ಕಸ್ತೂರಿ ರಂಗನ್ ವರದಿ ಜಾರಿ ವಿಚಾರ: ಕೇಂದ್ರಕ್ಕೆ ರಾಜ್ಯದ ನಿಲುವು ಸ್ಪಷ್ಟಪಡಿಸಿದ ಸಿಎಂ ನೇತೃತ್ವದ ನಿಯೋಗ

0

ಉನ್ನತ ಸಮಿತಿಯ ಅಧ್ಯಯನ ವರದಿ ಬಳಿಕ ನಿರ್ಧಾರ

  •  ಉನ್ನತ ಮಟ್ಟದ ಸಮಿತಿ ರಚನೆ
  •  ವರ್ಷದೊಳಗೆ ಅಧ್ಯಯನ ವರದಿ ನೀಡಲು ಸೂಚನೆ
  •  ಅಧ್ಯಯನ ವರದಿ ಬರೋತನಕ ಅಧಿಸೂಚನೆ ಅನುಷ್ಟಾನವಿಲ್ಲ
  •  ಪಶ್ಚಿಮ ಘಟ್ಟಗಳಿರುವ ರಾಜ್ಯಗಳಿಗೆ ಮತ್ತೊಂದು ಅವಕಾಶ

ಬೆಂಗಳೂರು:ಕಸ್ತೂರಿ ರಂಗನ್ ವರದಿಯ ಕುರಿತು ರಾಜ್ಯ ಸರಕಾರ ತನ್ನ ನಿಲುವನ್ನು ಕೇಂದ್ರ ಸರಕಾರಕ್ಕೆ ತಿಳಿಸಿದ್ದು, ಈ ಭೂ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೆ ವಾಸ್ತವಾಂಶ ತಿಳಿಯುವುದಿಲ್ಲ ಎಂದು ಹೇಳಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಜು.25ರಂದು ಭೇಟಿ ಮಾಡಿ, ಕಸ್ತೂರಿ ರಂಗನ್ ವರದಿಯ ಕುರಿತು ರಾಜ್ಯದ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದೆ. ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗಿದೆ ಹಾಗೂ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೇ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದವಾಗಿದೆ ಎಂದರು.

ಮೊದಲಿದ್ದ ಗಾಡ್ಗಿಲ್ ಸಮಿತಿ ವರದಿಯನ್ನು ಎಲ್ಲ ರಾಜ್ಯಗಳೂ ವಿರೋಧಿಸಿದ್ದವು. ನಂತರ ಕಸ್ತೂರಿ ರಂಗನ್ ವರದಿ ಬಂದಿತು. ಈ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೇ, ಕೇವಲ ಸ್ಯಾಟಿಲೈಟ್ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ. ಅಲ್ಲಿಯ ಜನಜೀವನ, ಪರಿಸರ ಒಟ್ಟಾಗಿದ್ದು, ಹಸಿರನ್ನು ಅವಲಂಬಿಸಿರುವ ಜನರಿದ್ದಾರೆ. ಅಡಿಕೆ, ತೆಂಗು, ಕಾಫಿ, ರಬ್ಬರ್ ತೋಟಗಳಿದ್ದು, ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆಂದು ತಿಳಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಜೈವಿಕ ವೈವಿಧ್ಯತೆ ನೀತಿಯ ಪ್ರಕಾರ, ವರದಿ ತಯಾರಿಸುವಾಗ ಸ್ಥಳೀಯ ಗ್ರಾಮ ಪಂಚಾಯತಿ,ತಾಲೂಕು ಪಂಚಾಯತಿಯ ಅಭಿಪ್ರಾಯ ಪಡೆದಿರುವುದಿಲ್ಲ.ಒಟ್ಟಾರೆ ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೆಯೇ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿದೆ.ಅಲ್ಲಿನ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣಾ ಉಲ್ಲೇಖಗಳಲ್ಲಿದ್ದರೂ, ಅದನ್ನು ಪ್ರತ್ಯೇಕಿಸಿಲ್ಲ ಎಂದು ಸಿಎಂ ಹೇಳಿದರು.

