ಪೇರಲ್ತಡ್ಕ ಶಾಲಾ ಬಳಿ ಕಡಿದ ಮರ 4 ವರ್ಷವಾದರೂ ತೆರವಾಗಿಲ್ಲ-ಸಾಮಾಜಿಕ ಅರಣ್ಯ ಇಲಾಖೆ ಬಗ್ಗೆ ಸಾರ್ವಜನಿಕರ ಅಸಮಾಧಾನ- ತಕ್ಷಣ ತೆರವು ಗೊಳಿಸಲು ಆಗ್ರಹ

0

  • ಬೆಟ್ಟಂಪಾಡಿ ಗ್ರಾಮ ಸಭೆ

ನಿಡ್ಪಳ್ಳಿ: ಇರ್ದೆ ಪೇರಲ್ತಡ್ಕ ಶಾಲೆಗೆ ಅಪಾಯಕಾರಿಯಾಗಿದ್ದ ಮರವನ್ನು ಕಡಿದು ಹಾಕಿ 4 ವರ್ಷವಾದರೂ ಅಲ್ಲಿಂದ ತೆರವು ಗೊಳಿಸದೆ ಅಸಡ್ಡೆ ತೋರಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಅರಣ್ಯ ಇಲಾಖೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಅದನ್ನು ಅಲ್ಲಿಂದ ಶೀಘ್ರವಾಗಿ ತೆರವು ಗೊಳಿಸುವಂತೆ ಆಗ್ರಹಿಸಿದ ಘಟನೆ ಬೆಟ್ಟಂಪಾಡಿ ಗ್ರಾಮ ಸಭೆಯಲ್ಲಿ ನಡೆಯಿತು.

ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ನ 2022-23 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಅಧ್ಯಕ್ಷೆ ಪವಿತ್ರ ಡಿ.ಯವರ ಅಧ್ಯಕ್ಷತೆಯಲ್ಲಿ ಜು.19 ರಂದು ಸಮುದಾಯ ಭವನದಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಕೃಷ್ಣ ಜೋಗಿ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ ರೈ ಶಾಲೆಗೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ಕಡಿದು ಹಾಕಿ ೪ ವರ್ಷ ಕಳೆದರೂ ಇಲಾಖೆ ತೆರವು ಗೊಳಿಸದೆ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಹೇಳಿ ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಳಿದರು. ಈ ಬಗ್ಗೆ ಎಲ್ಲಾ ದಾಖಲೆಯನ್ನು ಇಲಾಖೆಗೆ ಕಳಿಸಿzವೆ. ಕಡಿದ ಮೇಲೆ ಅದಕ್ಕೆ ಸೀಲ್ ಮಾಡಿ ನಂಬರ್ ಹಾಕಲಾಗಿದೆ. ಏನೋ ನಕಾಶೆ ಬಗ್ಗೆ ತಾಂತ್ರಿಕ ಸಮಸ್ಯೆಯಾಗಿದ್ದು ಆ ಜಾಗದ ಬಗ್ಗೆ ಸರ್ವೆ ಅಗತ್ಯ ಇದೆ. ಅದರ ಬಗ್ಗೆ ವಲಯ ಅರಣ್ಯಾಧಿಕಾರಿಯವರಲ್ಲಿ ಮಾತಾಡುತ್ತೇನೆ ಎಂದು ಕೃಷ್ಣ ಜೋಗಿ ಹೇಳಿದರು. ಅದನ್ನು ತೆಗೆಯದೆ ಅಲ್ಲಿ ಬಹಳ ಸಮಸ್ಯೆಯಾಗಿದೆ ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು. ಗ್ರಾಮಸ್ಥರೊಬ್ಬರು ಮಾತನಾಡಿ ಅಲ್ಲಿ ಅಂದು ಕಡಿದ ಮರ ಎಲ್ಲವೂ ಈಗ ಕಾಣುತ್ತಿಲ್ಲ ಎಂದಾಗ ಅಧಿಕಾರಿ ನಿಮಗೆ ಹೇಗೆ ಗೊತ್ತು ನೀವು ಅಲ್ಲಿ ಯಾಕೆ ಹೋದದ್ದು ಮುಂತಾದ ಪ್ರಶ್ನೆ ಮಾಡಿದಾಗ ಸಭೆಯಲ್ಲಿ ಸ್ವಲ್ಪ ಮಾತಿನ ಚಕಮಕಿ ನಡೆಯಿತು. ಅಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಾಗಿ ಅಪಾಯ ಸ್ಥಿತಿ ಇನ್ನೂ ಇದೆ ತಕ್ಷಣ ಕ್ರಮ ತೆಗೊಳ್ಳಿ ಎಂದು ಐತ್ತಪ್ಪ ಪೇರಲ್ತಡ್ಕ ಹೇಳಿದರು. ಮಧ್ಯ ಪ್ರವೇಶಿಸಿದ ಚರ್ಚಾ ನಿಯಂತ್ರಣಾಧಿಕಾರಿ ಡಾ. ದೀಪಕ್ ರೈಯವರೂ, ಆ ಬಗ್ಗೆ ವಿನಾಕಾರಣ ಚರ್ಚಿಸುವುದು ಸರಿಯಲ್ಲ. ಪ್ರಕೃತಿ ವಿಕೋಪದಡಿಯಲ್ಲಿ ಮರವನ್ನು ತೆರವುಗೊಳಿಸಲು ಅವಕಾಶ ಇದೆ. ಸಹಾಯಕ ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶ ಇದೆ. ಅಲ್ಲದೆ ಶಾಲಾಭಿವೃದ್ದಿ ಸಮಿತಿ ಸಭೆ ಕರೆದು ಆ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಿ. ಅದಕ್ಕೆ ನೀವೂ ಬನ್ನಿ ಎಂದು ಅಧಿಕಾರಿಗೆ ಸೂಚಿಸಿ ಚರ್ಚೆಗೆ ತೆರೆ ಎಳೆದರು.

