ಅನೀಶ್ ತಂಡದಿಂದ ಪತ್ರಕರ್ತರ ಸಂಘವನ್ನು ವಶಕ್ಕೆ ಪಡೆಯುವ ಹುನ್ನಾರ

0

  • ಚುನಾವಣಾ ಪ್ರಕ್ರಿಯೆ ಮುಂದೂಡಿಕೆಯಾಗಿದ್ದರೂ ಅನೀಶ್ ಬಳಗದಿಂದ ಅರ್ಜಿ ಸಲ್ಲಿಕೆ
  • ಅರ್ಜಿ ಸ್ವೀಕರಿಸಲು ನಿರಾಕರಿಸಿ ಪ್ರೆಸ್‌ಕ್ಲಬ್‌ನಿಂದ ಹೊರಬಂದ ಚುನಾವಣಾಧಿಕಾರಿ ಸುಧಾಕರ್ ಪಡೀಲ್
  • ಪತ್ರಕರ್ತರ ಸಂಘದ ಸದಸ್ಯ ಸಂಶುದ್ದೀನ್ ಸಂಪ್ಯರಿಂದ ಆರು ಮಂದಿಯ ಅರ್ಜಿ ಸ್ವೀಕಾರ

 


ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆಯುತ್ತಿರುವ ‘ಹೈಡ್ರಾಮ’ ದಿನೇ ದಿನೇ ಮುಂದುವರಿಯುತ್ತಿದೆ. ಈ ಮೂಲಕ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಳಿಯ ಸರಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಪತ್ರಿಕಾ ಭವನ’ ಪ್ರತಿಯೊಬ್ಬರ ಕುತೂಹಲದ ಕೇಂದ್ರಬಿಂದು ಆಗುತ್ತಿದೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಸಂಯೋಜಿಸಲ್ಪಟ್ಟಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಆಗಸ್ಟ್ 6ರಂದು ಪತ್ರಿಕಾ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ಮುಂದೂಡಿದ್ದರೂ ಪತ್ರಕರ್ತರ ಸಂಘದಿಂದ ಉಚ್ಚಾಟಿಸಲ್ಪಟ್ಟಿದ್ದ ಅನೀಶ್ ಕುಮಾರ್ ಮತ್ತು ಆತನ ಕಾರ್ಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿರುವ ಮತ್ತು ಆತನಿಂದ ಪ್ರಯೋಜನ ಪಡೆಯುತ್ತಿರುವ ತಂಡದವರು ಪತ್ರಕರ್ತರ ಸಂಘವನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿದೆ. ಸರಿಯಾದ ಮಾರ್ಗಸೂಚಿಯಂತೆ ಚುನಾವಣಾ ಪ್ರಕ್ರಿಯೆ ನಡೆಯದೇ ಇರುವುದರಿಂದ ಚುನಾವಣೆ ನಡೆಸುವುದಕ್ಕೆ ಸಂಘದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕಾರ ಮುಂತಾದ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ರದ್ದುಗೊಳಿಸಿದ್ದರು. ಆದರೂ ಪತ್ರಕರ್ತರ ಸಂಘದ ಸದಸ್ಯ ಸಂಶುದ್ದೀನ್ ಸಂಪ್ಯರವರು ಅನಧಿಕೃತವಾಗಿ ಆರು ಮಂದಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಿದ್ದರು. ಚುನಾವಣೆ ಅಧಿಕೃತವಾಗಿ ಮುಂದೂಡಲ್ಪಟ್ಟಿರುವುದರಿಂದ ಇತರ ಯಾರೂ ಸದಸ್ಯರು ಅರ್ಜಿ ಸಲ್ಲಿಸಿರಲಿಲ್ಲ. ಆದರ ಲಾಭ ಪಡೆದು ಸಂಶುದ್ದೀನ್ ಮತ್ತು ಅನೀಶ್‌ನ ತಂಡದವರು ಅವಿರೋಧವಾಗಿ ಪದಾಧಿಕಾರಿಗಳ ಘೋಷಣೆಗೆ ಕಣ ಸಿದ್ಧಪಡಿಸಿದ್ದ ಘಟನೆ ನಡೆದಿದೆ. ಈ ವಿದ್ಯಮಾನ ಭಾರೀ ಪರ ವಿರೋಧ ಚರ್ಚೆ, ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರ ಮುಂದೆ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಚುನಾವಣೆಗೆ ತಕರಾರು ಅರ್ಜಿ ಸಲ್ಲಿಸಿದ್ದ ದೀಪಕ್ ಉಬಾರ್, ನಝೀರ್ ಕೊಯಿಲ-ಪುರಸ್ಕರಿಸಿದ್ದ ಚುನಾವಣಾಧಿಕಾರಿ ಸುಧಾಕರ ಪಡೀಲ್:

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಪದಾಽಕಾರಿಗಳ ಆಯ್ಕೆಗಾಗಿ ಜುಲೈ 9ರಂದು ಮಹಾಸಭೆಯ ಬಳಿಕ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಹಿರಿಯ ಸದಸ್ಯರೂ ಆಗಿರುವ ಸುಧಾಕರ ಪಡೀಲ್‌ರವರನ್ನು ಚುನಾವಣಾಧಿಕಾರಿಯಾಗಿ ಒಮ್ಮತದಿಂದ ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತಲ್ಲದೆ ಪತ್ರಕರ್ತರ ಸಂಘದ ನಿರ್ಣಯ ಪುಸ್ತಕದಲ್ಲಿ ಆ ಬಗ್ಗೆ ನಿರ್ಣಯ ದಾಖಲಿಸಲಾಗಿತ್ತು. ಚುನಾವಣೆ ನಡೆಸಲು ತಯಾರಿ ನಡೆಯುತ್ತಿದ್ದಂತಯೇ ಸಂಘದ ಲೆಕ್ಕಪತ್ರಗಳು ಪರಿಶೀಲನೆಯಾಗಿಲ್ಲ, ಅದರ ಮಂಡನೆಗೆ ಸಭೆ ಕರೆದು ನಂತರ ಸಭೆ ಮತ್ತು ಚುನಾವಣೆ ನಡೆಯಬೇಕು ಎಂದು ಸದಸ್ಯ ಉದಯ ಕುಮಾರ್ ಯು.ಎಲ್. ತಿಳಿಸಿದ್ದರು. ಇತರ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರು. ಬಳಿಕ ಪತ್ರಕರ್ತರ ಸಂಘದ ಸದಸ್ಯರಾದ ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲರವರು ಚುನಾವಣಾ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಚುನಾವಣೆ ನಡೆಸುವ ಕುರಿತು ಪತ್ರಕರ್ತರ ಸಂಘದಲ್ಲಿ ಕೈಗೊಂಡಿರುವ ನಿಯಮದ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಯುತ್ತಿಲ್ಲ, ಪತ್ರಕರ್ತರ ಸಂಘದಲ್ಲಿ ಕೈಗೊಂಡಿರುವ ನಿರ್ಣಯದ ಪ್ರಕಾರ ಈಗಾಗಲೇ ಪದಾಧಿಕಾರಿಗಳ ಸ್ಥಾನಕ್ಕೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಿತ್ತು, ನಾಮಪತ್ರ ಸ್ವೀಕಾರ, ಪರಿಶೀಲನೆ, ವಾಪಸ್ ಪಡೆಯುವಿಕೆ, ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ ಇತ್ಯಾದಿ ಪ್ರಕ್ರಿಯೆ ನಡೆಯಬೇಕಿತ್ತು. ಅದ್ಯಾವುದೂ ನಡೆದಿಲ್ಲ. ಈಗ ಏಕಾಏಕಿ ಚುನಾವಣೆ ನಡೆಸುವುದರಿಂದ ಕೆಲವರಿಗಷ್ಟೇ ಅವಕಾಶ ದೊರೆತು ಹಲವರು ತಮ್ಮ ಹಕ್ಕಿನಿಂದ ವಂಚಿತರಾಗುತ್ತಾರೆ. ಆದ್ದರಿಂದ ಚುನಾವಣೆ ಮುಂದೂಡಬೇಕು, ಇಲ್ಲದೇ ಇದ್ದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲ ತಕರಾರು ಅರ್ಜಿಯಲ್ಲಿ ತಿಳಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ್ದ ಚುನಾವಣಾಽಕಾರಿ ಸುಧಾಕರ ಪಡೀಲ್‌ರವರು ಆಕ್ಷೇಪಣಾ ಅರ್ಜಿಯಲ್ಲಿ ಸತ್ಯಾಂಶ ಇದೆ. ಹಾಗಾಗಿ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವುದಾಗಿ ತಿಳಿಸಿದ್ದರಲ್ಲದೆ ಅದುವರೆಗೆ ಈಗಿನ ಆಡಳಿತ ಮಂಡಳಿಯೇ ಮುಂದುವರಿಯಲಿ ಎಂದು ತಿಳಿಸಿದ್ದರು. ಆಗಸ್ಟ್ 6ರಂದು ಚುನಾವಣೆ ನಡೆಸುವುದು, ಅದಕ್ಕೆ ಮೊದಲು ನಾಮಪತ್ರ ಸಲ್ಲಿಕೆ ಮುಂತಾದ ಪ್ರಕ್ರಿಯೆ ನಡೆಸುವುದು ಎಂದು ಜುಲೈ 9ರಂದು ನಿರ್ಧರಿಸಲಾಗಿತ್ತು.

