ಕೌಕ್ರಾಡಿ ಗ್ರಾ.ಪಂ.ಗ್ರಾಮಸಭೆ:ಪೆರಿಯಶಾಂತಿಯಲ್ಲಿನ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳ ತೆರವು ವಿಚಾರ

0

  • ಗ್ರಾಮಸ್ಥರೊಳಗೆ ಪರ, ವಿರೋಧ ಚರ್ಚೆ; ಆಕ್ರೋಶ, ಗದ್ದಲ
  • ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಮುಂದಿನ ಕ್ರಮಕ್ಕೆ ನಿರ್ಣಯ

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯಶಾಂತಿಯಲ್ಲಿ ಹೆದ್ದಾರಿ ಬದಿ ಇರುವ ಅನಧಿಕೃತ ಅಂಗಡಿಗಳ ತೆರವುಗೊಳಿಸುವ ವಿಚಾರ ಪ್ರಸ್ತಾಪಗೊಂಡು ಗ್ರಾಮಸ್ಥರೊಳಗೆ ಪರ, ವಿರೋಧ ಚರ್ಚೆಯಾಗಿ ಆಕ್ರೋಶ, ಗದ್ದಲ ನಡೆದ ಘಟನೆ ಕೌಕ್ರಾಡಿ ಗ್ರಾ.ಪಂ. ಗ್ರಾಮಸಭೆಯಲ್ಲಿ ನಡೆದಿದೆ. ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.


ಸಭೆ ಜು.21ರಂದು ಗ್ರಾ.ಪಂ.ಅಧ್ಯಕ್ಷೆ ವನಿತಾ ಎಂ.,ರವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ನಿಡ್ಲೆ ಹಾಗೂ ಧರ್ಮಸ್ಥಳ ಗ್ರಾ.ಪಂ.ವ್ಯಾಪ್ತಿಗೆ ಬರುವ ಪೆರಿಯಶಾಂತಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳ ತೆರವು ಮಾಡಲಾಗಿದೆ. ಅದೇ ರೀತಿ ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಗೆ ಬರುವ ಪೆರಿಯಶಾಂತಿಯಲ್ಲಿರುವ ಅನಧಿಕೃತ ಅಂಗಡಿಗಳನ್ನೂ ತೆರವುಗೊಳಿಸಬೇಕೆಂದು ಗ್ರಾಮಸ್ಥ ರೋಶನ್ ಹಾಗೂ ಇತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವರ್ಗೀಸ್ ಅಬ್ರಹಾಂ, ಇಸ್ಮಾಯಿಲ್ ಹಾಗೂ ಇತರರು, ಅನಧಿಕೃತ ಅಂಗಡಿಗಳ ತೆರವುಗೊಳಿಸುವ ಬದಲು ಅಲ್ಲಿ ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲಿ ಅಂಗಡಿಗಳಿರುವುದರಿಂದ ದರೋಡೆ ಪ್ರಕರಣಗಳು ಕಡಿಮೆಯಾಗಿವೆ. ಹೆದ್ದಾರಿಯಲ್ಲಿ ರಾತ್ರಿ ವೇಳೆ ಅಪಘಾತ ನಡೆದಾಗ ಅಲ್ಲಿನ ವ್ಯಾಪಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿದೆ ಎಂದರು. ಈ ವೇಳೆ ಮಾತನಾಡಿದ ಉಪ ವಲಯಾರಣ್ಯಾಧಿಕಾರಿ ಸಂದೀಪ್‌ರವರು, ಅಲ್ಲಿ ಸ್ವಚ್ಛತೆಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪಂಚಾಯತ್‌ಗೂ ಪತ್ರ ಬರೆಯಲಾಗಿದೆ ಎಂದರು. ಈ ಬಗ್ಗೆ ಗ್ರಾಮಸ್ಥರೊಳಗೆ ಪರ, ವಿರೋಧ ಚರ್ಚೆಯಾಗಿ ಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಕಾವೇರಿದ ಚರ್ಚೆ ನಡೆಯುತ್ತಿದ್ದಂತೆ ಅಲ್ಲಿನ ವ್ಯಾಪಾರಿಗಳೂ ಮಧ್ಯಪ್ರವೇಶಿಸಿ ಅಲ್ಲಿರುವ ಅಂಗಡಿಯವರಿಂದ ಯಾರಿಗೆ ತೊಂದರೆಯಾಗಿದೆ ಎಂದು ಹೇಳಲಿ ಎಂದರು. ನೋಡೆಲ್ ಅಧಿಕಾರಿಯೂ ಆಗಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ರವರು ಮಾತನಾಡಿ, ಅರಣ್ಯ ಜಾಗದಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಪೆರಿಯಶಾಂತಿಯಲ್ಲಿ ಅಂಗಡಿಯೊಂದರ ಮೇಲೆ ಮರಬಿದ್ದು ಜಖಂಗೊಂಡ ಪ್ರಕರಣ ಈಗಾಗಲೇ ನಡೆದಿದೆ. ಅಲ್ಲಿ ಸಾವು ಆಗಿದ್ದರೆ ಅದಕ್ಕೆ ಯಾರು ಹೊಣೆ ?, ನಿಡ್ಲೆಯಿಂದ ಪಾರ್ಪಿಕಲ್ಲು ತನಕ ಹೆದ್ದಾರಿ ಬದಿಯ ಅನಧಿಕೃತ ಅಂಗಡಿ ತೆರವುಗೊಳಿಸಲಾಗಿದೆ. ಪೆರಿಯಶಾಂತಿಯಲ್ಲೂ ಅನಧಿಕೃತ ಅಂಗಡಿಗಳ ತೆರವು ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರ ವ್ಯವಹಾರವೂ ಮಾಡಲಾಗಿದೆ ಎಂದರು.