ಗುಮ್ಮಟೆಗದ್ದೆ ಶಾಲೆಯ ಶಿಕ್ಷಕಿ ಸಮಸ್ಯೆ ಸರಿಪಡಿಸಿ : ಶಿಕ್ಷಣ ಇಲಾಖೆ ವತಿಯಿಂದ ಇರ್ದೆ ಕ್ಲಸ್ಟರ್ ಪ್ರಭಾರ ಸಿ.ಅರ್.ಪಿ ಬಾಲಕೃಷ್ಣ. ಕೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಮಾತನಾಡಿ ಗುಮ್ಮಟೆಗದ್ದೆ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ದೂರದ ಮಂಗಳೂರಿನಿಂದ ಬರುವಾಗ ತಡವಾಗುತ್ತದೆ. ಸಂಜೆ ಬೇಗ ಶಾಲೆ ಬಿಟ್ಟು ಹೋಗಬೇಕಾಗಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದುದರಿಂದ ಅವರನ್ನು ಅವರ ಊರಿಗೆ ವರ್ಗಾವಣೆ ಮಾಡಿ ಇಲ್ಲಿಗೆ ಹತ್ತಿರದ ಶಿಕ್ಷಕಿ ನೇಮಿಸಿ ಎಂದು ಹೇಳಿದರು. ಶಿಕ್ಷಕರು ಶಾಲೆಯ ಹತ್ತಿರದಲ್ಲಿ ವಾಸ್ತವ್ಯ ಬೇಕು ಎಂಬ ನಿಯಮವಿದೆ ಅಲ್ವ ಎಂದು ಸದಸ್ಯ ಚಂದ್ರಶೇಖರ ರೈ ಹೇಳಿದಾಗ ಉತ್ತರಿಸಿದ ಸಿ.ಆರ್.ಪಿ., ಅವರಿಗೆ ಮನೆಯ ಮತ್ತು ಆಂತರಿಕ ಸಮಸ್ಯೆ ಇದೆ. ಆದುದರಿಂದ ಇಲ್ಲಿ ನಿಲ್ಲಲು ಆಗುತ್ತಿಲ್ಲ. ಸಮಸ್ಯೆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದರು. ಮಕ್ಕಳಿಗೆ ಪಠ್ಯ ಪುಸ್ತಕವನ್ನು ಶಿಕ್ಷಣ ಇಲಾಖೆ ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥ ರಂಗನಾಥ ರೈ ಗುತ್ತು ಆಗ್ರಹಿಸಿದರು. ಕಲಿಕಾ ಚೇತರಿಕೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಕೈಪಿಡಿ ಮುದ್ರಿಸಿ ಹಂಚಲಾಗುತ್ತಿದೆ. ಪಠ್ಯ ಪರಿಷ್ಕರಣೆಯಿಂದ ಸ್ವಲ್ಪ ತಡವಾಗಿದ್ದು ಆದಷ್ಟು ಬೇಗ ಬಾಕಿ ಪುಸ್ತಕ ಬರಲಿದೆ ಎಂದು ಸಿ.ಅರ್.ಪಿ ತಿಳಿಸಿದರು. ದೂಮಡ್ಕ ಶಾಲಾ ತಡೆಗೋಡೆ ಕುಸಿದಿದ್ದು ದುರಸ್ತಿಗೊಳಿಸಿ ಹತ್ತಿರ ಇರುವ ಅಪಾಯಕಾರಿ ಮರವನ್ನು ತೆರವು ಗೊಳಿಸುವಂತೆ ಕೇಳಿ ಕೊಳ್ಳಲಾಯಿತು.

