ಅಗರಬತ್ತಿ ಪ್ಯಾಕೇಟ್‌ನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಹೆಸರು, ಫೋಟೋ ದುರ್ಬಳಕೆ ಆರೋಪ ; ಗಂಗಗೂಡನಹಳ್ಳಿಯ ಮಿಸ್ಭಾ ಪ್ರಾಗ್ರನೆನ್ಸ್ ಹಾಗೂ ಉಪ್ಪಿನಂಗಡಿಯ ಶುಕ್ರಿಯಾ ಟ್ರೇಡರ‍್ಸ್ ವಿರುದ್ಧ ದೂರು

0

ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯ ಮತ್ತು ದೇಯಿ ಬೈದೆತಿಯ ಮೂಲಸ್ಥಾನವಾಗಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘಿಸಿ ಹಾಗೂ ಕ್ಷೇತ್ರದ ಹೆಸರು ದುರುಪಯೋಗಪಡಿಸಿಕೊಂಡು ಅಗರಬತ್ತಿ ತಯಾರಿಸಲಾಗುತ್ತಿದೆ ಎಂದು ಕ್ಷೇತ್ರಾಡಳಿತ ಸಮಿತಿಯು ಪುತ್ತೂರು ಉಪವಿಭಾಗ ಡಿವೈಎಸ್‌ಪಿಗೆ ದೂರು ನೀಡಿದೆ.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಭಾರತ ಸರಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರೀಯಲ್ಲಿ ಗೆಜ್ಜೆಗಿರಿ ಎಂಬ ಟ್ರೇಡ್ ಮಾರ್ಕ್ ಅನ್ನು ಕ್ಲಾಸ್ 3 ಅಡಿಯಲ್ಲಿ ಅಗರಬತ್ತಿ ಉತ್ಪನ್ನ ಹೊಂದಿದೆ. ಈ ಅಧಿಕೃತ ನೋಂದಾವಣೆ ಟ್ರೇಡ್ ಮಾರ್ಕ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಮಾರ್ಕ್ ಮೇಲೆ ಬೌದ್ಧಿಕ ಆಸ್ತಿ ಹಕ್ಕಿನ ಕಾನೂನು ಬದ್ಧ ಅಧಿಕಾರ ಹೊಂದಿರುವಾಗ ಗಂಗಗೂಡನಹಳ್ಳಿಯ ಮಿಸ್ಭಾ ಪ್ರಾಗ್ರನೆನ್ಸ್ ಗೆಜ್ಜೆಗಿರಿ ಹೆಸರಿನಲ್ಲಿ ಅಗರಬತ್ತಿ ಉತ್ಪಾದಿಸಿ ದಕ್ಷಿಣ ಕನ್ನಡದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಲ್ಲದೆ ಕಂಪೆನಿಯು ತನ್ನ ಉತ್ಪನ್ನದಲ್ಲಿ ಶ್ರೀ ಕ್ಷೇತ್ರದ ಫೋಟೋ ಅನ್ನು ನಮೂದಿಸಿ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ಉಪ್ಪಿನಂಗಡಿಯ ಶುಕ್ರಿಯಾ ಟ್ರೇಡರ್ಸ್‌ನ ಮಾಲಕ ಶುಕೂರುರವರು ಕೂಡ ಗೆಜ್ಜೆಗಿರಿ ಹೆಸರಿನ ಅಗರಬತ್ತಿ ಮಾರಾಟ ಮಾಡುತ್ತಿದ್ದು ಶ್ರೀ ಕ್ಷೇತ್ರದ ಹೆಸರು ಮತ್ತು ಫೋಟೋವನ್ನು ಉತ್ಪನ್ನಕ್ಕೆ ಬಳಸಿಕೊಂಡಿದ್ದಾರೆ ಆದ್ದರಿಂದ ಉತ್ಪನ್ನಗಳನ್ನು ಮುಟ್ಟುಗೋಲು ಹಾಕಿ ಕ್ರಮ ಕೈಗೊಳ್ಳುವಂತೆ ಕ್ಷೇತ್ರಾಡಳಿತ ಸಮಿತಿ ಪರವಾಗಿ ಸಮಿತಿ ಉಪಾಧ್ಯಕ್ಷ ರವಿ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here