ಅಪಾಯಕಾರಿ ಮರ ತೆರವುಗೊಳಿಸಿದ್ದೀರಾ ?
ಹೆದ್ದಾರಿ ಬದಿಯ ಅಪಾಯಕಾರಿ ಮರ ತೆರವುಗೊಳಿಸಲು ಪ್ರತಿ ಗ್ರಾಮಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗುತ್ತಿದ್ದೆ. ಈ ತನಕ ತೆರವು ಮಾಡಲಾಗಿದೆಯೇ, ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಕ್ರಮ ಯಾಕೆ ? ಎಂದು ವರ್ಗೀಸ್ ಅಬ್ರಹಾಂ ಪ್ರಶ್ನಿಸಿದರು. ಮಣ್ಣಗುಂಡಿ ಸಮೀಪ ಕಾಡಿನೊಳಗೆ ಮನೆಯೊಂದಿದ್ದು ಅವರಿಗೆ ಕಾಡಿನ ಮಧ್ಯೆ ಹೇಗೆ ದಾರಿ ಮಾಡಿಕೊಡಲಾಗಿದೆ ಎಂದು ಇಸ್ಮಾಯಿಲ್‌ರವರು ಪ್ರಶ್ನಿಸಿದರು. ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಗ್ರಾಮಸ್ಥ ಸಿಂಜುರವರು, ಆಹಾರೋತ್ಪನ್ನ ತಯಾರಿಕೆ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯವರ ದೃಢೀಕರಣ ಇಲ್ಲದೇ ಪಂಚಾಯತ್‌ನಿಂದ ಪರವಾನಿಗೆ ನೀಡುವುದಿಲ್ಲ ಎಂದಿದ್ದೀರಿ ?, ದಾಖಲೆ ನೀಡಿದ ಬಳಿಕವೇ ಪರವಾನಿಗೆ ನೀಡಲಾಗಿದೆ. ಅನಧಿಕೃತ ಅಂಗಡಿ ತೆರವು ವಿಚಾರದಲ್ಲಿ ಹಿಂದೇಟು ಯಾಕೆ ಎಂದು ಪ್ರಶ್ನಿಸಿದರು. ಮತ್ತೆ ಪರ, ವಿರೋಧ ಅಭಿಪ್ರಾಯ ಬಂದು ಸಭೆಯಲ್ಲಿ ಗದ್ದಲ ನಡೆದು ಗೊಂದಲದ ಗೂಡಾಯಿತು. ಪೆರಿಯಶಾಂತಿಯಲ್ಲಿ ರಾಜ್ಯ ಹೆದ್ದಾರಿ ಬದಿ ಇರುವ ಅಂಗಡಿಗಳ ತೆರವಿಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆಯವರಿಗೆ ಪತ್ರ ಬರೆಯುವುದಾಗಿ ಪಿಡಿಒ ಮಹೇಶ್ ಜಿ.ಎನ್.ರವರು ತಿಳಿಸಿ ಚರ್ಚೆಗೆ ತೆರೆ ಎಳೆದರು. ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಗ್ರಾಮಸ್ಥ ಜಾರ್ಜ್‌ಕುಟ್ಟಿ ಉಪದೇಶಿ ಹಾಗೂ ಇತರರು ಆಗ್ರಹಿಸಿದರು.

