ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 1600 ಉದ್ಯಮ ಪರವಾನಿಗೆ ನವೀಕರಣಗೊಂಡಿಲ್ಲ-200ಕ್ಕೂ ಮಿಕ್ಕಿ ಉದ್ಯಮಗಳಿಗೆ ಪರವಾನಿಗೆಯೇ ಇಲ್ಲ !

0

  • ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಪತ್ತೆ ಕಾರ್ಯಾಚರಣೆ ಸಂದರ್ಭ ಬೆಳಕಿಗೆ ಬಂದ ಅಚ್ಚರಿ ವಿಚಾರ

 

ಪುತ್ತೂರು:ಯಾವುದೇ ವ್ಯಾಪಾರ, ವ್ಯವಹಾರ ನಡೆಸಬೇಕಿದ್ದರೂ ಸಂಬಂಧಿಸಿದ ಸ್ಥಳೀಯಾಡಳಿತ ಪರವಾನಿಗೆ ಪಡೆದುಕೊಳ್ಳಬೇಕಾಗಿರುವುದು ಮತ್ತು ವಾರ್ಷಿಕವಾಗಿ ಪರವಾನಿಗೆ ನವೀಕರಣ ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದ್ದರೂ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 1,600 ಅಂಗಡಿಗಳು ಉದ್ಯಮ ಪರವಾನಿಗೆ ನವೀಕರಣಗೊಳಿಸದೆ ವ್ಯವಹಾರ ನಡೆಸುತ್ತಿರುವುದು ಮತ್ತು ಸುಮಾರು 200ಕ್ಕೂ ಅಧಿಕ ಅಂಗಡಿಗಳಿಗೆ ಉದ್ಯಮ ಪರವಾನಿಗೆಯೇ ಇಲ್ಲದಿರುವ ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿದೆ.ದೇಶಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ನಗರಸಭೆಯಿಂದ ಕಾರ್ಯಾಚರಣೆ ನಡೆಸಿ ಅಂಗಡಿ, ಮಳಿಗೆಗಳಿಗೆ ಭೇಟಿ ನೀಡಿದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.

ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿ, ಉದ್ಯಮ ಪರವಾನಿಗೆ ಇಲ್ಲದೆ ಉದ್ಯಮ ನಡೆಸುತ್ತಿರುವ ಉದ್ದಿಮೆಗೆ ಬೀಗ ಜಡಿಯಲು ಪೌರಾಯುಕ್ತರು ಮುಂದಾಗಿದ್ದಾರೆ.


ಇದರ ಜೊತೆಗೆ ಏಕ ಬಳಕೆ ಪ್ಲಾಸ್ಟಿಕ್ ಕಾರ್ಯಾಚರಣೆಯಲ್ಲಿ ರೂ. 12ಸಾವಿರ ದಂಡ ವಸೂಲಿ ಮಾಡಿದ್ದಾರೆ. ಯಾವುದೇ ಉದ್ದಿಮೆ ನಡೆಸುವ ಅಂಗಡಿ ಮಾಲಕರು ಅಧಿನಿಯಮದ ಪ್ರಕಾರ ಪರವಾನಿಗೆ ಪತ್ರ ಪಡೆದೇ ವ್ಯವಹಾರ ಮಾಡಬೇಕು.ಉದ್ಯಮ ಪರವಾನಿಗೆಯನ್ನು ಪ್ರತಿವರ್ಷ ನವೀಕರಣ ಮಾಡಿಸಿಕೊಳ್ಳಬೇಕು.ಪರವಾನಿಗೆ ಪತ್ರ ಇಲ್ಲದೆ ವ್ಯವಹಾರ ನಡೆಸುತ್ತಿದ್ದರೆ ಅದನ್ನು `ಅನಧಿಕೃತ’ ಎಂದೇ ಪರಿಗಣಿಸಲಾಗುತ್ತದೆ.ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ಪತ್ತೆ ಮಾಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು ಪ್ರತಿ ಅಂಗಡಿಗಳಿಗೂ ಭೇಟಿ ನೀಡುತ್ತಿರುವ ಸಂದರ್ಭ ಅಂಗಡಿಗಳ ಪರವಾನಿಗೆಯ ಮಾಹಿತಿಯನ್ನೂ ಕಲೆ ಹಾಕಿದ್ದಾರೆ.ಅಧಿಕೃತ, ಅನಧಿಕೃತ ಅಂಗಡಿ ಪತ್ತೆ ಕಾರ್ಯ ನಡೆಸಿದ್ದಾರೆ.ಉದ್ದಿಮೆ ನಡೆಸುವ ಅಂಗಡಿ ಮಾಲಕರು ಪರವಾನಿಗೆ ಪಡೆದುಕೊಂಡ ಮೇಲೆ ಅದನ್ನು ವರ್ಷಂಪ್ರತಿ ನವೀಕರಿಸಬೇಕು.ಒಂದು ವರ್ಷದ ಬಳಿಕ ನವೀಕರಿಸದಿದ್ದರೆ ಪರವಾನಿಗೆ ಪತ್ರಕ್ಕೆ ಮಾನ್ಯತೆ ಇರುವುದಿಲ್ಲ.ಪುತ್ತೂರು ನಗರಸಭೆಯಲ್ಲಿ ಕಳೆದ ವರ್ಷ 2749ಪರವಾನಿಗೆದಾರರ ಪೈಕಿ154 ಮಂದಿ ನವೀಕರಣ ಮಾಡಿಲ್ಲ.ಈ ವರ್ಷ 2976 ಉದ್ಯಮ ಪರವಾನಿಗೆದಾರರಿದ್ದು 1600 ಮಂದಿ ನವೀಕರಣಕ್ಕೆ ಬಾಕಿ ಇದ್ದಾರೆ.1424ಮಂದಿ ಮಾತ್ರ ನವೀಕರಿಸಿದ್ದಾರೆ.ಎಪ್ರಿಲ್, ಮೇ ಒಳಗೆ ನವೀಕರಿಸದೆ ಇರುವ ಪರವಾನಿಗೆದಾರರು ಪ್ರತಿ ದಿನಕ್ಕೆ ಇಂತಿಷ್ಟು ದಂಡ ಪಾವತಿಸಿ ನವೀಕರಿಸಬೇಕಿದೆ.ಇದರ ಜೊತೆಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪಡೆದುಕೊಳ್ಳದೇ ವ್ಯಾಪಾರ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದ್ದು ಇದು ಕಾನೂನು ಬಾಹಿರವಾಗಿರುವುದರಿಂದ ಈ ಕುರಿತು ಅಂಗಡಿಗಳಿಗೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ.