ನಿಗದಿತ ಚುನಾವಣೆಗೆ ಉದಯ ಕುಮಾರ್ ಆಕ್ಷೇಪ-ಚುನಾವಣೆ ರದ್ದುಗೊಳಿಸಿದ ಸುಧಾಕರ ಪಡೀಲ್:

ಆಗಸ್ಟ್ 6ರಂದು ಪತ್ರಕರ್ತರ ಸಂಘದ ಚುನಾವಣೆಯನ್ನು ಪತ್ರಿಕಾ ಭವನದಲ್ಲಿ ನಡೆಸುವುದು, ಜುಲೈ 15ರಂದು ನಾಮಪತ್ರ ಸ್ವೀಕಾರ ಆರಂಭಿಸುವುದು, ಜು.19 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ, ಜು.20ರಂದು ನಾಮಪತ್ರ ಪರಿಶೀಲನೆ ನಡೆಸುವುದು, ಜು.21 ನಾಮಪತ್ರ ವಾಪಸ್ ಪಡೆಯುವಿಕೆಗೆ ಕೊನೆಯ ದಿನ ಎಂದು ನಿಗದಿ ಪಡಿಸಲಾಗಿತ್ತು. ಇದರಿಂದಾಗಿ ಹೊಸ ಅಧ್ಯಕ್ಷರಾದಿಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲು ಪತ್ರಕರ್ತರ ಸಂಘದಲ್ಲಿ ಉತ್ಸಾಹ ಕಂಡು ಬಂದಿತ್ತು. ಚುನಾವಣಾ ಕಣ ರಂಗೇರುವುದರಲ್ಲಿತ್ತು. ಈ ಮಧ್ಯೆ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಹಿರಿಯ ಸದಸ್ಯರೂ ಆಗಿರುವ ಉದಯ ಕುಮಾರ್ ಯು.ಎಲ್.ರವರು ಪತ್ರಕರ್ತರ ಸಂಘದ ಚುನಾವಣೆ ನಡೆಸುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದ ಉದಯ ಕುಮಾರ್‌ರವರು ಪ್ರಸಕ್ತ ಇರುವ ಆಡಳಿತ ಮಂಡಳಿಯ ಲೆಕ್ಕಪತ್ರ ಇನ್ನೂ ತೃಪ್ತಿಕರವಾಗಿ ಮಂಡನೆಯಾಗದಿರುವುದರಿಂದ ಮತ್ತು ಆ ಬಗ್ಗೆ ಸಭೆ ನಡೆಯದಿರುವುದರಿಂದ ಹೊಸ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು, ಕಳೆದ ಮಹಾಸಭೆಯಲ್ಲಿ ಲೆಕ್ಕಪತ್ರ ಪರಿಶೀಲನೆಯ ಹೊಣೆ ನನಗೆ ನೀಡಲಾಗಿದ್ದು ಈವರೆಗೆ ಲೆಕ್ಕಪತ್ರದ ಯಾವುದೇ ದಾಖಲೆಗಳನ್ನು ಸಂಘದ ಅಧ್ಯಕ್ಷ ಯಾ ಕಾರ್ಯದರ್ಶಿ ಯಾ ಕೋಶಾಧಿಕಾರಿ ಸಲ್ಲಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ನನ್ನ ಆಕ್ಷೇಪಣೆಯನ್ನು ಮಾನ್ಯ ಮಾಡಬೇಕಾಗಿ ವಿನಂತಿ ಎಂದು ತಿಳಿಸಿದ್ದರು. ಆಕ್ಷೇಪಣಾ ಪತ್ರ ಪರಿಶೀಲಿಸಿದ ಸುಧಾಕರ ಪಡೀಲ್‌ರವರು ಉದಯ ಕುಮಾರ್‌ರವರ ಪತ್ರದಲ್ಲಿ ಸತ್ಯಾಂಶ ಇರುವುದರಿಂದ ಚುನಾವಣಾ ಪ್ರಕ್ರಿಯೆಯನ್ನು ಸಭೆ ನಡೆದು ಲೆಕ್ಕಪತ್ರ ಮಂಡನೆಯಾಗುವವರೆಗೆ ಅನಿರ್ದಿಷ್ಟಾವಧಿಯವರೆಗೆ ಮುಂದೂಡುವುದಾಗಿ ತಿಳಿಸಿದ್ದರು. ಅದರಂತೆ ಚುನಾವಣಾ ಪ್ರಕ್ರಿಯೆ ರದ್ದುಗೊಂಡಿತ್ತು.