ತ್ಯಾಜ್ಯ ಎಸೆಯುವವರಿಗೆ ದಂಡ:
ಪೆರಿಯಶಾಂತಿ ಪ್ರದೇಶದಲ್ಲಿ ಹೆದ್ದಾರಿ ಬದಿ ತ್ಯಾಜ್ಯ, ಅರಣ್ಯದೊಳಗೆ ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಇದರ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಸುಜಿತ್ ಹಾಗೂ ಇತರರು ಒತ್ತಾಯಿಸಿದರು. ಈ ಬಗ್ಗೆಯೂ ಕಾವೇರಿದ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಸದಸ್ಯ ಲೋಕೇಶ್ ಬಾಣಜಾಲುರವರು, ಸ್ಥಳೀಯರು ಕೋಳಿತ್ಯಾಜ್ಯ ಹೆದ್ದಾರಿ ಬದಿ ಎಸೆಯುತ್ತಿಲ್ಲ. ಬೈಕಂಪಾಡಿಯವರೊಬ್ಬರು ಬಂದು ಕೋಳಿ ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ ಎಂದರು. ತ್ಯಾಜ್ಯ ಎಸೆಯುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಗ್ರಾಮಸ್ಥರು ತ್ಯಾಜ್ಯ ಎಸೆಯುವವರಿಗೆ ೧೦ ಸಾವಿರ ರೂ., ದಂಡ ವಿಧಿಸಬೇಕು. ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರಿಗೆ ೫ ಸಾವಿರ ರೂ.,ಬಹುಮಾನ ನೀಡಬೇಕೆಂದೂ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು. ಪೆರಿಯಶಾಂತಿಯಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಪೊಲೀಸ್ ಇಲಾಖೆಯಿಂದಲೂ ಮನವಿ ಮಾಡಲಾಯಿತು. ಆಲಂಪಾಡಿ ತೋಡಿಗೆ ವೇಸ್ಟೇಜ್ ನೀರು ಬಿಡಲಾಗುತ್ತಿದ್ದು, ಇದರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸ್ವಚ್ಛತೆ ಕಾಪಾಡಿದಲ್ಲಿ ದಂಡ, ಪರವಾನಿಗೆ ರದ್ದು:
ಅಂಗಡಿ, ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಒಣಕಸ, ಹಸಿಕಸ ವಿಂಡಗಣೆ ಮಾಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸ್ವಚ್ಚತೆ ಕಾಪಾಡದೇ ಇದ್ದಲ್ಲಿ ಅಂಗಡಿಯವರಿಗೆ ದಂಡ ವಿಧಿಸಿ, ಪರವಾನಿಗೆ ರದ್ದುಗೊಳಿಸಲು ನಿರ್ಣಯಿಸಲಾಯಿತು. ಒಣಕಸ ಸಂಗ್ರಹಕ್ಕೆ ಅಂಗಡಿಯವರಿಗೆ ಗೋಣಿಚೀಲ ಕೊಡಲಾಗಿದೆ. ಇದರ ಸೂಕ್ತ ರೀತಿಯಲ್ಲಿ ಬಳಕೆ ಆಗಬೇಕೆಂದು ಸದಸ್ಯರಾದ ಲೋಕೇಶ್ ಬಾಣಜಾಲು, ಕುರಿಯಾಕೋಸ್ ಟಿ.ಎಂ.ಯಾನೆ ರೋಯಿಯವರು ತಿಳಿಸಿದರು.

