ಪ್ರಧಾನಿ ಮೋದೀಜಿಯವರೇ, ಎಲ್ಲಾ ಪಕ್ಷದವರೇ, ಅವರೆಲ್ಲರ ಅಭಿಮಾನಿಗಳೇ, ಸಾರ್ವಜನಿಕರೇ…ಮನೆ ಮನೆ ತಿರಂಗ ದೇಶ ಪ್ರೇಮದ, ಅಭಿಮಾನದ, ಒಗ್ಗಟ್ಟಿನ ಸಂಕೇತವೇ ಸರಿ.

0
  • ಆ ಪ್ರೇಮ, ಅಭಿಮಾನ, ಒಗ್ಗಟ್ಟು, ಲಂಚ-ಭ್ರಷ್ಟಾಚಾರ ಇಲ್ಲದ ಉತ್ತಮ ಸೇವೆಯ ದೇಶವನ್ನಾಗಿ ಮಾಡಿದರೆ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರಕಿ, ಅಭಿವೃದ್ಧಿಯ ಪಥದಲ್ಲಿ ಸಾಗಿ, ಆಚರಣೆ ಅರ್ಥಪೂರ್ಣವಾದೀತಲ್ಲವೇ

ಈ ಸಲದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ದೇಶಪ್ರೇಮಕ್ಕೆ, ಭಾರತೀಯರೆಂಬ ಅಭಿಮಾನಕ್ಕೆ, ನಮ್ಮಲ್ಲಿನ ಒಗ್ಗಟ್ಟಿಗೆ ಕಾರಣವಾಗುವುದರೊಂದಿಗೆ ನಮ್ಮ ದೇಶವನ್ನು ಲಂಚ-ಭ್ರಷ್ಟಾಚಾರ ಇಲ್ಲದ, ಉತ್ತಮ ಸೇವೆಯ ದೇಶವನ್ನಾಗಿ ಮಾಡಿದರೆ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರಕಿದಂತಾಗುತ್ತದೆ. ದೇಶವೂ ಅಭಿವೃದ್ಧಿ, ಸಮೃದ್ಧಿ ಪಥದಲ್ಲಿ ಸಾಗುವುದು ಖಂಡಿತ. ಆಚರಣೆ ಅರ್ಥಪೂರ್ಣವಾಗಿ ನಡೆದು ದೇಶದಲ್ಲಿ ಬೃಹತ್ ಸಂಚಲನವನ್ನೇ ಉಂಟುಮಾಡಬಹುದು. ಭ್ರಷ್ಟಾಚಾರದಲ್ಲಿ ಜಗತ್ತಿನಲ್ಲಿ 85ನೇ ಉನ್ನತ ಸ್ಥಾನವನ್ನು ಪಡೆದಿರುವ ನಮ್ಮ ದೇಶ ಭ್ರಷ್ಟಾಚಾರ ರಹಿತ ದೇಶವಾಗಿ ನಂಬರ್ 1 ಸ್ಥಾನವನ್ನು ಪಡೆಯಬಹುದು. ನಿಜವಾದ ಅರ್ಥದಲ್ಲಿ ವಿಶ್ವಗುರು ಆಗಬಹುದು. ಈ ಕರೆಯನ್ನು ಸುದ್ದಿ ಜನಾಂದೋಲನದ ವತಿಯಿಂದ ಪ್ರಧಾನಿ ಮೋದೀಜಿಯವರಿಗೆ, ಅವರ ಅಭಿಮಾನಿಗಳಿಗೆ, ಎಲ್ಲಾ ಪಕ್ಷ, ಸಂಘಟನೆಯವರಿಗೆ, ಅವರ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಿದ್ದೇ ನೆ.

ಲಂಚ, ಭ್ರಷ್ಟಾಚಾರದ ಪ್ರಕರಣದಲ್ಲಿ ಹಿಂದೆ ಆಡಳಿತ ನಡೆಸಿದವರ ತನಿಖೆ ನಡೆಯಬೇಕು. ಈಗ ಆಡಳಿತದಲ್ಲಿರುವವರದ್ದೂ ತನಿಖೆ ನಡೆಯಬೇಕು. ಇಲ್ಲದಿದ್ದರೆ ಲಂಚ, ಭ್ರಷ್ಟಾಚಾರ ಜಾಸ್ತಿಯಾಗಬಹುದು.