ರದ್ದುಗೊಳಿಸಿದ ನಂತರ ಅರ್ಜಿ ಸಲ್ಲಿಸಲು ಮುಂದಾದರು…..: ಸುಧಾಕರ ಪಡೀಲ್ ಅರ್ಜಿ ಸ್ವೀಕರಿಸಲು ನಿರಾಕರಿಸಿದರು…:

ಆಗಸ್ಟ್ 6ರಂದು ನಡೆಸಲು ನಿರ್ಧರಿಸಲಾಗಿದ್ದ ಚುನಾವಣೆಯನ್ನು ಸದಸ್ಯರ ಆಕ್ಷೇಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತಾದರೂ ಈ ಮಧ್ಯೆ ಪತ್ರಕರ್ತರ ಸಂಘದಲ್ಲಿ ಮತ್ತೊಂದು ಸುತ್ತಿನ ಹೈಡ್ರಾಮ ನಡೆಯಿತು. ಜುಲೈ 19ರಂದು ಮಧ್ಯಾಹ್ನದ ವೇಳೆಗೆ ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರಿಗೆ ದೂರವಾಣಿ ಕರೆ ಮಾಡಿದ ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ. ಸಂದೀಪ್ ಕುಮಾರ್‌ರವರು ತುರ್ತಾಗಿ ಪತ್ರಿಕಾ ಭವನಕ್ಕೆ ಬರುವಂತೆ ತಿಳಿಸಿದ್ದರು. ಸುಧಾಕರ ಪಡೀಲ್‌ರವರು ಕೂಡಲೇ ಪತ್ರಿಕಾ ಭವನಕ್ಕೆ ಬಂದರಾದರೂ ಅಲ್ಲಿ ಸಂದೀಪ್ ಕುಮಾರ್ ಇರಲಿಲ್ಲ. ಪತ್ರಕರ್ತರ ಸಂಘದವರಾದ ಸಂಶುದ್ದೀನ್ ಸಂಪ್ಯ, ಅಜಿತ್ ಕುಮಾರ್, ಪ್ರವೀಣ್ ಕುಮಾರ್ ಬೊಳುವಾರು, ರಾಜೇಶ್ ಪಟ್ಟೆ, ಕುಮಾರ್ ಕಲ್ಲಾರೆ ಮತ್ತು ಕೃಷ್ಣಪ್ರಸಾದ್ ಬಲ್ನಾಡು ಮತ್ತು ತಂಡದ ನಾಯಕ ಅನೀಶ್ ಕುಮಾರ್ ಅಲ್ಲಿದ್ದರು. ವಿಷಯ ಏನೆಂದು ಸುಧಾಕರ ಪಡೀಲ್‌ರವರು ವಿಚಾರಿಸಿದಾಗ 6 ಜನರ ಅರ್ಜಿ ಬಂದಿದೆ ಅದನ್ನು ಸ್ವೀಕರಿಸಬೇಕು ಎಂದು ಸಂಶುದ್ದೀನ್ ಸಂಪ್ಯ ಹೇಳಿದರು. ಚುನಾವಣೆ ಮುಂದೂಡಲಾಗಿದೆ, ಸ್ವೀಕಾರ ಮುಂತಾದ ಪ್ರಕ್ರಿಯೆ ರದ್ದು ಮಾಡಲಾಗಿದೆ, ಈಗ ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸುಧಾಕರ ಪಡೀಲ್ ತಿಳಿಸಿದರು. ಅರ್ಜಿ ಸ್ವೀಕರಿಸಬೇಕು ಎಂದು ಮತ್ತೆಯೂ ಅಲ್ಲಿದ್ದ ಕೆಲವರಿಂದ ಒತ್ತಾಯ ಕೇಳಿ ಬಂದಾಗ ಈ ಬಗ್ಗೆ ನಾನು ವಕೀಲರ ಜತೆ ಚರ್ಚಿಸುತ್ತೇನೆ, ನಂತರ ತಿಳಿಸುತ್ತೇನೆ ಎಂದು ಹೇಳಿ ಯಾವುದೇ ಅರ್ಜಿಯನ್ನು ನೋಡದೆ ಯಾರ‍್ಯಾರು ಹಾಕಿದ್ದಾರೆ ಎಂದು ಪರಿಶೀಲಿಸದೆ ಸುಧಾಕರ ಪಡೀಲ್‌ರವರು ಪತ್ರಿಕಾ ಭವನದಿಂದ ಹೊರ ಬಂದರು.