ಉನ್ನತ ಮಟ್ಟದ ಸಮಿತಿ ರಚನೆ:

ನಿವೃತ್ತ ಐಎ-ಎಸ್ ಅಧಿಕಾರಿ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾದ ಆರ್.ಸಿ.ಕುಮಾರ್, ಪರಿಸರ ಸೂಕ್ಷ್ಮ ವಲಯದ ನಿರ್ದೇಶಕರ ಸಲಹೆಗಾರರು ಸಂಚಾಲಕರು, ಇವರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಒಂದು ವರ್ಷದ ಅವಽಯನ್ನು ನೀಡಲಾಗಿದೆ.ಜನರೊಂದಿಗೆ ಮಾತನಾಡಿ, ಅಲ್ಲಿ ಜನ ಬೆಳೆದಿರುವ ಬೆಳೆಗಳು, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಭೂ ಪ್ರದೇಶದ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡು ವರದಿ ನೀಡಬೇಕು.ಅಲ್ಲಿಯವರೆಗೆ ಈ ಅಧಿಸೂಚನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ ಎನ್ನುವ ವಿಚಾರವನ್ನು ಸಚಿವರು ತಿಳಿಸಿದ್ದಾರೆ. ಅದರ ಪ್ರತಿಯನ್ನೂ ನೀಡಿದ್ದಾರೆ. ಪಶ್ಚಿಮ ಘಟ್ಟಗಳಿರುವ ಎಲ್ಲ ರಾಜ್ಯಗಳಿಗೆ ಅದನ್ನು ಪ್ರತಿಪಾದಿಸಿ, ಉಳಿಸುವ ಮತ್ತೊಂದು ಅವಕಾಶ ದೊರೆತಿದೆ.ರಾಜ್ಯ ಮಟ್ಟದಲ್ಲಿಯೂ ಕೂಡ ಸಮಿತಿಯ ವಿಚಾರಣಾ ಉಲ್ಲೇಖಗಳ ಆಧಾರದ ಮೇಲೆ ಉನ್ನತ ಮಟ್ಟದ ಸಮಿತಿಯನ್ನೂ ಸಹ ರಚಿಸಲಾಗುವುದು ಎಂದು ಸಿಎಂ ಹೇಳಿದರು.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ:

ಈ ಸಮಿತಿ ರಚನೆಯಾದ ಸಂದರ್ಭದಲ್ಲಿ ವಾಸ್ತವಾಂಶಗಳನ್ನು ಸಲ್ಲಿಸುವುದರ ಜೊತೆಗೆ ಎಲ್ಲ ಗ್ರಾಮ ಪಂಚಾಯತಿಗಳ ಮನದಾಳದ ಆಸೆಯನ್ನು ಮನವರಿಕೆ ಮಾಡಿಕೊಡಲಾಗುವುದು. ಪ್ರತಿ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಿ ಅವರ ಅಹವಾಲುಗಳನ್ನು ಕೇಳಬೇಕೆಂದು ಮನವಿ ಮಾಡುತ್ತೇವೆ. ಕಸ್ತೂರಿ ರಂಗನ್ ವರದಿ ಬಹಳ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅದನ್ನು ರೂಪಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ.ಜನಜೀವನ ಹಾಗೂ ಪರಿಸರವನ್ನು ಉಳಿಸಲು ಅವಕಾಶವಿದೆ.ಇದರ ಜೊತೆಗೆ ವಿವಿಧ ರಾಜ್ಯಗಳ ಜೊತೆಗೂ ಚರ್ಚೆ ಮಾಡಿ ಸಾಮಾನ್ಯ ಕಾರಣಗಳನ್ನು ಚರ್ಚಿಸಲಾಗುವುದು.ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರಿಗೆ ರಾಜ್ಯಕ್ಕೆ ಭೇಟಿ ನೀಡಿ ಈ ಭಾಗಗಳಲ್ಲಿ ಸುತ್ತಿ ಪರಿಶೀಲಿಸುವಂತೆಯೂ ಕೋರಲಾಗಿದೆ.ರಾಜ್ಯಕ್ಕೆ ಭೇಟಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದರಾದ ಪ್ರತಾಪ ಸಿಂಹ, ಬಿ.ಎಸ್.ರಾಘವೇಂದ್ರ, ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರು ನಿಯೋಗದಲ್ಲಿದ್ದರು.