ಲಂಚ-ಭ್ರಷ್ಟಾಚಾರ ವಿರೋಧ ಪಕ್ಷದಲ್ಲಿ ಮಾತ್ರವಲ್ಲ, ಆಡಳಿತ ಪಕ್ಷದಲ್ಲೂ ಇದೆ. ಆಡಳಿತದಲ್ಲಿರುವ ಭ್ರಷ್ಟಾಚಾರ ಹೆಚ್ಚು ಅಪಾಯಕಾರಿ ಯಾಕೆಂದರೆ ಅಲ್ಲಿ ಭ್ರಷ್ಟಾಚಾರಕ್ಕೆ ಕಾನೂನಿನ ಮಾನ್ಯತೆ, ಅನುಮತಿ ಮಾತ್ರವಲ್ಲದೆ ಅದನ್ನು ಸಮರ್ಥಿಸಿಕೊಳ್ಳುವ ಅವಕಾಶ ದೊರಕುತ್ತದೆ. ಆದುದರಿಂದ ಅವರು ಹೆಚ್ಚು ಪ್ರಾಮಾಣಿಕರಾಗಿ, ಪಾರದರ್ಶಕವಾಗಿ ಕೆಲಸ ಮಾಡಬೇಕಾಗುತ್ತದೆ. ಲಂಚ, ಭ್ರಷ್ಟಾಚಾರದ ಪ್ರಕರಣದಲ್ಲಿ ಹಿಂದೆ ಆಡಳಿತದಲ್ಲಿದ್ದು ಹಣ ಮಾಡಿದವರ ಮತ್ತು ಈಗ ವಿರೋಧ ಪಕ್ಷದಲ್ಲಿದ್ದು ಆಡಳಿತ ನಡೆಸುತ್ತಿದ್ದವರ ತನಿಖೆ ನಡೆಯಬೇಕು. ಅವರಿಗೆ ಶಿಕ್ಷೆಯೂ ಆಗಬೇಕು. ಆದರೆ ಈಗ ಭ್ರಷ್ಟಾಚಾರ ನಿಲ್ಲಬೇಕಾದರೆ ಈಗ ಆಡಳಿತದಲ್ಲಿರುವವರ, ಮತ್ತು ಪಕ್ಷದವರ ತನಿಖೆ ಹೆಚ್ಚು ನಡೆಯಬೇಕು. ಇಲ್ಲದಿದ್ದರೆ ಲಂಚ, ಭ್ರಷ್ಟಾಚಾರಕ್ಕೆ ಅವರಿಗೆ ಲೈಸೆನ್ಸ್ ಸಿಕ್ಕಿದಂತಾಗಿ ಅದು ಜಾಸ್ತಿಯಾಗುತ್ತಾ ಹೋಗುತ್ತದೆ ಎಂಬುದನ್ನು ಎಲ್ಲರ ಗಮನಕ್ಕೆ ತರಲು ಇಚ್ಚಿಸುತ್ತೇನೆ. “ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ”, ಲಂಚ ಕೋರರಿಗೆ ಬಿಕ್ಷಾ ಡಬ್ಬಿ ಇರಿಸುವಿಕೆ ಎಂಬ `ಸುದ್ದಿ ಜನಾಂದೋಲನ’ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಈಗಿನ ಹೆಚ್ಚಿನ ಅಧಿಕಾರಿಗಳು ಲಂಚ ರಹಿತವಾಗಿ ಉತ್ತಮ ಸೇವೆ ನೀಡುತ್ತಾ, ಜನರ ಪ್ರೀತಿ ಮನ್ನಣೆಗಳಿಸುತ್ತಿದ್ದಾರೆ. ಅದರ ಪ್ರಭಾವ ಇತರ ಕಡೆಗೂ ಹರಡುತ್ತಿದೆ. ಜನರ ರಕ್ತ ಹೀರಿ ಲಂಚ ಪಡೆಯುವವರು ಜನರ ಕಣ್ಣೀರಿನೊಂದಿಗೆ ಅವರ ಶಾಪವನ್ನು ಪಡೆಯುತ್ತಿದ್ದಾರೆ. ಊರಿನವರ ಬಹಿಷ್ಕಾರದಿಂದಾಗಿ ಲಂಚದಿಂದ ಪಡೆದ ಹಣ, ಸಂಪತ್ತು ಇದ್ದರೂ ಜನರ ಗೌರವವಿಲ್ಲದೆ, ಅವರು ಮತ್ತು ಅವರ ಮನೆಯವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.

