ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

0

  • ಜಾತಿ ಸಂಘಟನೆಯಿಂದ ದೇಶ ಆರೋಗ್ಯ ಸೇವೆ – ಸಂಜೀವ ಮಠಂದೂರು
  • ಕ್ಲಪ್ತ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ -ಡಾ.ಕೆ.ವಿ ಚಿದಾನಂದ

 

ಪುತ್ತೂರು: ಕೇವಲ ಸಂಘಟನೆ ಮತ್ತು ಸಂಘದ ಅಭಿವೃದ್ಧಿ ಮಾತ್ರ ಸೀಮಿತವಾಗದೆ ಸಾರ್ವಜನಿಕ ವಲಯದಲ್ಲಿ ಸಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಒಕ್ಕಲಿಗ ಗೌಡ ಸೇವಾ ಸಂಘವು ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜು.೨೪ರಂದು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಾಗು ಆರೋಗ್ಯ ಕಾಪಾಡುವ ಮಾಹಿತಿ ಕಾರ್ಯಗಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯ ಸುಳ್ಯ, ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ ಮತ್ತು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ನಡೆದ ಶಿಬಿರವನ್ನು ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

 


ಜಾತಿ ಸಂಘಟನೆಯಿಂದ ದೇಶ ಆರೋಗ್ಯ ಸೇವೆ:
ಶಿಬಿರದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಾತಿ ಸಂಘಟನೆ ಕೇವಲ ಸಮುದಾಯ ಬಗ್ಗೆ ಯೋಚನೆ ಮಾಡುವುದಲ್ಲ.

ದೇಶದ ಬಗ್ಗೆ, ದೇಶದ ಪ್ರತಿಯೊಬ್ಬ ಪ್ರಜೆಯ ಬಗ್ಗೆ ಒಂದು ಸಮುದಾಯ ಯೋಚನೆ ಮಾಡಿ ದೇಶದ ಎಲ್ಲರು ಆರೋಗ್ಯವಂತರಾಗಬೇಕೆಂದು ಹಾಕಿರುವ ಕಾರ್ಯಕ್ರಮ ಮಾದರಿಯಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬಂತೆ ಕೆ.ವಿ.ಜಿ.ಮಹಾವಿದ್ಯಾಲಯ ಸಂಸ್ಥೆಯ ಮೂಲಕ ಈ ಕಾರ್ಯಕ್ರಮ ಹಾಕಿಕೊಂಡಿರುವುದರಿಂದ ಸಾರ್ವಜನಿಕರಿಗೆ ಎಲ್ಲಾ ಬಗೆ ರೋಗಗಳಿಗೆ ಔಷಧಿ ಸಿಗಲಿದೆ ಎಂದರು. ಆರೋಗ್ಯದ ಕುರಿತು ಕಾಳಜಿ ವಹಿಸಲು ನಮ್ಮಲ್ಲಿ ಸಮಯವಿಲ್ಲ. ಆದರೆ ರೋಗ ಬಂದಾಗ ತಿಂಗಳು ಗಟ್ಟಲೆ ಆಸ್ಪತ್ರೆಯಲ್ಲಿ ಮಲಗುವ ಪರಿಸ್ಥಿತಿ ಬಂದಾಗ ಸಮಯವೇ ನಮ್ಮನ್ನು ಹತೋಟಿಯಲ್ಲಿಡುತ್ತದೆ ಎಂದು ಅಭಿಪ್ರಾಯಪಟ್ಟ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರ ಆರೋಗ್ಯದ ಕಾಳಜಿಯನ್ನು ವಹಿಸಿಕೊಂಡು ಹಲವು ಯೋಜನೆ ಸೌಲಭ್ಯಗಳನ್ನು ನೀಡಿದೆ ಎಂದರು.