ಅನೀಶ್ ತಂಡದಿಂದ ಅರ್ಜಿ ಸ್ವೀಕರಿಸಿ ಪ್ರವೀಣರಿಗೆ ಅರ್ಜಿ ಹಸ್ತಾಂತರಿಸಿದ ಸಂಶುದ್ದೀನ್-ಸಂದೀಪ್‌ರಿಗೆ ಅರ್ಜಿ ಹಸ್ತಾಂತರಿಸಿದ ಪ್ರವೀಣ್:

ಅರ್ಜಿ ಸ್ವೀಕರಿಸಲು ನಿರಾಕರಿಸಿ ಪತ್ರಿಕಾ ಭವನದಿಂದ ಸುಧಾಕರ ಪಡೀಲ್‌ರವರು ಹೊರ ಬಂದ ಬಳಿಕ ಪತ್ರಕರ್ತರ ಸಂಘದ ಸದಸ್ಯ ಸಂಶುದ್ದೀನ್ ಸಂಪ್ಯರವರು ಅರ್ಜಿ ಸ್ವೀಕರಿಸಿದರು. ತಾನು ಸ್ವೀಕರಿಸಿದ ಆರು ಅರ್ಜಿಗಳನ್ನು ಸಂಶುದ್ದೀನ್ ಸಂಪ್ಯರವರು ಪತ್ರಕರ್ತರ ಸಂಘದ ಮೆನೇಜರ್ ಪ್ರವೀಣ್ ಕುಮಾರ್ ಬೊಳುವಾರುರವರಿಗೆ ಹಸ್ತಾಂತರಿಸಿದರು. ಪ್ರವೀಣ್‌ರವರು ಈ ಅರ್ಜಿಗಳನ್ನು ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ರವರಿಗೆ ಹಸ್ತಾಂತರಿಸಿದರು. ಪತ್ರಕರ್ತರ ಸಂಘದ ಚುನಾವಣೆ ರದ್ದುಗೊಂಡಿದ್ದರೂ ಅರ್ಜಿ ಸ್ವೀಕರಿಸಲಾಗಿದೆ ಎಂಬ ವಿಚಾರ ಪತ್ರಕರ್ತರ ಸಂಘದೊಳಗೆ ಭಾರೀ ಚರ್ಚೆಗೆ ಕಾರಣವಾಯಿತು. ಕಾನೂನು ಬಾಹಿರವಾಗಿ ಅರ್ಜಿ ಸ್ವೀಕರಿಸಲಾಗಿದೆ ಎಂದೂ, ಪತ್ರಕರ್ತರ ಸಂಘದ ನಿರ್ಣಯಕ್ಕೆ ವಿರೋಧವಾಗಿ ಪತ್ರಕರ್ತರ ಸಂಘದ ಕೆಲವು ಸದಸ್ಯರು ಅನಽಕೃತವಾಗಿ ಚುನಾವಣಾ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದೂ, ಈ ವಿಚಾರ ಕೋರ್ಟ್ ಮೆಟ್ಟಿಲೇರುತ್ತದೆ ಎಂದೂ ಚರ್ಚೆ ನಡೆಯುತ್ತಿತ್ತು. ಈ ನಡುವೆ, ಅಜಿತ್ ಕುಮಾರ್‌ರವರು ಕರೆ ಮಾಡಿ ಅರ್ಜಿ ಸಲ್ಲಿಸುವಂತೆ ಹೇಳಿದ್ದರಿಂದ ಅರ್ಜಿ ಸಲ್ಲಿಸಿದ್ದ ಪತ್ರಕರ್ತರ ಸಂಘದ ಮಾಜಿ ಕೋಶಾಧಿಕಾರಿಯೂ ತಾನು ಕೋಶಾಧಿಕಾರಿಯಾಗಿದ್ದ ವೇಳೆ ಪ್ರಾಮಾಣಿಕವಾಗಿ ಲೆಕ್ಕಪತ್ರ ನಿರ್ವಹಿಸಿ ಶಿಸ್ತುಬದ್ಧ ವ್ಯವಹಾರ ನಡೆಸುತ್ತಿದ್ದ ಹರೀಶ್ ಕೃಷ್ಣಾ ಸ್ಟುಡಿಯೋರವರು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲ ಇರುವ ಹಿನ್ನೆಲೆಯಲ್ಲಿ ತನ್ನ ಅರ್ಜಿ ವಾಪಸ್ ಪಡೆಯಲು ನಿರ್ಧರಿಸಿದರಲ್ಲದೆ, ಸಂಶುದ್ದೀನ್ ಸಂಪ್ಯರವರಿಗೆ ದೂರವಾಣಿ ಕರೆ ಮಾಡಿ ಈ ಚುನಾವಣೆಯ ವಿಚಾರದಲ್ಲಿ ನಾನು ಇಲ್ಲ, ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನನ್ನ ಅರ್ಜಿ ಹರಿದು ಹಾಕಿ ಎಂದು ಹೇಳಿದರು. ಆ ಅರ್ಜಿಗಳೆಲ್ಲಾ ಪ್ರವೀಣ್ ಕುಮಾರ್ ಬೊಳುವಾರುರವರಲ್ಲಿದೆ ಎಂದು ಸಂಶುದ್ದೀನ್ ಸಂಪ್ಯ ಈ ವೇಳೆ ಹೇಳಿದರು. ನಂತರ ಪ್ರವೀಣ್ ಕುಮಾರ್‌ರವರಿಗೆ ದೂರವಾಣಿ ಕರೆ ಮಾಡಿದ ಹರೀಶ್‌ರವರು ನಿಮ್ಮ ಕೈಯಲ್ಲಿರುವ ನನ್ನ ಅರ್ಜಿಯನ್ನು ಹರಿದು ಹಾಕಿ, ಓಟಿನ ವಿಷಯದಲ್ಲಿ, ಕೋರ್ಟ್ ವಿಚಾರದಲ್ಲಿ ನಾನು ಇಲ್ಲ, ನನಗೆ ಅಷ್ಟು ಪುರುಸೊತ್ತೂ ಇಲ್ಲ ಎಂದು ಹೇಳಿದರು. ಈ ವೇಳೆ ಪ್ರವೀಣ್‌ರವರು ‘ಆಯ್ತು’ ಎಂದು ಹೇಳಿದರು ಎಂದು ತಿಳಿದು ಬಂದಿದೆ.