ಲಂಚ, ಭ್ರಷ್ಟಾಚಾರ ನಿಲ್ಲಬೇಕಾದರೆ ಉತ್ತಮ ಸೇವೆ ದೊರಕಬೇಕಾದರೆ ಕಾನೂನುಗಳು ಸರಳೀಕೃತಗೊಳ್ಳಬೇಕು. ಜನಪರವಿರಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ತಾವು ಅಧಿಕಾರ ಚಲಾಯಿಸಲು, ಹಣ ಮಾಡಲು ಆಯ್ಕೆಯಾದವರಲ್ಲ ಜನ ಸೇವೆಗಾಗಿ ನೇಮಕಗೊಂಡವರು ಎಂಬುದನ್ನು ನೆನಪಿಟ್ಟುಕೊಂಡು ಕೆಲಸ ಮಾಡಬೇಕು. ಈ ಸಲದ ಸ್ವಾತಂತ್ರ್ಯೋತ್ಸವದಲ್ಲಿ ಅವರು ಆ ರೀತಿ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಇತ್ತೀಚೆಗೆ ಹೈಕೋರ್ಟ್ ನ್ಯಾಯಾಧೀಶರಾದ ಸಂದೇಶರವರು ಲಂಚ, ಭ್ರಷ್ಟಾಚಾರದ ಬಗ್ಗೆ ಹೇಳಿದ ಆಕ್ರೋಶದ ಮಾತುಗಳು, ಈಶ್ವರಪ್ಪರಿಗೆ ಕ್ಲೀನ್ ಚೀಟ್ ಸಿಕ್ಕಿದರು 40% ಭ್ರಷ್ಟಾಚಾರದ ಬಗ್ಗೆ ಇರುವ ಜನರ ಅಸಮಾಧಾನಗಳು ಸ್ಪೋಟಗೊಳ್ಳುತ್ತಿವೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣಾ ರೆಡ್ಡಿಯವರು ಲಂಚವಾಗಿ ಅಧಿಕಾರಿಗಳು ಪಡೆದುಕೊಂಡ ಹಣವನ್ನು ಜನರಿಗೆ ವಾಪಾಸ್ಸು ತೆಗೆಸಿಕೊಟ್ಟಂತಹ ಘಟನೆಗಳು ಇಲ್ಲಿ ನಡೆಯಬೇಕು. ಅದರ ನೇತೃತ್ವ ಇಲ್ಲಿಯ ಜನಪ್ರತಿನಿಧಿಗಳು, ಪಕ್ಷಗಳು ಮತ್ತು ಸಂಘಟನೆಗಳು ವಹಿಸಿಕೊಳ್ಳಬೇಕು. ವಿಜಯ ಟೈಮ್ಸ್ ಚಾನೆಲ್‌ನ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರುರವರು ಜನರು ಲಂಚ, ಭ್ರಷ್ಟಾಚಾರದ ಬಗ್ಗೆ ಕೇಳದೇ ಇರುವುದು, ಸಿಟ್ಟುಗೊಳ್ಳದಿರುವುದು, ಅದನ್ನು ತಣ್ಣಗೆ ಸಹಿಸಿಕೊಳ್ಳುತ್ತಿರುವುದೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಲಂಚ, ಭ್ರಷ್ಟಾಚಾರಕ್ಕೆ ಕಾರಣ ಎಂದು ಹೇಳಿ, ಜನರು ಕ್ರೋಧದಿಂದ ಪ್ರಶ್ನಿಸುವಂತೆ ಕರೆ ಕೊಟ್ಟಿದ್ದಾರೆ. ಅಂತಹ ಕರೆಗಳು ಇಲ್ಲಿಯೂ ಜನರನ್ನು ಎಚ್ಚರಿಸಬೇಕು. ಜನಪ್ರತಿನಿಧಿಗಳಿಗೆ, ಪಕ್ಷಗಳಿಗೆ, ಅಧಿಕಾರಿಗಳಿಗೆ ಎಚ್ಚರಿಕೆಯ ಘಂಟೆಯಾಗಬೇಕು. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಜೀಯವರ `ನಾ ಕಾವೂಂಗ ನಾ ಕಾನೆದೂಂಗ’ ನಾನು ತಿನ್ನುವುದಿಲ್ಲ, ನಾನು ತಿನ್ನಲು ಬಿಡುವುದಿಲ್ಲ ಎಂಬ ಮಾತು ದೇಶದಾದ್ಯಂತ ಮೊಳಗಬೇಕು. ನಿಜವಾದ ಅರ್ಥದಲ್ಲಿ ಆಚರಣೆಗೆ ಬಂದು ನಮ್ಮ ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗಿ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರೆಯಲಿ, ದೇಶ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸುತ್ತಿದ್ದೇ ನೆ.

LEAVE A REPLY

Please enter your comment!
Please enter your name here