ಈ ಗ್ರಾಮಗಳು ಸೂಕ್ಷ್ಮ ವಲಯಗಳು…

ಕಡಬ ತಾಲೂಕಿನ ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಆಲಂತಾಯ, ಸಿರಿಬಾಗಿಲು, ಬಲ್ಯ, ಕೊಂಬಾರು, ಬಿಳಿನೆಲೆ, ದೋಳ್ಪಾಡಿ, ಬಳ್ಪ, ಏನೆಕಲ್ಲು, ಸುಬ್ರಮಣ್ಯ, ಐನೆಕಿದು ಗ್ರಾಮಗಳೂ ಕಸ್ತೂರಿ ರಂಗನ್ ವರದಿಯಲ್ಲಿವೆ. ಸುಳ್ಯ ತಾಲೂಕಿನ ನಾಲ್ಕೂರು, ಕೂತ್ಕುಂಜ, ದೇವಚಳ್ಳ, ಹರಿಹರ-ಪಲ್ಲತಡ್ಕ, ಬಾಳುಗೋಡು, ಮಡಪ್ಪಾಡಿ, ಉಬರಡ್ಕ ಮಿತ್ತೂರು, ಕಲ್ಮಕಾರು, ಅರಂತೋಡು, ಅಲೆಟ್ಟಿ, ಸಂಪಾಜೆ, ತೊಡಿಕಾನ ಗ್ರಾಮಗಳನ್ನು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರಾ, ಸವಣಾಲು, ಚಾರ್ಮಾಡಿ, ಸುಲ್ಕೇರಿ, ನಾವೂರು, ನೆರಿಯ, ನಾಡ, ಪುದುವೆಟ್ಟು, ಶಿಶಿಲ, ಕಳೆಂಜ, ಶಿಬಾಜೆ, ರೆಖ್ಯಾ ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ. ಒಂದು ವೇಳೆ ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಗೊಳಿಸಿದರೆ ಈ ಗ್ರಾಮಗಳ ಜನತೆಯ ಅಭಿವೃದ್ಧಿಗೆ ಹಿನ್ನಡೆ ಆಗುವ ಅಪಾಯವಿದೆ. ವರದಿಯಲ್ಲಿ ಹೇಳಿರುವಂತೆ, ಕನಿಷ್ಠ ಮೂಲಭೂತ ಸೌಕರ್ಯಗಳಿಂದಲೂ ಜನತೆ ವಂಚಿತವಾಗುವ ಅಪಾಯವಿರುವುದರಿಂದ ಜನರು ಕಸ್ತೂರಿ ರಂಗನ್ ವರದಿ ಜಾರಿಗೆ ಬಲವಾಗಿ ವಿರೋಧಿಸುತ್ತಿದ್ದಾರೆ.

ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶವೆಂದು ವರದಿ ನೀಡಿದ್ದ ಕಸ್ತೂರಿ ರಂಗನ್

ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಕೇಂದ್ರ ಪರಿಸರ ಇಲಾಖೆ ಇದೇ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿದ್ದು ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ.ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಆದರೆ ಗಾಡ್ಗಿಳ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು.ಅದರಂತೆ ಗುಜರಾತ್ ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಸೇರಿಸಿತ್ತು. ಅದರಂತೆ ಕರ್ನಾಟಕದ 20668 ಚದರ ಕಿ.ಮೀ.ಪ್ರದೇಶ ‘ಪರಿಸರ ಸೂಕ್ಷ್ಮ ವಲಯ’ ವ್ಯಾಪ್ತಿಗೆ ಒಳಪಡುತ್ತದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳಲಿದೆ.

LEAVE A REPLY

Please enter your comment!
Please enter your name here