ಇರ್ದೆ ಉಪ ಆರೋಗ್ಯ ಕೇಂದ್ರ ತೆರವುಗೊಳಿಸಿ: ಆರೋಗ್ಯ ಇಲಾಖೆಯ ವತಿಯಿಂದ ಇರ್ದೆ ಆರೋಗ್ಯ ಸಹಾಯಕಿ ಪ್ರೇಮಲತಾ ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಸದಸ್ಯ ಮೊಯಿದುಕುಂಞ ಶಿಥಿಲ ಗೊಂಡು ಬೀಳುವ ಹಂತದಲ್ಲಿರುವ ಇರ್ದೆ ಉಪ ಕೇಂದ್ರದ ಕಟ್ಟಡ ತೆರವು ಗೊಳಿಸಲು ಕೆಲವು ವರ್ಷಗಳಿಂದ ಮನವಿ ನೀಡುತ್ತಾ ಬಂದರೂ ಕಾರ್ಯಗತವಾಗಲಿಲ್ಲ. ಅಲ್ಲಿ ಮಕ್ಕಳು ಮತ್ತು ಸಾರ್ವಜನಿಕರು ಓಡಾಡುತ್ತಿದ್ದು ಬಿದ್ದರೆ ಅಪಾಯ. ತಕ್ಷಣ ಅದನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದಾಗ ಸದಸ್ಯ ಪ್ರಕಾಶ್ ರೈ ಧ್ವನಿ ಗೂಡಿಸಿದರು ಆದ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಧ್ಯ ಪ್ರವೇಶಿಸಿ ಮಾತನಾಡಿ ಅದನ್ನು ಕೆಡವಲು ಅನುಮತಿಗಾಗಿ ಇಲಾಖೆಗೆ ಬರೆಯಲಾಗಿದೆ. ಅದರ ಟೆಂಡರ್ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇರುವುದರಿಂದ ಅದಕ್ಕೆ ಹಿನ್ನಡೆಯಾಗಿದೆ. ತಕ್ಷಣ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊರಿಂಗಿಲದಲ್ಲಿ ಒಂದು ತಿಂಗಳಲ್ಲಿ ಟಿ.ಸಿ ಅಳವಡಿಸಲಾಗುವುದು: ಮೆಸ್ಕಾಂ ಇಂಜಿನಿಯರ್ ಪುತ್ತು ಜೆ. ಮಾಹಿತಿ ನೀಡುತ್ತಿದ್ದ ವೇಳೆ ಕೊರಿಂಗಿಲದ ಮಸೀದಿ ಬಳಿ ಒಂದು ಟ್ರಾನ್ಸ್‌ಫಾರ್ಮರ್ ಅಳವಡಿಸಲು ಕೆಲವು ಸಮಯಗಳಿಂದ ಬೇಡಿಕೆ ಇದ್ದರೂ ಆಗಿಲ್ಲ ಎಂದು ಅಬೂಬಕ್ಕರ್ ಕೊರಿಂಗಿಲ ಹೇಳಿದರು. ಉತ್ತರಿಸಿದ ಅಧಿಕಾರಿಯವರು ಅದರ ಬಗ್ಗೆ ಕ್ರಮ ಕೈಗೊಂಡಿದ್ದೇ ವೆ. ಇನ್ನು ಒಂದು ತಿಂಗಳಲ್ಲಿ ಅಳವಡಿಸುವುದಾಗಿ ತಿಳಿಸಿದರು. ಉಪ್ಪಳಿಗೆ ರಸ್ತೆ ಬದಿಯಲ್ಲಿ ಒಂದು ಕಂಬ ಸಮಸ್ಯೆಯಾಗಿದ್ದು ಅದನ್ನು ಅಲ್ಲಿಂದ ಶಿಫ್ಟ್ ಮಾಡಲು ಗ್ರಾಮಸ್ಥರು ಆಗ್ರಹಿಸಿದರು. ರಾಮಣ್ಣ ನಾಯ್ಕ ಸರಳೀಕಾನ ಎಂಬವರು ನಮಗೆ ಟಿ.ಸಿ ಬಹಳ ದೂರ ಇದೆ. ಆದುದರಿಂದ ಕೆಲವು ಸಮಯದಲ್ಲಿ ನಮಗೆ ಪವರ್ ಇರುವುದಿಲ್ಲ. ಆದುದರಿಂದ ಸರಳೀಕಾನದಲ್ಲಿ ಇನ್ನೊಂದು ಟಿ.ಸಿ ಹಾಕುವಂತೆ ಆಗ್ರಹಿಸಿದರು. ಡೆಮ್ಮಂಗರದಲ್ಲಿ ಇರುವ ಟಿ.ಸಿಯ ಸಮಸ್ಯೆ ಸರಿಪಡಿಸುವ ಬಗ್ಗೆ ಅಧಿಕಾರಿಯವರ ಗಮನಕ್ಕೆ ತರಲಾಯಿತು. ಪಂಜೊಟ್ಟು ರಸ್ತೆ ಬದಿ ಇರುವ ಕಂಬ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು ಅದನ್ನು ಶಿಫ್ಟ್ ಮಾಡುವಂತೆ ತಿಳಿಸಿದರು. ದೂಮಡ್ಕದಲ್ಲಿ ಟಿ.ಸಿ ಹತ್ತಿರ ಇರುವ ದೊಡ್ಡ ಅಪಾಯಕಾರಿ ಮರ ತೆರವು ಗೊಳಿಸುವಂತೆ ಬೇಡಿಕೆ ಸಲ್ಲಿಸಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸುವಂತೆ ಭರವಸೆ ನೀಡಿದರು.