ಅರ್ಜಿಗಳನ್ನು ತನಗೆ ತೋರಿಸುವಂತೆ ಸೂಚಿಸಿದ ಸುಧಾಕರ ಪಡೀಲ್:

ಚುನಾವಣೆ ರದ್ದುಗೊಂಡಿದ್ದರೂ ಅನಧಿಕೃತವಾಗಿ ಕೆಲವರು ಪತ್ರಿಕಾ ಭವನದಲ್ಲಿ ವ್ಯವಹಾರ ನಡೆಸಿಕೊಂಡು ಅರ್ಜಿ ಸ್ವೀಕಾರ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕರಿಸಿ ಅರ್ಜಿಯ ಸ್ಕ್ರುಟಿನಿ(ಪರಿಶೀಲನೆ) ನಡೆಸುವ ಬಗ್ಗೆ ವಿಚಾರಿಸಿದ್ದ ಸಂಶುದ್ದೀನ್ ಸಂಪ್ಯರವರಿಗೆ ದೂರವಾಣಿ ಕರೆ ಮಾಡಿದ ಸುಧಾಕರ ಪಡೀಲ್‌ರವರು ನೀವು ಸ್ವೀಕರಿಸಿರುವ ಅರ್ಜಿಗಳನ್ನು ತನಗೆ ತೋರಿಸಬೇಕು ಎಂದು ಹೇಳಿದರು. ಆ ಅರ್ಜಿಗಳೆಲ್ಲಾ ಪ್ರವೀಣ್ ಕುಮಾರ್ ಬೊಳುವಾರುರವರಲ್ಲಿದೆ ಎಂದು ಸಂಶುದ್ದೀನ್ ಹೇಳಿದರು. ಬಳಿಕ ಪ್ರವೀಣ್‌ರವರಿಗೆ ದೂರವಾಣಿ ಕರೆ ಮಾಡಿ ಸುಧಾಕರ ಪಡೀಲ್ ವಿಚಾರಿಸಿದಾಗ ಆ ಅರ್ಜಿಗಳು ಎಲ್ಲಾ ಸಂದೀಪ್ ಕುಮಾರ್‌ರವರಲ್ಲಿದೆ ಎಂದು ಪ್ರವೀಣ್ ತಿಳಿಸಿದರು. ಅರ್ಜಿಯನ್ನು ಸ್ವೀಕರಿಸಿದವರು ಯಾರು, ಅರ್ಜಿಗೆ ಸಹಿ ಹಾಕಿದವರು ಯಾರು ಎಂದು ಸುಧಾಕರ ಪಡೀಲ್ ವಿಚಾರಿಸಿದಾಗ ಅದೆಲ್ಲಾ ನಾನು ನೋಡಿಲ್ಲ ಎಂದು ಪ್ರವೀಣ್ ಕುಮಾರ್ ಹೇಳಿದರು. ಆಗ ಸುಧಾಕರ್‌ರವರು ಆ ಅರ್ಜಿಗಳನ್ನು ನನಗೆ ತೋರಿಸಬೇಕು ಎಂದು ಅವರಿಗೆ ಆದೇಶ ನೀಡಿದರು ಎಂದು ಮಾಹಿತಿ ಲಭ್ಯವಾಗಿದೆ.

