ಭಾರತೀಯ ಸೈನಿಕರ ಅಸೀಮ ಹೋರಾಟಕ್ಕೆ ಸಾಕ್ಷಿ -ಕಾರ್ಗಿಲ್ ಯುದ್ಧ

0

ಕಾರ್ಗಿಲ್…ಹೆಸರು ಕೇಳಿದೊಡನೆ ಮೈ ರೋಮಾಂಚನಗೊಳ್ಳುತ್ತದೆ..ಎದೆಯೊಳಗೆ ದೇಶ ಪ್ರೇಮ ಪುಟಿದೇಳುತ್ತದೆ. ಹೌದು..ಭಾರತೀಯರು ಎಂದೆಂದಿಗೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಪ್ರತಿಯೊಬ್ಬರ ಎದೆಯಲ್ಲಿ ನಡುಕ ಹುಟ್ಟಿಸಿ ಕೊನೆಗೆ ಗೆಲುವಿನ ನಗೆ ಬೀರಿದ ದಿನವಿದು. 1999 ನೇ ಇಸವಿಯ ಜುಲೈ26 ರಂದು ಭಾರತೀಯ ಸೈನಿಕರು ಆಪರೇಷನ್ ವಿಜಯ್ ಮೂಲಕ ಕಾರ್ಗಿಲ್ ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಆ ಒಂದು ಅದ್ಭುತ ಶೌರ್ಯದ ನೆನಪಿಗಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ನಾವಿಂದು ಅತ್ಯಂತ ಹೆಮ್ಮೆ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದೇವೆ.

ಆತ್ಮೀಯರೇ, ನಮ್ಮ ರಾಷ್ಟ್ರ ಧ್ವಜವು ಇಂದು ಮುಗಿಲೆತ್ತರದಲ್ಲಿ ಸಮೃದ್ಧವಾಗಿ ಹಾರಾಡುತ್ತಿರುವುದು ಗಾಳಿಯಿಂದಲ್ಲ…ಅದು ನಮ್ಮ ಕೆಚ್ಚೆದೆಯ ವೀರ ಸೈನಿಕರ ಉಸಿರಿನಿಂದ. ಹೌದು ನಾವಿಂದು ಇಷ್ಟೊಂದು ಭಯಮುಕ್ತರಾಗಿ ಸ್ವಚ್ಚಂದವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಸೈನಿಕರೇ ಕಾರಣ. ನಮ್ಮ ಇಂದಿನ ನೆಮ್ಮದಿಯ ನಿದ್ದೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟ ವೀರ ಸೈನಿಕರೇ ನಮ್ಮ ಆಯುಷ್ಯದ ಮೂಲ ರೂವಾರಿಗಳು ಎನ್ನಲು ಹೆಮ್ಮೆಯಾಗುತ್ತದೆ. ನಮ್ಮ ದೇಶವನ್ನು ಕಾಪಿಡಲು ಸೈನಿಕರು ಪಡುವ ಪಾಡು ಅಷ್ಟಿಷ್ಟಲ್ಲ. ಅವರೆಲ್ಲರ ತ್ಯಾಗ ಬಲಿದಾನಕ್ಕೆ ಭಾರತಕ್ಕೆ ಭಾರತವೇ ಹೆಮ್ಮೆ ಪಡಬೇಕಿದೆ