ಕ್ಲಪ್ತ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ:
ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಮಾತನಾಡಿ ವಾಹನಕ್ಕೆ ಸರ್ವಿಸ್ ಮಾಡಲು ಸಮಯವಿದ್ದವರಿಗೆ ತಮ್ಮ ಶರೀರದ ಸರ್ವಿಸ್ ಬಗ್ಗೆ ಯೋಚನೆ ಇರುವುದಿಲ್ಲ. ಇದು ನಮ್ಮ ದುರಂತ. ನಮ್ಮ ಆರೋಗ್ಯವನ್ನು ಮೊದಲು ಕಾಪಾಡಬೇಕು ಎಂದ ಅವರು ಸಂಸ್ಥೆಯಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ಅದೇ ರೀತಿ ಸರಕಾರದಿಂದ ಹಲವು ಯೋಜನೆಗಳು ಇವೆ. ಅದನ್ನು ಪಡೆಯಲು ಕ್ಲಪ್ತ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡುವಂತೆ ವಿನಂತಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಅವರು ಅಧ್ಯಕ್ಷತೆ ವಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಐಡಿಎ ಪುತ್ತೂರು ಸಮುದಾಯ ದಂತ ಆರೋಗ್ಯ ವಿಭಾಗದ ನಿರ್ದೇಶಕ ಡಾ.ಶ್ರೀಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರನ್ನು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಐಡಿಎ ಕೋಶಾಧಿಕಾರಿ ಡಾ.ಚರಣ್ ಕಜೆ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ರಕ್ತದಾನ ಶಿಬಿರದ ಹಿರಿಯ ಸಿಬ್ಬಂದಿ ಸಜನಿ ಮಾರ್ಟಿಸ್ ಅವರನ್ನು ಗೌರವಿಸಲಾಯಿತು. ಶಿಬಿರದ ಸಂಚಾಲಕ ರಾಧಾಕೃಷ್ಣ ನಂದಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಮುಂಗ್ಲಿಮನೆ, ಲಿಂಗಪ್ಪ ಗೌಡ, ಶ್ರೀಧರ್ ಕಣಜಾಲು, ಸುರೇಶ್, ಪ್ರೇಮಾನಂದ ಅತಿಥಿಗಳನ್ನು ಗೌರವಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ಸ್ವಾಗತಿಸಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ವಂದಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಹಲವು ಸೌಲಭ್ಯಗಳು:
ಶಿಬಿರಕ್ಕೆ ಆಗಮಿಸಿದವರಿಗೆ ನೋಂದಾವಣೆ ಮಾಡಿ ಬಿ.ಪಿ ಪರೀಕ್ಷೆ ಮಾಡಿಸಿದ ಬಳಿಕ ಅವರಿಗೆ ಬೇಕಾದ ಚಿಕಿತ್ಸಾ ಸೌಲಭ್ಯ ನೀಡಲಾಯಿತು. ಶಿಬಿರದಲ್ಲಿ ಜನಲರ್ ಮಡಿಸಿನ್ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ರೋಗ ವಿಭಾಗ, ಕಿವಿ,ಮೂಗು, ಗಂಟಲು ರೋಗ, ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಸ್ತ್ರೀ-ರೋಗ ವಿಭಾಗ, ಎಲುಬು ಮತ್ತು ಕೀಲು ವಿಭಾಗ, ದಂತ ಚಿಕಿತ್ಸಾ ವಿಭಾಗಗಳಿದ್ದು, ಆಯುರ್ವೇದ ಮಹಾವಿದ್ಯಾಲಯದ ಸೌಲಭ್ಯಗಳಿಗೆ ಸಂಬಂಧಿಸಿ ಪಂಚಕರ್ಮ, ಕಾಯಚಿಕಿತ್ಸಾ, ಪ್ರಸೂತಿತಂತ್ರ, ಶಲ್ಯತಂಥ್ರ, ಕೌಮಾರಭೃತ್ಯ, ಶಾಲಾಕ್ಯತಂತ್ರ ಇತ್ಯಾದಿ ಚಿಕಿತ್ಸಾ ಸೌಲಭ್ಯಗಳು ನೀಡಲಾಯಿತು. ಚಿಕಿತ್ಸೆಗೆ ಸಂಬಂಧಿಸಿ ಲಭ್ಯವಿರುವ ಜೌಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದ್ದಲ್ಲಿ ಚಕಿತ್ಸೆಗೆ ಕೆ.ವಿ.ಜಿ ಆಸ್ಪತ್ರೆಯ ಮುಂದುವರಿಕಾ ಕಾರ್ಡ್‌ಗಳನ್ನು ನೀಡಲಾಯಿತು. ಲಿಂಗಪ್ಪ ಗೌಡ ಅವರ ಪುತ್ರಿ ಅರ್ಚನಾ ಅವರು ಪ್ರಥಮ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಹಾಸ್ಟೇಲ್ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here