ವಿಶ್ವಕರ್ಮ ಸಭಾಭವನದಲ್ಲಿ ಪಿಎಂಎಸ್‌ವೈಎಂ ನೋಂದಣಿ ಶಿಬಿರ

0

ಪುತ್ತೂರು: ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘ, ವಿಶ್ವಕರ್ಮ ಯುವ ಸಮಾಜ ಹಾಗೂ ಕಾರ್ಮಿಕ ಇಲಾಖೆಯ ಪುತ್ತೂರು ವೃತ್ತದ ಆಶ್ರಯದಲ್ಲಿ ಅಸಂಘಟಿತ ಕಾರ್ಮಿಕ ಪಿಂಚಣಿ ಯೋಜನೆ (ಪಿಎಂಎಸ್‌ವೈಎಂ) ಅಡಿ ನೋಂದಾವಣೆ ಶಿಬಿರ ಜುಲೈ 24ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ವೃತ್ತ ನಿರೀಕ್ಷಕ ಗಣಪತಿ ಹೆಗ್ಡೆ, 18ರಿಂದ 40 ವರ್ಷದವರೆಗಿನ ಎಲ್ಲಾ ಅಸಂಘಟಿತ ವರ್ಗದ ಕಾರ್ಮಿಕರಿಗೆ ಪಿಎಂಎಸ್‌ವೈಎಂ ಯೋಜನೆಯಡಿ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಕೇಂದ್ರ ಸರಕಾರವು ಚಂದಾದಾರರ ಖಾತೆಗೆ ಜಮೆ ಮಾಡುತ್ತದೆ. ಈ ಯೋಜನೆಯಡಿ 60 ವರ್ಷದ ನಂತರ ತಿಂಗಳಿಗೆ ಮಾಸಿಕ ಕನಿಷ್ಠ 3000 ರೂ.ನಂತೆ ಚಂದಾದಾರರ ಖಾತೆಗೆ ಪಿಂಚಣಿ ರೂಪದಲ್ಲಿ ಜಮೆ ಆಗುತ್ತದೆ. ತುರ್ತು ಸಂದರ್ಭದಲ್ಲಿ ಕಟ್ಟಿದ ಹಣವನ್ನು ಬಡ್ಡಿ ಸಮೇತ ಹಿಂಪಡೆಯಬಹುದಾಗಿದೆ. ಪಿಎಫ್ ಇಲ್ಲದ ಎಲ್ಲಾ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಚಂದಾದಾರರು ಆರಂಭಿಕ ವಂತಿಗೆಯೊಂದಿಗೆ ಆಧಾರ್‌ಕಾರ್ಡ್, ನಾಮನಿರ್ದೇಶಿತರ ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊಬೈಲ್ ಹ್ಯಾಂಡ್‌ಸೆಟ್ ತರಬೇಕು ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಎಸ್.ಎನ್. ಮಾತನಾಡಿ, ದೇಶದ ಶೇ. 40ರಷ್ಟು ಜನ ಅಸಂಘಟಿತ ವರ್ಗಕ್ಕೆ ಸೇರಿದ್ದಾರೆ. ಆದರೆ ದೇಶದ ಶೇ. 50ರಷ್ಟು ಆದಾಯ ಅಸಂಘಟಿತ ವರ್ಗದಿಂದಲೇ ಬರುತ್ತದೆ. ಆದರೆ ಈ ಅಸಂಘಟಿತ ವರ್ಗದ ಕಾರ್ಮಿಕರ ಜೀವನಕ್ಕೆ ಆಧಾರವಿಲ್ಲದ ಪರಿಸ್ಥಿತಿ ಇದೆ. ಇಳಿ ವಯಸ್ಸಿನಲ್ಲಿ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಸ್ವಾವಲಂಭಿಗಳಾಗಿ ಬದುಕಬೇಕು ಎನ್ನುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಸರಕಾರ ಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿದ ನಿದರ್ಶನ ನಮ್ಮ ಮುಂದಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಪಿಎಂಎಸ್‌ವೈಎಂ ಹಾಗೂ ಇ-ಶ್ರಮ ಕಾರ್ಡ್ ಯೋಜನೆಗಳ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು. ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ್ ಕೆ. ಫಲಾನುಭವಿಗಳ ಹೆಸರು ವಾಚಿಸಿದರು. ವಿಶ್ವಕರ್ಮ ಯುವ ಸಮಾಜದ ಉಪಾಧ್ಯಕ್ಷ ವಾಸು ಆಚಾರ್ಯ ಉಪಸ್ಥಿತರಿದ್ದರು. ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಅಣ್ಣಿ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಶ್ರೀನಿವಾಸ್ ಪ್ರಾರ್ಥಿಸಿ, ವಿಶ್ವಕರ್ಮ ಯುವ ಸಮಾಜದ ಕಾರ್ಯದರ್ಶಿ ಪ್ರಕಾಶ್ ಸ್ವಾಗತಿಸಿ, ಕೋಶಾಧಿಕಾರಿ ವಸಂತ ಆಚಾರ್ಯ ಬೊಳುವಾರು ವಂದಿಸಿದರು. ಜತೆ ಕಾರ್ಯದರ್ಶಿ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸುದ್ದಿ ಜನಸೇವಾ ಕೇಂದ್ರ ಪುತ್ತೂರು ಹಾಗೂ ಈಶ್ವರಮಂಗಲದ ನಮಿತಾ ಹಾಗೂ ಶಿವಕುಮಾರ್ ಅವರು ಶಿಬಿರದಲ್ಲಿ ನೋಂದಾವಣೆ ಮಾಡಿದರು.


 ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು.


ಸುದ್ದಿ ಜನಸೇವಾ ಕೇಂದ್ರದ ಮೂಲಕ ಶಿಬಿರ ನಡೆಯಿತು.

LEAVE A REPLY

Please enter your comment!
Please enter your name here