1999 ರ ಮೇ ತಿಂಗಳಿನಲ್ಲಿ ಪ್ರಾರಂಭವಾದ ಕಾರ್ಗಿಲ್ ಯುದ್ಧ ಸುಮಾರು ಎರಡು ತಿಂಗಳ ಕಾಲ ನಡೆದಿದ್ದು ಭಾರತೀಯರೆಲ್ಲರ ಉಸಿರನ್ನು ಬಿಗಿಯಾಗಿ ಹಿಡಿದಿಟ್ಟಿತು. ಈ ಯುದ್ದದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಶತ್ರು ಸೇನೆಯನ್ನು ನಮ್ಮ ಭಾರತೀಯ ಸೈನ್ಯ ಕೆಚ್ಚೆದೆಯಿಂದ ಅತ್ಯಂತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಆದರೆ ಯುದ್ಧ ಮುಗಿಯುವುದರೊಳಗೆ ನಾವು ಅನೇಕ ಅನರ್ಘ್ಯ ರತ್ನಗಳನ್ನು ಕಳೆದುಕೊಂಡಿದ್ದೆವು. ಅದೆಷ್ಟೋ ಮಡಿದ ಸೈನಿಕರ ಕುಟುಂಬ ಕಣ್ಣೀರಲ್ಲೇ ಕರಗಿಹೋಗಿತ್ತು. ಆದರೆ ಪ್ರಜ್ಞಾವಂತ ನಾಗರೀಕರು ಆಗಿರುವ ನಾವು ಸಂಭ್ರಮದ ಮಧ್ಯೆ ಈ ಮುಗ್ಧ ಕುಟುಂಬವನ್ನೆಲ್ಲ ಮರೆತು ಕೂತಿರುವುದು ಎಷ್ಟು ಸರಿ? ಕೇವಲ ವಿಜಯ ದಿವಸದಂದು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸೈನಿಕರ ಬಗೆಗೆ ಸ್ಟೆಟಸ್ ಹಾಕಿಕೊಂಡು ಮಾತನಾಡುತ್ತೇವೆಯೇ ಹೊರತು ಉಳಿದ ದಿನಗಳಲ್ಲಿ ದಿವ್ಯ ಮೌನ ಏಕೆ? ಹೌದು..ಇದೀಗ ಆತ್ಮಾವಲೋಕನದ ಸಮಯ..ಮಡಿದ ವೀರರ ನೆನಪಿಗೆ ನಮ್ಮ ಮನೆ ಮನಗಳಲ್ಲಿ ದೀಪವನ್ನುರಿಸುವುದರ ಜೊತೆಗೆ ಅವರ ನೊಂದ ಕುಟುಂಬಗಳ ಬದುಕಿಗೂ ದೀಪವಾದರೆ ನಮ್ಮ ಬಾಳು ಸಾರ್ಥ್ಯಕ್ಯ ಆಗಬಹುದು ಅಲ್ವಾ? ಜಾತಿ, ಧರ್ಮದ ಮಧ್ಯೆ ಕಚ್ಚಾಡುವುದರ ಬದಲು ದೇಶಕ್ಕಾಗಿ ಹೋರಾಡಿ ಬದುಕು ಕಳೆದುಕೊಂಡವರ ಬಗೆಗೆ ಕಿಂಚಿತ್ತು ಅಲೋಚನೆ ಮಾಡಿದರೆ ನಮ್ಮ ಬದುಕು ಪಾವನವಾಗಬಹುದು

ಏನೇ ಇರಲಿ..ತನ್ನ ತನುಮನವನ್ನೆಲ್ಲ ದೇಶದ ರಕ್ಷಣೆಗೆ ಮೀಸಲಿಟ್ಟು ತಮ್ಮ ಕರ್ತವ್ಯದಲ್ಲೇ ತಮ್ಮ ಕುಟುಂಬವನ್ನು ಕಾಣುವ ಮಡಿದ ವೀರ ಸೈನಿಕರಿಗೆ ಒಂದು ದೊಡ್ಡ ಸಲಾಂ. ಅಗ್ನಿಪಥ್ ನಂತಹ ಅದ್ಭುತ ಯೋಜನೆಯ ಮೂಲಕ ನಾವೆಲ್ಲರೂ ಇಂದು ಮತ್ತೆ ದೇಶ ಸೇವೆಗೆ ಮುಂದಾಗಬೇಕಾಗಿದೆ. ನಮ್ಮ ದೇಶವನ್ನು ಶತ್ರು ರಾಷ್ಟ್ರಗಳಿಂದ ಕಾಪಾಡಲು ನಾವೆಲ್ಲರು ಒಮ್ಮತದಿಂದ ಟೊಂಕ ಕಟ್ಟಿ ನಿಲ್ಲಬೇಕಿದೆ. ದೇಶ ಸುಭೀಕ್ಷವಾಗಬೇಕಾದರೆ ಪ್ರತಿಯೊಬ್ಬರು ದೇಶ ಹಾಗೂ ದೇಶ ಸೇವೆಯ ಬಗ್ಗೆ ಗಾಢವಾಗಿ..ಅಲೋಚಿಸಬೇಕಾಗಿದೆ. ಮತ್ತೊಮ್ಮೆ ಮನೆ ಮನಗಳಲ್ಲಿ ನಮ್ಮ ತಾಯಿ ನೆಲಕ್ಕಾಗಿ ಹೃದಯ ಮಿಡಿಯಲಿ…ನವ ಕನಸುಗಳು ದೇಶದೇಳಿಗೆಗಾಗಿ ಚಿಗುರಲಿ…

ಭವ್ಯಾ.ಪಿ.ಆರ್ ನಿಡ್ಪಳ್ಳಿ
ಮುಖ್ಯಸ್ಥೆ, ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು.

LEAVE A REPLY

Please enter your comment!
Please enter your name here