ಗೂಡಂಗಡಿಗಳಿಗೆ ಬೇಕಿಲ್ಲ ಉದ್ಯಮ ಪರವಾನಿಗೆ: ಬೀದಿ ಬದಿ ವ್ಯಾಪಾರ ಹಾಗೂ ಗೂಡಂಗಡಿಗಳಿಗೆ ಉದ್ಯಮ ಪರವಾನಿಗೆ ಪತ್ರದ ಅವಶ್ಯಕತೆ ಇಲ್ಲ.ಪುತ್ತೂರು ನಗರದಲ್ಲಿ 75 ಗೂಡಂಗಡಿಗಳಿಗೆ ನಗರಸಭೆ ವತಿಯಿಂದ ಅನುಮತಿ ನೀಡಲಾಗಿದೆ. ಗೂಡಂಗಡಿ ತೆರೆಯುವ ಮೊದಲು ಅನುಮತಿ ಪಡೆದುಕೊಳ್ಳಬೇಕು.ನಗರಸಭೆಯ ಅನುಮತಿ ಪಡೆದುಕೊಳ್ಳದೆ ಏಕಾಏಕಿ ಗೂಡಂಗಡಿ ತೆರೆದರೆ ಅದು ನಿಯಮಕ್ಕೆ ವಿರುದ್ಧವಾಗಿ ಅನಧಿಕೃತ ಅಂಗಡಿ ಸಾಲಿಗೆ ಸೇರುತ್ತದೆ.

ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ 4 ದಿನದಲ್ಲಿ ರೂ.12 ಸಾವಿರ ದಂಡ : ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 4 ದಿನಗಳಿಂದ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳ ಪರಿಶೀಲನೆ ನಡೆಸುತ್ತಿದ್ದಾರೆ.ನಾಲ್ಕು ದಿನಗಳ ಕಾರ್ಯಾಚಣೆಯಲ್ಲಿ, ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದವರಿಗೆ ರೂ.12 ಸಾವಿರ ದಂಡ ವಿಧಿಸಲಾಗಿದ್ದು, ಸುಮಾರು 51 ಕೆ.ಜಿಗಳಷ್ಟು ಏಕಬಳಕೆಯ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ ಎಂದು ಪೌರಾಯುಕ್ತ ಮಧು ಎಸ್.ಮನೋಹರ್ ತಿಳಿಸಿದ್ದಾರೆ.

ಪರವಾನಿಗೆ ರಹಿತ ಅಂಗಡಿಗಳಿಗೆ ನೋಟೀಸ್ 3 ದಿನಗಳೊಳಗೆ ಅರ್ಜಿ ಸಲ್ಲಿಸದಿದ್ದರೆ ಕ್ರಮ

ಪ್ರತಿ ಹತ್ತು ವಾರ್ಡ್‌ಗಳಿಗೆ ಒಂದು ತಂಡದಂತೆ ನಗರಸಭೆಯ ಒಟ್ಟು ಮೂರು ತಂಡ ರಚಿಸಲಾಗಿದೆ.ಈ ತಂಡವು ವಾರ್ಡ್‌ವಾರು ಸಮೀಕ್ಷೆ ನಡೆಸುತ್ತಿದ್ದು ಉದ್ಯಮ ಪರವಾನಿಗೆ ರಹಿತವಾಗಿ ವ್ಯವಹಾರ ನಡೆಸುವ ಅಂಗಡಿಗಳಿಗೆ ನೋಟಿಸ್ ನೀಡಿದೆ.ನೋಟಿಸ್ ಸ್ವೀಕರಿಸಿದ ಮೂರು ದಿನದೊಳಗೆ ಉದ್ಯಮ ಪರವಾನಿಗೆಗೆ ಅರ್ಜಿ ಸಲ್ಲಿಸಿ ಪರವಾನಿಗೆ ಪತ್ರ ಪಡೆಯಬೇಕು.ತಪ್ಪಿದಲ್ಲಿ ಎಚ್ಚರಿಕೆ ನೀಡಿದ ಮೂರು ದಿನದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು-ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ

LEAVE A REPLY

Please enter your comment!
Please enter your name here