ಕೊರಮೇರು ರಸ್ತೆ ಅಭಿವೃದ್ದಿಗೊಳಿಸಿ:
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಿಂದ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೊರಮೇರು ರಸ್ತೆ ಅಭಿವೃದ್ಧಿಗೆ ಮನವಿ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲವೇ, ಇಚ್ಲಂಪಾಡಿ 2ನೇ ವಾರ್ಡ್‌ಗೆ ಯಾವುದೇ ಅನುದಾನವೂ ಬರುತ್ತಿಲ್ಲ. ಸದಸ್ಯರಿಗೆ ಅನುದಾನ ತರಿಸಿ ಅಭಿವೃದ್ಧಿಗೆ ಸಾಧ್ಯವಾಗದಿದ್ದಲ್ಲಿ ರಾಜೀನಾಮೆ ನೀಡಿ. ಮುಂದೆ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥ ಜಯರಾಜ್ ಕೊರಮೇರು, ಸತೀಶ್‌ರವರು ಆಕ್ರೋಶಿತರಾಗಿ ಹೇಳಿದರು. ಸದ್ರಿ ರಸ್ತೆ ಅಭಿವೃದ್ಧಿಗೆ ಅನುದಾನ ಕಾದಿರಿಸಲಾಗಿದೆ ಎಂದು ಸದಸ್ಯರು ಮಾಹಿತಿ ನೀಡಿದರು. ಕೊರಮೇರು ರಸ್ತೆ ಪರಿಶೀಲನೆಗೆ ನಿರ್ಣಯ ಕೈಗೊಳ್ಳಲಾಯಿತು.

ನಿಡ್ಯಡ್ಕ ರಸ್ತೆ ಅಭಿವೃದ್ಧಿಯಾಗಿಲ್ಲ:
ಇಚ್ಲಂಪಾಡಿ ಗ್ರಾಮದ ನಿಡ್ಯಡ್ಕದಲ್ಲಿ ರಸ್ತೆ ಅಭಿವೃದ್ಧಿಗೆ 31,976 ರೂ.,ಖರ್ಚು ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಲ್ಲಿ ಕೆಲಸವೇ ನಡೆದಿಲ್ಲ ಎಂದು ಗ್ರಾಮಸ್ಥರಾದ ಪ್ರವೀಣ್, ಬಿಜು ಹಾಗೂ ಇತರರು ಆರೋಪಿಸಿದರು. ಸಭೆ ಮುಗಿದ ಬಳಿಕ ಇದರ ಪರಿಶೀಲನೆ ನಡೆಸಬೇಕೆಂದೂ ಗ್ರಾಮಸ್ಥರು ಆಗ್ರಹಿಸಿದರು. ಸದ್ರಿ ರಸ್ತೆ ಮರು ಪರಿಶೀಲನೆಗೆ ನಿರ್ಣಯ ಕೈಗೊಳ್ಳಲಾಯಿತು.

ಚರಂಡಿ ಬ್ಲಾಕ್-ಆರೋಪ:
ಹೊಸಮಜಲುನಲ್ಲಿ ಚರಂಡಿ ಬ್ಲಾಕ್ ಆಗಿ ನೀರು ರಸ್ತೆ ಮೇಲೆಯೇ ಹರಿದು ಹೋಗುತ್ತಿದೆ. ಅಂಗನವಾಡಿ, ಶಾಲೆಗೆ ಹೋಗುವವರೂ ಈ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರಮೇಶ್ ಬಾಣಜಾಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಲೋಕೇಶ್ ಬಾಣಜಾಲುರವರು, ಇಲ್ಲಿ ಚರಂಡಿ ಕಾಂಕ್ರಿಟ್‌ಗೆ ೫ ಲಕ್ಷ ರೂ.,ಅನುದಾನ ಮೀಸಲಿಡಲಾಗಿದೆ. ಮಳೆ ಕಡಿಮೆ ಆದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು. ಅಲ್ಲಿಯ ತನಕ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ರಮೇಶ್‌ರವರು ಒತ್ತಾಯಿಸಿದರು.

