ತಿಂಗಳಾಡಿ-ಕೂಡುರಸ್ತೆ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆ-ಬಿಲ್ ಪಾವತಿ ಮಾಡದಂತೆ ಇಲಾಖೆಗೆ ಮನವಿ

0

  • ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 18 ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕರಣಗೊಂಡ ನೈತಾಡಿ ರಸ್ತೆ ಅಭಿವೃದ್ಧಿಯ ಪುತ್ತೂರು-ಮುಂಡೂರು ರಸ್ತೆಯಲ್ಲಿ ಕೂಡುರಸ್ತೆಯಿಂದ ತಿಂಗಳಾಡಿ ತನಕ ನಡೆದ ಡಾಂಬರೀಕರಣವು ಸಂಪೂರ್ಣ ಕಳಪೆಯಾಗಿದ್ದು ಇದಕ್ಕೆ ಬಿಲ್ ಪಾವತಿ ಮಾಡದಂತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಇಂಜಿನಿಯರ್‌ರವರಿಗೆ ಮನವಿ ಮಾಡುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು, ಪುತ್ತೂರು-ಮುಂಡೂರು ರಸ್ತೆಯಲ್ಲಿ ಕೂಡುರಸ್ತೆಯಿಂದ ತಿಂಗಳಾಡಿ ತನಕ ಸುಮಾರು 18ಲಕ್ಷ ರೂ.ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ಡಾಂಬರೀಕರಣ ನಡೆದ 2 ತಿಂಗಳಿನಲ್ಲಿ ಡಾಂಬರ್ ಎದ್ದು ಹೋಗಿದೆ. ಮೊದಲ ಮಳೆಗೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣಗೊಂಡಿದೆ. ಡಾಂಬರೀಕರಣವೂ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು, ಡಾಂಬರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೂ ನಾವು ಸ್ಥಳಕ್ಕೆ ಹೋಗಿ ಡಾಂಬರೀಕರಣ ಸರಿಯಾಗಿ ಮಾಡುತ್ತಿಲ್ಲ, ಕಳಪೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿದ್ದೇವೆ ಎಂದರು. ಮೊದಲ ಮಳೆಗೆ ಅಲ್ಲಲ್ಲಿ ಡಾಂಬರ್ ಎದ್ದು ಹೋಗಿದೆ ಆದ್ದರಿಂದ ಈ ಕಾಮಗಾರಿಗೆ ಬಿಲ್ ಪಾವತಿ ಮಾಡದಂತೆ ಇಲಾಖೆಗೆ ಬರೆದುಕೊಳ್ಳುವ ಎಂದು ತಿಳಿಸಿದರು. ಸರ್ವ ಸದಸ್ಯರ ಒಪ್ಪಿಗೆಯಂತೆ ನಿರ್ಣಯಿಸಲಾಯಿತು.


ಏಕಬಳಕೆ ಪ್ಲಾಸ್ಟಿಕ್ ಸರಕಾರವೇ ಬ್ಯಾನ್ ಮಾಡಲಿ
ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು ಈ ಬಗ್ಗೆ ಗ್ರಾಪಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಸುತ್ತೋಲೆಯ ಮೇಲೆ ಚರ್ಚೆ ನಡೆಯಿತು. ಪ್ರವೀಣ್ ಶೆಟ್ಟಿ ತಿಂಗಳಾಡಿ ಪ್ರತಿಕ್ರಿಯೆ ನೀಡಿ, ಏಕ ಬಳಕೆ ಪ್ಲಾಸ್ಟಿಕ್ ಅನ್ನು ಜನರು ನಿಷೇಧ ಮಾಡುವ ಬದಲು ಏಕ ಬಳಕೆ ಪ್ಲಾಸ್ಟಿಕ್ ತಯಾರು ಮಾಡದಂತೆ ಸರಕಾರವೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಉತ್ತಮ ಎಂದರು. ಏಕ ಬಳಕೆ ಪ್ಲಾಸ್ಟಿಕ್ ತಯಾರು ಮಾಡದಂತೆ ಸರಕಾರ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಕೊಲ್ಲಾಜೆಯ ಅಪಾಯಕಾರಿ ಮರ ತೆರವುಗೊಳಿಸಿ
ಕುಂಬ್ರ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ ತಿಂಗಳಾಡಿ ಮಧ್ಯೆ ಕೊಲ್ಲಾಜೆ ಎಂಬಲ್ಲಿ ಅಪಾಯಕಾರಿ ಮರವೊಂದು ರಸ್ತೆ ಬದಿಯಲ್ಲಿದ್ದು ಅಪಾಯದ ಸ್ಥಿತಿಯಲ್ಲಿದೆ. ಬೃಹತ್ ಗಾತ್ರದ ಮರ ಇದಾಗಿದ್ದು ಅಲ್ಲದೆ ಇದರ ಅಡಿಭಾಗದಲ್ಲಿ ಬಸ್ಸು ತಂಗುದಾಣ ಕೂಡ ಇದೆ. ಕೆಲವು ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಈ ಮರದ ಅಡಿ ಭಾಗದಲ್ಲಿ ನಿಂತುಕೊಂಡಿರುತ್ತಾರೆ. ಮರ ಈಗಾಗಲೇ ಬೀಳುವ ಸ್ಥಿತಿಗೆ ತಲುಪಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಆದ್ದರಿಂದ ಈ ಕೂಡಲೇ ಮರವನ್ನು ತೆರವುಗೊಳಿಸಬೇಕು ಅಥವಾ ಮರದ ರೆಂಬೆಗಳನ್ನು ತುಂಡರಿಸಬೇಕು ಈ ಬಗ್ಗೆ ಅರಣ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಪರವಾನಗೆ ನವೀಕರಿಸಿ ಇಲ್ಲವೇ ದಂಡ ಪಾವತಿಸಿ
ವ್ಯಾಪಾರ ಪರವಾನಗೆ ಇಲ್ಲದೆ ಹಾಗೂ ನವೀಕರಣ ಮಾಡದೆ ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ಮಂದಿ ವ್ಯಾಪಾರ ಮಾಡುತ್ತಿದ್ದಾರೆ ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪರವಾನಗೆ ಇಲ್ಲದೆ ವ್ಯಾಪಾರ ಮಾಡುವುದು ಮತ್ತು ಪರವಾನಗೆ ನವೀಕರಣ ಮಾಡದೇ ವ್ಯಾಪಾರ ಮಾಡುವುದು ಎರಡೂ ಅಪರಾಧವಾಗಿದೆ ಆದ್ದರಿಂದ ಈ ಬಗ್ಗೆ ವ್ಯಾಪಾರಸ್ಥರಿಗೆ ನೋಟೀಸ್ ನೀಡುವುದು, ಪರವಾನೆಗೆ ಇಲ್ಲದವರಿಗೆ ದಂಡ ವಿಧಿಸುವುದು ಎಂದು ನಿರ್ಣಯಿಸಲಾಯಿತು.