ಪತ್ರಿಕಾ ಭವನದಲ್ಲಿ ಚುನಾವಣಾ ಮುಂದೂಡಿಕೆ ನೊಟೀಸ್ ಅಳವಡಿಕೆ

ಚುನಾವಣಾ ಪ್ರಕ್ರಿಯೆ ಮುಂದೂಡಿರುವ ಬಗ್ಗೆ ಪುತ್ತೂರು ಪತ್ರಿಕಾ ಭವನದಲ್ಲಿ ನೊಟೀಸ್ ಅಳವಡಿಸಿದ್ದ ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ‘ಮಾನ್ಯರೇ ಪುತ್ತೂರು ತಾಲೂಕು ಪತ್ರಕರ್ತರ ಸಂಘ (ರಿ.) ಪುತ್ತೂರು ಇದರ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಯಾಗಿ ನನ್ನನ್ನು ಆಯ್ಕೆ ಮಾಡಿರುತ್ತೀರಿ. ಇದೇ ಆಗಸ್ಟ್ 6ರಂದು ಪತ್ರಿಕಾ ಭವನದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದ್ದು ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಈ ಮಧ್ಯೆ, ಸಂಘದ ಸದಸ್ಯರಿಂದ ಚುನಾವಣೆಗೆ ಆಕ್ಷೇಪಣೆ ವ್ಯಕ್ತವಾಗಿದೆ. ಸದ್ರಿ ಪತ್ರಕರ್ತರ ಸಂಘದ ಲೆಕ್ಕಪತ್ರ ಸರಿಯಾಗಿ ಮಂಡನೆ ಆಗದಿರುವುದು, ಲೆಕ್ಕಪತ್ರ ಮಂಡನೆಗೆ ಅನುಮೋದನೆ ಆಗದಿರುವುದು, ಲೆಕ್ಕಪತ್ರ ಮಂಡನೆಗಾಗಿ ಸಭೆ ನಡೆಸುವುದು ಎಂದು ನಿರ್ಧರಿಸಲಾಗಿದ್ದರೂ ಸಭೆ ನಡೆಯದೇ ಇರುವುದು, ಮಹಾಸಭೆ ಅಪೂರ್ಣವಾಗಿ ನಡೆದಿರುವುದು ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಪರಾಮರ್ಶೆ ನಡೆಸಿದಾಗ ಸಂಘಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ತೀರ್ಮಾನಿಸಿರುತ್ತೇನೆ. ಹಾಗಾಗಿ ಚುನಾವಣಾ ಪ್ರಕ್ರಿಯೆಯನ್ನು ಅನಿಽಷ್ಟಾವಽಗೆ ಮುಂದೂಡಿರುತ್ತೇನೆ. ನಾಮಪತ್ರ ಸ್ವೀಕಾರ ಇತ್ಯಾದಿ ಪ್ರಕ್ರಿಯೆಯನ್ನು ರದ್ದು ಪಡಿಸಿರುತ್ತೇನೆ ಎಂದು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ’ ಎಂದು 15-07-2022ರಂದು ಪತ್ರಿಕಾ ಭವನದಲ್ಲಿ ನೊಟೀಸ್ ಅಳವಡಿಸಿದ್ದರು.

ಪತ್ರಿಕಾ ಭವನದಲ್ಲಿ ಸ್ಥಳಾವಕಾಶ ಕೋರಿ ಪುತ್ತೂರಿನಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘದವರು ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರಿಂದ ಮನವಿ

ಸ್ಥಳಾವಕಾಶ ದೊರಕದಿದ್ದರೆ ಪ್ರತಿಭಟನೆ ಮತ್ತು ಹೋರಾಟದ ಎಚ್ಚರಿಕೆ

ಸರಕಾರಿ ಕಟ್ಟಡದಲ್ಲಿರುವ ಪುತ್ತೂರಿನ ಪತ್ರಿಕಾ ಭವನದಲ್ಲಿ ತಮ್ಮ ಸಂಘದ ಪುತ್ತೂರಿನ ಸದಸ್ಯರುಗಳಿಗೆ ಅವರ ಪತ್ರಿಕಾ ಚಟುವಟಿಕೆಗಳಿಗೆ ಸ್ಥಳಾವಕಾಶ ನೀಡಬೇಕೆಂದು ಕರ್ನಾಟಕ ಪತ್ರಕರ್ತರ ಸಂಘದವರು ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಸದಸ್ಯರು ಪುತ್ತೂರಿನ ಶಾಸಕ ಸಂಜೀವ ಮಠಂದೂರುರವರಿಗೆ, ಜಿಲ್ಲಾಧಿಕಾರಿಗಳಿಗೆ, ವಾರ್ತಾಧಿಕಾರಿಗಳಿಗೆ ಮತ್ತು ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರಿಗೆ ಮನವಿ ಸಲ್ಲಿಸಿದ್ದರು. ಪುತ್ತೂರು ಪತ್ರಕರ್ತರ ಸಂಘದಲ್ಲಿ ಅವ್ಯವಹಾರ ನಡೆಸುತ್ತಿರುವ ಅನೀಶ್ ಕುಮಾರ್ ತಂಡದ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ತಮಗೆ ನ್ಯಾಯ ದೊರಕದೆ ಇದ್ದರೆ ಪ್ರತಿಭಟನೆ ಮತ್ತು ಹೋರಾಟ ನಡೆಸುವುದಾಗಿ ಎರಡೂ ಯೂನಿಯನ್‌ನ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here