ಕೇಂದ್ರ ಸರಕಾರ ಜಾರಿಗೆ ತಂದ ಜಿಎಸ್‌ಟಿ ಶ್ರೀಮಂತರನ್ನು ಪೋಷಿಸುವ, ಬಡವರನ್ನು ಪೀಡಿಸುವ ತುಘಲಕ್ ದರ್ಬಾರ್, ವಂಚನೆಯ ನೀತಿಯಾಗಿದೆ-ಅಮಲ ರಾಮಚಂದ್ರ

0

ಪುತ್ತೂರು: ತನ್ನ ಜಿಎಸ್‌ಟಿ ನೀತಿಯನ್ನು ಬದಲಾಯಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿ ಯೋಜನೆ ಶ್ರೀಮಂತರನ್ನು ಪೋಷಿಸುವ ಮತ್ತು ಬಡವರನ್ನು ಪೀಡಿಸುವ ತುಘಲಕ್ ದರ್ಬಾರ್ ಮತ್ತು ವಂಚನೆಯ ಯೋಜನೆಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರರವರು ಹೇಳಿದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈವರೆಗೆ ಯಾವುದೇ ರೀತಿಯ ಜಿಎಸ್‌ಟಿ ಇಲ್ಲದೆ ಜನರಿಗೆ ತಲುಪುತ್ತಿದ್ದ ಅಕ್ಕಿ, ಬೆಲ್ಲ, ಬೇಳೆಕಾಳು, ಹಾಲು, ಮೊಸರು, ಮುಂತಾದ ಪ್ಯಾಕೆಟ್ ಮೇಲೆ 5ಶೇ. ಜಿಎಸ್‌ಟಿಯನ್ನು ವಿಧಿಸಿರುವ ಕೇಂದ್ರ ಸರಕಾರದ ಈ ನಿರ್ಧಾರ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದ್ದು ಶ್ರೀಮಂತರ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು.

25 ಕೆ.ಜಿ ಮೇಲೆ ಜಿಎಸ್‌ಟಿ ಇಲ್ಲ: 25 ಕೆ.ಜಿ ಪ್ಯಾಕ್ ಮೇಲೆ ಜಿಎಸ್‌ಟಿ ಇಲ್ಲ. ಅದಕ್ಕಿಂತ ಕೆಳಗಿನ ಪ್ಯಾಕೆಟ್ ಮೇಲೆ ಜಿಎಸ್‌ಟಿ ವಿಧಿಸಿದೆ. ಬಡವರು, ನಿತ್ಯ ಕೂಲಿ ಕೆಲಸ ಮಾಡುವವರು, ಒಂದೇ ಸಲಕ್ಕೆ 25 ಕೆ.ಜಿ ಗಿಂತ ಹೆಚ್ಚಿನ ದಿನ ಬಳಕೆಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯಲು ಸಾಧ್ಯವೇ? ದಿನನಿತ್ಯ ಬೇಕಾದ ಹಾಲು, ಮೊಸರು, ಅಕ್ಕಿ ಇವುಗಳನ್ನು ಆಯಾ ದಿನಕ್ಕನುಸಾರವಾಗಿ ಬಡವರು ತಂದರೆ ಅದರ ಮೇಲೆ ಜಿ.ಎಸ್.ಟಿ ನೀಡಬೇಕು. ಕೇಂದ್ರ ಸರಕಾರ ಎತ್ತ ಸಾಗುತ್ತಿದೆ ಎಂದು ತಿಳಿಯದಂತಾಗಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಿ.ಎಸ್.ಟಿ ಹಣವನ್ನು ಸಂಗ್ರಹಿಸಿದರೂ ಆ ಹಣ ಎಲ್ಲಿಗೆ ಹೋಗುತ್ತದೆ. ಯಾರ ಕಿಸೆಗೆ ಸೇರುತ್ತದೆ ಎಂದು ತಿಳಿಯುತ್ತಿಲ್ಲ ಎಂದರು.

ಬಿಜೆಪಿಯಲ್ಲಿ ಅಡಿಯಿಂದ ಮುಡಿಯ ವರೆಗೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಇತ್ತೀಚೆಗೆ ಡಾ. ಪ್ರಸಾದ್ ಭಂಡಾರಿಯವರು ನಾಗರಿಕ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಬಿಜೆಪಿಯ ಒಳ್ಳೆಯ ಕಾರ್ಯಕರ್ತನೊಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷನಾದರೆ ಒಂದು ವರ್ಷದೊಳಗೆ ಆತ ಹಣ ಮಾಡುತ್ತಾನೆ’ ಎಂದು ಸತ್ಯವನ್ನೇ ಹೇಳಿದ್ದಾರೆ ಎಂದು ಅಮಲ ಹೇಳಿದರು.

ಆಸ್ಪತ್ರೆಯಿಂದ ಮಸಣದವರೆಗೆ 36 ಶೇ. ಜಿಎಸ್‌ಟಿ ನೀಡಬೇಕಾಗಿದೆ
ಓರ್ವ ವ್ಯಕ್ತಿ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಸೇರಿದರೆ ಅಲ್ಲಿ ಚಿಕಿತ್ಸೆಗಾಗಿ ಬೆಡ್ ಮೇಲೆ ಮಲಗಿದರೆ 18 ಶೇ. ಜಿಎಸ್‌ಟಿ ನೀಡಬೇಕು. ಆ ವ್ಯಕ್ತಿ ಮರಣ ಹೊಂದಿದಲ್ಲಿ ಮಸಣಕ್ಕೆ ಸಾಗಿಸಲು 18 ಶೇ. ಜಿಎಸ್‌ಟಿ ನೀಡಬೇಕು. ಹೀಗೆ ಆ ವ್ಯಕ್ತಿ 36ಶೇ. ಜಿಎಸ್‌ಟಿ ಪಾವತಿಸಿದರೆ ಮಾತ್ರ ಅವನ ಹೆಣ ಸುಡುವ ವ್ಯವಸ್ಥೆಯನ್ನು ನಮ್ಮ ಕೇಂದ್ರ ಸರಕಾರ ಕಲ್ಪಿಸಿಕೊಟ್ಟಿದೆ. ಇದು ನಮ್ಮನ್ನಾಳುವ ಭಂಡ ಸರಕಾರದ ವ್ಯವಸ್ಥೆಯಾಗಿದೆ. ಕೇಂದ್ರ ಸರಕಾರ ತಕ್ಷಣ ಜಿಎಸ್‌ಟಿ ನೀತಿಯನ್ನು ಹಿಂದಕ್ಕೆ ಪಡೆದು ಜನತೆ ನೆಮ್ಮದಿಯ ಬದುಕನ್ನು ಕಾಣುವಂತಾಗಲು ಮುಂದೆ ಬರಬೇಕು ಎಂದು ಅಮಲ ಹೇಳಿದರು.

LEAVE A REPLY

Please enter your comment!
Please enter your name here