತೀತ ಹೋರಾಟ ಅನಿವಾರ್ಯ-ಕಿಶೋರ್‌ ಶಿರಾಡಿ

ಈ ಬಗ್ಗೆ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಜು.19ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದು ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿಯವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಗೆ ತಯಾರಿ ನಡೆಯುತ್ತಿದೆ. ಸರ್ಕಾರ ಧೈರ್ಯ ಹೇಳಿದರೂ ಜಾರಿಗೆ ಏನು ಮಾಡಬೇಕಾ ಆ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ವರದಿ ಜಾರಿಯಾಗುವುದನ್ನು ತಡೆಯಲು ಪಕ್ಷಾತೀತ ಹೋರಾಟ ಅನಿವಾರ್ಯ. ಸತ್ತರೂ ಕಸ್ತೂರಿ ರಂಗನ್ ಜಾರಿಗೆ ಬಿಡುವುದಿಲ್ಲ ಎಂದು ಹಲವರು ಆಶ್ವಾಸನೆ ನೀಡಿದ್ದಾರೆ. ಅದಕ್ಕೆ ನನ್ನಲ್ಲಿ ಸಾಕ್ಷಿ ಇದೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಬೇರೆ ಬೇರೆ ಅಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here