ಮನೆಮನೆ ತಿರಂಗಕ್ಕೆ ಸಕಲ ಸಿದ್ಧತೆ

75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದ ಹಬ್ಬವನ್ನಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈಗಾಗಲೇ ಸರಕಾರದ ಆದೇಶದಂತೆ ಆ.13  ರಿಂದ 15 ರ ತನಕ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಬಗ್ಗೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಲಾಗಿದೆ. ಗ್ರಾಮದ 900 ಮನೆಗಳಲ್ಲೂ ಧ್ವಜ ಹಾರುವ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯ ಪ್ರತಿ ವಾರ್ಡ್‌ನಲ್ಲೂ ಆಗಬೇಕು ಎಂದು ಅಧ್ಯಕ್ಷ ರತನ್ ರೈ ತಿಳಿಸಿದರು.

ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ಸುಜಾತ, ಅಸ್ಮಾ ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಸುನಂದ ರೈ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಸಾರ್ವಜನಿಕ ಅರ್ಜಿಗಳನ್ನು ಓದಿಸಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳಾ, ಶಶಿಪ್ರಭಾ ರೈ ಸಹಕರಿಸಿದ್ದರು.

ಧ್ವಜ ಹಾರಿಸಿ ಬಹುಮಾನ ಗೆಲ್ಲಿ
ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಬ್ಬವನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆದಂಬಾಡಿ ಗ್ರಾಪಂ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಯಾರು ತಮ್ಮ ಮನೆಯಲ್ಲಿ ವ್ಯವಸ್ಥಿತವಾಗಿ ಚೆಂದವಾಗಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೋ ಅವರಿಗೆ ಬಹುಮಾನ ನೀಡಿ ಗೌರವಿಸುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮಸ್ಥರು ತಮ್ಮ ಮನೆಯಲ್ಲಿ ಹಾರಿಸಿದ ರಾಷ್ಟ್ರಧ್ವಜದ ವಿಡಿಯೋವನ್ನು ಮಾಡಿ ಪಂಚಾಯತ್ ವಾಟ್ಸಫ್ ನಂಬರ್ : 8217552571 ಗೆ ಕಳುಹಿಸಬಹುದು ಎಂದು ತಿಳಿಸಿದರು.

ಮನೆ ಮಂಜೂರು ಆದೇಶ ಪತ್ರ ವಿತರಣೆ
ಕೆದಂಬಾಡಿ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿ 11 ಮನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ 6 ಮನೆಗಳು ಮಂಜೂರುಗೊಂಡಿದೆ. ಈಗಾಗಲೇ ಎರಡು ಮನೆಗಳ ಕಾಮಗಾರಿ ಆರಂಭಗೊಂಡಿದೆ. ಸಭೆಯಲ್ಲಿ ಇಬ್ಬರಿಗೆ ಮನೆ ಮಂಜೂರು ಆದೇಶ ಪತ್ರವನ್ನು ಅಧ್ಯಕ್ಷ ರತನ್ ರೈಯವರು ವಿತರಿಸಿದರು.

ಆ.6 ಗ್ರಾಮಸಭೆ
ಕೆದಂಬಾಡಿ ಗ್ರಾಮ ಪಂಚಾಯತ್‌ನ 2022-23 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯನ್ನು ಆ.6 ರಂದು ಮಾಡುವುದು ಎಂದು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here