ರಸ್ತೆ ಮಾರ್ಜಿನ್‌ನಲ್ಲೇ ಆವರಣ ಗೋಡೆ:
ಗೌಡ್‌ಸಾಗ್-ಆಲಂಪಾಡಿ-ಹಿದಾಯತ್‌ನಗರ ರಸ್ತೆಯಲ್ಲಿ ರಸ್ತೆಗೆ ಹೊಂದಿಕೊಂಡೇ ಕಂಪೌಂಡ್ ನಿರ್ಮಾಣ ಮಾಡಲಾಗಿದೆ. ಚರಂಡಿ ಇಲ್ಲದೇ ಇರುವುದರಿಂದ ನೀರು ಹೆದ್ದಾರಿಯಲ್ಲಿ ಹರಿಯುತ್ತಿದೆ. ಚರಂಡಿ ಮಾಡಲು ಜನ ಅವಕಾಶ ನೀಡುತ್ತಿಲ್ಲ ಎಂದು ಇಸ್ಮಾಯಿಲ್ ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆದು ಇಲ್ಲಿ ಕಂದಾಯ ಹಾಗೂ ಗ್ರಾಮ ಪಂಚಾಯತ್‌ನಿಂದ ಜಂಟಿ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಹಿದಾಯತ್‌ನಗರದಲ್ಲಿರುವ ಟಿಸಿಗೆ ಸಂಪರ್ಕ, ವಿದ್ಯುತ್‌ಗೆ ತಾಗುತ್ತಿರುವ ರಬ್ಬರ್ ಹಾಗೂ ಇತರೇ ಮರಗಳ ಗೆಲ್ಲು ತೆರವುಗೊಳಿಸುವಂತೆಯೂ ಗ್ರಾಮಸ್ಥರು ಆಗ್ರಹಿಸಿದರು.

ಆಟದ ಮೈದಾನಕ್ಕೆ ಜಾಗ ಕೊಡಿ:
ಇಚ್ಲಂಪಾಡಿಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣದ ಸಂದರ್ಭದಲ್ಲಿ ಆಟದ ಮೈದಾನ ಬಿಟ್ಟುಕೊಡಲಾಗಿದೆ. ಇಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಯುವಕರೇ ಸೇರಿಕೊಂಡು ೯೮ ಸಾವಿರ ರೂ.,ಖರ್ಚು ಮಾಡಿದ್ದೇವೆ. ಸೇವಾಕೇಂದ್ರ ನಿರ್ಮಾಣವಾದ ಬಳಿಕ ಶಾಲಾ ಮೈದಾನದಲ್ಲಿ ಆಟ ಆಡಲಾಗುತ್ತಿತ್ತು. ಇಲ್ಲಿ ಆಕ್ಷೇಪ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಹಾಲು ಸೊಸೈಟಿಯ ಮುಂಭಾಗದಲ್ಲಿ ಈಗ ಆಟ ಆಡಲಾಗುತ್ತಿದೆ. ಇಲ್ಲಿಗೂ ಆಕ್ಷೇಪ ಬರುತ್ತಿದೆ. ಆದ್ದರಿಂದ ಇಚ್ಲಂಪಾಡಿಯಲ್ಲಿ ಸಾರ್ವಜನಿಕ ಆಟದ ಮೈದಾನಕ್ಕೆ ಜಾಗ ನೀಡಬೇಕೆಂದು ಸುನೀಶ್ ಹಾಗೂ ಇತರರು ಆಗ್ರಹಿಸಿದರು. ವೃದ್ಧಾಶ್ರಮ, ಅನಾಥಶ್ರಮಕ್ಕೂ ಜಾಗ ಕಾದಿರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಸೇವಾಕೇಂದ್ರ ಸೋರಿಕೆ:
ರಾಜೀವ ಗಾಂಧಿ ಸೇವಾಕೇಂದ್ರ, ಗ್ರಾಮಕರಣಿಕರ ಕಚೇರಿ, ಅಂಚೆ ಕಚೇರಿ ಸೋರಿಕೆಯಾಗುತ್ತಿದೆ ಎಂದು ಗ್ರಾಮಸ್ಥರು ಸಭೆ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ಮಹೇಶ್ ಜಿ.ಎನ್.,ರವರು, ರಾಜೀವಗಾಂಧಿ ಸೇವಾ ಕೇಂದ್ರದ ಮೇಲೆ ನೀರು ನಿಲ್ಲುತ್ತಿದೆ. ಇದರ ದುರಸ್ತಿಗೆ ಸೂಚಿಸಲಾಗಿದೆ. ಮೇಲ್ಛಾವಣಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಕರಣಿಕರ ಹಾಗೂ ಅಂಚೆ ಕಚೇರಿಗೆ ಅಳವಡಿಸಿರುವ ಸಿಮೆಂಟ್ ಶೀಟ್ ಹಾಗೂ ಗೋಡೆ ಮಧ್ಯೆ ಬಿರುಕು ಬಿಟ್ಟು ನೀರು ಸೋರುತ್ತಿದೆ. ಅದನ್ನೂ ದುರಸ್ತಿಗೊಳಿಸಲಾಗುವುದು ಎಂದು ಪಿಡಿಒ ಹೇಳಿದರು.