ರೈತ ವಿದ್ಯಾನಿಧಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ : ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಶುಭಕರರವರು ಮಾಹಿತಿ ನೀಡಿ ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೈತ ವಿದ್ಯಾನಿಧಿ ಯೋಜನೆಯಲ್ಲಿ ಹೈಸ್ಕೂಲಿನಿಂದ ಪದವಿಯವರೆಗೆ ವ್ಯಾಸಂಗ ಮಾಡುತ್ತಿರುವ ಕೃಷಿ ಭೂಮಿ ಹೊಂದಿರುವ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದು ಕೊಳ್ಳಲು ತಿಳಿಸಿದರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲಾಖೆಯನ್ನು ಭೇಟಿ ಮಾಡಲು ತಿಳಿಸಿದರು.

ಖಾಯಂ ನೆಲೆಯಲ್ಲಿ ಗ್ರಾಮ ಕರಣಿಕರನ್ನು ನೇಮಿಸಲು ಬರೆಯುವುದು : ಕಂದಾಯ ಇಲಾಖೆ ವತಿಯಿಂದ ಪ್ರಭಾರ ಗ್ರಾಮಕರಣಿಕ ಮಂಜುನಾಥ ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಅಬೂಬಕ್ಕರ್ ಕೊರಿಂಗಿಲ ನಾನು ತಳ್ಳು ಗಾಡಿ ಇಟ್ಟು ವ್ಯಾಪಾರ ಮಾಡಲು ಪರವಾನಗಿಗಾಗಿ ಅರ್ಜಿ ನೀಡಿದ್ದು ಅದರ ವಿರುದ್ದ ಯಾರೋ ಒಬ್ಬರು ದೂರು ನೀಡಿದ್ದಕ್ಕೆ ಲೈಸೆನ್ಸ್ ನೀಡದಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಲೈಸನ್ಸ್ ಇಲ್ಲದೆ ವ್ಯಾಪಾರ ಮಾಡುವವರು ರಸ್ತೆ ಬದಿ ಎಷ್ಟೋ ಮಂದಿ ಇದ್ದಾರೆ. ನನ್ನಂತಹ ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಸರಿಯೇ ಎಂದು ಪ್ರಶ್ನಿಸಿದ ಅವರು, ನೀವು ತೆಗೆಯುವುದಾದರೆ ಗ್ರಾಮದಲ್ಲಿ ಇರುವ ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆಗೆಯಿರಿ. ನನ್ನ ತಳ್ಳು ಗಾಡಿಯನ್ನು ನಾನೇ ತೆಗೆಯುತ್ತೇನೆ ಎಂದರು. ತಳ್ಳು ಗಾಡಿಯನ್ನು ತಳ್ಳಿಕೊಂಡು ಹೋಗಿ ವ್ಯಾಪಾರ ಮಾಡುವುದು ಕ್ರಮ ಎಂದು ಗ್ರಾಮಕರಣಿಕರು ಹೇಳಿದರು. ಹಿಂದಿನ ತಹಶೀಲ್ದಾರರು ಲೈಸನ್ಸ್ ಬೇಡ ಎಂದು ಹೇಳಿದ್ದರು. ನೂತನ ತಹಶೀಲ್ದಾರರಿಗೆ ಮಾಹಿತಿ ಕೊರತೆ ಇದೆ ಎಂದು ಅಬೂಬಕ್ಕರ್ ಹೇಳಿದರು. ಆಗ ಮಾತನಾಡಿದ ಹಿರಿಯರಾದ ಕೆ.ಪಿ.ಭಟ್ ರವರು ನನಗೆ ತಿಳಿದ ಮಟ್ಟಿಗೆ ಅಂಗಡಿ ಕಟ್ಟಡಗಳಿಗೆ ಲೈಸನ್ಸ್ ಕೊಡುವ ಹಕ್ಕು ಗ್ರಾಮ ಪಂಚಾಯತಿಗೆ ಇರುವುದು. ಗ್ರಾಮಕರಣಿಕರನ್ನು ಈ ಬಗ್ಗೆ ದೂಷಿಸಿ ಏನೂ ಪ್ರಯೋಜನ ಇಲ್ಲ. ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟೋ ಅಂಗಡಿಗಳು ಲೈಸನ್ಸ್ ಇಲ್ಲದೆ ವ್ಯವಹಾರ ಮಾಡುತ್ತಿವೆ. ಪಂಚಾಯತಿಗೆ ಅಷ್ಟು ಕಾಳಜಿ ಇದ್ದರೆ ಅನಧಿಕೃತವಾಗಿರುವುದನ್ನು ಒಂದನ್ನೂ ಬಿಡದೆ ಎಲ್ಲವನ್ನು ತೆಗೆಯಿರಿ. ಈಗ ಇರುವ ಗ್ರಾಮಕರಣಿಕರು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ ಹುದ್ದೆಯನ್ನು ಖಾಯಂ ಮಾಡಲು ಇಲಾಖೆಗೆ ಬರೆಯುವುದು ಒಳ್ಳೆಯದು ಎಂದು ಹೇಳಿದಾಗ ಈಗ ಇರುವವರನ್ನೆ ಖಾಯಂ ಮಾಡಲು ಬರೆಯಲು ನಿರ್ಣಯಿಸಲಾಯಿತು. ಪ್ರಭಾರ ಪಿಡಿಒ ಸಂದೇಶ್ ರವರನ್ನೂ ಇಲ್ಲಿಯೆ ಖಾಯಂ ಮಾಡುವಂತೆ ಕೇಳಿ ಕೊಳ್ಳಲಾಯಿತು.