ನೀರಿನ ಸಂಪರ್ಕ ಕಡಿತ-ಆಕ್ರೋಶ:
೧೫೦೦ ರೂ.,ಬಿಲ್ಲು ಬಾಕಿ ಇದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಕಡಿತಗೊಳಿಸುವ ಮೊದಲು ಮಾಹಿತಿ ನೀಡಬೇಕಿತ್ತು ಎಂದು ಗ್ರಾಮಸ್ಥ ರಮೇಶ್ ಬಾಣಜಾಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿಡಿಒರವರು, ೫೦೦ ರೂಪಾಯಿಗಿಂತ ಹೆಚ್ಚು ಬಿಲ್ಲು ಬಾಕಿ ಇರಿಸಿಕೊಂಡವರ ಸಂಪರ್ಕ ಕಡಿತಗೊಳಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳಲಾಗಿದೆ ಎಂದರು. ೫ ಸಾವಿರ ರೂ.ಬಿಲ್ಲು ಬಾಕಿ ಇರಿಸಿಕೊಂಡವರು ೨೫೦೦ ರೂ.,ಪಾವತಿಸಿದ ಬಳಿಕ ಸಂಪರ್ಕ ಕೊಡಲಾಗಿದೆ. ಇದಕ್ಕೆ ನಿರ್ಣಯ ಅನ್ವಯಿಸುವುದಿಲ್ಲವೇ ಎಂದು ರಮೇಶ್‌ರವರು ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆದು ಇನ್ನು ಮುಂದೆ ೫೦೦ ರೂಪಾಯಿಗಿಂತ ಹೆಚ್ಚು ಬಿಲ್ಲು ಬಾಕಿ ಇರಿಸಿಕೊಂಡವರಿಗೆ ೭ ದಿನಕ್ಕೆ ಮುಂಚಿತವಾಗಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಬಾಲಕೃಷ್ಣ, ಅಂಚೆ ಇಲಾಖೆಯ ಗೋಪಾಲಕೃಷ್ಣ, ಜಿ.ಪಂ.ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಕೃಷಿ ಅಧಿಕಾರಿ ಭರಮಣ್ಣನವರ, ಮೆಸ್ಕಾಂ ಜೆಇ ರಮೇಶ್, ಪಶುವೈದ್ಯಾಧಿಕಾರಿ ಡಾ.ಅಜಿತ್, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ವಿಠಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ, ಗ್ರಾಮಕರಣಿಕರಾದ ಅಶ್ವಿನಿ, ಸಿದ್ದಲಿಂಗ ಜಂಗಮಶೆಟ್ಟಿ, ನೆಲ್ಯಾಡಿ ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಿ., ವಲಯಾರಣ್ಯಾಧಿಕಾರಿಗಳಾದ ಸಂದೀಪ್, ಸುನೀಲ್‌ಕುಮಾರ್‌ರವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ಜಿ.ಭವಾನಿ, ಸದಸ್ಯರಾದ ಜನಾರ್ದನ ಎಂ., ಲೋಕೇಶ್ ಬಿ., ಸವಿತಾ ಎಸ್., ಪುಷ್ಪಾ, ಶೈಲ, ದೇವಕಿ, ಹನೀಫ್, ಡೈಸಿ ವರ್ಗೀಸ್, ದಿನೇಶ್ ಕುಮಾರ್, ವಿಶ್ವನಾಥ ಎಂ, ಸಂಧ್ಯಾ ಪಿ.ಸಿ., ಕುರಿಯಾಕೋಸ್ ಟಿ.ಎಂ.ಯಾನೆ ರೋಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಜಿ.ಎನ್.ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ಕಸ್ತೂರಿ ವಂದಿಸಿದರು.