ಕೈಗೊಂಡ ಪ್ರಮುಖ ನಿರ್ಣಯಗಳು: ಕೀಲಂಪಾಡಿ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಅಲ್ಲಿಯ ನಿವಾಸಿಗಳು ಒತ್ತಾಯಿಸಿದ ಕಾರಣ ಶಾಸಕರಿಗೆ ಬರೆಯಲು ನಿರ್ಣಯಿಸಲಾಯಿತು., ಬೈಲಾಡಿ ಹೊಳೆಯಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು., ಪಂಜೊಟ್ಟು ಎಂಬಲ್ಲಿ ಜಿ.ಪಂ ರಸ್ತೆಯಲ್ಲಿ ಅಗಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಗೆ ಬರೆಯುವುದು., ಮಿತ್ತಡ್ಕ ಒಡ್ಯ ಹೋಗುವ ಜಿ.ಪಂ ಮುಖ್ಯ ರಸ್ತೆಯ ಬದಿ ಮರ ಗಿಡ ಪೊದರು ಬೆಳೆದು ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷಣ ದುರಸ್ತಿಗೆ ಬರೆಯುವುದು., ಕಕ್ಕೂರಿನಲ್ಲಿ ಒಂದು ಮನೆಗೆ ರಸ್ತೆಯೇ ಇಲ್ಲದಿದ್ದು ಅಲ್ಲಿರುವ ಸಮಸ್ಯೆ ಸರಿಪಡಿಸಿ ರಸ್ತೆ ಸಂಪರ್ಕ ನೀಡಲು ಜಿಲ್ಲಾದಿಕಾರಿಗಳಿಗೆ ಬರೆಯುವುದು., ಅರಣ್ಯ ಇಲಾಖೆಯಿಂದ ಸುಧೀರ್ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ಹರಿಣಾಕ್ಷಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜಗೋಪಾಲ್ ಎನ್.ಎಸ್, ಪೊಲೀಸ್ ಇಲಾಖೆಯ ಗ್ರಾಮಾಂತರ ಠಾಣೆಯ ಮಹಿಳಾ ಕಾನ್ ಸ್ಟೇಬಲ್ ಆಶಾ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಸದಸ್ಯರಾದ ಪ್ರಕಾಶ್ ರೈ, ಚಂದ್ರಶೇಖರ ರೈ, ಮೊಯಿದುಕುಂಞ, ಮಹಾಲಿಂಗ ನಾಯ್ಕ, ಉಮಾವತಿ, ಪಾರ್ವತಿ ಎಂ, ಮಹೇಶ್ ಕೆ, ವಿದ್ಯಾಶ್ರೀ, ಗೋಪಾಲ, ಲಲಿತಾ ಚಿದಾನಂದ, ಗಂಗಾಧರ ಗೌಡ, ಬೇಬಿಜಯರಾಂ, ನವೀನ್ ಕುಮಾರ್ ರೈ, ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆ ವಿದ್ಯಾಶ್ರೀ ನಾಡಗೀತೆ ಹಾಡಿದರು. ಪಿಡಿಒ ಸಂದೇಶ್ ಎನ್. ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ಬಾಬು ನಾಯ್ಕ ವರದಿ ಮತ್ತು ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಗಳನ್ನು ವಾಚಿಸಿದರು. ಸಿಬ್ಬಂದಿಗಳಾದ ಸಂದೀಪ್, ಕವಿತಾ, ಸವಿತಾ, ಚಂದ್ರಾವತಿ, ಗ್ರಂಥಾಲಯ ಸಹಾಯಕಿ ಪ್ರೇಮಲತಾ ಸಹಕರಿಸಿದರು. ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.

ನವ ಭಾರತ ನಾರಿ ಅನಿತಾರಿಗೆ ಸನ್ಮಾನ


ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ 9  ವರ್ಷಗಳಲ್ಲಿ ಸುಮಾರು 11 ಕಾಮಗಾರಿಗಳನ್ನು ಯಶಸ್ವಿಯಾಗಿ ನಡೆಸಿ ನವಭಾರತ ನಾರಿ ರಾಜ್ಯ ಪ್ರಶಸ್ತಿ ಪಡೆದ ಅನಿತಾ ಕುವೆಂಜ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ಕಠಿಣ ಕ್ರಮ
ಇತ್ತೀಚೆಗೆ ಪಂಚಾಯತ್ ಅಧ್ಯಕ್ಷೆ ಮನೆಗೆ ತೆರಳುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ತ್ಯಾಜ್ಯ ಸುರಿಯುತ್ತಿರುವುದನ್ನು ನೋಡಿ ವೀಡಿಯೋ ಮಾಡಿದರೂ ಆತ ಕ್ಯಾರೆ ಎನ್ನದೆ ಸುರಿದುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಅಂತವರನ್ನು ಬಿಡದೆ ಅವರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದರು.ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸ್ವಚ್ಚತೆಗೆ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.

ಪಿಡಬ್ಲ್ಯೂಡಿ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ತೋಟಗಾರಿಕೆ, ಕಾರ್ಮಿಕ ಇಲಾಖೆಯಿಂದ ಅಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಜರಾಗದಿದ್ದರೆ ಗ್ರಾಮ ಸಭೆ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here