ಇಲಾಖಾಧಿಕಾರಿಗಳ ಗೈರು, ಆಕ್ಷೇಪ:
ಸಭೆ ಆರಂಭವಾಗುತ್ತಿದ್ದಂತೆ ಇಲಾಖಾಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು. ಪಿಡ್ಲ್ಯುಡಿ, ತೋಟಗಾರಿಕೆ, ಕೆಎಸ್‌ಆರ್‌ಟಿಸಿ ಸೇರಿದಂತೆ ಕೆಲವೊಂದು ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಿಯಾಗಿದ್ದರು. ಈ ಬಗ್ಗೆ ತಾ.ಪಂ.ಇಒ ಹಾಗೂ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವಂತೆ ಗ್ರಾಮಸ್ಥರು ಆಗ್ರಹಿಸಿದರು. ಬೆಳಿಗ್ಗೆ ೧೧ ಗಂಟೆಗೆ ಆರಂಭಗೊಂಡ ಗ್ರಾಮಸಭೆ ಸಂಜೆ 4.30ರ ತನಕ ನಡೆಯಿತು. ಗ್ರಾಮಸ್ಥರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ, ಅಹವಾಲು ಸಲ್ಲಿಸಿದರು.

ಪ್ರಮುಖ ಬೇಡಿಕೆಗಳು:
* ಖಾಯಂ ಕಾರ್ಯದರ್ಶಿ, ಖಾಯಂ ಗ್ರಾಮಕರಣಿಕರ ನೇಮಕಗೊಳಿಸುವಂತೆ ಆಗ್ರಹ
* ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್, ವೈದ್ಯರ ಓಡಾಟಕ್ಕೆ ವಾಹನದ ವ್ಯವಸ್ಥೆ, ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್, ಲ್ಯಾಬ್ ಟೆಕ್ನಿಷಿಯನ್‌ಗೆ ಮನವಿ
* ನೆಲ್ಯಾಡಿ ಪೇಟೆಯಲ್ಲಿ ತಾತ್ಕಾಲಿಕ ಬಸ್ ತಂಗುದಾಣ ಆಗಬೇಕು.
* ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸುಗಳು ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಬಂದು ಹೋಗಬೇಕು.
* ಇಚ್ಲಂಪಾಡಿ ಗ್ರಾಮದ ಗುಂಡಿಕಂಡ, ಕಲ್ಲರ್ಬದಲ್ಲಿ ಆನೆಗಳು ಕೃಷಿ ತೋಟಕ್ಕೆ ನುಗ್ಗದಂತೆ ತಡೆಗೋಡೆ ರಚನೆ ಮಾಡುವಂತೆ ಆಗ್ರಹ

LEAVE A REPLY

Please enter your comment!
Please enter your name here